Avala Horata - 13 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 13

Featured Books
  • दोस्ती

    आज संदलपुर में रौनक ही रौनक थी क्योंकि आज बहुत ही पहुंचे हुए...

  • प्रेम पल्लवी - 3

    आधा रास्ता लाज भरी खामोशी में तय हो चुका था। सन्नाटा इतना गह...

  • वो दूसरी मुलाकात

    "वो दूसरी मुलाकात"हिंदी कहानी (लगभग 2000 शब्द)  लेखक: विजय श...

  • बेड़ियां

    बेड़ियांरात के 2:37 बज रहे थे।पूरा शहर नींद में डूबा था, लेक...

  • चलो दूर कहीं..! - 15

    चलो दूर कहीं... 15सारा और प्रतीक्षा कैंटीन में बैठी रोहन का...

Categories
Share

ಅವಳ ಹೋರಾಟ - 13

(ನಾರಾಯಣ ಮತ್ತು ಎಲ್ಲರು ಊರಿಗೆ ಬಂದರು, ನಾರಾಯಣ ಹಳ್ಳಿಯ ದಾರಿಯಲ್ಲಿ ಸಾಗುತ್ತಾ, ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಾ ಹೋಗುತ್ತಿದ್ದ, ಶೌರ್ಯ ಮತ್ತು ವಿನಿತ್ ಸ್ವಲ್ಪ ಭಯದಲ್ಲೇ ಮುಂದೆ ಸಾಗುತ್ತಿದ್ದರು.)

ಭೀಮಪ್ಪ : ಅರೆ ನೀವು ಬಂದ್ರಾ (ಎಂದು ಭೀಮಪ್ಪ ಅವರ ಹತ್ತಿರ ಬಂದ).

ನಾರಾಯಣ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ.

ಭೀಮಪ್ಪ : ಹೇಗೆ ಗೊತ್ತಾಗತ್ತೆ, ನೀವು ಯಾರು ನನ್ನನ್ನು ನೋಡೇ ಇಲ್ಲ, ನಾನು ನಿಮ್ಮ ಅಪ್ಪನ ಕಾಲದಿಂದಲೂ ಇಲ್ಲೇ ಇದ್ದೀನಿ, ಬನ್ನಿ ನಿಮ್ಮ ಮಗಳು ನಿಮಗೋಸ್ಕರನೇ ಪಂಚಾಯ್ತಿ ಕಟ್ಟೆ ಹತ್ತಿರ ಕಾಯ್ತಿದ್ದಾಳೆ.

ಶೌರ್ಯ ಮತ್ತು ವಿನಿತ್ ಪಂಚಾಯ್ತಿ ಕಟ್ಟೆ ಹೆಸರು ಕೇಳಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು, ಎಲ್ಲರು ಕಟ್ಟೆಯ ಹತ್ತಿರ ಹೋದರು, ಅಲ್ಲಿ ಇಡೀ ಊರಿಗೆ ಊರೆ ಸೇರಿತ್ತು, ಪ್ರಸಾದ್ ಮತ್ತು ರಾಜ ಕೂಡ ಅಲ್ಲೇ ನಿಂತಿದ್ದರು, ಅವರು ನಾರಾಯಣನ ಕುಟುಂಬ ಬರುತ್ತಿರುವುದನ್ನು ನೋಡಿ ಓಡಿ ಹೋಗಿ ನಾರಾಯಣ ಮತ್ತು ಲಕ್ಷ್ಮಿಗೆ ನಮಸ್ಕರಿಸಿದರು, ಅವರಿಬ್ಬರು ಆಶೀರ್ವಾದ ನೀಡುತ್ತಾ—

ನಾರಾಯಣ : ನೀವೀಬ್ಬರು ಯಾರಪ್ಪ?

ಪ್ರಸಾದ್ : ನಾವು ಯಾರು ಅಂತ ಗೊತ್ತಾಗಲಿಲ್ಲವಾ ಚಿಕ್ಕಪ್ಪ? (ಹೀಗೆ ಹೇಳುವಾಗ ಅವನ ಕಣ್ಣಲ್ಲಿ ನೀರು ತುಂಬಿತ್ತು.)

ನಾರಾಯಣ : (ತಕ್ಷಣ ಎಚ್ಚರಗೊಂಡು ಖುಷಿಯಿಂದ) ಪ್ರಸಾದ್, ರಾಜ ಹೇಗಿದ್ದೀರೋ? (ಎಂದು ಕೇಳಿ ಅವರನ್ನು ಅಪ್ಪಿಕೊಂಡ.)

ರಾಜ : ಚೆನ್ನಾಗಿದ್ದೀವಿ, ನೀವು ಎಲ್ಲ ಹೇಗಿದ್ದೀರಿ?

ಲಕ್ಷ್ಮಿ : ಚೆನ್ನಾಗಿದ್ದೀವಿ, ಅತ್ತೆ ಎಲ್ಲ ಹೇಗಿದ್ದಾರೆ? ಅವರು ಎಲ್ಲಿದ್ದಾರೆ ಕಾಣಿಸುತ್ತಿಲ್ಲ?

ಶೌರ್ಯ : ಹಾ, ದುರ್ಗಾನೂ ಕಾಣಿಸುತ್ತಿಲ್ಲ?

ಪ್ರಸಾದ್ : (ಶೌರ್ಯ ಮತ್ತು ವಿನಿತ್ ಅನ್ನು ನೋಡಿ) ಬರುತ್ತಾರೆ, ಸ್ವಲ್ಪ ಕಾಯಿರಿ, ಇಷ್ಟೊಂದು ಅವಸರನಾ?

ಅಲ್ಲೇ ರಮೇಶ್ ಕೂಡ ನಿಂತಿದ್ದ, ಅವನು ಶೌರ್ಯ ಮತ್ತು ವಿನಿತ್ ಅನ್ನು ನೋಡಿದ, ಅದೇ ಸಮಯಕ್ಕೆ ಅವರಿಬ್ಬರೂ ರಮೇಶ್ ಕಡೆ ನೋಡಿದರು, ಅವರು ತಕ್ಷಣ ಬೇರೆ ಕಡೆ ಮುಖ ತಿರುಗಿಸಿದರು.

ರಾಘವೇಂದ್ರ : ಹೇಗಿದ್ದೀರೋ (ಎಂದು ಪ್ರಸಾದ್ ಮತ್ತು ರಾಜನ ಭುಜ ತಟ್ಟಿದ).

ರಾಜ & ಪ್ರಸಾದ್ : ಚೆನ್ನಾಗಿದ್ದೀವಿ (ಮೂವರು ಅಪ್ಪಿಕೊಂಡರು).

ನಾರಾಯಣನಿಗೆ ಎಲ್ಲರು ಹೀಗೆ ಖುಷಿಯಾಗಿ ಇರುವುದನ್ನು ನೋಡಿ ತುಂಬಾ ಖುಷಿಯಾಯಿತು, ಅಲ್ಲಿ ತುಂಬಿರುವ ಎಲ್ಲಾ ಜನರಿಗೆ ಇವರು ನಾರಾಯಣ ಕುಟುಂಬದವರು ಎಂದು ಗೊತ್ತಿತ್ತು, ನಾರಾಯಣ ತಿರಿಕೊಂಡಿದ್ದರು ಅವನ ಮೇಲೆ ಜನರು ಇಟ್ಟಿರುವ ಗೌರವ ಸ್ವಲ್ಪವೂ ಕಡಿಮೆ ಆಗಿರಲಿಲ್ಲ, ಹೀಗಾಗಿ ಅವರೆಲ್ಲಾ ಪೂರ್ಣ ಕುಟುಂಬಕ್ಕೂ ಅಷ್ಟೇ ಗೌರವ ನೀಡುತ್ತಿದ್ದರು, ಎಲ್ಲರೂ ನಾರಾಯಣನಿಗೆ ನಮಸ್ಕಾರ ಮಾಡಿದರು, ಅವನು ಎಲ್ಲರಿಗೂ ನಮಸ್ಕಾರ ಮಾಡಿದ, ಅಷ್ಟರಲ್ಲಿ—

ಭೀಮಪ್ಪ : ಅರೆ ದುರ್ಗವ್ವ ಬಂದಳು (ಎಂದು ಕೂಗಿದ), ಎಲ್ಲರು ಆ ಕಡೆ ನೋಡಿದರು, ಎಲ್ಲರಿಗೂ ತುಂಬಾ ಆಶ್ಚರ್ಯ ಆಯಿತು ಏಕೆಂದರೆ ದುರ್ಗ ಮುಂದೆ ಬರುತ್ತಿದ್ದಳು, ಸುಲೋಚನಾ ಮತ್ತು ಶಿವರಾಜ ಅವಳ ಹಿಂದೆ ನಡೆದುಕೊಂಡು ಬರುತ್ತಿದ್ದರು, ಆದರೆ ಎಲ್ಲರು ಆಶ್ಚರ್ಯಪಟ್ಟದ್ದು ಅದಕ್ಕಲ್ಲ, ದುರ್ಗ ಒಂದು ಕುರ್ಚಿಯನ್ನು ಎಳೆದುಕೊಂಡು ಬರುತ್ತಿದ್ದಳು, ಅದು ಅವಳ ಅಜ್ಜ ಕುಳಿತುಕೊಳ್ಳುತ್ತಿದ್ದ ಕುರ್ಚಿ ಆಗಿತ್ತು, ಅದರ ಮೇಲೆ ಕುಳಿತಿಕೊಳ್ಳುವ ಅಧಿಕಾರ ಅವರಿಗೆ ಮಾತ್ರ ಇತ್ತು, ಅವಳು ಎಲ್ಲರ ಮುಂದೆ ಬಂದು ಆ ಕುರ್ಚಿಯನ್ನು ಮಧ್ಯದಲ್ಲಿ ಇಟ್ಟು ಅದಕ್ಕೆ ನಮಸ್ಕರಿಸಿದಳು.

ದುರ್ಗ : ನನಗೆ ಆಶೀರ್ವಾದ ಮಾಡಿ ಅಜ್ಜ (ಎಂದು ಕೇಳಿಕೊಂಡಳು).

ನಾರಾಯಣ ತನ್ನ ಅಮ್ಮ ಮತ್ತು ಅಣ್ಣನನ್ನು ನೋಡಿ ಖುಷಿಯಾದರೂ ಸುಮ್ಮನೆ ನಿಂತಿದ್ದ, ಅವರಿಬ್ಬರೂ ಕೂಡ ಏನೂ ಮಾತನಾಡದೇ ಹಾಗೆಯೇ ನಿಂತಿದ್ದರು, ಆಗ ಲಕ್ಷ್ಮಿ ಸುಲೋಚನಗೆ ಅಲ್ಲಿಂದಲೇ ನಮಸ್ಕಾರ ಮಾಡಿದಳು, ಸುಲೋಚನಾ ಸ್ವಲ್ಪ ಭಾವುಕಳಾಗಿ ಅವಳಿಗೆ ನಿಂತಲ್ಲೇ ಆಶೀರ್ವಾದ ಮಾಡಿದಳು.

(ಆ ಪಂಚಾಯ್ತಿಯಲ್ಲಿ ಇವರೊಟ್ಟಿಗೆ ಪೋಲಿಸ್ ಕೂಡ ನಿಂತಿದ್ದರು, ಅವರನ್ನು ನೋಡಿ ಶೌರ್ಯ ಮತ್ತು ವಿನಿತ್ ಗೆ ಭಯ ಆಯಿತು.)

ಶೌರ್ಯ : ದುರ್ಗಾ, ಏನಿದು ದಿಡೀರನೆ ಎಲ್ಲರನ್ನು ಪಂಚಾಯ್ತಿಗೆ ಕರೆದಿದ್ದೀಯ?

ದುರ್ಗ ಅವನ ಪ್ರಶ್ನೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಂದೆ ಬಂದು ನಾರಾಯಣ ಮತ್ತು ಲಕ್ಷ್ಮಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಳು, ನಂತರ ಹೋಗಿ ಆ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೋಗುತ್ತಿದ್ದಾಗ, “ನಿಲ್ಲು” ಎಂದು ಎಲ್ಲಿಂದೋ ಶಬ್ದ ಬಂತು, ಅವಳು ಹಿಂದೆ ತಿರುಗಿ ನೋಡಿದಳು, ಅಲ್ಲಿ ರಮೇಶ್ ನಿಂತಿದ್ದ.

ದುರ್ಗ : ಯಾಕೆ ಕುಳಿತುಕೊಳ್ಳಬಾರದು?

ರಮೇಶ್ : ಇದು ನಮ್ಮೂರಿನ ಹಿರಿಯರಾದ ನಾರಾಯಣಪ್ಪ ಕುಳಿತುಕೊಳ್ಳುತ್ತಿದ್ದ ಕುರ್ಚಿ ಅದಕ್ಕೆ.

ದುರ್ಗ : ನಾನು ಅವರ ಮೊಮ್ಮಗಳು ಅನ್ನೋದನ್ನು ಮರೆತಿದ್ದೀರಾ ಅಥವಾ ನಿಮಗೆ ನಿಜವಾಗಿಯೂ ಗೊತ್ತಿಲ್ಲವಾ?

ರಮೇಶ್ : ಇರಬಹುದು, ಆದರೆ ಇವೆಲ್ಲ ಗಂಡಸರ ಕೆಲಸ, ನಿಮ್ಮ ಮನೆಯಲ್ಲಿ ಇಷ್ಟು ಜನ ಗಂಡು ಮಕ್ಕಳು ಇದ್ದಾರಲ್ಲಾ, ಆದರೂ ನಿನ್ನೇಕೆ ಮುಂದೆ ಬಿಟ್ಟಿದ್ದಾರೆ ಅರ್ಥ ಆಗುತ್ತಿಲ್ಲ ನನಗೆ (ಎಂದು ವ್ಯಂಗ್ಯವಾಗಿ ಮಾತನಾಡಿದ).

ದುರ್ಗ : (ಮುಗ್ಗುಳ್ನಗುತ್ತಾ ಅವನ ಹತ್ತಿರ ಹೋಗಿ) ಯಾಕೆ ನಾನು ಕುಳಿತುಕೊಂಡು ತೀರ್ಪು ಕೊಟ್ಟರೆ ಎಲ್ಲಿ ಸತ್ಯ ಹೊರಬರುತ್ತದೆ ಅಂತ ಭಯ ಆಗ್ತಿದೆಯಾ?

ರಮೇಶ್ : ಸತ್ಯ? ಯಾವ ಸತ್ಯ? ನೀನು ಯಾವದ್ರ ಬಗ್ಗೆ ಮಾತನಾಡ್ತಿದ್ದೀಯ ನನಗೆ ಅರ್ಥ ಆಗುತ್ತಿಲ್ಲ, ನನಗೆ ಮಾಡಲು ತುಂಬಾ ಕೆಲಸ ಇದೆ (ಎಂದು ಅಲ್ಲಿಂದ ಹೊರಡಲು ಹಿಂದೆ ತಿರುಗಿದ, ಅಲ್ಲಿ ಪೋಲಿಸ್ ದಾರಿಯನ್ನು ಅಡ್ಡಗಟ್ಟಿ ನಿಂತಿದ್ದರು, ಅದನ್ನು ನೋಡಿ ಅವನು ಅಲ್ಲೇ ನಿಂತುಕೊಂಡ.)

ದುರ್ಗ : ಸತ್ಯಾಂಶ ತಿಳಿಯೋವರೆಗೆ ನೀನು ಇಲ್ಲಿಂದ ಒಂದು ಹೆಜ್ಜೆಯೂ ಮುಂದೆ ಇಡಬಾರದು (ಎಂದು ಅವನಿಗೆ ಬೆರಳು ತೋರಿಸಿ ಹೇಳಿದಳು).

ವಿನಿತ್ : ದುರ್ಗಾ, ಏನಿದು ದೊಡ್ಡವರ ಜೊತೆ ಹೀಗಾ ಮಾತನಾಡೋದು, ಅವರ ವಯಸ್ಸಿಗಾದರೂ ಗೌರವ ಕೊಡು.

ದುರ್ಗ : ಗೌರವ ಅನ್ನೋದು ಕೇವಲ ವಯಸ್ಸು, ಗಾತ್ರ ಅಥವಾ ಅವರು ಹಾಕೊಂಡಿರುವ ಬಟ್ಟೆಯಿಂದ ನಿರ್ಧಾರ ಮಾಡೋದು ಅಲ್ಲ ವಿನಿತ್, ಅವರು ಮಾಡುವ ಕೆಲಸದಿಂದ ನಿರ್ಧಾರ ಆಗುತ್ತದೆ, ಅಷ್ಟಕ್ಕೂ ನಾನು ಅವರಿಗೆ ಗೌರವ ಕೊಡದೆ ಮಾತನಾಡಿದರೆ ನಿನಗೆ ಏಕೆ ಇಷ್ಟು ಕೋಪ ಬರುತ್ತಿದೆ? ಅವರು ಏನು ನಿನ್ನ ಚಿಕ್ಕಪ್ಪನಾ ಇಲ್ಲ ದೊಡ್ಡಪ್ಪನಾ?

ವಿನಿತ್ ಸುಮ್ಮನೆ ನಿಂತುಕೊಂಡ.

ದುರ್ಗ ಮುಂದುವರಿದು — ನನ್ನ ಎಲ್ಲ ಮಾತು ಮುಗಿಯೋವರೆಗೆ ಈಗ ಹೇಗೆ ಸುಮ್ಮನೆ ನಿಂತಿದ್ದೀಯೋ ಹಾಗೆ ನಿಂತುಕೊಂಡರೆ ನಿನಗೂ ಒಳ್ಳೇದು, ಇಲ್ಲವಾದರೆ ನಿನಗೆ ಸಿಗೋ ಅಲ್ಪ ಸ್ವಲ್ಪ ಗೌರವ ಕೂಡ ಸಿಗೋದಿಲ್ಲ ಸರಿನಾ.. (ಎಂದು ತುಂಬ ನಿಷ್ಠುರವಾಗಿ ಹೇಳಿದಳು, ಇದನ್ನು ಎಲ್ಲರಿಗೂ ತುಂಬನೇ ಆಶ್ಚರ್ಯ ಆಯ್ತು, ವಿನಿತ್ ಮತ್ತು ಶೌರ್ಯ ಮುಂದೆ ಏನು ಮಾತನಾಡುವ ಧೈರ್ಯ ಮಾಡಲಿಲ್ಲ.)

ಎಂದು ಮುಗುಳ್ನಕ್ಕು ಹೋಗಿ ಆ ಕುರ್ಚಿಯ ಮೇಲೆ ರಮೇಶ್ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಳು.)

ಕೊನೆಗೆ ಪಂಚಾಯ್ತಿಯ ತೀರ್ಪು ಏನಾಗುತ್ತದೆ ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ....