ಆವತ್ತು ಮಧ್ಯರಾತ್ರಿ 2:00 ಗಂಟೆಗೆ, ಆಸ್ಪತ್ರೆಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿರುವ ಒಬ್ಬ ಮಹಿಳೆಯ ಶಬ್ದ ಹೊರಗಡೆ ನಿಂತಿದ್ದ ಎಲ್ಲರಿಗೂ ಕೇಳಿಸುತ್ತಿತ್ತು. ಯಾವಾಗ ಮಗುವಿನ ಅಳುವಿನ ಶಬ್ದ ಹೊರಗಡೆ ಕೇಳಿಸಿತು, ಎಲ್ಲರಿಗೂ ತುಂಬಾ ಖುಷಿಯಾಯಿತು. ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ಹೊರಗಡೆ ಬಂದು, ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆಗ ಎಲ್ಲರೂ ನಿರಾಳವಾದ ಉಸಿರನ್ನು ಬಿಟ್ಟರು. ಎಲ್ಲರೂ ಕುತೂಹಲದಿಂದ ಮಗುವಿನ ಬಗ್ಗೆ ಕೇಳಿದರು, ಈ ವಿಷಯದಲ್ಲಿ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಡಾಕ್ಟರ್ “ನಿಮ್ಮ ಮನೆಗೆ ಹೆಣ್ಣುಮಗು ಬಂದಿದೆ” ಎಂದು ಹೇಳಿದರು, ಅದನ್ನು ಕೇಳಿ ಎಲ್ಲರಿಗೂ ತುಂಬಾ ಸಂತೋಷವಾಯಿತು. ಯಾಕೆಂದರೆ ಆ ತಾಯಿಗೆ ಮೊದಲೇ ಒಂದು ಗಂಡು ಮಗು ಇತ್ತು, ಹೀಗಾಗಿ “ಮನೆಗೆ ಮಹಾಲಕ್ಷ್ಮಿ ಬಂದಳು” ಎಂದು ಎಲ್ಲರೂ ತುಂಬಾ ಖುಷಿಪಟ್ಟರು. ಇಲ್ಲಿಂದಲೇ ಆ ಮುಗ್ಧ ಕಂದಮ್ಮನಾದ ನನ್ನ ಕಥಾನಾಯಕಿಯ ಕಥೆ ಆರಂಭವಾಗುತ್ತದೆ.
ಮನೆಯಲ್ಲಿ ಎಲ್ಲರೂ ತುಂಬಾ ಖುಷಿಯಾಗಿದ್ದರು, ಯಾಕೆಂದರೆ ಇವತ್ತು ತಾಯಿ ಮತ್ತು ಮಗಳು ಇಬ್ಬರೂ ಮನೆಗೆ ಬರುತ್ತಿದ್ದರು. ಅದು ಒಂದು ಸಂಯುಕ್ತ ಕುಟುಂಬ; ಅವರೆಲ್ಲ ಹಳ್ಳಿಯಲ್ಲಿ ಒಂದೇ ಮನೆಯಲ್ಲಿ ಇದ್ದರು. ಆದರೆ ಹೇಳಿಕೊಳ್ಳುವಷ್ಟು ಹೊಂದಾಣಿಕೆ ಆ ಮನೆಯಲ್ಲಿ ಇರಲಿಲ್ಲ, ಯಾಕೆಂದರೆ...
"ಕೆಲವು ವರ್ಷಗಳ ಹಿಂದೆ"
(ಅದು ಒಂದು ದೊಡ್ಡ ಮನೆತನ. ಆ ಮನೆತನದ ಹಿರಿಯ ವ್ಯಕ್ತಿಯ ಹೆಸರು ಆನಂದರಾವ್, ಅವರ ಹೆಂಡತಿಯ ಹೆಸರು ಸುಲೋಚನಾ. ಈ ಹಳ್ಳಿಯ ಜನರೆಲ್ಲ ಇವರನ್ನು ಕಂಡರೆ ತುಂಬಾ ಭಯಭಕ್ತಿಯಿಂದ ನೋಡುತ್ತಿದ್ದರು, ಅವರು ಏನು ಹೇಳುತ್ತಾರೋ ಅದೇ ಜನರಿಗೆ ವೇದವಾಕ್ಯವಾಗಿತ್ತು. ಆ ದಂಪತಿಗೆ ಒಬ್ಬನೇ ಮಗನಿದ್ದ, ಅವನ ಹೆಸರು ಶಿವರಾಜ್. ಈಗ ಆ ಮನೆಯಲ್ಲಿ ಇನ್ನೊಂದು ಮಗುವಿನ ಆಗಮನಕ್ಕಾಗಿ ಎಲ್ಲರು ಕಾಯುತ್ತಿದ್ದರು. ಸುಲೋಚನಾ ಈಗ ತುಂಬು ಗರ್ಭಿಣಿಯಾಗಿದ್ದಳು. ಆವತ್ತು ಬೆಳಿಗ್ಗೆ ಆನಂದರಾವ್ ಪಂಚಾಯಿತಿಗೆ ಹೋಗಬೇಕಾಯಿತು. ಆದರೆ ಆ ದಿನ ಸುಲೋಚನಾಳಿಗೆ ಹೇಳಿಕೊಳ್ಳಲಾಗದಂತಹ ಒಂದು ಸಂಕಟ ಶುರುವಾಯಿತು. ಅವಳು “ಆದಷ್ಟು ಬೇಗ ಮನೆಗೆ ಬನ್ನಿ” ಎಂದು ತನ್ನ ಗಂಡನಿಗೆ ಹೇಳಿದಳು. ಅದಕ್ಕೆ ಆನಂದರಾವ್ ಪ್ರೀತಿಯಿಂದ ಅವಳನ್ನು ನೋಡಿ ಅವಳ ಹಣೆಗೆ ಮುತ್ತಿಟ್ಟು, ಅವಳ ಗರ್ಭದಲ್ಲಿದ್ದ ಮಗುವಿಗೆ “ನಾನಿನ್ನು ಹೋಗಿ ಬರುತ್ತೀನಿ ಮಗು” ಎಂದು ಹೇಳಿ ಹೊರಟನು.
ಸಂಜೆ 4:00 ಗಂಟೆಯಾದರೂ ಆನಂದರಾವ್ ಮನೆಗೆ ಬಂದಿರಲಿಲ್ಲ. ಸುಲೋಚನಾಳಿಗೆ ಒಂದೇ ಸಮ ಚಿಂತೆಯು ಶುರುವಾಯಿತು. ಹೊರಗಡೆ ಗುಡುಗು, ಮಿಂಚು, ಜೋರಾಗಿ ಮಳೆ ಶುರುವಾಯಿತು. ಅಷ್ಟರಲ್ಲಿ ಅವಳಿಗೆ ಹೊಟ್ಟೆ ನೋವು ಶುರುವಾಯಿತು. ಮನೆಯಲ್ಲಿ ಎಲ್ಲರೂ ತುಂಬಾ ಗಾಬರಿಯಾಗಿದ್ದರು, ಅಷ್ಟು ನೋವಿದ್ದರೂ ಸುಲೋಚನಾಳಿಗೆ ತನ್ನ ಗಂಡನ ಬಗ್ಗೆ ಚಿಂತೆಯೇ ಇತ್ತು. ಕೊನೆಗೂ ಹೆರಿಗೆ ಆಯಿತು. ಆ ವಂಶಕ್ಕೆ ಇನ್ನೊಂದು ಗಂಡು ಮಗುವಿನ ಆಗಮನವಾಯಿತು. ಅದೇ ಸಮಯದಲ್ಲಿ ಯಾರೋ ಒಬ್ಬರು ಬಂದು ಒಂದು ವಿಷಯವನ್ನು ಹೇಳಿದರು. ಅದನ್ನು ಕೇಳಿ ಸುಲೋಚನಾ ಮೂರ್ಛೆ ಹೋದಳು. ಏಕೆಂದರೆ “ಆನಂದರಾವ್ ಇನ್ನಿಲ್ಲ” ಎಂಬ ಕಹಿ ಸತ್ಯ. ಊರಲ್ಲಿ ಯಾರಿಗೂ ಎದುರಾಗದಂತಹ ವ್ಯಕ್ತಿಯಾಗಿದ್ದ ಆನಂದರಾವ್ ಅವರನ್ನ ಯಾರೋ ಕೊಲೆ ಮಾಡಿದ್ದರು.
ಆವತ್ತು ರಾತ್ರಿ ನಡೆದ ಘಟನೆಗಳು ಹೇಗಿತ್ತಂದರೆ, ತಂದೆಯ ಸಾವಿನ ಕಾರಣವನ್ನು ಎಲ್ಲರೂ ಆ ಹಸು ಗೂಸಿನ ಮೇಲೆ ಹಾಕಿದರು. ಈ ಪ್ರಪಂಚದಲ್ಲಿ ಯಾರೇ ಎದುರಾದರೂ ತಾಯಿ ನಮ್ಮ ಜೊತೆ ಇದ್ದರೆ ನೂರು ಆನೆಗಳ ಬಲ ಬಂದಂತೆ ಆಗುತ್ತದೆ. ಆದರೆ ಆ ಮಗುವಿನ ದುರ್ಭಾಗ್ಯವೆಂದರೆ, ಸುಲೋಚನಾ ತನ್ನ ಗಂಡ ಈ ಮಗುವಿನ ಕಾಲ್ಗುಣದಿಂದಲೇ ಸತ್ತನು ಎಂದು ಭಾವಿಸಿ, ಆ ಮಗುವನ್ನು ದ್ವೇಷಿಸಲು ಶುರು ಮಾಡಿದಳು.ಅವತ್ತಿನಿಂದ ಆ ಮಗುವಿಗೆ ಆ ಮನೆಯಲ್ಲಿ ಯಾವ ಪ್ರೀತಿ, ವಾತ್ಸಲ್ಯವೂ ಸಿಗಲಿಲ್ಲ. ಒಂಟಿಯಾಗಿಯೇ ಬೆಳೆದ ಆ ಮಗುವಿನ ಹೆಸರು ನಾರಾಯಣ. ಅವತ್ತಿನಿಂದ ಆ ಮನೆ ಅಂತರ್ಯವಾಗಿ ಎರಡು ಭಾಗವಾಯಿತು. ಆದರೆ ನಾರಾಯಣ ಯಾರಿಗೂ ಏನೂ ಹೇಳದೆ, ಎಷ್ಟೇ ನೋವು ಮತ್ತು ಅವಮಾನ ಬಂದರೂ ಸಹಿಸಿಕೊಂಡು, ತನ್ನನ್ನೇ ತಾನು ತಾಳಿಕೊಂಡು ಆ ಮನೆಯಲ್ಲಿ ಇದ್ದನು.ಆದರೆ ನಾರಾಯಣನ ತಾಯಿ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ, ಲಕ್ಷ್ಮಿ ಎಂಬ ಒಳ್ಳೆಯ ಹುಡುಗಿಯನ್ನು ನಾರಾಯಣನಿಗೆ ಮದುವೆ ಮಾಡಿಕೊಟ್ಟದ್ದು. ಅವಳು ತನ್ನ ಹೆಸರಿನಂತೆಯೇ ನಾರಾಯಣನ ಜೀವನದಲ್ಲಿ ಲಕ್ಷ್ಮಿಯಂತೆ ಅದೃಷ್ಟವನ್ನು ತಂದಳು. ಅವಳು ಗಂಡನಿಗೆ ತಕ್ಕ ಹೆಂಡತಿಯಾಗಿ, ಅವನ ನೋವನ್ನು ಅರ್ಥಮಾಡಿಕೊಂಡು ಪ್ರತಿಯೊಂದು ವಿಷಯದಲ್ಲೂ ಅವನನ್ನೇ ಅನುಸರಿಸುತ್ತಿದ್ದಳು.)
ಲಕ್ಷ್ಮಿ ಮತ್ತು ಮಗುವನ್ನು ಎಲ್ಲರೂ ಆರತಿ ಮಾಡಿ ಒಳಗೆ ಸ್ವಾಗತ ಮಾಡಿದರು. ಹೆಣ್ಣು ಮಗು ಆಗಿದೆ ಎಂದು ಕೇಳಿ ಮೊದಲು ನಾರಾಯಣಗೆ ನಂಬೋಕಾಗಲಿಲ್ಲ, ಯಾಕೆಂದರೆ ಅವರಿಗೆ ಎರಡನೇ ಮಗು ಕೂಡ ಗಂಡಾಗುತ್ತದೆ ಎಂದು ತಿಳ್ಕೊಂಡಿದ್ದರು. ಆದರೆ ನಂತರ ಮನೆಗೆ ಮಹಾಲಕ್ಷ್ಮಿ ಬಂದಳು ಎಂದು ತುಂಬಾ ಖುಷಿಪಟ್ಟರು. ಎಲ್ಲರೂ ಮಗುವನ್ನು ತುಂಬಾ ಮುದ್ದಾಡುತ್ತಿದ್ದರು. ನಾರಾಯಣ ಮತ್ತು ಲಕ್ಷ್ಮಿಗೆ ರಾಘವೇಂದ್ರ ಎಂಬ ದೊಡ್ಡ ಮಗ ಇದ್ದನು. ಅವನು ಸ್ವಲ್ಪ ಬೇಜಾರಾಗಿದ್ದ, ಏಕೆಂದರೆ ಎರಡನೇ ಮಗು ಬಂದಾಗ ಮೊದಲ ಮಗುವಿಗೆ ಸ್ವಲ್ಪ ಬೇಜಾರಾಗುವುದು ಸಹಜ — ಪ್ರೀತಿಯಲ್ಲಿ ಹಂಚಿಕೆ ಆಗುತ್ತದೆ ಅಲ್ವಾ ಅದಕ್ಕೆ.
ಮಗುವನ್ನು ಮಲಗಿಸಿ ಲಕ್ಷ್ಮಿ ಮತ್ತು ನಾರಾಯಣ ಇಬ್ಬರೂ ಮಗುವನ್ನು ನೋಡುತ್ತ ಕುಳಿತಿದ್ದರು. ಆಗ ಸುಲೋಚನಾ ಕೋಣೆಗೆ ಬಂದು ಲಕ್ಷ್ಮಿಗೆ “ಮಗುವನ್ನು ನೋಡಿದ ಸಾಕು, ಸ್ವಲ್ಪ ಮನೆ ಕೆಲಸವನ್ನು ಮಾಡು” ಎಂದು ತುಂಬಾ ಒರಟಾಗಿ ಹೇಳಿದಳು. ಆಗ ನಾರಾಯಣ “ಅವಳು ಈಗಷ್ಟೇ ಬಂದಿದ್ದಾಳೆ, ಅದಲ್ಲದೆ ಈಗಷ್ಟೇ ಹೆರಿಗೆ ಆಗಿದೆ ಅಂತ ಗೊತ್ತಿದ್ದರೂ ಮನೆ ಕೆಲಸ ಮಾಡು ಅಂತ ಹೇಳ್ತಿದ್ದೀಯಲ್ಲ, ನಿನಗೆ ಮನಸಾದರೂ ಹೇಗೆ ಬರುತ್ತೆ?” ಎಂದು ಕೇಳಿದ. ಆಗ ಸುಲೋಚನಾ “ಏನು ಪ್ರಪಂಚದಲ್ಲಿ ನಿನ್ನ ಹೆಂಡತಿ ಒಬ್ಬಳೇ ಮಗುವನ್ನು ಹೆತ್ತಿರುವ ಹಾಗೆ ಮಾತನಾಡ್ತಿದ್ದೀಯಾ?” ಎಂದು ಹೇಳಿದಳು. ಅದಕ್ಕೆ ನಾರಾಯಣ “ಏನಾದರೂ ಮಾಡ್ಕೊಳ್ಳಿ” ಎಂದು ಹೇಳಿ ಹೊರಗೆ ಹೋಗಿಬಿಟ್ಟನು. ಕಥೆ ಮುಂದುವರಿಯುತ್ತದೆ...