ದುರ್ಗ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ನಂತರ ಅಲ್ಲಿಂದಲೇ ಅಜ್ಜಿ ಮನೆಗೆ ಹೋದಳು. ನಾರಾಯಣ, ಲಕ್ಷ್ಮಿ ಮತ್ತು ರಾಘವೇಂದ್ರ ಮನೆಗೆ ಹೋದರು. ರಾತ್ರಿ ಆಗಿತ್ತು. ನಾರಾಯಣ ಹಾಗೆಯೇ ಯೋಚಿಸುತ್ತಾ ಕುಳಿತಿದ್ದ. ಆಗ ಅಲ್ಲಿಗೆ ರಾಘವೇಂದ್ರ ಮತ್ತು ಲಕ್ಷ್ಮಿ ಬಂದರು.
ಲಕ್ಷ್ಮಿ: ಏನಾಯ್ತು? ಆಸ್ಪತ್ರೆಯಿಂದ ಬಂದಾಗಿನಿಂದ ನೀವು ಬೇರೆ ತರ ಕಾಣಿಸುತ್ತಿದ್ದೀರಾ. ಏನಾದರೂ ಯೋಚನೆ ಇದ್ದರೆ ನಮಗೆ ಹೇಳಿ. ಯಾಕೆ ಒಬ್ಬರೇ ಅನುಭವಿಸುತ್ತಿದ್ದೀರಾ? ದುರ್ಗಳನ್ನು ಅಲ್ಲಿಂದಲೇ ಅತ್ತೆ ಮನೆಗೆ ಕಳಿಸಿದ್ದೀರಿ ಯಾಕೆ?
ನಾರಾಯಣ : ಹಾಗೇನಿಲ್ಲ ಲಕ್ಷ್ಮಿ, ದುರ್ಗ ಬಗ್ಗೆ ಯೋಚಿಸುತ್ತಿದ್ದೆ ಅಷ್ಟೇ. ಅಕಸ್ಮಾತ್ ಆ ಆಸಿಡ್ ಅವಳ ಮುಖಕ್ಕೆ ಬಿದ್ದಿದ್ದರೆ ಏನಾಗುತ್ತಿತ್ತು?
ಲಕ್ಷ್ಮಿ: ಹೌದು, ಎಲ್ಲ ದೇವರ ಆಶೀರ್ವಾದ. ದುರ್ಗೆಗೆ ಹೆಚ್ಚು ಗಾಯ ಏನೂ ಆಗಿಲ್ಲ. ಡಾಕ್ಟರ್ ಕೂಡ ಇದು ಕೆಲ ತಿಂಗಳಲ್ಲಿ ವಾಸಿಯಾಗುತ್ತದೆ ಅಂತ ಹೇಳಿದ್ದಾರೆ.
ರಾಘವೇಂದ್ರ : ಅಪ್ಪಾ, ಆಸಿಡ್ ಹಾಕಿದವನ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿದೆಯಾ?
ನಾರಾಯಣ : ಆದಷ್ಟು ಬೇಗ ಎಲ್ಲ ಮಾಹಿತಿ ಸಿಗುತ್ತದೆ. ನೀವು ಅದರ ಬಗ್ಗೆ ಯೋಚಿಸಬೇಡಿ. ಹಾ ಇನ್ನೊಂದು ವಿಷಯ, ದುರ್ಗ ಅಮ್ಮನ ಮನೆಗೆ ಹೋಗಿರುವುದು ಯಾರಿಗೂ ಗೊತ್ತಾಗಬಾರದು, ತಿಳಿತಾ?
ರಾಘವೇಂದ್ರ : ಯಾಕಪ್ಪಾ?
ನಾರಾಯಣ : ಅವಳು ಮನಶಾಂತಿಗಾಗಿ ಅಲ್ಲಿಗೆ ಹೋಗಿದ್ದಾಳೆ. ಬೇರೆವರಿಗೆ ಗೊತ್ತಾದರೆ ಮತ್ತೆ ಅವಳನ್ನು ನೋಡಲು ಬರುತ್ತಾರೆ, ಅದಕ್ಕೆ.
ಲಕ್ಷ್ಮಿ: ಸರಿ.
ಅಷ್ಟರಲ್ಲಿ ಬಾಗಿಲು ಬಡಿಯೋ ಶಬ್ದ ಕೇಳಿಸಿತು. ಲಕ್ಷ್ಮಿ ಬಾಗಿಲು ತೆರೆದಳು. ಅಲ್ಲಿ ಶೌರ್ಯ ನಿಂತಿದ್ದ.
ನಾರಾಯಣ : ಏನು ಶೌರ್ಯ, ಇದ್ದಕ್ಕಿದ್ದಂತೆ ನೀನು ಇಲ್ಲಿ?
ಶೌರ್ಯ : ಏನಿಲ್ಲ ಅಂಕಲ್, ದುರ್ಗ ಹೇಗಿದ್ದಾಳೆ ಅಂತ ನೋಡಲು ಬಂದೆ.
ನಾರಾಯಣ : ದುರ್ಗ ಮನೆಲಿ ಇಲ್ಲ, ಅವಳು ಸ್ನೇಹಿತರ ಜೊತೆ ಟ್ರಿಪ್‌ಗೆ ಹೋಗಿದ್ದಾಳೆ.
ಶೌರ್ಯ : ಏನು ಟ್ರಿಪ್‌ಗಾ?
ನಾರಾಯಣ : ಯಾಕೆ ಹೋಗಬಾರದಾ?
ಶೌರ್ಯ : ಅಯ್ಯೋ ಹಾಗಲ್ಲ ಅಂಕಲ್, ಈಗಷ್ಟೇ ಹುಷಾರಾಗಿದ್ದಾಳಲ್ಲಾ, ಈಗ ಏಕೆ ಹೊರಗೆ ಹೋಗಿದಾಳೆ ಅಂತ ಕೇಳಿದೆ.
ನಾರಾಯಣ : ಸ್ವಲ್ಪ ಸ್ನೇಹಿತರ ಜೊತೆ ಇದ್ದರೆ ಅವಳ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಇಲ್ಲವಾದರೆ ಆಸಿಡ್ ಹಾಕಿದವನ ಬಗ್ಗೆ ಯೋಚಿಸುತ್ತಿರುತ್ತಾಳೆ. ಅದಕ್ಕೆ ಅವಳನ್ನು ಕಳಿಸಿದೆ.
ಶೌರ್ಯ: ಒಳ್ಳೇದು ಮಾಡಿದ್ದೀರಿ ಅಂಕಲ್. ಹೌದು ಆ ವ್ಯಕ್ತಿ ಬಗ್ಗೆ ಏನಾದರೂ ಗೊತ್ತಾಯಿತಾ? (ಎಂದು ತುಂಬಾ ಕುತೂಹಲದಿಂದ ಕೇಳಿದ)
ನಾರಾಯಣ : ನಾವು ಅದರ ಬಗ್ಗೆ ಯೋಚಿಸುವುದೇ ಬಿಟ್ಟಿದ್ದೇವೆ. ಮತ್ತೆ ಪೋಲೀಸ್ ಹತ್ತಿರ ಹೋದರೆ ಅವನು ಇನ್ನೇನಾದರೂ ಅಪಘಾತ ಮಾಡಿದ್ದರೆ ಏನು ಮಾಡುವುದು? ಅದಕ್ಕೆ ಅದನ್ನೊಂದು ಕೆಟ್ಟ ಕನಸು ಅಂತ ಮರೆತುಬಿಟ್ಟಿದ್ದೇವೆ.
ಶೌರ್ಯ: ಅದು ಸರಿಯೇ ಅಂಕಲ್. ಇಂದಿನ ಕಾಲದ ಹುಡುಗರು ತುಂಬಾ ಕೆಟ್ಟೋಗಿದ್ದಾರೆ. ಇದನ್ನ ಇಲ್ಲಿ ಬಿಡೋದೇ ಒಳ್ಳೇದು. ಆಯ್ತು ಅಂಕಲ್, ನಾನು ಹೊರಡುತ್ತೇನೆ (ಎಂದು ತುಂಬಾ ಖುಷಿಯಿಂದ ಹೇಳಿದ).
ನಾರಾಯಣ : ಆಯ್ತು (ನಾರಾಯಣ ಶೌರ್ಯ ಹೋಗುವುದನ್ನೇ ನೋಡುತ್ತಾ ಮುಗುಳ್ನಗುತ್ತ ನಿಂತಿದ್ದ).
ಲಕ್ಷ್ಮಿ: ಯಾಕೆ ನಗುತ್ತಿದೀರಾ?
ನಾರಾಯಣ : “ಬಿರುಗಾಳಿಗೆ ಮುಂಚಿನ ನಿಶ್ಯಬ್ಧತೆ” ಎಂದು ಸಣ್ಣ ಧ್ವನಿಯಲ್ಲಿ ಹೇಳಿದ.
ಲಕ್ಷ್ಮಿ: ಏನು?
ನಾರಾಯಣ : ಏನಿಲ್ಲ, ಬನ್ನಿ ಊಟಕ್ಕೆ ಹೋಗೋಣ (ಎಲ್ಲರೂ ಊಟಕ್ಕೆ ಹೋದರು).
ಈಕಡೆ ದುರ್ಗ ಅಜ್ಜಿ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದಳು.
ದುರ್ಗ: ಅಜ್ಜಿ, ಊಟ ತುಂಬಾ ಚೆನ್ನಾಗಿದೆ. ಆ ಸಿಟಿಯಲ್ಲಿ ಏನೇ ತಿಂದರೂ ಇಲ್ಲಿಯ ಜೋಳದ ರೊಟ್ಟಿ ಮುಂದೆ ಎಲ್ಲವೂ ಶೂನ್ಯ ಅಜ್ಜಿ (ಎಂದು ನಗುತ್ತಾ ಹೇಳಿದಳು).
ಸುಲೋಚನಾ: (ಮುಗುಳ್ನಗುತ್ತಾ) ದುರ್ಗ, ನಾರಾಯಣ ಹೇಗಿದ್ದಾನೆ?
ದುರ್ಗ: ಚೆನ್ನಾಗಿದ್ದಾರೆ ಅಜ್ಜಿ.
ಸುಲೋಚನಾ: ಹ್ಮ್, ನನ್ನ ಸೊಸೆ ಹೇಗಿದ್ದಾಳೆ?
ದುರ್ಗ: (ಸುಲೋಚನಾ ಲಕ್ಷ್ಮಿಗೆ “ನನ್ನ ಸೊಸೆ” ಎಂದು ಹೇಳಿದುದನ್ನು ಕೇಳಿ ದುರ್ಗ ಕಣ್ಣಲ್ಲಿ ನೀರು ತುಂಬಿತು) ಚೆನ್ನಾಗಿದ್ದಾಳೆ ಅಜ್ಜಿ.
ಸುಲೋಚನಾ: (ದುರ್ಗ ಕಣ್ಣಲ್ಲಿ ನೀರು ನೋಡಿ) ನಿಮ್ಮ ಈ ಸ್ಥಿತಿಗೆ ಒಂದು ರೀತಿಯಲ್ಲಿ ನಾನು ಕಾರಣ ಕಣಮ್ಮ. ಆದರೆ ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಎಲ್ಲವನ್ನೂ ಸರಿಮಾಡುತ್ತೇನೆ, ನೀನು ಬೇಜಾರು ಮಾಡಿಕೊಳ್ಳಬೇಡ (ಎಂದು ದುರ್ಗ ಕಣ್ಣೀರನ್ನು ಒರೆಸಿದಳು).
ದುರ್ಗ: ಎಲ್ಲ ಸರಿಯಾಗುತ್ತದೆ ಅಜ್ಜಿ, ನೀನು ಯೋಚನೆ ಮಾಡಬೇಡ.
ಮತ್ತೆ ದುರ್ಗ ಮುಂದುವರೆದು: ಅಜ್ಜಿ, ನಾನು ಇಲ್ಲಿ ಬಂದಿದ್ದು ನಿನ್ನ ಹತ್ತಿರ ಒಂದು ಮುಖ್ಯವಾದ ವಿಷಯ ಮಾತನಾಡಲು.
ಸುಲೋಚನಾ: ಏನು ದುರ್ಗ?
ದುರ್ಗ: ಅಜ್ಜ ಹೇಗೆ ತೀರಿಕೊಂಡರು? ಅವರು ತೀರಿಕೊಂಡ ಮೇಲೆ ಏನಾಯಿತು ಅನ್ನೋದನ್ನೆಲ್ಲ ನೀನು ಹೇಳಬೇಕು. (ಈಗ ಸತ್ಯ ತಿಳಿಯುವ ಸಮಯ ಬಂದಿದೆ ಅಜ್ಜಿ ಎಂದು ಮನಸ್ಸಲ್ಲೇ ಅಂದುಕೊಂಡಳು).
ಸುಲೋಚನಾ: ಹೇಳುತ್ತೇನೆ ಮಗು. ನಿಮ್ಮ ಅಜ್ಜನ ಕೊಲೆ ಆಗಿತ್ತು ಅಂತ ಎಲ್ಲರಿಗೂ ಗೊತ್ತಿತ್ತು. ಆದರೆ ಅದನ್ನು ಯಾರು ಮಾಡಿದ್ದರು ಅನ್ನೋದು ಕೆಲವು ದಿನಗಳವರೆಗೆ ಯಾರಿಗೂ ಗೊತ್ತಿರಲಿಲ್ಲ. ನಂತರ ತಿಳಿಯಿತು.
ದುರ್ಗ: ಯಾರು ಅಜ್ಜಿ? (ಎಂದು ಕುತೂಹಲದಿಂದ ಕೇಳಿದಳು)
ಸುಲೋಚನಾ: ಅವರ ಕೊಲೆ ಅವರ ಸ್ನೇಹಿತನೇ ಮಾಡಿದ್ದ. ಅವನ ಹೆಸರು ರಾಮಪ್ಪ.
ದುರ್ಗ: ಅಜ್ಜನನ್ನು ಅವರ ಸ್ನೇಹಿತನೇ ಕೊಂದನಾ? ಯಾಕೆ?
ಸುಲೋಚನಾ: ಆ ಊರಲ್ಲಿ ರಾಮಪ್ಪ ತುಂಬಾ ಶ್ರೀಮಂತನಾಗಿದ್ದ. ಎಲ್ಲರೂ ಅವನ ಹತ್ತಿರ ಸಾಲ ತೆಗೆದುಕೊಳ್ಳುತ್ತಿದ್ದರು. ಯಾರಾದರೂ ಸಾಲ ತೀರಿಸಲು ತಡವಾದರೆ ಅವನು ಮೃಗದಂತೆ ವರ್ತಿಸುತ್ತಿದ್ದ. ಒಂದು ದಿನ ನಮ್ಮ ಊರಿನ ರಮೇಶ ಎಂಬ ಬಡವನಿಗೆ ಸಾಲ ತೀರಿಸಲು ತಡವಾಯಿತು. ಅದಕ್ಕೆ ರಾಮಪ್ಪ ಅವನನ್ನು ಮರಕ್ಕೆ ಕಟ್ಟಿ ಹೊಡೆದ. ಅತಿಯಾಗಿ ಹೊಡೆದ ಕಾರಣ ಅವನು ಸತ್ತನು. ಈ ವಿಷಯ ನಿಮ್ಮ ಅಜ್ಜನಿಗೆ ಗೊತ್ತಾಯಿತು. ಪಂಚಾಯಿತಿಯಲ್ಲಿ ನಿಮ್ಮ ಅಜ್ಜ ರಾಮಪ್ಪನನ್ನು ಊರಿನಿಂದ ಬಹಿಷ್ಕಾರ ಮಾಡಿ, ಪೋಲೀಸರಿಗೆ ಒಪ್ಪಿಸಿದರು.
ದುರ್ಗ: ಮುಂದೆ ಏನಾಯಿತು ಅಜ್ಜಿ?
ಸುಲೋಚನಾ: ನಾರಾಯಣ ಹುಟ್ಟಿದ ದಿನ ನಿಮ್ಮ ಅಜ್ಜ ಹೊರಗೆ ಹೋದಾಗ, ಆ ರಾಮಪ್ಪ ಜೈಲಿನಿಂದ ತಪ್ಪಿಸಿಕೊಂಡು ಬಂದು ಸೇಡು ತೀರಿಸಲು ನಿಮ್ಮ ಅಜ್ಜನನ್ನು ಕೊಂದನು (ಎಂದು ಹೇಳಿ ಅತ್ತಳು).
ದುರ್ಗ: (ಸುಲೋಚನಾಳನ್ನು ಸಮಾಧಾನಪಡಿಸುತ್ತಾ) ಆ ರಾಮಪ್ಪನಿಗೆ ಇನ್ನೂ ಯಾರಾದರೂ ಸಂಬಂಧಿಕರಿದ್ದಾರಾ ಅಜ್ಜಿ?
ಸುಲೋಚನಾ: ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ.
ಇವರ ಮಾತನ್ನು ಕೇಳುತ್ತಾ ಹಿಂದೆ ಪ್ರಸಾದ್ ನಿಂತಿದ್ದ. ಅವನು ಏನೋ ಹೇಳಲು ಮುಂದೆ ಬರಬೇಕೆಂದಿದ್ದಾಗ, “ದುರ್ಗಾ!” ಎಂದು ಕೂಗಿದ ಧ್ವನಿ ಕೇಳಿಸಿತು. ಎಲ್ಲರೂ ಬಾಗಿಲತ್ತ ನೋಡಿದರು. ಅಲ್ಲಿ ಶಿವರಾಜ್ ನಿಂತಿದ್ದ.
ಪ್ರಸಾದ್ ಏನು ಹೇಳಲು ಬಂದ? ಶಿವರಾಜ್ ಎಲ್ಲವನ್ನೂ ಮರೆತು ದುರ್ಗ ಮತ್ತು ಕುಟುಂಬದ ಜೊತೆ ಒಂದಾಗುತ್ತಾನಾ? ಅನ್ನೋದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ…