Avala Horata - 2 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 2

Featured Books
Categories
Share

ಅವಳ ಹೋರಾಟ - 2

ಆ ಕಡೆ ನಾರಾಯಣ ಹೊರಗಡೆ ಕೆಲಸಕ್ಕೆ ಅಂತ ಹೋದ. ಈ ಕಡೆ ಲಕ್ಷ್ಮಿ ಮನೆ ಕೆಲಸ ಶುರು ಮಾಡಿದ್ದಳು. ರಾತ್ರಿ ಆಯಿತು, ಎಲ್ಲರೂ ಮಲಗಿದರು, ಆದರೆ ಲಕ್ಷ್ಮಿ ಮಾತ್ರ ನಾರಾಯಣ ಬರುವುದನ್ನು ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಕೇಳಿಬಂತು. ಲಕ್ಷ್ಮಿ ಎದ್ದು ಬಾಗಿಲು ತೆಗೆದಳು. ನಾರಾಯಣ ನಿಂತಿದ್ದ. ಅವನು ತುಂಬ ಸುಸ್ತಾಗಿರುವಂತೆ ಕಾಣಿಸುತ್ತಿದ್ದ.

ಅವನನ್ನು ನೋಡಿ ಲಕ್ಷ್ಮಿಯ ಕಣ್ಣಲ್ಲಿ ನೀರು ಬಂತು. ಯಾಕೆಂದರೆ ನಾರಾಯಣ ಮನಸ್ಸಿನಿಂದ ತುಂಬ ಒಳ್ಳೆಯವನಾಗಿದ್ದ. “ಒಳ್ಳೆಯವರಿಗೆ ದೇವರು ಯಾಕೆ ಯಾವಾಗಲೂ ಕಷ್ಟ ಕೊಡ್ತಾನೆ?” ಅಂತ ಮನಸಲ್ಲಿ ಅಂದುಕೊಂಡಳು. ಇಬ್ಬರೂ ಊಟಕ್ಕೆ ಕುಳಿತರು, ನಾರಾಯಣನಿಗೆ ಲಕ್ಷ್ಮಿ ಮಾಡೋ ಊಟ ಎಂದರೆ ತುಂಬ ಇಷ್ಟ. ಅವಳು ಮಾಡುವ ಅಡುಗೆ ತುಂಬ ರುಚಿಯಾಗಿರುತ್ತಿತ್ತು. ಏಕೆಂದರೆ ಅವಳು ಗಂಡನಿಗಾಗಿ ಅಡುಗೆಗೆ ಬೇಕಾದ ಎಲ್ಲಾ ಸಾಮಗ್ರಿಗಳ ಜೊತೆಗೆ ತುಂಬ ಪ್ರೀತಿಯನ್ನು ಹಾಕಿ ಅಡುಗೆ ಮಾಡುತ್ತಿದ್ದಳು. ಅವಳು ತನ್ನನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚು ನಾರಾಯಣನನ್ನು ನೋಡಿಕೊಳ್ಳುತ್ತಿದ್ದಳು. ನಾರಾಯಣ ಕೂಡ ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ. ಒಂದು ದಾಂಪತ್ಯ ಚೆನ್ನಾಗಿರಬೇಕೆಂದರೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು?

ಇಬ್ಬರೂ ಊಟ ಮಾಡಿ ಮಲಗಿದರು.

ಅಂತು ಸೂರ್ಯೋದಯ ಆಯಿತು. ಮನೆಯಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡ್ತಿದ್ದರು. ನಾರಾಯಣಗೂ ಎಚ್ಚರ ಆಯಿತು. ಅವನ ಪಕ್ಕದಲ್ಲಿ ಮಲಗಿದ್ದ ಅವನಿಬ್ಬರು ಮಕ್ಕಳನ್ನು ನೋಡುತ್ತಾ ಕುಳಿತ. “ದೇವರು ಎಲ್ಲರಿಗೂ ಎಲ್ಲವನ್ನೂ ಕೊಡಲ್ಲ. ಒಂದನ್ನು ಕೊಟ್ಟು ಇನ್ನೊಂದನ್ನು ತೆಗೆದುಕೊಳ್ಳ್ತಾನೆ. ಆದರೆ ನನಗೆ ದೇವತೆಂತ ಹೆಂಡತಿ, ಮುತ್ತಿನಂತ ಮಗ, ಈಗ ಮುದ್ದಾದ ಮಗಳನ್ನೂ ಕೊಟ್ಟಿದ್ದಾನೆ. ನನಗೆ ಇನ್ನೇನು ಬೇಡ. ನನ್ನ ಮಕ್ಕಳು ಜೀವನದಲ್ಲಿ ಎಲ್ಲ ಸುಖವನ್ನು ಅನುಭವಿಸಬೇಕು. ಅವರಿಗೆ ಯಾವ ನೋವೂ ಆಗದಂತೆ ನಾನು ನೋಡಿಕೊಳ್ಳಬೇಕು. ಅವರ ಜೊತೆ ಮಕ್ಕಳಿಗೆ ಸಂಸ್ಕಾರ ನೀಡುವ ಬಗ್ಗೆ ನಾನು ಯೋಚನೆ ಮಾಡೋ ಅಗತ್ಯವೇ ಇಲ್ಲ, ಯಾಕೆಂದರೆ ಅದಕ್ಕೆ ನನ್ನ ಹೆಂಡತಿ ಇದ್ದಾಳಲ್ಲ” ಅಂತ ಅಂದುಕೊಂಡು ನಗುತ್ತಾ ಕುಳಿತಿದ್ದ.

ಅವನಿಗೆ ಯಾರೋ ತನ್ನನ್ನೇ ನೋಡ್ತಿದ್ದಾರೆ ಅನ್ನಿಸಿತು. ತಿರುಗಿ ನೋಡಿದರೆ ಅಲ್ಲೇ ಲಕ್ಷ್ಮಿ ನಿಂತಿದ್ದಳು.

ನಾರಾಯಣ: ಏನು ನನ್ನನ್ನೇ ನೋಡ್ತಿದ್ದೀರಲ್ಲಾ?(ಎಂದು ಕೇಳಿದ)

ಲಕ್ಷ್ಮಿ: ನೀವು ಏನೋ ಯೋಚನೆ ಮಾಡ್ತಿದ್ದೀರಲ್ಲಾ, ಆ ಯೋಚನೆಯನ್ನು ಕೇಳಿಸ್ಕೊಳ್ತಾ ಇದ್ದೆ.

ನಾರಾಯಣ: (ಮುಗುಳ್ನಗುತ್ತಾ) ನನ್ನ ಯೋಚನೆಗಳನ್ನು, ನನ್ನ ಭಾವನೆಗಳನ್ನು ಕೇಳಿಸಿಕೊಳ್ಳೋಕೆ, ಅರ್ಥ ಮಾಡಿಕೊಳ್ಳೋಕೆ ಈ ಮನೆಯಲ್ಲಿ ಇರುವವಳು ಮಾತ್ರ ಲಕ್ಷ್ಮಿ (ಹೀಗೆ ಹೇಳುವಾಗ ಅವನ ಕಣ್ಣಲ್ಲಿ ನೀರು ತುಂಬಿತ್ತು).

ಲಕ್ಷ್ಮಿ: ಈಗ ಅದೆಲ್ಲ ಯಾಕೆ ಅಂತ? (ನಾರಾಯಣನ ಕಣ್ಣೀರು ಒರೆಸುತ್ತಾ) ತಿಂಡಿ ತಯಾರಾಗಿದೆ. ಬಿಸಿ ನೀರು ಕಾಸಿದ್ದೀನಿ. ಬೇಗ ತಯಾರಾಗಿ ಬನ್ನಿ.

ನಾರಾಯಣ: ಆಯ್ತು.

ನಾರಾಯಣ ಸ್ನಾನ, ಸಂಧ್ಯಾವಂದನೆ ಎಲ್ಲ ಮುಗಿಸಿ ತಿಂಡಿ ಮಾಡೋಕೆ ಅಡಿಗೆ ಮನೆಗೆ ಬಂದ. ಅಲ್ಲಿ ಎಲ್ಲರೂ ತಿಂಡಿ ಮಾಡ್ತಿದ್ದರು, ಆದರೆ ಲಕ್ಷ್ಮಿ ಎಲ್ಲರಿಗೂ ಬಡಿಸುತ್ತಾ ನಿಂತಿದ್ದಳು. ಅದನ್ನು ನೋಡಿ ನಾರಾಯಣನ ಹೃದಯ ತುಂಬಿತು. ಆದರೂ ಅವನು ಏನೂ ತೋರಿಸದೇ ಸುಮ್ಮನೆ ಬಂದು ಕುಳಿತ. ಅವನು ಬಂದ ತಕ್ಷಣ ಲಕ್ಷ್ಮಿ ತಟ್ಟೆ ತಯಾರಿಸಿ ಅವನ ಮುಂದೆ ಇಟ್ಟಳು, ಮತ್ತೆ ಅವನ ಪಕ್ಕದಲ್ಲೇ ಕುಳಿತಳು.

ಎಲ್ಲರೂ ಶಾಂತಿಯಾಗಿ ತಿಂಡಿ ತಿನ್ನುತ್ತಿದ್ದರು. ಅಷ್ಟರಲ್ಲಿ ಮಗು ಜೋರಾಗಿ ಅಳುವ ಶಬ್ದ ಕೇಳಿಬಂತು. ಅದು ಅಷ್ಟು ಜೋರಾಗಿತ್ತು ಎಲ್ಲರೂ ಗಾಬರಿಯಿಂದ ಎದ್ದು ಓಡಿದರು.

ಕೊನೆಗೆ ಹೋಗಿ ನೋಡಿದರೆ ಎಲ್ಲರಿಗೂ ತುಂಬ ಗಾಬರಿ ಆಯಿತು. ಯಾಕೆಂದರೆ ರಾಘವೇಂದ್ರ ತೊಟ್ಟಿಲಿನಲ್ಲಿ ಮಲಗಿದ್ದ ಮಗುವಿನ ಕುತ್ತಿಗೆ ಜೋರಾಗಿ ಹಿಡಿದಿದ್ದ. ನೋವನ್ನು ತಾಳಲಾರದೆ ಮಗು ಜೋರಾಗಿ ಅಳುತ್ತಿತ್ತು. ತಕ್ಷಣ ಲಕ್ಷ್ಮಿ ಓಡಿ ಬಂದು ರಾಘವೇಂದ್ರನನ್ನು ತಳ್ಳಿಬಿಟ್ಟು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡೋಕೆ ಹೊರಗೆ ಕರೆದೊಯ್ದಳು. ಮಗುವಿಗೆ ಅಷ್ಟು ಏನೂ ಆಗಿರಲಿಲ್ಲ. ಕೊನೆಗೆ ಮಗು ಅಳುವುದನ್ನು ನಿಲ್ಲಿಸಿತು.

ಆಗ ಲಕ್ಷ್ಮಿಗೆ ರಾಘವೇಂದ್ರ ಜೋರಾಗಿ ಅಳುವ ಶಬ್ದ ಕೇಳಿಸಿತು. ಅವಳು ಒಳಗೆ ಬಂದು ನೋಡಿದಳು. ಅಲ್ಲಿ ರಾಘವೇಂದ್ರ “ನನ್ನನ್ನ ಈ ಮನೆಯಲ್ಲಿ ಯಾರೂ ಪ್ರೀತಿಸೋದಿಲ್ಲ” ಅಂತ ಅಳುತ್ತಾ ಕುಳಿತಿದ್ದ. ಲಕ್ಷ್ಮಿ ಅವನ ಕಣ್ಣೀರು ಒರೆಸಿ, “ನೀನು ಮಾಡಿದ್ದು ತಪ್ಪು ಅಲ್ಲವಾ? ಅಕಸ್ಮಾತ್ ಮಗುವಿಗೆ ಏನಾದರೂ ಆಗಿದ್ದರೆ?” ಅಂತ ಕಾಳಜಿಯಿಂದ ಕೇಳಿದಳು.

ರಾಘವೇಂದ್ರ: ನನ್ನನ್ನ ಕ್ಷಮಿಸಿ ಅಮ್ಮ (ಅಂತ ಮುದ್ದಾಗಿ ಹೇಳಿದ).

ನಾರಾಯಣ: ಬಾ, ನಾವು ಇಬ್ಬರು ಹೊರಗೆ ಸುತ್ತಾಡ್ಕೊಂಡು ಬರೋಣ (ಅಂತ ಅವನನ್ನು ಕರೆದುಕೊಂಡು ಹೋದ). ಆದರೆ ತಕ್ಷಣ ಒಳಗೆ ಬಂದು, “ನಾನು ಒಂದು ಮುಖ್ಯವಾದ ವಿಷಯ ಮಾತಾಡಬೇಕು” ಅಂತ ಹೇಳಿದ.

ಶಿವರಾಜ್: ಏನು ಆ ಮುಖ್ಯ ವಿಷಯ?

ನಾರಾಯಣ: ನಾನು ಇಷ್ಟು ದಿನ ಸುಮ್ಮನೆ ಇದ್ದೀನಿ ಅಂದ ಮಾತ್ರಕ್ಕೆ ನನಗೆ ಏನೂ ಅರ್ಥ ಆಗಲ್ಲ ಅಂತಲ್ಲ. ಪ್ರೀತಿಯಿಂದ, ಮೌನದಿಂದಲೇ ಎಲ್ಲವನ್ನು ಗೆಲ್ಲಬೇಕು ಅಂತ ಅಂದುಕೊಂಡಿದ್ದೇನೆ. ನನ್ನದು ತುಂಬ ಸಣ್ಣ ಲೋಕ. ಆ ಲೋಕದಲ್ಲಿರುವ ಯಾರಿಗೂ ವ್ಯತ್ಯಾಸ ಆಗಬಾರದು. ಇದನ್ನು ಸಲಹೆ ಅಂತಾನೋ ಅಥವಾ ಎಚ್ಚರಿಕೆ ಅಂತಾನೋ ನೀವು ಹೇಗೆ ಬೇಕಾದರೂ ತೆಗೆದುಕೊಳ್ಳಿ, ಆದರೆ ಸರಿಯಾಗಿ ಗಮನಿಸಿ. ಲಕ್ಷ್ಮಿ, ನಾಳೆಯ ನಾಮಕರಣಕ್ಕೆ ಎಲ್ಲಾ ತಯಾರಿ ಮಾಡು (ಅಂತ ಹೇಳಿ ಹೋಗಿಬಿಟ್ಟ).

ಒಂದು ಕ್ಷಣ ಎಲ್ಲರೂ ಆಶ್ಚರ್ಯದಿಂದ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಂಡರು. ಯಾಕೆಂದರೆ ನಾರಾಯಣನ ಈ ಮುಖವನ್ನು ಇಷ್ಟು ದಿನ ಯಾರೂ ನೋಡಿರಲಿಲ್ಲ. ಅವನು ಯಾವಾಗಲೂ ಯಾರೇ ಏನು ಹೇಳಿದರೂ ಸುಮ್ಮನೆ ಇರುತ್ತಿದ್ದ. ಆದರೆ ಮಾತು ಅವನ ಹೆಂಡತಿ ಮಕ್ಕಳವರೆಗೂ ಬಂದರೆ ಅವನು ಮೌನವಾಗಿರಲಿಲ್ಲ.

ನಾಮಕರಣದಲ್ಲಿ ಏನಾಗುತ್ತದೆ? ಮಗುವಿಗೆ ಯಾವ ಹೆಸರು ಇಡುತ್ತಾರೆ? ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ತಿಳಿಯೋಣ…