Avala Horata - 5 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 5

Featured Books
Categories
Share

ಅವಳ ಹೋರಾಟ - 5

(೧೦ ವರ್ಷಗಳ ಹಿಂದೆ)

ಪದ್ಮಾ ಯಾರ ಜೊತೆನೋ ಫೋನ್‌ನಲ್ಲಿ ಮಾತನಾಡುತ್ತ ಹೊರಗಡೆ ಓಡಾಡುತ್ತಿದ್ದಳು, ಪ್ರಸಾದ್ ಮತ್ತು ರಾಜ ಇಬ್ಬರು ಹೊರಗಡೆ ಆಟ ಆಡುತ್ತಿದ್ದರು, ರಾಘವೇಂದ್ರ ಒಳಗಡೆ ಓದುತ್ತ ಕುಳಿತಿದ್ದ, ಲಕ್ಷ್ಮಿ ದುರ್ಗನನ್ನು ಆಟ ಆಡಿಸುತ್ತ ಕುಳಿತಿದ್ದಳು.

ಸುಲೋಚನಾ : ಲಕ್ಷ್ಮಿ ಲಕ್ಷ್ಮಿ....

ಸುಲೋಚನಾಳ ಕೂಗು ಕೇಳಿ ಲಕ್ಷ್ಮಿ ದುರ್ಗನನ್ನು ಅಲ್ಲೇ ಬಿಟ್ಟು ಅಡುಗೆಮನೆಗೆ ಹೋದಳು, ಅಲ್ಲೇ ಆಡುತ್ತಿದ್ದ ದುರ್ಗ ಹಾಗೇ ಹೊರಗಡೆ ಹೋದಳು. ಪದ್ಮಾ ಫೋನ್‌ನಲ್ಲಿ ಮಾತನಾಡುತ್ತ ತುಂಬ ದೂರ ಹೋಗಿಬಿಟ್ಟಿದ್ದಳು, ಎದುರಿಗೆ ಲಾರಿ ಬರುತ್ತಿದ್ದದ್ದು ಅವಳಿಗೆ ಕಾಣಿಸಲಿಲ್ಲ, ಅಷ್ಟು ಮಗ್ಗ್ನವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಆ ಲಾರಿ ಡ್ರೈವರ್ ಕುಡಿದು ಗಾಡಿ ಓಡಿಸುತ್ತಿದ್ದ. ಪದ್ಮಾ ಇನ್ನೇನು ಫೋನ್ ಇಳಿಸಿ ಆ ಕಡೆ ನೋಡೋಷ್ಟರಲ್ಲಿ ಲಾರಿ ಬಂದು ಅವಳಿಗೆ ಜೋರಾಗಿ ಗುದ್ದಿಬಿಟ್ಟಿತು. ಪ್ರಸಾದ್ ಮತ್ತು ರಾಜ ಜೋರಾಗಿ "ಅಮ್ಮ...." ಅಂತ ಕೂಗಿದರು.

ಒಂದೇ ಕ್ಷಣದಲ್ಲಿ ಎಲ್ಲ ಮುಗಿದುಹೋಯಿತು, ದುರ್ಗವೂ ಜೋರಾಗಿ ಅಳಲು ಶುರುಮಾಡಿದಳು. ಸುಲೋಚನಾ ಮತ್ತು ಲಕ್ಷ್ಮಿ ಹೊರಗಡೆ ಓಡಿ ಬಂದರು, ಅವರಿಬ್ಬರೂ ನಿಂತಲ್ಲೇ ನಿಂತುಕೊಂಡು ಬಿಟ್ಟರು. ಪದ್ಮಾಳ ತಲೆಗೆ ಜೋರಾಗಿ ಏಟು ಬಿದ್ದಿದ್ದರಿಂದ ಅವಳ ಉಸಿರು ಆಗಲೇ ನಿಂತೋಗಿತ್ತು. ಲಕ್ಷ್ಮಿ ದುರ್ಗನನ್ನು ತೆಗೆದುಕೊಂಡು ಮನೆ ಒಳಗೆ ಹೋದಳು, ಅವಳನ್ನು ಕೊಠಡಿಯಲ್ಲಿ ಕುಳ್ಳಿರಿಸಿ ನರಾಯಣನಿಗೆ ಕರೆ ಮಾಡಿದಳು. ನರಾಯಣ, ಶಿವರಾಜ್ ಬಂದರು. ಪ್ರಸಾದ್ ಮತ್ತು ರಾಜ ಇಬ್ಬರೂ ಅಮ್ಮನ ಮುಂದೆ ಕುಳಿತು ಅಳುತ್ತಿದ್ದರು, ಶಿವರಾಜ್ ಏನು ಮಾಡಬೇಕು ಅಂತ ಗೊತ್ತಾಗದೆ ಗೊಂಬೆ ತರಹ ನಿಂತುಕೊಂಡು ಬಿಟ್ಟಿದ್ದ.

ನರಾಯಣ : ಅಣ್ಣ, ನೀವು ಸಂಭಾಳಿಸಿಕೊಳ್ಳಬೇಕು, ನಮ್ಮೆಲ್ಲರಿಗಾಗಿ, ಮಕ್ಕಳಿಗಾಗಿ.

ಶಿವರಾಜ್ ನರಾಯಣನನ್ನು ತಬ್ಬಿಕೊಂಡು ಜೋರಾಗಿ ಅಳಲು ಶುರುಮಾಡಿದ.

ಶಿವರಾಜ್ : ಪದ್ಮಾ ಇಲ್ಲದೆ ನಾನು ಹೇಗೆ ಜೀವನ ಸಾಗಿಸಲಿ, ನಾನು ಬದುಕಲ್ಲ (ಅಂತ ಅಳುತ್ತ ಅಲ್ಲೇ ಕುಸಿದು ಬಿದ್ದ).

ನರಾಯಣ ಶಿವರಾಜನನ್ನು ಸಮಾಧಾನ ಮಾಡುತ್ತ ಇದ್ದ, ಮಕ್ಕಳನ್ನು ನೋಡಿ ಎಲ್ಲರಿಗೂ ತುಂಬನೇ ಸಂಕಟ ಆಗುತ್ತಿತ್ತು. ಕೊನೆಗೆ ಪದ್ಮಾಳ ಅಂತ್ಯ ಸಂಸ್ಕಾರ ಆಯಿತು, ಎಲ್ಲಾ ವಿಧಿ ವಿಧಾನ ಮುಗಿಸಿ ಎಲ್ಲರು ರಾತ್ರಿ ಹೊತ್ತಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದರು. ಪ್ರಸಾದ್ ಮತ್ತು ರಾಜ ಲಕ್ಷ್ಮಿಯ ಮಡಿಲಲ್ಲಿ ಮಲಗಿದ್ದರು, ಶಿವರಾಜ್ ಅವನ ಮಕ್ಕಳನ್ನೇ ನೋಡುತ್ತ ಕುಳಿತಿದ್ದ.

ಒಮ್ಮಿಂದೊಮ್ಮೆ ದುರ್ಗ ಜೋರಾಗಿ ಅಳುವ ಶಬ್ದ ಕೇಳಿಬಂತು, ಲಕ್ಷ್ಮಿ ಎದ್ದು ದುರ್ಗನನ್ನು ತೆಗೆದುಕೊಂಡು ಹೊರಗಡೆ ಬಂದಳು. ಲಕ್ಷ್ಮಿ ದುರ್ಗನನ್ನು ಸಮಾಧಾನ ಮಾಡುತ್ತ ಇದ್ದಳು, ಶಿವರಾಜ್ ಆ ಮಗುವನ್ನೇ ದಿಟ್ಟಿಸಿ ನೋಡುತ್ತಿದ್ದ. ಸ್ವಲ್ಪ ಹೊತ್ತಾದ ಮೇಲೆ ಶಿವರಾಜ್ ಎದ್ದು ನರಾಯಣ ಹತ್ತಿರ ಬಂದ.

ನರಾಯಣ : ಏನಾಯಿತು ಅಣ್ಣ, ಏನಾದರೂ ಹೇಳಬೇಕಾ?

ಶಿವರಾಜ್ ಏನೂ ಮಾತನಾಡದೆ ನರಾಯಣನ ಕನ್ನೆಗೆ ಜೋರಾಗಿ ಹೊಡೆದ ಬಿಟ್ಟ. ಎಲ್ಲರು ದಿಗ್ಭ್ರಾಂತರಾಗಿ ನೋಡುತ್ತ ನಿಂತುಬಿಟ್ಟರು.

ಲಕ್ಷ್ಮಿ : ಯಾಕೆ ಭಾವ ಅವರಿಗೆ ಹೊಡೆದಿರಿ?

ಶಿವರಾಜ್ : ಹೀಗೆ ಒಂದಿನ ನೀನು ಹುಟ್ಟಿ ನನ್ನ ಅಪ್ಪನನ್ನು ಕಿತ್ಕೊಂಡೆ, ಈಗ ನಿನ್ನ ಮಗಳು ಹುಟ್ಟಿ ನನ್ನ ಹೆಂಡತಿಯನ್ನು ಕಿತ್ಕೊಂಡಳು.

(ಈ ಮಾತು ಕೇಳಿ ನರಾಯಣ ಮತ್ತು ಲಕ್ಷ್ಮಿಗೆ ತುಂಬನೇ ಕೋಪ ಬಂತು.)

ಶಿವರಾಜ್ ಮುಂದುವರಿದು : ಛೀ, ಅಪ್ಪ ಮಗಳು ಇಬ್ಬರದ್ದೂ ಒಂದೇ ಕೆಟ್ಟ ಅದೃಷ್ಟ. ನೀನು ಹುಟ್ಟಿದಾಗಲೇ ಅಮ್ಮ ನಿನ್ನನ್ನು ಮನೆಯಿಂದ ಹೊರಗಡೆ ಹಾಕಿದ್ದರೆ ಇವತ್ತು ಈ ದಿನ ನೋಡಕ್ಕೆ ಸಿಗುತ್ತಿರಲಿಲ್ಲ, ಈಗ ನಿನ್ನ ಮಗಳು...

ನರಾಯಣ : ಅಣ್ಣ! (ಅಂತ ಶಿವರಾಜನ ಮಾತು ಮುಗಿಯುವಷ್ಟರಲ್ಲಿ ಜೋರಾಗಿ ಕಿರುಚಿದ) ಇನ್ನೊಂದು ಮಾತು ನನ್ನ ಮಗಳ ವಿರುದ್ಧ ನಾನು ಕೇಳೋಕೆ ಇಷ್ಟಪಡುವುದಿಲ್ಲ. ನೀವು ಸರಿಯಾಗಿ ಹೇಳಿದ್ರಿ ಅಣ್ಣ, ಅಮ್ಮ ನನ್ನನ್ನು ಅವತ್ತು ಮನೆ ಬಿಟ್ಟು ಹೊರಗೆ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಏಕೆಂದರೆ ಇವತ್ತು ನನ್ನ ಮಗಳ ವಿರುದ್ಧ ಈ ಮಾತನ್ನು ಕೇಳುವ ದಿನ ಬರ್ತಿರಲಿಲ್ಲ.

ಇವಾಗ ಆ ತಪ್ಪನ್ನು ಸರಿಮಾಡೋಣ. ನನ್ನಿಂದ ನಿಮ್ಮೆಲ್ಲರಿಗೂ ತುಂಬಾ ಕೆಟ್ಟದ್ದಾಗಿದೆ ಅಲ್ಲವಾ, ಇನ್ನು ಮುಂದೆ ಆಗೋದು ಬೇಡ. (ನರಾಯಣ ಅಲ್ಲೇ ಮಲಗಿದ್ದ ರಾಘವೇಂದ್ರನನ್ನು ಎತ್ತಿಕೊಂಡ) ಲಕ್ಷ್ಮಿ ಇನ್ನು ಮುಂದೆ ಈ ಮನೆಯಲ್ಲಿ ನಾವು ಒಂದು ಕ್ಷಣವೂ ಇರಬಾರದು, ಬಾ ಹೋಗೋಣ.

ಲಕ್ಷ್ಮಿ : ಒಂದು ನಿಮಿಷ ನಿಲ್ಲಿ, ನಮ್ಮ ಬಟ್ಟೆ ಮತ್ತು ಮಕ್ಕಳ ಬಟ್ಟೆ ತೆಗೆದುಕೊಂಡು ಬರುತ್ತೀನಿ.

ನರಾಯಣ : ಬೇಡ, ಈ ಮನೆಯ ಯಾವ ವಸ್ತುವೂ ನಮ್ಮಿಬ್ಬರದ್ದಲ್ಲ, ಈ ಮನೆ ಋಣ ಇಲ್ಲಿಗೆ ಮುಗಿತು, ನಡಿ ಹೋಗೋಣ. (ಅಂತ ಮಧ್ಯರಾತ್ರಿಯಲ್ಲಿ ಹೆಂಡತಿ ಮಕ್ಕಳ ಜೊತೆ ಮನೆ ಹೊರಗಡೆ ನಡೆದ.)

ನರಾಯಣ : ಒಂದು ಮಾತು ಅಣ್ಣ, ನನ್ನ ಮಗಳನ್ನು ನಥದೃಷ್ಟೆ ಅಂತ ಹೇಳಿದ್ರಲ್ವಾ, ನೋಡ್ತಿರೀ ನನ್ನ ಜೀವನದಲ್ಲಿ ಅವಳು ಕೇವಲ ಅದೃಷ್ಟ ಮಾತ್ರ ಅಲ್ಲ, ನನ್ನ ಶಕ್ತಿಯೂ ಆಗ್ತಾಳೆ, ಅದನ್ನ ನೀವು ಇದೇ ಕಣ್ಣಾರೆ ನೋಡ್ತೀರಿ.

(ಅಂತ ಹೇಳಿ ಹೊರನಡೆದರು.)

ನರಾಯಣನ ಸ್ನೇಹಿತ ಅಂದು ರಾತ್ರಿ ಅವರಿಬ್ಬರಿಗೆ ಒಂದು ಮನೆ ವ್ಯವಸ್ಥೆ ಮಾಡಿದ್ದ. ನರಾಯಣ ಮತ್ತು ಲಕ್ಷ್ಮಿ ಜೊತೆಗೇ ಕುಟುಂಬ ಇಲ್ಲದೆ ಇದ್ದರೂ ದೇವರು ಯಾವಾಗಲೂ ಜೊತೆಗಿದ್ದ, ಏಕೆಂದರೆ ಆ ಮನೆ ಬಾಡಿಗೆ ಮನೆ ಆಗಿದ್ದರೂ ಆ ಮನೆಯ ಮಾಲೀಕ ತೀರಿಕೊಂಡಿದ್ದರಿಂದ ಅವರಿಗೆ ಮನೆ ಬಾಡಿಗೆ ಇಲ್ಲದೆ ಸಿಕ್ಕಿತ್ತು.

ನರಾಯಣ : ನನ್ನನ್ನು ಕ್ಷಮಿಸಿಬಿಡು ಲಕ್ಷ್ಮಿ.

ಲಕ್ಷ್ಮಿ : ನನಗೆ ಯಾಕೆ ಕ್ಷಮೆ ಕೇಳುತ್ತಿದ್ದೀರಿ?

ನರಾಯಣ : ನನ್ನ ಕೈ ಹಿಡಿದು ನೀನು ತುಂಬನೇ ಕಷ್ಟ ಅನುಭವಿಸುತ್ತಿದ್ದೀಯ, ನಾನು ಏನೂ ಮಾಡಕ್ಕೆ ಆಗುತ್ತಿಲ್ಲ.

ಲಕ್ಷ್ಮಿ : ಇದು ನನಗೆ ಯಾವದೇ ಕಷ್ಟ ಅಲ್ಲ, ನೀವು ಎಲ್ಲಿದ್ದರೂ ಅದೇ ನನಗೆ ಮನೆ, ಅರಮನೆ ಎಲ್ಲ. ಏನೂ ತಲೆಕೆಡಿಸಿಕೊಳ್ಳಬೇಡಿ, ಎಲ್ಲ ಸರಿಯಾಗುತ್ತದೆ. ಇದು ನಮ್ಮ ಹೊಸ ಪಯಣ, ಇದನ್ನು ಖುಷಿಯಿಂದ ಶುರು ಮಾಡೋಣ.

ನರಾಯಣ : ನೀನು ಹೇಳೋದು ನಿಜ, ಇದೇ ನಮ್ಮ ಅದೃಷ್ಟದ ರೇಖೆ ಬದಲಾಯಿಸುವ ಪಯಣ.

(ಹೀಗೆ ತುಂಬ ವರ್ಷಗಳು ಕಳೆದವು...)

ದುರ್ಗಾ : ಏನಪ್ಪಾ ನನ್ನ ಬಗ್ಗೆನೇ ಯೋಚಿಸುತ್ತಿದ್ದೀರಾ?

ನರಾಯಣ : (ವರ್ತಮಾನಕ್ಕೆ ಬಂದು ಮುಗುಳ್ನಕ್ಕ.)

(ನರಾಯಣ ಮತ್ತು ಲಕ್ಷ್ಮಿಯ ಇಬ್ಬರು ಮಕ್ಕಳು ಓದಿ ವಿದ್ಯಾವಂತರಾಗಿದ್ದರು. ರಾಘವೇಂದ್ರ ಒಂದು ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ದುರ್ಗಾ ಲಾಯರ್ ಆಗಿದ್ದಳು. ಎಲ್ಲರೂ ಹೀಗೆ ಮಾತನಾಡುತ್ತ ಕುಳಿತಿದ್ದರು, ಯಾರೋ ಬಾಗಿಲು ಬಡಿದರು.)

ನರಾಯಣ : ಅರೆ ಶೌರ್ಯ ಏನು ಇದ್ದಕ್ಕಿದ್ದ ಹಾಗೆ ಬಂದಿದ್ದು?

ಈ ಶೌರ್ಯ ಯಾರು? ಮುಂದೆ ಏನಾಯ್ತು ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ...