ಶಿವರಾಜನನ್ನು ನೋಡಿದ ತಕ್ಷಣ ದುರ್ಗಾ ಓಡಿ ಹೋಗಿ ಅವನ ಕಾಲಿಗೆ ನಮಸ್ಕರಿಸಿದಳು. ಶಿವರಾಜ ಅವಳಿಗೆ ಆಶೀರ್ವಾದ ಮಾಡದೆ ಅಲ್ಲಿಂದ ಒಂದು ಹೆಜ್ಜೆ ಹಿಂದೆ ತೆಗೆದುಕೊಂಡ. ಶಿವರಾಜ ಹೀಗೆ ಮಾಡಿದ್ದನ್ನು ನೋಡಿ ದುರ್ಗಾಗೆ ತುಂಬ ಬೇಜಾರ್ ಆಯ್ತು, ಆದರೂ ಅದನ್ನು ತೋರಿಸಿಕೊಳ್ಳಲಿಲ್ಲ.
ದುರ್ಗಾ : ಹೇಗಿದ್ದೀರಿ ದೊಡ್ಡಪ್ಪ (ಎಂದು ತುಂಬಾ ಕಾಳಜಿಯಿಂದ ಕೇಳಿದಳು).
ಶಿವರಾಜ : ನೀನು ಯಾಕೆ ಬಂದೆ ಇಲ್ಲಿಗೆ?
ಸುಲೋಚನಾ : ಶಿವರಾಜ, ಯಾಕೆ ಹೀಗೆ ಮಾತಾಡ್ತಿದ್ದೀಯಾ? ಇದು ಅವಳ ಮನೆ, ಅವಳು ಯಾವಾಗ ಬೇಕಾದರೂ ಬರಬಹುದು, ಎಷ್ಟು ದಿನ ಬೇಕಾದರೂ ಇರಬಹುದು.
ಶಿವರಾಜ : ಬಂದು ಇನ್ನೂ ಸ್ವಲ್ಪ ಹೊತ್ತಾಗಿದ್ದರೂ ಆಗಲೇ ಅಮ್ಮನ್ನ ನನ್ನ ವಿರುದ್ಧ ಎತ್ತ ಕಟ್ಟಿಿದ್ದೀಯಲ್ಲಾ, ನಿನ್ನನ್ನ ಮೆಚ್ಚಬೇಕು ದುರ್ಗಾ.
ದುರ್ಗಾ : ನನಗೆ ಗೊತ್ತು ದೊಡ್ಡಪ್ಪ, ನಿಮಗೆ ನನ್ನ ಮೇಲೆ ತುಂಬಾ ಕೋಪ ಇದೆ ಅಂತ. ಆದರೆ ನಿಮ್ಮ ಕೋಪಕ್ಕೆ ಯಾವ ಅರ್ಥವೂ ಇಲ್ಲ ಅನ್ನೋದು ನಿಮಗೂ ಗೊತ್ತು, ಎಲ್ಲರಿಗೂ ಗೊತ್ತು.
ಶಿವರಾಜ : ಏನು ನನ್ನ ಕೋಪಕ್ಕೆ ಅರ್ಥ ಇಲ್ಲವಾ? ನಿನ್ನಿಂದ ನಾನು ನನ್ನ ಹೆಂಡತಿಯನ್ನು ಕಳೆದುಕೊಂಡೆ, ನಿನ್ನ ಅಪ್ಪನಿಂದ ನಾನು ನನ್ನ ಅಪ್ಪನನ್ನ ಕಳೆದುಕೊಂಡೆ.
ದುರ್ಗಾ: ಬರಿ ನೀವು ಮಾತ್ರ ನಿಮ್ಮ ಅಪ್ಪನನ್ನ ಕಳೆದುಕೊಂಡಿದ್ದೀರಾ? ಅಷ್ಟಕ್ಕೂ ನಿಮಗೆ ಅಪ್ಪನ ಪ್ರೀತಿ ಸ್ವಲ್ಪ ದಿನಕ್ಕಾದರೂ ಸಿಕ್ಕಿದೆ. ಆದರೆ ಅಪ್ಪನಿಗೆ ಅಪ್ಪನ ಪ್ರೀತಿ ಮಾತ್ರ ಅಲ್ಲ, ಅಮ್ಮನ ಮಮಕಾರವೂ ಅನುಭವಿಸೋಕೆ ಆಗಿಲ್ಲ. ಈಗ ಹೇಳಿ, ಅಪ್ಪನ ನೋವಿನ ಮುಂದೆ ನಿಮ್ಮ ನೋವು ಇನ್ನೂ ಹೆಚ್ಚು ಅನಿಸ್ತಿದೆಯಾ? ಆದರೂ ಅವರು ಯಾವತ್ತೂ ಅವರ ನೋವನ್ನ ಅಸ್ತ್ರವಾಗಿ ಯಾರ ವಿರುದ್ಧವಾಗಿಯೂ ಪ್ರಯೋಗಿಸಿಲ್ಲ.
ಶಿವರಾಜ : ನೀನು ಏನೇ ಹೇಳಿದರೂ ನಾನು ಯಾವತ್ತೂ ನಿನ್ನನ್ನಾಗಲಿ, ನಾರಾಯಣನ್ನಾಗಲಿ ಕ್ಷಮಿಸಲ್ಲ.
ದುರ್ಗಾ : ನಾನು ಇಲ್ಲಿ ನಿಮ್ಮ ಕ್ಷಮೆ ಕೇಳೋಕೆ ಬಂದಿಲ್ಲ ದೊಡ್ಡಪ್ಪ, ಏಕೆಂದರೆ ಮಾಡದೆ ಇರುವ ತಪ್ಪಿಗೆ ನಾನು ಯಾವತ್ತೂ ಕ್ಷಮೆ ಕೇಳಲ್ಲ. ನನ್ನ ಅಪ್ಪನಿಗೂ ಕ್ಷಮೆ ಕೇಳೋಕೆ ನಾನು ಬಿಡಲ್ಲ.
ಶಿವರಾಜ ಅಲ್ಲಿಂದ ತನ್ನ ಕೊಠಡಿಗೆ ಹೋದ. ಅಲ್ಲಿ ಪ್ರಸಾದ್ ನಿಂತಿದ್ದ, ಅವನನ್ನ ದುರ್ಗಾ ಗಮನಿಸಿದಳು.
ದುರ್ಗಾ : ಹೇಗಿದ್ದೀಯಾ ಅಣ್ಣ (ಎಂದು ಪ್ರೀತಿಯಿಂದ ಕೇಳಿದಳು).
ಪ್ರಸಾದ್ ಏನೂ ಉತ್ತರಿಸದೆ ಅಲ್ಲಿಂದ ಹೊರಟು ಶಿವರಾಜನ ಕೊಠಡಿಗೆ ಹೋದ.
ರಾತ್ರಿ ಆಗಿತ್ತು, ಎಲ್ಲರೂ ಮಲಗಿದ್ದರು. ಆದರೆ ದುರ್ಗಾಗೆ ನಿದ್ದೆ ಬರುತ್ತಿರಲಿಲ್ಲ.
ದುರ್ಗಾ : (ಅಜ್ಜನ ಫೋಟೋ ಮುಂದೆ ಬಂದು) ಅಜ್ಜಾ ನೀವು ಯಾಕೆ ನಮನ್ನೆಲ್ಲ ಬಿಟ್ಟು ಹೋದ್ರಿ? ನೀವು ಇದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಆದರೂ ನಾನು ಬಿಡಲ್ಲ ಅಜ್ಜಾ, ಅಪ್ಪನಿಗೆ ಹತ್ತಿರುವ ಕಳಂಕವನ್ನು ಅಳಿಸುವವರೆಗೆ ನನ್ನ ಹೋರಾಟ ನಿಲ್ಲಲ್ಲ. ನನಗೆ ಆಶೀರ್ವಾದ ಮಾಡಿ ಅಜ್ಜಾ (ಎಂದು ಅಳುತ್ತಾ ಹಿಂದೆ ತಿರುಗಿದಳು. ಅಲ್ಲಿ ಪ್ರಸಾದ್ ನಿಂತಿದ್ದ. ಅವನು ಯಾವದೋ ಚಿಂತೆಯಲ್ಲಿ ಇದ್ದಾನೆ ಎಂದು ಅವಳಿಗೆ ಅನಿಸಿತು), ಏನಾಯ್ತು ಅಣ್ಣ? ಏನಾದರೂ ಹೇಳಬೇಕಾ? (ಎಂದು ಕಾಳಜಿಯಿಂದ ಕೇಳಿದಳು.)
ಪ್ರಸಾದ್: ಊರಲ್ಲಿ ಏನಾದರೂ ಆಗಿದೆಯಾ? (ಎಂದು ಕೇಳಿದ. ದುರ್ಗಾ ನಡೆದದ್ದನ್ನೆಲ್ಲ ಹೇಳಿದಳು.)
ದುರ್ಗಾ: ಅದಕ್ಕಾಗಿ ನಾನು ಅಜ್ಜನ ಕೊಲೆ ಬಗ್ಗೆ ಎಲ್ಲಾ ವಿಷಯ ತಿಳಿಯೋಕೆ ಇಲ್ಲಿಗೆ ಬಂದೆ. ಅವರ ಕೊಲೆ ವಿಷಯ ಏನೋ ತಿಳಿತು, ಆದರೆ ಆ ರಾಮಪ್ಪನ ಬಗ್ಗೆ ಇನ್ನೂ ಸಂಪೂರ್ಣವಾಗಿ ಏನೂ ಗೊತ್ತಿಲ್ಲ. ಅವನಿಗೆ ಯಾರಾದರೂ ಮಕ್ಕಳು, ಮೊಮ್ಮಕ್ಕಳು ಇದ್ದಾರಾ ಇಲ್ಲವಾ ಅನ್ನೋದು ಗೊತ್ತಾಗಿಲ್ಲ.
ಪ್ರಸಾದ್: ಹೌದು, ಅವನಿಗೆ ಒಬ್ಬ ಗಂಡು ಮಗ ಇದ್ದಾನೆ.
ದುರ್ಗಾ: ಏನು, ನಿನಗೆ ಅವನ ಬಗ್ಗೆ ಗೊತ್ತಾ?
ಪ್ರಸಾದ್: ಹ್ಮ್.
ದುರ್ಗಾ: ನಿನಗೆ ಅವನ ಬಗ್ಗೆ ಏನೇನು ಗೊತ್ತಿದೆಯೋ ಎಲ್ಲ ಹೇಳು ಪ್ರಸಾದ್, ನನಗೆ ಸಹಾಯ ಆಗುತ್ತದೆ.
ಪ್ರಸಾದ್: ಆ ರಾಮಪ್ಪನಿಗೆ ಒಬ್ಬನೇ ಒಬ್ಬ ಗಂಡು ಮಗ ಇದ್ದ. ಅವನ ಹೆಸರು ರಮೇಶ್. ಅವನು ಈಗಲೂ ಅದೇ ಊರಲ್ಲಿ ಹೊಲದಲ್ಲಿ ಕೆಲಸ ಮಾಡ್ತಾ ಇದ್ದಾನೆ. ಅವನಿಗೆ ಇನ್ನೂ ನಮ್ಮ ಮೇಲೆ ಕೋಪ ಕಡಿಮೆ ಆಗಿಲ್ಲ. ಈಗಲೂ ಯಾವಾಗಲಾದರೂ ನಾವು ಊರಿಗೆ ಹೋದಾಗ ಅವನು ನಮ್ಮೊಟ್ಟಿಗೆ ಮಾತಾಡಲ್ಲ. ಅವನಿಗೆ ಇಬ್ಬರು ಗಂಡು ಮಕ್ಕಳು, ಆದರೆ ಅವರ ಹೆಸರೇನು ನನಗೆ ಗೊತ್ತಿಲ್ಲ.
ದುರ್ಗಾ: ಅವರ ಹೆಸರನ್ನು ತಿಳಿದುಕೊಳ್ಳೋದು ತುಂಬ ಮುಖ್ಯ ಅಣ್ಣ.
ಪ್ರಸಾದ್: ಸರಿ, ಒಂದು ಕೆಲಸ ಮಾಡೋಣ. ನಾಳೆ ಹಳ್ಳಿಗೆ ಹೋಗೋಣ. ಅಲ್ಲಿ ಸ್ವಲ್ಪ ಜನರಿಗೆ ವಿಚಾರಿಸಿದರೆ ಏನಾದರೂ ಗೊತ್ತಾಗುತ್ತದೆ.
ದುರ್ಗಾ: ಆಯ್ತು.
ಬೆಳಗ್ಗೆ ಸುಲೋಚನಾ, ದುರ್ಗಾ ಮತ್ತು ಪ್ರಸಾದ್ ತಿಂಡಿ ಮಾಡ್ತಾ ಇದ್ದರು. ಅಲ್ಲಿಗೆ ಶಿವರಾಜ ಮತ್ತು ರಾಜ ಬಂದರು.
ಸುಲೋಚನಾ: ಅರೆ ಶಿವರಾಜ, ರಾಜ ಬನ್ನಿ ತಿಂಡಿ ಮಾಡಿ. ಇವತ್ತಿನ ತಿಂಡಿ ದುರ್ಗನೇ ಮಾಡಿದ್ದಾಳೆ.
ಪ್ರಸಾದ್: ಹೌದು ಅಪ್ಪಾ, ತುಂಬಾ ರುಚಿಯಾಗ ಮಾಡಿದ್ದಾಳೆ. ಬನ್ನಿ ತಿನ್ನಿ.
ಅವರಿಬ್ಬರು ಬಂದು ಕೂತರು. ದುರ್ಗಾಗೆ ತುಂಬ ಖುಷಿ ಆಯ್ತು. ಅವಳೆ ಸ್ವತಃ ಎದ್ದು ಶಿವರಾಜ ಮತ್ತು ರಾಜಗೆ ತಿಂಡಿ ಬಡಿಸಿದಳು. ಇದನ್ನು ನೋಡಿ ಸುಲೋಚನಾಗೆ ಲಕ್ಷ್ಮಿ ನೆನಪಾಯಿತು.
(ಅವಳು ಇದ್ದಾಗ ಅವಳ ಬೆಲೆ ನನಗೆ ಗೊತ್ತಾಗಲಿಲ್ಲ. ಪಾಪ ಅವಳು ಎಲ್ಲರನ್ನೂ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಅವಳ ಒಳ್ಳೆ ಮನಸ್ಸನ್ನು ನಾವು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಮನಸ್ಸಲ್ಲಿ ಅಂದುಕೊಂಡಳು.)
ದುರ್ಗಾ: ದೊಡ್ಡಪ್ಪ, ನಾನು ಮತ್ತು ಪ್ರಸಾದ್ ಇವತ್ತು ಹಳ್ಳಿಗೆ ಹೋಗಿ ಬರುತ್ತೀವಿ.
ಶಿವರಾಜ: ಸರಿ.
ಅವನು ಸರಿ ಎಂದು ಇಷ್ಟು ಸರಳವಾಗಿ ಯಾವುದೇ ಪ್ರಶ್ನೆ ಕೇಳದೆ ಹೇಳಿದ್ದು ನೋಡಿ ಎಲ್ಲರಿಗೂ ತುಂಬ ಆಶ್ಚರ್ಯ ಆಯ್ತು. ನಿಜ ಏನೆಂದರೆ ಹಿಂದಿನ ರಾತ್ರಿ ದುರ್ಗಾ ಮತ್ತು ಪ್ರಸಾದ್ ಮಾತಾಡಿದ್ದನ್ನ ಅವನು ಕೇಳಿಸಿಕೊಂಡಿದ್ದ. ಅಷ್ಟೇ ಅಲ್ಲ ದುರ್ಗಾ ಅವಳ ಅಜ್ಜನ ಫೋಟೋ ಮುಂದೆ ನಿಂತು ಸಂಕಟ ಪಟ್ಟಿದ್ದನ್ನ ಅವನು ನೋಡಿದ್ದ. ಹಾಗಾಗಿ ಅವನು ಅವರಿಗೆ ಹೆಚ್ಚು ಕೇಳಲು ಹೋಗಲಿಲ್ಲ. ನಡೆದದ್ದರಲ್ಲಿ ತಪ್ಪು ಅವನದೇ ಅಂತ ಅವನಿಗೆ ಅರಿವಾಗಿತ್ತು. ಆದರೂ ಅದನ್ನು ಒಪ್ಪಿಕೊಳ್ಳುವುದರಲ್ಲಿ ಅವನ ಅಹಂ ಅಡ್ಡ ಬರುತ್ತಿತ್ತು.
ಪ್ರಸಾದ್ ಮತ್ತು ದುರ್ಗಾ ಅವರ ಹಳ್ಳಿಗೆ ಹೋಗಿ ಇನ್ನೂ ಯಾವ ವಿಷಯಗಳನ್ನು ತಿಳಿದುಕೊಂಡರು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿಯೋಣ...