(ಶಿವರಾಜ್ ಕುರ್ಚಿ ಮೇಲೆ ಕೂತಿರೋ ದುರ್ಗನ್ನೇ ನೋಡ್ತಾ ನಿಂತಿದ್ದ, ಅವನಿಗೆ ಅಪ್ಪನ್ನೇ ನೋಡಿದ ಹಾಗೆ ಅನಿಸ್ತು. ಒಂದು ಕಡೆ ಅವನು ಹೇಳಿದ್ದು ನಿಜ ಇತ್ತು, ಹಳ್ಳಿಯಲ್ಲಿ ಇರುವ ಹೆಚ್ಚು ಜನ ಹೆಣ್ಣು ಮಕ್ಕಳು ತುಂಬಾ ಸುಕ್ಷ್ಮವಾಗಿ ಇರುತ್ತಾರೆ, ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುತ್ತಾರೆ. ಆದರೆ ದುರ್ಗಾ ಹಾಗಿರಲಿಲ್ಲ, ನಾರಾಯಣ ಅವಳನ್ನು ಹಾಗೆ ಬೆಳೆಸಿದ್ದ. ಅದು ಅಲ್ಲದೆ ಈ ಧೈರ್ಯ, ಸ್ಥೈರ್ಯ ಅನ್ನೋದು ಅವಳಿಗೆ ರಕ್ತದಲ್ಲೇ ಬಂದಿತ್ತು.)
ದುರ್ಗಾ : ನಾನು ನಿಮ್ಮನ್ನೆಲ್ಲಾ ಇವತ್ತು ಪಂಚಾಯಿತಿಗೆ ಯಾಕೆ ಕರಿಸಿದ್ದೀನಿ ಅಂತ ನೀವು ಯೋಚನೆ ಮಾಡ್ತಾ ಇರಬೇಕಲ್ಲವಾ ಹೇಳ್ತೀನಿ. ನಮ್ಮ ಅಜ್ಜ ಹೇಗೆ ತೀರಿಕೊಂಡರು, ಅವರನ್ನು ಯಾರು ಕೊಲೆ ಮಾಡಿದ್ದು, ಯಾಕೆ ಮಾಡಿದ್ದು ಎಲ್ಲವೂ ನಿಮಗೆ ಗೊತ್ತೇ ಇದೆ.
ರಮೇಶ್ : ಇದು ನಮಗೆಲ್ಲ ಗೊತ್ತಿದೆ ಅಂತ ನಿನಗೂ ಗೊತ್ತು ತಾನೆ. ಮತ್ತೆ ಅದನ್ನೇಕೆ ಹೇಳ್ತಿದ್ದೀಯ? ನಿಮ್ಮ ಅಜ್ಜ ನಮ್ಮ ಅಪ್ಪನಿಗೆ ದ್ರೋಹ ಮಾಡಿದರು, ಅದಕ್ಕೆ ನನ್ನ ಅಪ್ಪ ದ್ವೇಷದಿಂದ ನಿಮ್ಮ ಅಜ್ಜನನ್ನು ಕೊಂದರು. ಅಲ್ಲಿಗೆ ದ್ವೇಷ ಮುಗಿತು. ಮತ್ತೆ ಯಾಕೆ ಅದನ್ನೇ ಕೆದಕಿ ಹೇಳ್ತಿದ್ದೀಯ? (ಎಂದು ಕೋಪದಿಂದ ಹೇಳಿದ.)
ದುರ್ಗಾ : ದ್ವೇಷ ಅಲ್ಲಿಗೆ ಮುಗಿದಿದ್ದರೆ ನಾನು ಇವತ್ತು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಇವತ್ತು ಎಲ್ಲ ಮುಗಿಸಬೇಕು, ಒಡೆದ ನನ್ನ ಕುಟುಂಬವನ್ನು ಒಂದು ಮಾಡಬೇಕು ಅಂತನೇ ನಾನು ಇವತ್ತು ನಿರ್ಧಾರ ಮಾಡಿ ಇಲ್ಲಿ ಬಂದು ನಿಂತಿದ್ದೇನೆ. (ಎಂದು ಜೋರಾಗಿ ಉತ್ತರ ನೀಡಿದಳು.)
ಅವಾಗ ಶೌರ್ಯ ದುರ್ಗಾ ಎಂದು ಏನೋ ಹೇಳಲು ಮುಂದೆ ಬಂದ, ಅಷ್ಟರಲ್ಲಿ ದುರ್ಗಾ – ಮಧ್ಯೆ ಯಾರೂ ಮಾತನಾಡಬಾರದು ಎಂದು ಅವನಿಗೆ ಬೆರಳು ತೋರಿಸಿ ಎಚ್ಚರಿಕೆ ನೀಡಿದಳು. ಆಗ ಶೌರ್ಯ ಏನೂ ಮಾತನಾಡದೆ ಸುಮ್ಮನೆ ನಿಂತುಕೊಂಡ.
ರಮೇಶ್ : ನೀನು ಏನು ಹೇಳಬೇಕು ಅಂತಿದ್ದೀಯೋ ಅದನ್ನ ನೇರವಾಗಿ ಹೇಳು ದುರ್ಗಾ.
ದುರ್ಗಾ : ಹೇಳ್ತೀನಿ, ಎಲ್ಲರೂ ಕಿವಿಗೊಟ್ಟು ಕೇಳಿಸಿಕೊಳ್ಳಿ. ನಾನು ಅಪ್ಪ, ಅಮ್ಮ ಮತ್ತು ಅಣ್ಣ ಎಲ್ಲರೂ ಇಷ್ಟು ದಿನ ಬೆಂಗಳೂರುಲ್ಲೇ ಜೀವನ ಸಾಗಿಸುತ್ತಿದ್ದೆವು. ಯಾರ ಸಹವಾಸವೂ ಬೇಡ ಎಂದು ನಮ್ಮದೇ ಒಂದು ಪುಟ್ಟ ಲೋಕದಲ್ಲಿ ಇದ್ದೆವು. ಆದರೆ ಒಂದು ದಿನ ಯಾರೋ ನನ್ನ ಮೇಲೆ ಆಸಿಡ್ ಎರಚಿದರು. ಹಾ ಹಾ… ನಿಜ ಹೇಳಬೇಕಾದರೆ ಗುರಿ ನಾನು ಅಲ್ಲ, ನನ್ನ ಅಮ್ಮ ಆಗಿದ್ದಳು. ಆದರೆ ಆ ದಿನ ದೇವರು ನನ್ನ ಮೂಲಕ ಹೇಗೋ ನನ್ನ ಅಮ್ಮನನ್ನು ರಕ್ಷಿಸಿದ. (ಎಂದು ಆಸಿಡ್ ಬಿದ್ದ ತನ್ನ ಕೈ ಗಾಯವನ್ನು ತೋರಿಸಿದಳು.)
ಅಗ ಅಲ್ಲಿ ಒಬ್ಬನು – "ಆಸಿಡ್ ಯಾರಮ್ಮ ಹಾಕಿದ್ದು?" ಎಂದು ಕೇಳಿದ. ಆಗ ದುರ್ಗಾ ಕುರ್ಚಿಯಿಂದ ಎದ್ದು ಶೌರ್ಯ ಮತ್ತು ವಿನೀತ್ ಇದ್ದ ಕಡೆಗೆ ಹೋದಳು.
ದುರ್ಗಾ : ಆಸಿಡ್ ಯಾರ ಹಾಕಿದ್ರು ಅಂತ ನೀವೇ ಹೇಳ್ತೀರಾ ಅಥವಾ ನಾನು ಬಾಯಿ ಬಿಡಿಸಬೇಕಾ?
ವಿನೀತ್ : ನೋಡು ಇದರ ಬಗ್ಗೆ ನಮ್ಮಿಬ್ಬರಿಗೆ ಯಾಕೆ ಕೇಳ್ತಿದ್ದೀಯ? ನಾವು ಅದಕ್ಕೆ ಕಾರಣ ಅಲ್ಲ ಅಂತ ನಿನಗೂ ಗೊತ್ತಿದೆ ತಾನೆ.
ಅಗ ದುರ್ಗಾ ಆಶ್ಚರ್ಯದಿಂದ ನಾರಾಯಣನನ್ನು ನೋಡಿದಳು. ಅವನು ಸ್ವಲ್ಪ ಮುಗುಳ್ನಕ್ಕ. ಆ ನಗುವಿನ ಅರ್ಥ ದುರ್ಗಾಗೆ ಗೊತ್ತಾಯಿತು.
ದುರ್ಗಾ : ಸರಿಯಾಗಿ ಹೇಳಿದ್ದೀಯ. ನನ್ನ ಮೇಲೆ ಆಸಿಡ್ ಎರಚಿದ್ದು ನೀವು ಇಬ್ಬರು ಅಲ್ಲ.
ಶೌರ್ಯ : ಮತ್ತೆ ಯಾರು?
ದುರ್ಗಾ : ಅದು ಬೇರೆ ಯಾರೂ ಅಲ್ಲ, ಇಲ್ಲಿ ನಿಂತಿರೋ ರಮೇಶ್ ಅವರ ಮಗ. ಹೌದು, ಅವನು ಒಬ್ಬನೇ ಅಲ್ಲ, ಅವನ ತಮ್ಮ ಮತ್ತು ಅವನ ಅಪ್ಪ ಕೂಡ ಇದರಲ್ಲಿ ಸೇರಿದ್ದಾರೆ.
(ಶೌರ್ಯ ಮತ್ತು ವಿನೀತ್ ಶಾಕ್ ಆಗುತ್ತಾರೆ.)
ರಮೇಶ್ : ಸುಳ್ಳು! (ಎಂದು ಕಿರುಚಿದ.)
ಶಿವರಾಜ್ ರಮೇಶ್‍ನನ್ನು ಎಳೆದು ಕೆಳಗೆ ಬೀಳಿಸಿದ. ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು, ನಾರಾಯಣ ತಡೆಯೋದಕ್ಕೆ ಮುಂದೆ ನಡೆದನು, ಆಗ ಶೌರ್ಯ ಅವನನ್ನು ತಡೆದನು.
ಶೌರ್ಯ : ಇರಿ ಅಂಕಲ್, ಒಬ್ಬರ ಮೇಲೆ ಆಸಿಡ್ ಹಾಕೋಕೆ ಪ್ರಯತ್ನ ಮಾಡಿದ್ರೆ ಅವರಿಗೆ ಹೊಡೆದ್ರೂ ಪಾಪ ಬರಲ್ಲ.
ದುರ್ಗಾಗೆ ತುಂಬಾ ಕೋಪ ಬಂದು ಅವನಿಗೆ ಜೋರಾಗಿ ಹೊಡೆದಳು.
ಶೌರ್ಯ : ದುರ್ಗಾ, ನನಗೆ ಯಾಕೆ ಹೊಡೆದೆ?
ದುರ್ಗಾ : ಚೀ! ನೀನು ಇಷ್ಟು ಕೆಳ ಮಟ್ಟದವನು ಅಂತ ನಾನು ಊಹಿಸಲಿಲ್ಲ. ಈ ಕೆಲಸ ನೀನೇ ಮಾಡಿದ್ದು ಅಂತ ಸತ್ಯ ಒಪ್ಪಿಕೋ.
ಶೌರ್ಯ : ಏನು ನಾನಾ? ನಾನು ಏನೂ ಮಾಡಿಲ್ಲ ದುರ್ಗಾ. ಈಗಷ್ಟೇ ಹೇಳಿದಲ್ಲವಾ ಈ ಕೆಲಸ ರಮೇಶ್‌ನ ಮಕ್ಕಳು ಮಾಡಿದ್ದು ಅಂತ. ಮತ್ತೆ ಈಗ ಯಾಕೆ ನನ್ನ ಮೇಲೆ ಆರೋಪ ಮಾಡ್ತಿದ್ದೀಯಾ? ಅಂಕಲ್, ನೀವೇನಾದರೂ ಹೇಳಿ. (ಎಂದು ನಾರಾಯಣನ ಬಳಿಗೆ ಹೋದನು.)
ನಾರಾಯಣ : ಈ ಕೆಲಸ ನೀನೇ ಮಾಡಿದ್ದೀಯ ಶೌರ್ಯ. ವಿನೀತ್ ಕೂಡ ನಿನ್ನ ಜೊತೆ ಇದ್ದಾನೆ ಅನ್ನೋದು ನನಗೆ ಗೊತ್ತು. ನೀವು ನಮ್ಮ ಜೊತೆ ಊರಿಗೆ ಬರಬೇಕು ಅಂತ ನಾನು ನಾಟಕ ಮಾಡಿದ್ದೆ.
(ಶೌರ್ಯಗೆ ಶಾಕ್ ಆಗುತ್ತದೆ.)
ವಿನೀತ್ : ಇಲ್ಲ, ನಾವು ಏನೂ ಮಾಡಿಲ್ಲ.
ರಮೇಶ್ : ಹೌದು, ಇವರು ಏನೂ ಮಾಡಿಲ್ಲ. ಇವರು ನನ್ನ ಮಕ್ಕಳೆ ಅಲ್ಲ. ಇವರು ನನ್ನ ಮಕ್ಕಳು ಅನ್ನೋದಕ್ಕೆ ನಿನ್ನ ಹತ್ತಿರ ಸಾಕ್ಷಿ ಏನಿದೆ?
ಆಗ ದುರ್ಗಾ ಅವತ್ತು ರಮೇಶ್ ಮನೆಗೆ ಹೋಗಿದ್ದಾಗ ತನ್ನ ಫೋನ್‌ನಲ್ಲಿ ತೆಗೆದುಕೊಂಡ ಫೋಟೋವನ್ನು ಎಲ್ಲರಿಗೂ ತೋರಿಸಿದಳು.
ದುರ್ಗಾ : ಇವರುಿಬ್ಬರೇ ತಾನೆ ನಿಮ್ಮ ಮಕ್ಕಳು?
ಶೌರ್ಯ : ದುರ್ಗಾ, ಇವರುಿಬ್ಬರು ನಾವು ಅಲ್ಲ.
ವಿನೀತ್ : ಹೌದು, ಇದು ನಮ್ಮ ಫೋಟೋ ಅಲ್ಲ.
ದುರ್ಗಾ : ಶೌರ್ಯ, ಚಿಕ್ಕ ವಯಸ್ಸಿನಿಂದಲೇ ನೀನು ನಮಗೆ ಪರಿಚಯ ಇದ್ದೆ ಎಂಬುದನ್ನು ಮರೆತಿದ್ದೀಯಾ ಅನಿಸುತ್ತದೆ.
ಶೌರ್ಯ ಹಾಗೆ ಸುಮ್ಮನೆ ನಿಂತುಕೊಂಡ. ರಮೇಶ್ ಅವರೆಿಬ್ಬರನ್ನು ಬೆಂಗಳೂರಲ್ಲೇ ಒಬ್ಬ ಸಂಬಂಧಿಕರ ಮನೆಲಿ ಬಿಟ್ಟಿದ್ದ. ಆದರೆ ತನ್ನ ಬಗ್ಗೆ ಯಾರಿಗೂ ಹೇಳಬಾರದು ಎಂದು ಅವರಿಗೆ ತಿಳಿಸಿದ್ದ. ಆಗಿನಿಂದಲೇ ನಾರಾಯಣನ ಬಗ್ಗೆ ಅವರಲ್ಲಿ ದ್ವೇಷದ ಮನೋಭಾವನೆ ಮೂಡಿಸಿದ್ದ.
ದುರ್ಗಾ : ಇನ್ನೂ ಸಾಕ್ಷಿ ಬೇಕಾದರೆ ಅದನ್ನ ನಿಮ್ಮ ಮುಂದೆ ಇಡ್ತೀನಿ. (ಅಂತ ಹೇಳಿ ಅವಳು ತನ್ನ ಫೋನ್‌ನಲ್ಲಿ ರೆಕಾರ್ಡ್ ಆಗಿದ್ದ ಕಾಲ್ ಅನ್ನು ಪ್ಲೇ ಮಾಡಿದಳು)
"ಹೆಲೋ ಅಪ್ಪ, ಸ್ವಲ್ಪ ಎಡವಟ್ಟು ಆಗೋಯ್ತು. ಆಸಿಡ್ ಲಕ್ಷ್ಮಿ ಮೇಲೆ ಬೀಳಬೇಕು ಅನ್ನೋಷ್ಟರಲ್ಲಿ ಆ ದುರ್ಗಾ ಅಡ್ಡ ಬಂದಿಬಿಟ್ಟಳು. ಹೋಗಲಿ ಬಿಡಿ, ಹೇಗೋ ಒಬ್ಬರಿಗೆ ಆದರೂ ಆಸಿಡ್ ಬಿತ್ತಲ್ಲ ಅಷ್ಟೇ ಸಾಕು. ನಾನು ನಿಮಗೆ ನಂತರ ಕಾಲ್ ಮಾಡ್ತೀನಿ."
ಇದನ್ನು ಕೇಳಿ ಶೌರ್ಯಗೆ ಆಶ್ಚರ್ಯ ಆಗೋಯ್ತು.
ದುರ್ಗಾ : ಶಾಕ್ ಆಗ್ಬೇಡ ಶೌರ್ಯ, ಒಳ್ಳೆ ಕೆಲಸ ಮಾಡೋರಿಗೆ ಸ್ವಲ್ಪ ತಾಳ್ಮೆ, ಸಮಯ ಬೇಕಾಗುತ್ತದೆ. ಆದರೆ ಈ ರೀತಿ ಕಂತ್ರಿ ಕೆಲಸ ಮಾಡೋರಿಗೆ ಸ್ವಲ್ಪ ಭಯ ಇರುತ್ತೆ. ಆ ಭಯದಲ್ಲೇ ನೀನು ನಿನ್ನ ಅಪ್ಪನಿಗೆ ಮಾಡೋ ಕಾಲ್ ನನಗೆ ಮಾಡಿ ಈ ಎಲ್ಲಾ ವಿವರ ಕೊಟ್ಟೆ. ಅದಕ್ಕೆ ನಾನು ನಿನಗೆ ತುಂಬಾ ಆಭಾರಿ ಆಗಿದ್ದೀನಿ.
ಇದನ್ನ ಕೇಳಿ ಎಲ್ಲರಿಗೂ ಖಚಿತ ಆಗೋಯ್ತು, ಇದನ್ನ ಈ ಮೂವರು ಸೇರಿ ಮಾಡಿದ್ದು ಅಂತ.
ದುರ್ಗಾ : ಸತ್ಯ ಏನು ಅಂತ ಗೊತ್ತಾಯ್ತಲ್ವಾ? ಇನ್ಸ್‌ಪೆಕ್ಟರ್, ಇವನನ್ನ ಅರೆಸ್ಟ್ ಮಾಡಿ.
ಪೊಲೀಸ್ ಶೌರ್ಯನನ್ನು ಅರೆಸ್ಟ್ ಮಾಡಿದರು.
ದುರ್ಗಾ : (ರಮೇಶ್ ಮತ್ತು ವಿನೀತ್ ಹತ್ತಿರ ಬಂದು) ಜೀವನದಲ್ಲಿ ನಾವು ನಾಲ್ಕು ಜನಕ್ಕಾದರೂ ಸಹಾಯ ಆಗೋ ಕೆಲಸ ಮಾಡಬೇಕು, ಇನ್ನೊಬ್ಬರ ಕಷ್ಟಕ್ಕೆ ಹೆಗಲಾಗಿ ಇರಬೇಕು. ಆಗಲೇ ನಾವು ಹುಟ್ಟಿದ್ದು ಸಾರ್ಥಕತೆ ಅನ್ನಿಸಿಕೊಳ್ಳೋದು. ಈ ದ್ವೇಷ, ಮೋಸ ಇವೆಲ್ಲದರಿಂದು ಯಾರಿಗೂ ಯಾವ ಸುಖವೂ ಸಿಗೋದಿಲ್ಲ.
ರಮೇಶ್ : ನನ್ನನ್ನ ಕ್ಷಮಿಸು ದುರ್ಗಾ, ನನ್ನ ಅಪ್ಪನ ಜೀವನ ಹಾಳಾಯ್ತು ಎಂಬ ಕೋಪದಿಂದ ನಿಮ್ಮೆಲ್ಲರ ಕುಟುಂಬ ನಾಶ ಮಾಡಬೇಕು ಅಂತ ಈ ರೀತಿ ಕೆಟ್ಟ ಕೆಲಸ ಮಾಡಿದೆ.
ವಿನೀತ್ : ಐ ಆಮ್ ಸಾರಿ ದುರ್ಗಾ.
ಎಲ್ಲರು ಅಲ್ಲಿಂದ ಹೊರಟು ಹೋದರು. ಪೊಲೀಸ್ ಶೌರ್ಯನನ್ನು ಕರೆದುಕೊಂಡು ಠಾಣೆಗೆ ಹೋದರು. ಒಂದು ಕಡೆ ನಾರಾಯಣನ ಪೂರ್ಣ ಕುಟುಂಬ ಮನೆಗೆ ಬಂದು ಕುಳಿತಿದ್ದರು. ಆಗ ದುರ್ಗಾ ಸೂಲೋಚನಾಳ ಬಳಿಗೆ ಬಂದು—
ದುರ್ಗಾ : ಅಜ್ಜಿ, ನಾನು ಒಂದು ಮಾತು ಹೇಳ್ತೀನಿ, ತಪ್ಪು ತಿಳಿಬೇಡ. ಯಾವ ವ್ಯಕ್ತಿಯೂ ಈ ಅದೃಷ್ಟವನ್ನು ಹುಟ್ಟುತ್ತಾನೆ ತೊಗೊಂಡು ಬರಲ್ಲ. ನಮ್ಮೊಟ್ಟಿಗೆ ಏನಾದರೂ ಒಳ್ಳೇದು ಆಗಿದ್ರೆ ಅದು ನಮ್ಮ ಒಳ್ಳೆಯ ಕರ್ಮದಿಂದ ಮಾತ್ರ. ಏನಾದರೂ ಕೆಟ್ಟದ್ದು ಆಗಿದ್ರೆ, ನಾವು ದೋಷಿಸಬೇಕಾದದ್ದು ಈ ರೀತಿ ಒಬ್ಬರ ಅದೃಷ್ಟವನ್ನು ಅಲ್ಲ, ನಮ್ಮ ಕೆಟ್ಟ ಕರ್ಮಗಳನ್ನು.
ದುರ್ಗಾ ಏನನ್ನು ಹೇಳಲು ಹೊರಟಿದ್ದಾಳೆ ಎಂಬುದನ್ನು ಸೂಲೋಚನಾ ಅರ್ಥ ಮಾಡಿಕೊಂಡಳು. ಅವಳು ನಾರಾಯಣ ಮತ್ತು ಲಕ್ಷ್ಮಿ ಬಳಿಗೆ ಹೋಗಿ—
ಸೂಲೋಚನಾ : ನಾರಾಯಣ, ತಾಯಿ ಆಗಿ ನಿನಗೆ ಯಾವ ಪ್ರೀತಿ, ಮಮತೆ ಸಿಗಬೇಕೋ ಅದರಲ್ಲಿ ಯಾವುದನ್ನೂ ನಾನು ನಿನಗೆ ನೀಡಿಲ್ಲ. ನಿಮಿಬ್ಬರಿಗೆ ನಿಂದನೆ ಬಿಟ್ಟು ಬೇರೆ ಏನನ್ನೂ ನಾನು ಕೊಟ್ಟಿಲ್ಲ. ಈ ಕೆಟ್ಟ ತಾಯಿಯನ್ನು ಕ್ಷಮಿಸಿ ಬಿಡಪ್ಪಾ ಎಂದು ಅವರ ಕಾಲಿಗೆ ಬೀಳಲು ಹೋದಳು. ಆಗ ನಾರಾಯಣ ಅವಳನ್ನು ತಡೆದು—
ನಾರಾಯಣ : ಅಮ್ಮ, ನೀವು ಯಾಕೆ ಈ ರೀತಿ ಕ್ಷಮೆ ಕೇಳುತ್ತಿದ್ದೀರಾ? ಆದದ್ದೆಲ್ಲ ಆಗೋಯ್ತು, ಅದನ್ನ ಮರೆತು ಬಿಡಿ. ನಾವು ಎಲ್ಲರೂ ಹೊಸ ಜೀವನ ಶುರು ಮಾಡೋಣ ಎಂದು ಅವಳ ಕಣ್ಣೀರು ಒರೆಸಿದ.
ಶಿವರಾಜ್ : ನನ್ನನ್ನ ಕ್ಷಮಿಸು ನಾರಾಯಣ.
ನಾರಾಯಣ : ನೀವು ಕ್ಷಮೆ ಕೇಳೋ ಅವಶ್ಯಕತೆ ಇಲ್ಲ ಅಣ್ಣ, ಎಲ್ಲ ಮರೆತು ಬಿಡಿ. ಹೌದು, ನೀವು ದುರ್ಗಾ ಬಗ್ಗೆ ಒಂದು ಮಾತು ಹೇಳಿದ್ದೀರಾ ನೆನಪಿದೆಯಾ? ಅವಳು ನನ್ನ ಹಾಗೆ ನತದೃಷ್ಟೆ ಅಂತ. ಇವತ್ತು ನೋಡಿದ್ರಾ, ಅವಳಿಂದಲೇ ನಾವು ಮತ್ತೆ ಒಂದಾಗೋ ಹಾಗೆ ಆಯ್ತು.
ಶಿವರಾಜ್ : ಸರಿಯಾಗಿ ಹೇಳ್ದೆ, ಈಗ ನನಗೆ ಎಲ್ಲ ಅರ್ಥ ಆಗಿದೆ.
ದುರ್ಗಾ ಅಜ್ಜನ ಫೋಟೋ ಮುಂದೆ ನಿಂತುಕೊಂಡು—
ದುರ್ಗಾ : ಅಜ್ಜ, ನಾನು ಇವತ್ತು ನನ್ನ ಅಪ್ಪನ ಮೇಲೆ ಇದ್ದ ಕಳಂಕವನ್ನು ಅಳಿಸಿ ಬಿಟ್ಟೆ. ನನ್ನ ಹೋರಾಟಕ್ಕೆ ಕೊನೆಗೂ ಒಂದು ಒಳ್ಳೆಯ ಫಲಿತಾಂಶ ಸಿಕ್ಕಿತು ಎಂದು ಹೇಳಿ ನಾರಾಯಣನನ್ನು ಅಪ್ಪಿಕೊಂಡಳು.
ಇವತ್ತಿಗೆ ದುರ್ಗಾಳ ಹೋರಾಟದ ಕಥೆ ಇಲ್ಲಿಗೆ ಮುಗಿಯುತ್ತದೆ. ಇದು ಕೇವಲ "ಅವಳ ಹೋರಾಟ" ಮಾತ್ರ ಇರಲಿಲ್ಲ, ಅವಳ ತಂದೆಯೂ ಅವಳ ಜೊತೆಗೆ ಕೊನೆಯವರೆಗೂ ನಿಂತಿದ್ದರು. ಹಾಗೆಯೇ ಜೀವನದಲ್ಲಿ ನಿಮ್ಮ ಮಕ್ಕಳ ಹೋರಾಟಕ್ಕೆ ಶಕ್ತಿಯಾಗಿ ನೀವು ನಿಂತುಕೊಳ್ಳಿ. ಆಗ ದುರ್ಗಾ ಹೇಗೆ ಗೆದ್ದಳೋ ಹಾಗೆಯೇ ನಿಮ್ಮ ಮಕ್ಕಳು ಯಾರಿಗೂ ಹೆದರದೆ ಎಲ್ಲವನ್ನೂ ನಿಂತು ಗೆಲ್ಲುತ್ತಾರೆ.