ಅವಿಸ್ಮರಣೀಯ ಅನುಭವ
“ಅಪೂರ್ಣತೆಯಿಂದ ಪೂರ್ಣತೆ” ಎಂಬ ಪುಸ್ತಕದ ಪ್ರಸಿದ್ಧ ಲೇಖಕ ಆರ್ಯನ್ ಅಂಗದ್ ಒಂದು ಭಾನುವಾರ ಬೆಳಗ್ಗೆ ಮುಂಬಯಿಂದ ಬೆಂಗಳೂರು ಕಡೆ ಹೋಗುವ ರೈಲಿನ ಬೋಗಿಯಲ್ಲಿ ತಮಗೆ ಆದ ಅವಿಸ್ಮರಣೀಯ ಅನುಭವ ವರದಿ ಮಾಡಿದರು. ಬೋಗಿ ಯಲ್ಲಿ ಎಲ್ಲವೂ ಶಾಂತವಾಗಿತ್ತು. ಕೆಲವರು ಕಿಟಕಿಯಿಂದ ಹೊರಗೆ ನೋಡುತ್ತಿದ್ದರು, ಕೆಲವರು ಓದುತ್ತಿದ್ದರು, ಕೆಲವರು ಆಲೋಚನೆಯಲ್ಲಿ ಮುಳುಗಿದ್ದರು. ಪ್ರಯಾಣ ಶಾಂತ ಮತ್ತು ನಿರಾಳವಾಗಿತ್ತು. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ತನ್ನ ಮೂವರು ಮಕ್ಕಳೊಂದಿಗೆ ಬೋಗಿ ಒಳಗೆ ಬಂದನು. ಮಕ್ಕಳು ವಸ್ತುಗಳನ್ನು ಎಸೆಯುತ್ತ ಜೋರಾಗಿ ಕೂಗುತ್ತಿದ್ದು ಅವರು ಇತರ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದರು. ಬೋಗಿಯಲ್ಲಿ ಮನಸ್ಥಿತಿ ತಕ್ಷಣವೇ ಬದಲಾಯಿತು. ಆದರೆ ಮೂವರು ಮಕ್ಕಳ ತಂದೆ ಏನೂ ಹೇಳದೆ ಕಣ್ಣು ಮುಚ್ಚಿ ಕುಳಿತಿದ್ದರು. ಅಂಗದ್ ಅವರಿಗೆ ಕಿರಿಕಿರಿ ಆಯಿತು. ಈ ಮಕ್ಕಳು ಎಲ್ಲರನ್ನೂ ಕಿರಿಕಿರಿಗೊಳಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಇಷ್ಟೆಲ್ಲಾ ನಡೆದರೂ ಮಕ್ಕಳ ತಂದೆ ಅವರ ಬಗ್ಗೆ ಏನೂ ಮಾಡದೇ ಕಣ್ಣು ಮುಚ್ಚಿ ಏಕೆ ಕುಳಿತರು ಎಂದು ಅಂಗದ್ ಗೆ ಆಶ್ಚರ್ಯ. ಅವರು ಆ ವ್ಯಕ್ತಿಯ ಕಡೆಗೆ ತಿರುಗಿ ಮಕ್ಕಳನ್ನು ಸ್ವಲ್ಪ ನಿಯಂತ್ರಿಸಲು ಕೇಳಿಕೊಂಡರು. ಆತ ತಲೆ ಮೇಲಕ್ಕೆ ಎತ್ತಿ ನೋಡಿದ. ಇದನ್ನೆಲ್ಲ ಅವನು ಗಮನಿಸಿದ್ದು ಉತ್ತರಿಸಿದ: ಓಹ್, ನೀವು ಹೇಳಿದ್ದು ಸರಿ. ನಾನು ಅವರ ಬಗ್ಗೆ ಏನಾದರೂ ಮಾಡಬೇಕು. ಈ ಮಕ್ಕಳ ತಾಯಿ ಸುಮಾರು ಮೂರು ಗಂಟೆಯ ಹಿಂದೆ ಆಸ್ಪತ್ರೆಯಲ್ಲಿ ನಿಧನ ರಾದಮೇಲೆ ನಾವು ಇಲ್ಲಿಗೆ ಬಂದಿದ್ದೇವೆ. ಮಕ್ಕಳನ್ನು ಹೇಗೆ ನಿಗ್ರಹಿಸಬೇಕೆಂದು ನನಗೂ ತಿಳಿಯಲಿಲ್ಲ.”
ಆಗ ಅಂಗದ್ ಅವರ ಮನ ಕಲುಕಿ ಕಣ್ಣಲ್ಲಿ ನೀರು ಬಂದಿತು.
ವಾಮನಾಚಾರ್ಯ