Avala Horata - 3 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 3

Featured Books
Categories
Share

ಅವಳ ಹೋರಾಟ - 3

ರಾತ್ರಿಯಾಗಿತ್ತು. ಎಲ್ಲರೂ ನಿದ್ರೆ ಮಾಡುತ್ತಿದ್ದರು, ಆದರೆ ಎಂದಿನಂತೆ ಲಕ್ಷ್ಮಿ ಕಾಯ್ತಾ ಕುಳಿತಿದ್ದಳು. ಬಾಗಿಲು ಬಡಿಯೋ ಶಬ್ದ ಆಯಿತು. ಲಕ್ಷ್ಮಿ ಬಾಗಿಲು ತೆಗೆಯಿತು. ಆದರೆ ಅವಳಿಗೆ ಆಶ್ಚರ್ಯ ಆಯಿತು — ನಾರಾಯಣ ತುಂಬ ಖುಷಿಯಾಗಿದ್ದ. ನಾಮಕರಣಕ್ಕೆ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಜೊತೆಗೆ ತಗೊಂಡು ಬಂದಿದ್ದ. ನಾರಾಯಣ ಖುಷಿಯಾಗಿರುವುದನ್ನು ನೋಡಿ ಲಕ್ಷ್ಮಿಗೂ ತುಂಬ ಖುಷಿ ಆಯಿತು.

(ಗಂಡ ಹೆಂಡತಿ ಊಟ ಮಾಡಿ ಮಲಗಿರುವ ಮಕ್ಕಳನ್ನು ನೋಡುತ್ತಾ ಕುಳಿತಿದ್ದರು.)

ನಾರಾಯಣ : ನಮ್ಮ ಮಗಳು ಎಷ್ಟು ಮುದ್ದಾಗಿದ್ದಾಳ್ವಾ?

ಲಕ್ಷ್ಮಿ: ಎಲ್ಲ ನಿಮ್ಮ ಹೋಲಿಕೆಯೇ ಇದೆ.

ನಾರಾಯಣ : ಸರಿ, ಮಗು ನಿನ್ನ ಹಾಗೆ ಮತ್ತು ನನ್ನ ಹಾಗೆ ಇಬ್ಬರ ತರವೂ ಇದೆ. ಈಗ ಖುಷಿನಾ? ಆದರೆ ನಾವು ಇಷ್ಟು ಚೆನ್ನಾಗಿರೋಕೆ ಕಾರಣವೇ ನಿನ್ನಲ್ಲಿರುವ ಒಳ್ಳೆಯತನ ಲಕ್ಷ್ಮಿ.

ಲಕ್ಷ್ಮಿ: ನಿಮಗಿರುವ ಒಳ್ಳೆಯತನದ ಮುಂದೆ ನನ್ನದೇನು ಇಲ್ಲ. ಕೆಟ್ಟವರಿಗೂ ಒಳ್ಳೆಯದನ್ನೇ ಬಯಸುವ ನಿಮಗೆ ನಾನು ಯಾವಾಗಲೂ ತಲೆ ಬಾಗ್ತೀನಿ ರೀ.

ನಾರಾಯಣ : ನಿನ್ನ ಸಹಕಾರ ಇಲ್ಲದೆ ನಾನು ಒಬ್ಬನೇ ಏನೂ ಮಾಡೋಕೆ ಸಾಧ್ಯವಾಗ್ತಿರಲಿಲ್ಲ ಲಕ್ಷ್ಮಿ.

ಲಕ್ಷ್ಮಿ: ನಾನು ಏನೂ ಅಲ್ಲ, ನಿಮ್ಮಲ್ಲಿರುವ ಒಳ್ಳೆಯತನಕ್ಕೆ ದೇವರು ಜೊತೆಯಾಗಿರ್ತಾನೆ. ನಾವು ನಂಬಿರುವ ರಾಯರು ನಮ್ಮನ್ನು ಯಾವತ್ತೂ ಕೈ ಬಿಡೋದಿಲ್ಲ.

ನಾರಾಯಣ: ಅದು ನಿಜ.

ಲಕ್ಷ್ಮಿ: ಯೋಚನೆ ಮಾಡ್ಬೇಡಿ, ಒಂದಿನ ಎಲ್ಲ ಸರಿಯಾಗುತ್ತದೆ.

ನಾರಾಯಣ : ಇದನ್ನೆಲ್ಲ ನಾನು ಶುರು ಮಾಡಿದ್ದು ನಾನು, ಮುಕ್ತಾಯವನ್ನು ನಾನೇ ಮಾಡ್ತೀನಿ. ಅಲ್ಲಿವರೆಗೆ ಏನೂ ಸರಿಯಾಗಲ್ಲ (ಅಂತ ಮನಸಲ್ಲಿ ಅಂದುಕೊಂಡ).

ಲಕ್ಷ್ಮಿ: ನೋಡಿ ನಾಳೆ ನಾಮಕರಣ ಇದೆ, ಅದರ ಬಗ್ಗೆ ಯೋಚನೆ ಮಾಡೋಣ. ನೀವು ಯಾವದಾದರೂ ಹೆಸರು ಹುಡುಕಿದ್ದೀರಾ?

ನಾರಾಯಣ : ನಿನ್ನ ತಲೆಯಲ್ಲಿ ಯಾವದಾದರೂ ಹೆಸರು ಇದ್ದರೆ ಹೇಳು, ಅದನ್ನೇ ಇಡೋಣ.

ಲಕ್ಷ್ಮಿ: ನಮ್ಮ ಮಗಳಿಗೆ ಈ ಹೆಸರು ಇಡಬೇಕು ಅಂತಿದ್ದೀನಿ (ಅಂತ ಲಕ್ಷ್ಮಿ ಒಂದು ಸ್ಲೇಟ್ ಮೇಲೆ ಬರೆದು ತೋರಿಸಿದಳು).

ನಾರಾಯಣ : (ಅದನ್ನು ಗಮನದಿಂದ ನೋಡಿ) ಈ ಹೆಸರು ಯಾಕೆ? ಹೆಸರು ಚೆನ್ನಾಗಿದೆ, ಆದರೆ ಹುಡುಗಿ ಅಲ್ಲವಾ, ಯಾವದಾದರೂ ನಾಜೂಕಾದ ಹೆಸರನ್ನು ಇಟ್ಟರೆ ಚೆನ್ನಾಗಿರುತ್ತೆ.

ಲಕ್ಷ್ಮಿ: ನಾನು ನಮ್ಮ ಮಗಳಿಗೆ ಈ ಹೆಸರನ್ನು ಇಡ್ತಿರುವ ಕಾರಣವೇ ಆ ನಾಜೂಕು. ನಮ್ಮ ಮಗಳು ಕೇವಲ ಹೆಸರಿನಿಂದ ಮಾತ್ರ ಅಲ್ಲ, ಅವಳ ಮಾತಲ್ಲಿ, ನಡೆಯಲ್ಲಿ ಶಕ್ತಿ ಮತ್ತು ಧೈರ್ಯ ಇರಬೇಕು.

ನಾರಾಯಣ: (ನಗುತ್ತಾ) ಸರಿ, ನಿನ್ನಿಷ್ಟ.

(ಲಕ್ಷ್ಮಿ ಮತ್ತು ನಾರಾಯಣ ಇಬ್ಬರೂ ತಮ್ಮ ಮಕ್ಕಳನ್ನು ನೋಡುತ್ತಾ ಅಲ್ಲೇ ನಿದ್ರೆಗೆ ಜಾರಿದರು.)

ಬೆಳಿಗ್ಗೆ ಆಯಿತು. ಆ ದಿನ ಎಲ್ಲರೂ ನಾಮಕರಣ ಅಂತ ಬೇಗ ಎದ್ದಿದ್ದರು. ಎಲ್ಲರೂ ಮನೆಯ ಕೆಲಸಗಳಲ್ಲಿ ತೊಡಗಿದ್ದರು. ರಾಘವೇಂದ್ರ, ಪ್ರಸಾದ್ ಮತ್ತು ರಾಜ (ಶಿವರಾಜ್ ಮತ್ತು ಪದ್ಮನ ಮಕ್ಕಳು) ಮನೆ ತುಂಬ ಓಡಾಡುತ್ತಾ ಆಟ ಆಡುತ್ತಿದ್ದರು.

ಎಲ್ಲಾ ಅಥಿತಿಗಳು ಬಂದರು. ಆಚಾರ್ಯರು ಬಂದು ಕುಳಿತರು. ನಂತರ ನಾರಾಯಣ ಮತ್ತು ಲಕ್ಷ್ಮಿ ತಮ್ಮ ಮಗುವಿನ ಜೊತೆ ಬಂದು ಪೂಜೆಗೆ ಕುಳಿತರು. ಆಚಾರ್ಯರು ಮಂತ್ರಗಳನ್ನು ಹೇಳಲು ಶುರು ಮಾಡಿದರು. ನಂತರ ಅವರು ನಾರಾಯಣನಿಗೆ ಮಗುವಿಗೆ ಇಟ್ಟಿರುವ ಹೆಸರನ್ನು ಮಗುವಿನ ಕಿವಿಯಲ್ಲಿ ಮೂರು ಸಲ ಹೇಳಲು ಹೇಳಿದರು.

ನಾರಾಯಣ: (ಮಗುವನ್ನು ಎತ್ತಿಕೊಂಡು ಲಕ್ಷ್ಮಿಯ ಮುಖ ನೋಡಿ, ನಂತರ ಕಿವಿಯಲ್ಲಿ) "ದುರ್ಗಾ, ದುರ್ಗಾ, ದುರ್ಗಾ" ಅಂತ ಹೇಳಿದ.

ಎಲ್ಲರೂ ತುಂಬ ಖುಷಿಯಿಂದ ಹೆಸರು ತುಂಬ ಚೆನ್ನಾಗಿದೆ ಎಂದು ನಗುತ ಹೇಳಿದರು. ಲಕ್ಷ್ಮಿ ಮಗು ನೋಡಿ "ನನ್ನ ಮಗಳು ದುರ್ಗಾ" ಎಂದು ಹೆಮ್ಮೆಯಿಂದ ಮನಸ್ಸಿನಲ್ಲಿ ಹೇಳಿಕೊಂಡಳು.

ಆ ದಿನ ಲಕ್ಷ್ಮಿ ಎಲ್ಲರಿಗಾಗಿ ತುಂಬ ರುಚಿಯಾದ ಅಡುಗೆ ಮಾಡಿದ್ದಳು. ಬಂದಿದ್ದ ಎಲ್ಲಾ ಅಥಿತಿಗಳಿಗೆ ಊಟ ಬಡಿಸಿದಳು. ಅವರಲ್ಲಿ ಒಬ್ಬರು ಸುಲೋಚನಿಗೆ, "ನಿಮ್ಮ ಎರಡನೇ ಸೊಸೆ ಎಷ್ಟು ಚುರುಕಾಗಿ ಎಲ್ಲಾ ಕೆಲಸ ಮಾಡ್ತಾಳೆ, ಅಡುಗೆಯೂ ಎಷ್ಟು ರುಚಿಯಾಗಿ ಮಾಡುತ್ತಾಳೆ ನೀವು ತುಂಬ ಅದೃಷ್ಟವಂತರು" ಎಂದರು.

ಸುಲೋಚನಾ : ಹೌದು, ಲಕ್ಷ್ಮಿ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆದರೆ ಪದ್ಮಾ ಕೂಡ ಎಲ್ಲಾ ಕೆಲಸ ಮಾಡ್ತಾಳೆ. ಅವಳು ಹೊರಗೆ ಕೆಲಸಕ್ಕೆ ಹೋಗ್ತಾಳೆ ಅಲ್ವಾ, ಅದಕ್ಕೆ ಮನೆ ಕೆಲಸಕ್ಕೆ ಸಮಯ ಸಾಲಲ್ಲ.

ಸುಲೋಚನ ಮಾತು ಕೇಳಿ ಲಕ್ಷ್ಮಿಗೆ ತುಂಬ ಬೇಜಾರಾಯಿತು. ಏಕೆಂದರೆ ಪದ್ಮಾ ಹೊರಗಡೆ ಕೆಲಸ ಮಾಡುತ್ತಿದ್ದಳು. ಆದರೆ ಲಕ್ಷ್ಮಿ ಡಿಗ್ರಿ ಮಾಡಿದ್ದರೂ ಹೊರಗೆ ಕೆಲಸ ಮಾಡುತ್ತಿರಲಿಲ್ಲ. ಹೊರಗೆ ಕೆಲಸ ಮಾಡಿದರೆ ಗಂಡನನ್ನು ನೋಡಿಕೊಳ್ಳುವುದರಲ್ಲಿ ಕೊರತೆ ಆಗಬಹುದು ಎಂದು ಮನೆಯಲ್ಲೇ ಇದ್ದಳು. ಯಾಕೆಂದರೆ ಆ ಮನೆಯ ಪರಿಸ್ಥಿತಿ ಕೂಡ ಸರಿಯಾಗಿರಲಿಲ್ಲ.

ರಾತ್ರಿ ಆಯಿತು. ಕೆಲಸ ಮಾಡಿ ಎಲ್ಲರಿಗೂ ತುಂಬ ಸುಸ್ತಾಗಿತ್ತು. ರಾಘವೇಂದ್ರ, ಪ್ರಸಾದ್ ಮತ್ತು ರಾಜ ಮೂವರು ಹಾಲು ಕುಡಿಯುತ್ತಾ ಕುಳಿತಿದ್ದರು. ಅತ್ತ ಲಕ್ಷ್ಮಿ ಕೊಠಡಿಯಲ್ಲಿ ದುರ್ಗಾಳನ್ನು ತೊಟ್ಟಿಲಲ್ಲಿ ತೂಗುತ್ತಾ ಲಾಲಿ ಹಾಡುತ್ತಾ ಇದ್ದಳು. ಅವಳ ಧ್ವನಿ ಹೊರಗಡೆಯಲ್ಲೂ ಕೇಳಿಸುತ್ತಿತ್ತು. ಕೇಳುವವರಿಗೆ ಅದು ತುಂಬ ಹಿತವಾಗಿತ್ತು. ಅವಳು ತುಂಬ ಚೆನ್ನಾಗಿ ಹಾಡುತ್ತಿದ್ದಳು.

ಅವಳ ಹಾಡು ಕೇಳುತ್ತಾ ತೊಟ್ಟಿಲಿನಲ್ಲಿ ಇದ್ದ ದುರ್ಗಾ ನಗುತ್ತಾ ತನ್ನ ತಾಯಿಯ ಮುಖವನ್ನೇ ನೋಡುತ್ತಾ ನಿದ್ರೆ ಮಾಡಿತು.

ನಾರಾಯಣ ಆಗಷ್ಟೇ ಹೊರಗಿನಿಂದ ಮನೆಗೆ ಬಂದನು, ಅವನು ಮನೆ ಒಳಗೆ ಬಂದ ಕ್ಷಣನೇ ಲಕ್ಷ್ಮಿಯ ಹಾಡು ಕೇಳಿಸಿತು ಅದರೊಟ್ಟಿಗೆ ಮೂವರು ಮಕ್ಕಳು ಒಟ್ಟಿಗೆ ಕುಳಿತಿರುವುದನ್ನು ನೋಡಿ ಅವನು ತುಂಬ ಖುಷಿಪಟ್ಟ. ಆದರೆ ಅಚಾನಕ್ ಅವನು ಬಂದು ರಾಘವೇಂದ್ರ ಹಿಡಿದಿದ್ದ ಲೋಟವನ್ನು ಜೋರಾಗಿ ಎಸೆದನು.

ನಾರಾಯಣನಿಗೆ ಯಾಕೆ ಕೋಪ ಬಂದಿತು? ಅವನು ಯಾಕೆ ಹೀಗೆ ಮಾಡಿದೆ? ಅದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ…