ಬೆಂಗಳೂರಿನ ಆ ಅರೆಬರೆ ಕತ್ತಲ ರಸ್ತೆಗಳಲ್ಲಿ ರಾತ್ರಿ ಒಂದು ಗಂಟೆಯೆಂದರೆ ಅದು ಕೇವಲ ಸಮಯವಲ್ಲ ಅದು ಮನುಷ್ಯರ ಲೋಕ ಮತ್ತು ಮೃತ್ಯುಲೋಕದ ನಡುವಿನ ಒಂದು ತೆಳುವಾದ ಪರದೆ ಸರಿಯುವ ಕ್ಷಣ. ಆಕಾಶದಿಂದ ಬೀಳುತ್ತಿದ್ದ ಮಳೆಯ ಹನಿಗಳು ಡಾಂಬರು ರಸ್ತೆಯ ಮೇಲೆ ಅಪ್ಪಳಿಸಿದಾಗ ಏಳುತ್ತಿದ್ದ ಶಬ್ದವು ಯಾವುದೋ ಹಳೆಯ ಕಾಲದ ಯುದ್ಧದ ನಗಾರಿ ಬಾರಿಸಿದಂತೆ ಕೇಳಿಸುತ್ತಿತ್ತು. ರಸ್ತೆಯ ಎರಡೂ ಬದಿಯಲ್ಲಿದ್ದ ಬೃಹತ್ ಅಶ್ವತ್ಥ ಮರಗಳು ಗಾಳಿಗೆ ಅಲುಗಾಡುತ್ತಾ, ಕತ್ತಲಿನಲ್ಲಿ ವಿಚಿತ್ರ ಆಕೃತಿಗಳನ್ನು ಧರಿಸಿ, ದಾರಿಹೋಕರನ್ನು ಹಿಡಿಯಲು ಕಾದು ಕುಳಿತಿರುವ ಮಾಯಾವಿ ಕೈಗಳಂತೆ ಭಾಸವಾಗುತ್ತಿದ್ದವು. ಸ್ಟ್ರೀಟ್ ಲೈಟ್‌ಗಳು ಆಗೊಮ್ಮೆ ಈಗೊಮ್ಮೆ ಮಿನುಗುತ್ತಾ ರಸ್ತೆಯ ಮೇಲೆ ಬಿಳಿ ಮತ್ತು ಕಪ್ಪು ಬಣ್ಣದ ಕಣ್ಣುಮುಚ್ಚಾಲೆಯನ್ನು ಆಡುತ್ತಿದ್ದವು. ಆ ಮಂದ ಬೆಳಕಿನಲ್ಲಿ ಸಾಧಾರಣ ವಸ್ತುಗಳೂ ಕೂಡ ಭಯಾನಕವಾಗಿ ಕಾಣುತ್ತಿದ್ದವು.
ಆದರ್ಶ್ ತನ್ನ ಹಳೆಯ ಹಿರೋ ಹೆಚ್.ಎಫ್ ಡಿಲಕ್ಸ್ ಬೈಕ್ ಏರಿ ಕೊನೆಯ ಫುಡ್ ಡೆಲಿವರಿ ಮುಗಿಸಿ ಮನೆಗೆ ಮರಳುತ್ತಿದ್ದ. ಅವನ ಕಣ್ಣುಗಳಲ್ಲಿ ನಿದ್ದೆಯ ಮಂಪರಿಗಿಂತ ಹೆಚ್ಚಾಗಿ ಆ ಇಡೀ ದಿನದ ಅತಿಯಾದ ದಣಿವಿತ್ತು. ಜೀವನವೆಂಬುದು ಅವನಿಗೆ ಒಂದು ಯಾಂತ್ರಿಕ ಸರ್ಕಸ್ ಆಗಿಬಿಟ್ಟಿತ್ತು. ಹೊಟ್ಟೆಪಾಡಿಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಓಟ, ರಾತ್ರಿಯಿಡೀ ಅಪರಿಚಿತ ಗಲ್ಲಿಗಳ ಅಲೆದಾಟ. ನಗರದ ಗದ್ದಲವೆಲ್ಲಾ ಅಡಗಿಹೋಗಿತ್ತು, ಕೇವಲ ಅವನ ಬೈಕ್‌ನ ಎಂಜಿನ್ ಸದ್ದು ಮಾತ್ರ ಆ ನಿಶಬ್ದವನ್ನು ಸೀಳುತ್ತಿತ್ತು. ಆದರೆ ಅಂದು ಏನೋ ಒಂತರ ವಿಚಿತ್ರವಾದ ಅನುಭವ. ಗಾಳಿಯಲ್ಲಿ ಹಸಿ ಮಣ್ಣಿನ ವಾಸನೆಯ ಜೊತೆಗೆ, ಯಾವುದೋ ಹಳೆಯ ಕಾಲದ ಗಿಡಮೂಲಿಕೆಗಳ ಅಥವಾ ಸುಟ್ಟ ಗಾಯಕ್ಕೆ ಹಚ್ಚುವ ಹಳೆಯ ಕಾಲದ ಆಯುರ್ವೇದಿಕ ಔಷಧಿಯ ಘಾಟು ವಾಸನೆ ಬರುತ್ತಿತ್ತು. ಅದು ಎಂತಹ ವಾಸನೆಯೆಂದರೆ, ಮನುಷ್ಯನ ಉಸಿರನ್ನು ಒಂದು ಕ್ಷಣ ಗಂಟಲಲ್ಲೇ ನಿಲ್ಲಿಸುವಷ್ಟು ತೀಕ್ಷ್ಣವಾಗಿತ್ತು. ಇದೇನು ವಿಚಿತ್ರ ವಾಸನೆ? ಯಾರಾದರೂ ಹಳೆ ಕಾಲದ ಚಿತಾಗಾರವನ್ನು ತೆರೆದಿದ್ದಾರೆಯೇ ಈ ಮಧ್ಯರಾತ್ರಿಯಲ್ಲಿ? ಎಂದು ಆದರ್ಶ್ ತನ್ನಲ್ಲೇ ಗೊಣಗಿಕೊಂಡ. ಅವನ ಬೈಕ್‌ನ ಹೆಡ್‌ಲೈಟ್ ಶಕ್ತಿಯಿಲ್ಲದಂತೆ ಡಿಮ್ ಆಗುತ್ತಾ ಪ್ರಕಾಶಮಾನವಾಗುತ್ತಾ ವಿಚಿತ್ರವಾಗಿ ವರ್ತಿಸುತ್ತಿತ್ತು. ಇದ್ದಕ್ಕಿದ್ದಂತೆ, ಮಲ್ಲೇಶ್ವರಂನ ಆ ಹಳೆಯ ಶ್ಮಶಾನದ ಪಕ್ಕದ ರಸ್ತೆಗೆ ಬರುತ್ತಿದ್ದಂತೆ ಅವನ ಬೈಕ್ ಒಂದು ದೊಡ್ಡ ಸದ್ದು ಮಾಡಿ ತನ್ನಷ್ಟಕ್ಕೆ ತಾನೇ ಆಫ್ ಆಯಿತು. ಆದರ್ಶ್ ಗಾಬರಿಯಾದ. ಬೈಕ್‌ನ ಪೆಟ್ರೋಲ್ ಇದೆ, ಬ್ಯಾಟರಿ ಹೊಸದು, ಆದರೂ ಇದು ಹೇಗೆ ಆಫ್ ಆಯಿತು?
ಸುತ್ತಲೂ ಅತೀವವಾದ ಮೌನ ಆವರಿಸಿತು. ಮಳೆಯ ಹನಿಗಳು ನೆಲಕ್ಕೆ ಅಪ್ಪಳಿಸುವ ಶಬ್ದ ಕೂಡ ಕೇಳಿಸದಷ್ಟು ಭಯಾನಕ ಮೌನವದು. ಆದರ್ಶ್ ಬೈಕ್‌ನಿಂದ ಕೆಳಗಿಳಿದು ಕಿಕ್ ಹೊಡೆಯಲು ಪ್ರಯತ್ನಿಸಿದ. ಅವನ ಶೂಗಳ ಶಬ್ದ ಆ ಇಡೀ ನಿರ್ಜನ ರಸ್ತೆಯಲ್ಲಿ ಹತ್ತು ಪಟ್ಟು ಜೋರಾಗಿ ಪ್ರತಿಧ್ವನಿಸುತ್ತಿತ್ತು. ಛೇ ಈ ಹಾಳಾದ ಬೈಕ್‌ಗೆ ಈಗಲೇ ಇದು ಕೆಡಬೇಕಿತ್ತಾ? ಎಂದು ಕಿರಿಕಿರಿ ಮಾಡಿಕೊಳ್ಳುತ್ತಾ, ಮಳೆಯಿಂದಾಗಿ ಹಣೆಯ ಮೇಲೆ ಸುರಿಯುತ್ತಿದ್ದ ನೀರನ್ನು ಒರೆಸಿಕೊಳ್ಳಲು ತಲೆ ಎತ್ತಿದವನೇ ಕಲ್ಲಾದಂತೆ ನಿಂತುಬಿಟ್ಟ. ಅವನ ಉಸಿರಾಟದ ಗತಿ ಸ್ತಬ್ಧವಾಯಿತು.
ದೂರದಲ್ಲಿ, ಸುಮಾರು ಐವತ್ತು ಅಡಿಗಳ ಅಂತರದಲ್ಲಿ, ಒಂದು ಹಳೆಯ ಬೀದಿ ದೀಪದ ಕೆಳಗೆ ಒಬ್ಬ ವ್ಯಕ್ತಿ ನಿಂತಿದ್ದ. ಅವನ ಎತ್ತರ ಕನಿಷ್ಠ ಏಳು ಅಡಿಗಿಂತಲೂ ಹೆಚ್ಚಿತ್ತು. ಅದು ಸಾಮಾನ್ಯ ಮನುಷ್ಯನ ಎತ್ತರವಲ್ಲ. ಅವನ ಮೈಕಟ್ಟು ಒಬ್ಬ ಮಲ್ಲಯುದ್ಧ ಪಟುವಿನಂತೆ ಬಲಿಷ್ಠವಾಗಿತ್ತು. ಅವನು ಧರಿಸಿದ್ದ ಬಿಳಿಯ ಹಳೆಯ ಕಾಲದ ಧೋತಿಯಂತಹ ಬಟ್ಟೆಯ ಮೇಲೆ ಕೆಂಪು ರಕ್ತದ ಕಲೆಗಳು ಹಸಿ ಹಸಿಯಾಗಿಯೇ ಇದ್ದವು. ಆ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಅವನ ತಲೆಯನ್ನು ಒಂದು ಹರಿದುಹೋದ ಬಟ್ಟೆಯಿಂದ ಸುತ್ತಲಾಗಿತ್ತು. ಆದರೆ ಆ ಕತ್ತಲಲ್ಲೂ ಅವನ ಹಣೆಯ ಮಧ್ಯಭಾಗದಲ್ಲಿ ಏನೋ ಒಂದು ತೀವ್ರವಾಗಿ ಹೊಳೆಯುತ್ತಿತ್ತು. ಅದು ನೈಸರ್ಗಿಕವಾದ ಬೆಳಕಲ್ಲ, ಅದು ಯಾವುದೋ ಪುರಾತನ ಮಣಿಯ ಕೆಂಪು ಕಾಂತಿಯಂತೆ ಇತ್ತು. ಆ ಬೆಳಕು ಕತ್ತಲನ್ನು ಸೀಳಿಕೊಂಡು ಆದರ್ಶ್‌ನ ಕಣ್ಣುಗಳನ್ನು ನೇರವಾಗಿ ಚುಚ್ಚುತ್ತಿತ್ತು.
ಆದರ್ಶ್‌ನ ಎದಬಡಿತ ಎಷ್ಟು ಜೋರಾಯಿತೆಂದರೆ, ಅವನಿಗೆ ತನ್ನ ಹೃದಯದ ಸದ್ದು ತನ್ನ ಕಿವಿಗೆ ಕೇಳಿಸುತ್ತಿತ್ತು. ಯಾರು ನೀವು? ಈ ಸಮಯದಲ್ಲಿ ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಧೈರ್ಯ ಮಾಡಿ ಕೂಗಿದ. ಆದರೆ ಅವನ ಧ್ವನಿ ಗಾಳಿಯಲ್ಲಿ ಲೀನವಾಗಿಹೋಯಿತು, ಯಾರೂ ಉತ್ತರಿಸಲಿಲ್ಲ. ಆ ವ್ಯಕ್ತಿ ಅಲುಗಾಡಲಿಲ್ಲ, ಕಲ್ಲಿನ ಪ್ರತಿಮೆಯಂತೆ ನಿಂತಿದ್ದ. ಆದರೆ ಅವನ ಸುತ್ತಲಿನ ಗಾಳಿ ಮಾತ್ರ ವಿಚಿತ್ರವಾಗಿ ಸುಂಟರಗಾಳಿಯಂತೆ ಸುತ್ತುತ್ತಿತ್ತು. ರಸ್ತೆಯ ಮೇಲಿದ್ದ ಒಣ ಎಲೆಗಳು ಆ ವ್ಯಕ್ತಿಯ ಕಾಲಿನ ಸುತ್ತ ಸುರುಳಿ ಸುತ್ತುತ್ತಾ ಮೇಲೆ ಏರುತ್ತಿದ್ದವು. ಆದರ್ಶ್ ತನ್ನ ಕಣ್ಣುಗಳನ್ನು ಉಜ್ಜಿಕೊಂಡು ಮತ್ತೊಮ್ಮೆ ನೋಡಿದ. ಅವನಿಗೆ ತನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ಆ ವ್ಯಕ್ತಿ ಈಗ ಕೇವಲ ಹತ್ತು ಅಡಿ ಹತ್ತಿರ ಬಂದಿದ್ದ ಅವನು ಹೆಜ್ಜೆ ಇಟ್ಟ ಸದ್ದೇ ಆಗಲಿಲ್ಲ. ಅವನು ನಡೆದಂತೆ ಕಾಣಲಿಲ್ಲ, ಬದಲಾಗಿ ಗಾಳಿಯಲ್ಲಿ ತೇಲಿ ಬಂದಂತೆ ಕಂಡಿತು. ಅವನ ಮೈಮೇಲಿದ್ದ ರಕ್ತಸಿಕ್ತ ಬಟ್ಟೆಯಿಂದ ಹನಿ ಹನಿ ರಕ್ತ ಕೆಳಗೆ ಬೀಳುತ್ತಿತ್ತು. ವಿಚಿತ್ರವೆಂದರೆ, ಆ ರಕ್ತ ನೆಲಕ್ಕೆ ಬಿದ್ದ ತಕ್ಷಣ ಆವಿಯಾಗಿ ಹೋಗುತ್ತಿತ್ತು ಮತ್ತು ಅಲ್ಲಿ ಒಂದು ರೀತಿಯ ಮಾಂಸ ಸುಟ್ಟ ವಾಸನೆ ಹರಡುತ್ತಿತ್ತು. ಆದರ್ಶ್‌ಗೆ ವಾಕರಿಕೆ ಬಂದಂತಾಯಿತು. ಇದು ಭ್ರಮೆಯೋ ಅಥವಾ ನನಸೋ? ನಾನು ಅತಿಯಾದ ಕೆಲಸದಿಂದ ಹುಚ್ಚನಾಗುತ್ತಿದ್ದೇನೆಯೇ? ಆದರ್ಶ್‌ಗೆ ತನ್ನ ಮೆದುಳೇ ಕೆಟ್ಟು ಹೋದಂತೆ ಅನ್ನಿಸಿತು. ಅಷ್ಟರಲ್ಲಿ ಆ ವ್ಯಕ್ತಿಯ ಕಡೆಯಿಂದ ಒಂದು ಗಂಭೀರವಾದ ಧ್ವನಿ ಕೇಳಿಸಿತು. ಅದು ಕಿವಿಗೆ ಕೇಳಿಸಿದ ಶಬ್ದವಲ್ಲ, ನೇರವಾಗಿ ಆದರ್ಶ್‌ನ ಮಿದುಳಿನ ಕೇಂದ್ರಕ್ಕೆ ಅಪ್ಪಳಿಸಿದ ಒಂದು ಶಕ್ತಿಶಾಲಿ ಕಂಪನ. ಸಮಯದ ಚಕ್ರ ಮತ್ತೆ ಮರಳುತ್ತಿದೆ ಐದು ಸಾವಿರ ವರ್ಷಗಳ ನನ್ನ ಈ ಸುಡುವ ನೋವಿಗೆ ನಿನ್ನ ಉಸಿರಿನ ಹಂಗಿದೆ. ನೀನು ಆಯ್ಕೆಯಾದವನು ಆದರ್ಶ್.
ಆದರ್ಶ್ ಭಯದ ತುತ್ತತುದಿಗೆ ತಲುಪಿದ. ಹಿಂದೆ ಸರಿಯುವಾಗ ಕಾಲಿಗೆ ಕಲ್ಲು ತಾಗಿ ಬೈಕ್‌ನ ಸಮೇತ ಕೆಳಗೆ ಬಿದ್ದ. ಅವನ ಕಣ್ಣುಗಳು ಆ ರಕ್ತಸಿಕ್ತ ವ್ಯಕ್ತಿಯ ಕಡೆಗೇ ಇದ್ದವು. ಆ ವ್ಯಕ್ತಿ ಮೆಲ್ಲನೆ ತನ್ನ ಬಲಗೈಯನ್ನು ಎತ್ತಿದ. ಅವನ ಕೈಯಲ್ಲಿ ಬೆರಳುಗಳಿರಲಿಲ್ಲ, ಬದಲಾಗಿ ಹಳೆಯ ಕಾಲದ ಗಧಾ ಯುದ್ಧ ಅಥವಾ ಖಡ್ಗದ ಯುದ್ಧದಲ್ಲಿ ಆದ ಆಳವಾದ ಗಾಯಗಳ ಗುರುತುಗಳಿದ್ದವು. ಆ ಕೈಗಳು ಸಾವಿರಾರು ವರ್ಷಗಳ ಇತಿಹಾಸದ ನೋವನ್ನು ಹೊತ್ತು ತಂದಂತೆ ಕಾಣುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ಭೀಕರವಾದ ಮಿಂಚು ಆಕಾಶದಲ್ಲಿ ಮೂಡಿತು. ಆ ಕ್ಷಣದ ಪ್ರಕಾಶಮಾನವಾದ ಬೆಳಕಿನಲ್ಲಿ ಆದರ್ಶ್ ನೋಡಿದ ಆ ವ್ಯಕ್ತಿಯ ಹಣೆಯ ಮಧ್ಯೆ ಮಣಿಯ ಜಾಗದಲ್ಲಿ ಒಂದು ದೊಡ್ಡ ರಂಧ್ರವಿತ್ತು. ಅದರಿಂದ ನಿರಂತರವಾಗಿ ಕೀವು ಮತ್ತು ರಕ್ತ ಸುರಿಯುತ್ತಿತ್ತು. ಆ ಮುಖವು ಅತ್ಯಂತ ಕಳೆಹೀನವಾಗಿತ್ತು, ಕಣ್ಣುಗಳು ಗುಳಿ ಬಿದ್ದಿದ್ದವು. ಪುರಾಣಗಳಲ್ಲಿ ಕೇಳಿದ್ದ, ಮಹಾಭಾರತದ ಕುರುಕ್ಷೇತ್ರ ಯುದ್ಧದ ನಂತರ ಶ್ರೀಕೃಷ್ಣನಿಂದ 'ಕಲ್ಪಾಂತದವರೆಗೆ ಮರಣವಿಲ್ಲದೆ ಅಲೆದಾಡು' ಎಂದು ಶಾಪಗ್ರಸ್ತನಾದ ಆ ದ್ರೋಣಪುತ್ರನ ಹೆಸರು ಆದರ್ಶ್‌ನ ಮೆದುಳಿನಲ್ಲಿ ಮಿಂಚಿನಂತೆ ಬಂತು.
ಅಶ್ವತ್ಥಾಮ? ಆದರ್ಶ್‌ನ ಬಾಯಿಂದ ಆ ಮಾತು ನಡುಗುತ್ತಾ ಹೊರಬಿದ್ದಿದ್ದೇ ತಡ, ಒಂದು ಜೋರಾದ ಗಾಳಿ ಬೀಸಿತು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಆ ವ್ಯಕ್ತಿ ಅಲ್ಲಿಂದ ಮಾಯವಾಗಿದ್ದ. ಸುತ್ತಲೂ ಮತ್ತೆ ವಾಹನಗಳ ಸದ್ದು ದೂರದಿಂದ ಕೇಳಿಸತೊಡಗಿತು. ನಿಂತುಹೋಗಿದ್ದ ಮಳೆಯ ಹನಿಗಳ ಸದ್ದು ಮರಳಿತು. ಆದರ್ಶ್ ಬೆವತು ಹೋಗಿದ್ದ, ಅವನ ಬಟ್ಟೆಗಳು ಮಳೆಯಲ್ಲಿ ನೆನೆದಿದ್ದರೂ ಅವನ ಮೈ ಜ್ವರ ಬಂದವನಂತೆ ಸುಡುತ್ತಿತ್ತು. ತನ್ನ ಬೈಕ್ ಹತ್ತಿರ ಹೋಗಿ ನೋಡಿದಾಗ ಅವನಿಗೆ ಇನ್ನೊಂದು ಆಘಾತ ಕಾಯುತ್ತಿತ್ತು. ಬೈಕ್‌ನ ಸೀಟಿನ ಮೇಲೆ ಹಸಿ ರಕ್ತದ ಒಂದು ಗೆರೆ ಎಳೆದಿತ್ತು. ಅದು ಕೇವಲ ರಕ್ತವಾಗಿರಲಿಲ್ಲ, ಅದು ಯಾವುದೋ ಒಂದು ಪ್ರಾಚೀನ ಸಂಸ್ಕೃತ ಅಥವಾ ಬ್ರಾಹ್ಮಿ ಲಿಪಿಯಂತೆ ಕಾಣುತ್ತಿತ್ತು. ಅದನ್ನು ನೋಡಿದ ಆದರ್ಶ್‌ಗೆ ತಲೆ ಸುತ್ತಿದಂತಾಯಿತು. ಅಂದು ರಾತ್ರಿ ಆದರ್ಶ್ ಹೇಗೆ ಮನೆಗೆ ಮರಳಿದ ಎಂಬುದು ಅವನಿಗೇ ನೆನಪಿರಲಿಲ್ಲ. ಕೈಕಾಲು ನಡುಗುತ್ತಿದ್ದವು. ತನ್ನ ಚಿಕ್ಕ ರೂಮಿನ ಬಾಗಿಲು ಹಾಕಿಕೊಂಡು ಮಲಗಲು ಪ್ರಯತ್ನಿಸಿದರೂ, ಆ ರಕ್ತಸಿಕ್ತ ಬಟ್ಟೆಯ ವ್ಯಕ್ತಿಯ ಭೀಕರ ಬಿಂಬ ಕಣ್ಣಮುಂದೆಯೇ ನರ್ತಿಸುತ್ತಿತ್ತು. ವಿಚಿತ್ರವೆಂದರೆ, ಅವನ ರೂಮಿನ ಒಳಗೂ ಅದೇ ಹಳೆಯ ಗಿಡಮೂಲಿಕೆಯ ಮತ್ತು ರಕ್ತದ ವಾಸನೆ ಬರುತ್ತಿತ್ತು. ಮನೆಯಲ್ಲಿದ್ದ ನಾಯಿ ಕಾರಣವಿಲ್ಲದೆ ಜೋರಾಗಿ ಬೊಗಳುತ್ತಿತ್ತು. ಅವನು ಕಿಟಕಿ ಕಡೆ ನೋಡಿದಾಗ ಗಾಜಿನ ಮೇಲೆ ಮಂಜು ಮುಸುಕಿದಂತೆ ಹಬೆ ಮೂಡಿತ್ತು. ಅಲ್ಲಿ ಬೆರಳಿನಿಂದ ಯಾರೋ ಬರೆದಂತೆ ಅಕ್ಷರಗಳು ಮೂಡಿದ್ದವು ಸತ್ಯವನ್ನು ಹುಡುಕಬೇಡ, ಅದು ನಿನ್ನನ್ನೇ ಹುಡುಕಿಕೊಂಡು ಬರುತ್ತದೆ.
ಆದರ್ಶ್‌ಗೆ ಈಗ ಅರ್ಥವಾಯಿತು, ಅಶ್ವತ್ಥಾಮ ಕೇವಲ ರಾತ್ರಿ ಮಾತ್ರ ಏಕೆ ಕಾಣಿಸಿಕೊಳ್ಳುತ್ತಾನೆ ಎಂಬುದು. ಬೆಳಕಿನಲ್ಲಿ ಸತ್ಯ ಇರುತ್ತದೆ, ಆದರೆ ಕತ್ತಲಿನಲ್ಲಿ ಮಾತ್ರ ಶಾಪಗಳು ಮತ್ತು ರಹಸ್ಯಗಳು ಜೀವ ತಳೆಯುತ್ತವೆ. ಅವನ ತಲೆಯಲ್ಲಿ ಸಾವಿರ ಪ್ರಶ್ನೆಗಳು ಕೊರೆಯುತ್ತಿದ್ದವು. ನಾನೊಬ್ಬ ಸಾಮಾನ್ಯ ಮನುಷ್ಯ ನನಗೂ ಆ ಪೌರಾಣಿಕ ಅಶ್ವತ್ಥಾಮನಿಗೂ ಏನು ಸಂಬಂಧ? ಅವನಿಗೆ ನನ್ನಿಂದ ಆಗಬೇಕಾದ ಆ 'ಉಪಯೋಗ'ವೇನು? ನನ್ನ ಹತ್ತಿರ ಬಂದವನು ನಿಜವಾದ ಅಶ್ವತ್ಥಾಮನೋ ಅಥವಾ ಅವನ ಆತ್ಮವೋ?
ಈ ಪ್ರಶ್ನೆಗಳು ಆದರ್ಶ್‌ನ ನಿದ್ದೆಯನ್ನು ಶಾಶ್ವತವಾಗಿ ಕಸಿದುಕೊಂಡಿದ್ದವು. ಬೆಳಗಿನ ಜಾವದ ಸುಳಿವಿರಲಿಲ್ಲ, ಆದರೆ ಆದರ್ಶ್‌ನ ಜೀವನದ ಕತ್ತಲೆ ಆಗಲೇ ಗಾಢವಾಗಿತ್ತು. ಅವನ ಕೈಯಲ್ಲಿದ್ದ ರಕ್ತದ ಕಲೆ ಒರೆಸಿದರೂ ಹೋಗುತ್ತಿರಲಿಲ್ಲ. ಇದು ಬರವಣಿಗೆಯಲ್ಲ, ಇದು ಒಂದು ಶಾಪದ ಆರಂಭವಾಗಿತ್ತು.