ನನ್ನ ಒಂದು ದಿನ ಗುಂಪಿನ ಗೆಳೆಯರೊಂದಿಗೆ
ಮುಂಜಾನೆಯ ಸವಿ ನಿದ್ದೆಯಲ್ಲಿದ್ದ ನನಗೆ, ಕಿಟಕಿಯ ಮುಖಾಂತರ ತೂರಿ ಬಂದ ಸೂರ್ಯನ ಕಿರಣಗಳು ನಿದ್ದೆಯಿಂದ ಎಚ್ಚರ ಮಾಡಿಸಿತು. ರಜಾ ದಿನವೆಂದು ನಿದ್ದೆಗು ತಿಳಿದು, ನಿದ್ದೆ ಬಾರದಾಯಿತು. ಪಕ್ಕದ ಮನೆಯ ಅನಸೂಯಮ್ಮನ್ನವರ ಮನೆಯಿಂದ ಟೇಪ್ ರೆಕಾರ್ಡ್ ನಲ್ಲಿ ಮುಕುಂದ ಕೃಷ್ನ ನ ಮೇಲೆ ಗಾಯಕಿ ಛಾಯ ಹಾಡಿರುವ "ರಾಧ ರಮಣ ಹರಿ ಬೋಲ್" ಎಂಬ ಸುಶ್ರಾವ್ಯ ಭಜನೆ ಕೇಳಿ ಬರುತಿತ್ತು. ಬೆಳಗಿನ ಪ್ರಶಾಂತ ವಾತಾವರಣದಲ್ಲಿ ವಾಕಿಂಗ್ ಆದರೂ ಹೋಗೊಣವೆಂದು ಹೊರಟೆ. ವಾಕಿಂಗ್ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆರೆದ ಮಡದಿ, ಇವತ್ತು ಸೂರ್ಯ ಯಾವ ದಿಕ್ಕಲ್ಲಿ ಹುಟ್ಟಿರುವನು ಎಂಬಂತ ವಿನೋದದ ನೋಟ ಬೀರಿದಳು. ಅವಳ ಆ ನೋಟದಿಂದ ತಪ್ಪಿಸಿಕೊಳ್ಳಲು ಸ್ನಾನಕೆಂದು ಹೊರಟೆ. ಸ್ನಾನ ಮುಗಿಸಿ ದೇವರ ಕೋಣೆಯಲ್ಲಿರುವ ಶಿವಶಂಕರನಿಗೂ, ಅವನ ಪತ್ನಿ ಉಮಾದೇವಿಗೂ, ಶಿವ ಕುಮಾರನಾದ ಗಣೇಶ ಮೂರ್ತಿಗೂ ನಮಿಸುತ್ತ ಸಂಧ್ಯ ವಂದನೆ ಮಾಡಳು ಕುಳಿತೆ. ಗಾಯತ್ರಿ ಮಂತ್ರ ಜಪಿಸಿ ಮುಗಿಸಲು, ಟೀ ರೆಡಿಯಾಗಿತ್ತು. ಭಾನುವಾರದಂದು ಪುರುಸೋತ್ತಿನಲ್ಲಿ ಪೇಪರು ಒದುತ್ತ ಮನೆಯ ಟೀ ಕುಡಿಯುವ ಆನಂದವೇ ಬೇರೆ. ಪೇಪರಲ್ಲಿ "ವಿಲಾಸ ಜೀವನದ ಮಲ್ಲ್ಯ ವಿದೇಶಕ್ಕೆ ಪರಾರಿ" ಎಂಬ ಶಿರ್ಷಿಕೆಯೇ ಮುಖಪುಟದ ಸುದ್ದಿಯಾಗಿತ್ತು. ಅದರ ಅಡಿಯಲ್ಲಿ "ಸದನದಲ್ಲಿ ನಿದ್ದೆ ಮಾಡುವ ರಾಜ್ಯದ ಮುಖ್ಯಮಂತ್ರಿಗೆ ಮಾಜಿ ಪ್ರಧಾನಮಂತ್ರಿ ಗೌಡರ ಸಂದೇಶ" ಎಂಬ ಸುದ್ದಿ ಇತ್ತು. ಕೊನೆ ಪುಟದಲ್ಲಿದ್ದ ಕ್ರಿಕೇಟ್ ಸುದ್ದಿ ಒದಿ ಭಾರತ ಪಾಕ್ ಕ್ರಿಕೇಟ್ ಪಂದ್ಯವಾದರೂ ನೋಡೋಣವೆಂದು ಟೀವಿ ಹಚ್ಚಿದರೆ, ಮಳೆ ಕಾರಣ ಪಂದ್ಯ ತಡವಾಗಿ ಪ್ರಾರಂಭ ವಾಗುವುದೆಂದು ಸಿದ್ದುವಿನ ವಿಶ್ಲೇಷಣೆ ಬರುತಿತ್ತು. ರೀಮೋಟ್ ಕೈಯಲ್ಲಿದ್ದಾಗ, ಚಾನಲ್ ಬದಲಾಯಿಸದಿದ್ದಾರೆ ಮನಸ್ಸಿಗೆ ಏನೋ ಕಿರಿ ಕಿರಿಯಾಗುವುದು ಸಾಮಾನ್ಯ. ಹಾಗೆಯೇ ಚಾನಲ್ ಬದಲಾಯಿಸಲು, "ರಾಜು ಬನ್ ಗಯ ಜಂಟಲ್ ಮ್ಯಾನ್" ಎಂಬ ಸಿನಿಮಾ ಬರುತಿತ್ತು. ನೋಡಿದ ಸಿನಿಮಾವೆಂದು ಮತ್ತೆ ಬದಲಾಯಿಸಿದಾಗ ಇನ್ನೊಂದು ಚಾನಲ್ ನಲ್ಲಿ " ಮೇರಿ ಜಂಗ್" ಎಂಬ ಮತ್ತೊಂದು ನೋಡಿದ ಸಿನಿಮಾವೇ ಬಂತು. ಮತ್ತೆ ಬದಲಾಯಿಸಲು ಟ್ರಾವೆಲ್ಸ್ ಚಾನಲ್ ನಲ್ಲಿ ರೋಮ್ ನ ಸೈಂಟ್ ಫಿಲೋಮಿನ ಚರ್ಚ್ ವಿಶೇಷತೆ ತೋರಿಸುತ್ತಿದ್ದರು.