ಬೆಂಗಳೂರು ಎಂದು ಪೂರ್ತಿಯಾಗಿ ನಿದ್ರಿಸದ ನಗರ. ದೂರದ ರಸ್ತೆಯಲ್ಲಿ ಯಾವುದೋ ಲಾರಿ ಚಲಿಸುವ ಸದ್ದು, ಆಗಾಗ ಕೇಳಿಸುವ ನಾಯಿಗಳ ಬೊಗಳಿಕೆ ಬಿಟ್ಟರೆ, ಆ ಬಡಾವಣೆಯಲ್ಲಿ ನೀರವ ಮೌನ ಆವರಿಸಿತ್ತು.
ತನ್ನ ಕೋಣೆಯಲ್ಲಿ ಶ್ರಾವ್ಯ ಗಾಢ ನಿದ್ರೆಯಲ್ಲಿದ್ದಳು. ಕಿಟಕಿಯ ಪರದೆಯ ಸಂದುಗಳಿಂದ ಬೀದಿ ದೀಪದ ಮಸುಕಾದ ಬೆಳಕು ಕೋಣೆಯೊಳಗೆ ನುಸುಳಿ, ನೆಲದ ಮೇಲೆ ವಿಚಿತ್ರವಾದ ನೆರಳುಗಳನ್ನು ಸೃಷ್ಟಿಸುತ್ತಿತ್ತು. ಪಕ್ಕದ ಮೆಜಿನ ಮೇಲಿದ್ದ ಡಿಜಿಟಲ್ ಗಡಿಯಾರದಲ್ಲಿ ಕೆಂಪು ಅಕ್ಷರಗಳು ತೋರುತ್ತಿದ್ದವು: 3:23.
ಇದ್ದಕಿದ್ದಂತೆ ಶ್ರಾವ್ಯಳಿಗೆ ಎಚ್ಚರವಾಯಿತು. ಆದರೆ, ಇದೊಂದು ಸಹಜವಾದ ಎಚ್ಚರವಾಗಿರಲಿಲ್ಲ.
ಅವಳ ಕಣ್ಣುರೆಪ್ಪೆಗಳು ಇನ್ನೂ ಮುಚ್ಚಿದ್ದವು. ಆದರೆ ಮನಸ್ಸು ಮಾತ್ರ ಥಟ್ಟನೆ ಸಂಪೂರ್ಣ ಎಚ್ಚರಗೊಂಡಿತ್ತು. ಎಷ್ಟರಮಟ್ಟಿಗೆಂದರೆ, ಕೋಣೆಯ ಫ್ಯಾನು ತಿರುಗುವ ಸದ್ದು, ಗೋಡೆ ಗಡಿಯಾರದ 'ಟಿಕ್-ಟಿಕ್' ಶಬ್ದ ಎಲ್ಲವೂ ಸ್ಪಷ್ಟವಾಗಿ ಕೇಳಿಸುತ್ತಿತ್ತು. "ಎದ್ದೇಳು ಶ್ರಾವ್ಯ" ಎಂದು ತನಗೆ ತಾನೇ ಆಜ್ಞೆ ಮಾಡಿಕೊಂಡಳು.
ಆದರೆ... ಒಡಲು ಕಲ್ಲಾದಂತಿತ್ತು!
ಕೈಬೆರಳುಗಳನ್ನು ಅಲ್ಲಾಡಿಸಲು ಪ್ರಯತ್ನಿಸಿದಳು, ಆಗಲಿಲ್ಲ. ಕಾಲುಗಳನ್ನು ಎತ್ತಲು ನೋಡಿದಳು, ಶಕ್ತಿಯೇ ಇಲ್ಲದಂತಾಗಿತ್ತು. ಯಾರೋ ತನ್ನ ಇಡೀ ದೇಹವನ್ನು ಹಗ್ಗದಲ್ಲಿ ಬಿಗಿದು ಕಟ್ಟಿ ಹಾಕಿದಂತೆ, ಅಥವಾ ಇಡೀ ಒಡಲಿಗೆ ಲೋಹದ ಹೊದಿಕೆ ಹೊದಿಸಿದಂತೆ ವಿಪರೀತ ಭಾರ! ಉಸಿರಾಡಲೂ ಕಷ್ಟವಾಗುತ್ತಿತ್ತು.
ಆತಂಕದ ಒಂದು ತಣ್ಣನೆ ಅಲೆ ಅವಳ ಬೆನ್ನುಹುರಿಯಲ್ಲಿ ಹರಿಯಿತು. ಮಸುಕಾದ ಕತ್ತಲೆಯಲ್ಲಿ, ಕೋಣೆಯ ಮೂಲೆಯಲ್ಲಿ... ಅಲ್ಲಿ ಯಾರೋ ನಿಂತಿದ್ದಂತೆ ಭಾಸವಾಯಿತು.
ಒಂದು ಕಪ್ಪು ಆಕೃತಿ. ಮನುಷ್ಯನಾ? ನೆರಳಾ? ತಿಳಿಯುತ್ತಿಲ್ಲ. ಆದರೆ ಅದು ತನ್ನನ್ನೇ ದಿಟ್ಟಿಸಿ ನೋಡುತ್ತಿದೆ ಎಂಬ ಅರಿವು ಅವಳಿಗಾಯಿತು. ಅಷ್ಟೇ ಅಲ್ಲ, ಕಿವಿಯ ಹತ್ತಿರ ಗಾಳಿಯಲ್ಲಿ ಪಿಸುಮಾತುಗಳು ಕೇಳಿಸಲು ಶುರುವಾದವು. ಅಸ್ಪಷ್ಟವಾದ ದನಿಗಳು... ಅರ್ಥವಾಗದ ಭಾಷೆ... ಅವಳ ಕಿವಿಯ ಹತ್ತಿರವೇ ಕೊರೆಯುವಂತೆ ವೇಗವಾಗಿ ಪಿಸುಗುಟ್ಟುತ್ತಿದ್ದವು.
ಶ್ರಾವ್ಯಳ ಹೃದಯ ಬಾಯಿಗೆ ಬರುವಂತೆ ಬಡಿದುಕೊಳ್ಳುತ್ತಿತ್ತು. ಕಿರುಚಲು ಬಾಯಿ ತೆರೆಯಲು ಪ್ರಯತ್ನಿಸಿದಳು. ಆದರೆ ಗಂಟಲಲ್ಲಿ ದನಿ ಸಿಕ್ಕಿಹಾಕಿಕೊಂಡಿತ್ತು. ನಾಲಿಗೆ ಹೊರಳುತ್ತಿಲ್ಲ.
"ಇಲ್ಲ... ಇದು ನಿಜವಲ್ಲ... ಎದ್ದೇಳು... ಎದ್ದೇಳು!" ಎಂದು ಮನಸ್ಸಿನಲ್ಲೇ ಒದ್ದಾಡಿದಳು.
ತನ್ನೆಲ್ಲಾ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಒಗ್ಗೂಡಿಸಿ, ಕೇವಲ ತನ್ನ, ಬಲಗೈ ಕಿರುಬೆರಳನ್ನು ಅಲುಗಾಡಿಸಲು ಪ್ರಯತ್ನಿಸಿದಳು
ಮೊದಲ ಸಾರಿ ಆಗಲಿಲ್ಲ ಎರಡನೇ ಬಾರಿಯೂ ಆಗಲಿಲ್ಲ ಮೂರನೇ ಬಾರಿ... ಯಶಸ್ವಿ!
ಕಿರುಬೆರಳು ಅಲುಗಾಡಿಸುತ್ತಿದ್ದಂತೆಯೇ... ಲೋಹದ ಹೊದಿಕೆ ಮಾಯವಾಯಿತು...
ಅವಳು ಬಲಕ್ಕೆ ತಿರುಗಿದಳು..
ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತಾ, ಬೆವತು ಹೋಗಿದ್ದ ಶ್ರಾವ್ಯ ಹಾಸಿಗೆಯ ಮೇಲೆ ಎದ್ದು ಕುಳಿತಳು. ಆ ಅದೃಶ್ಯ ಸರಪಳಿ ಕಳಚಿಕೊಂಡಿತ್ತು. ತಕ್ಷಣ ಪಕ್ಕದಲ್ಲಿದ್ದ ಸ್ವಿಚ್ ಒತ್ತಿದಳು. ಕೋಣೆ ಬೆಳಗಿತು.
ಮೂಲೆಯಲ್ಲಿ ನೋಡಿದಳು. ಅಲ್ಲಿ ಯಾರೂ ಇರಲಿಲ್ಲ. ಕೇವಲ ಬಟ್ಟೆ ನೇತು ಹಾಕುವ ಸ್ಟ್ಯಾಂಡ್ ಮತ್ತು ಅದರ ಮೇಲಿದ್ದ ಕೋಟ್ ಅಷ್ಟೇ. ಪಿಸುಮಾತುಗಳೂ ಮಾಯವಾಗಿದ್ದವು.
ಎದೆಯ ಬಡಿತವನ್ನು ಹತೋಟಿಗೆ ತಂದುಕೊಳ್ಳುತ್ತಾ, . ಅವಳೊಳಗಿನ ವೈದ್ಯಕೀಯ ವಿದ್ಯಾರ್ಥಿ ಈಗ ಜಾಗೃತಳಾದಳು.
" ಇದು ದೆವ್ವವಲ್ಲ. ಇದು ಕೇವಲ 'ನಿದ್ರಾ ಪಾರ್ಶ್ವವಾಯು (Sleep Paralysis)," ಎಂದು ತನಗೆ ತಾನೇ ಜೋರಾಗಿ ಹೇಳಿಕೊಂಡಳು. "ನನ್ನ ಮನಸ್ಸು ಎಚ್ಚರವಾಗಿದೆ, ಆದರೆ ಸ್ನಾಯುಗಳು ಇನ್ನೂ REM ನಿದ್ರೆಯಲ್ಲಿದ್ದವು (Rapid Eye Movement sleep). ಆ ಕಪ್ಪು ಆಕೃತಿ, ಆ ಪಿಸುಮಾತು... ಎಲ್ಲವೂ ನನ್ನ ಮನಸ್ಸು ಸೃಷ್ಟಿಸಿದ ಭ್ರಮೆ (Hallucination)."
ಒಂದು ಲೋಟ ನೀರು ಕುಡಿದು, ಹಾಸಿಗೆಯ ಪಕ್ಕದ ಡ್ರಾಯರ್‌ನಿಂದ ತನ್ನ ರಹಸ್ಯ ನೋಟ್‌ಬುಕ್ ತೆಗೆದಳು. ಪೆನ್ನು ತೆಗೆದುಕೊಂಡು ನಡುಗುವ ಕೈಯಲ್ಲೇ ಬರೆದಳು:
> ದಿನಾಂಕ: ಅಕ್ಟೋಬರ್ 12
> ಸಮಯ: 3:23 AM
> ಘಟನೆ: ನಿದ್ರಾವಸ್ಥೆಯ ಪಾರ್ಶ್ವವಾಯು (Sleep Paralysis).
> ವಿವರಣೆ: ಹೈಪ್ನಾಗೋಗಿಕ್ ಭ್ರಮೆಗಳು (Hypnagogic hallucinations). ಇದು ಸಂಪೂರ್ಣವಾಗಿ ವೈದ್ಯಕೀಯವಾಗಿ ವಿವರಿಸಬಹುದಾದ ಘಟನೆ. ಭಯಪಡುವ ಅಗತ್ಯವಿಲ್ಲ.
ಪುಸ್ತಕವನ್ನು ಮುಚ್ಚಿಟ್ಟಳು. ತಾನು ಭಯವನ್ನು ತರ್ಕದಿಂದ ಗೆದ್ದಿದ್ದೇನೆ ಎಂದು ಸಮಾಧಾನಪಟ್ಟುಕೊಂಡು, ಲೈಟ್ ಆಫ್ ಮಾಡಿ ಮತ್ತೆ ಹೊದಿಕೆ ಎಳೆದುಕೊಂಡಳು. ಆದರೆ, ಆ ಪಿಸುಮಾತುಗಳ ಸದ್ದು ಇನ್ನೂ ಅವಳ ಮನಃಪಟಲದಲ್ಲಿ ಸುಳಿದಾಡುತ್ತಿದ್ದವು .
ಮರುದಿನ ಬೆಳಿಗ್ಗೆ, ರಾತ್ರಿಯ ಕತ್ತಲೆ ಮತ್ತು ಆ ಭಯಾನಕ ಅನುಭವಗಳು ಹಗಲಿನ ಪ್ರಖರ ಬೆಳಕಿನಲ್ಲಿ ಕರಗಿಹೋಗಿದ್ದವು. ಶ್ರಾವ್ಯ ಎಂದಿನಂತೆ ತನ್ನ ಮೆಡಿಕಲ್ ಕಾಲೇಜಿನ ತರಗತಿಯಲ್ಲಿ ಕುಳಿತಿದ್ದಳು. ಕೈಯಲ್ಲಿ ಪೆನ್ನು, ಎದುರಿಗೆ ತೆರೆದಿಟ್ಟ ನೋಟ್ಸ್ ಪುಸ್ತಕ.
ಅದು ನ್ಯೂರಾಲಜಿ (ನರವಿಜ್ಞಾನ) ಕ್ಲಾಸ್. ಪ್ರೊಫೆಸರ್ ಶಾಸ್ತ್ರಿಗಳು ಗಂಭೀರವಾಗಿ ತರಗತಿಯೊಳಗೆ ಬಂದರು. ಬೋರ್ಡ್ ಮೇಲೆ ದೊಡ್ಡ ಅಕ್ಷರಗಳಲ್ಲಿ ಇಂದಿನ ಪಾಠದ ವಿಷಯವನ್ನು ಬರೆದರು: "Sleep Disorders" (ನಿದ್ರೆಯ ಕಾಯಿಲೆಗಳು).
ಶ್ರಾವ್ಯ ಆಸಕ್ತಿಯಿಂದ ನೇರವಾಗಿ ಕುಳಿತಳು. ಪ್ರೊಫೆಸರ್ ಪಾಠ ಮುಂದುವರಿಸಿದರು.
"ವಿದ್ಯಾರ್ಥಿಗಳೇ, ನಿದ್ರೆಯ ಹಂತಗಳಲ್ಲಿ ವ್ಯತ್ಯಾಸವಾದಾಗ ಮಿದುಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಬಹಳ ಕುತೂಹಲಕಾರಿ. ಅದರಲ್ಲಿ ಒಂದು ಮುಖ್ಯವಾದ ಸ್ಥಿತಿ ಎಂದರೆ—ಸ್ಲೀಪ್ ಪ್ಯಾರಾಲಿಸಿಸ್."
ಆ ಪದವನ್ನು ಕೇಳುತ್ತಿದ್ದಂತೆ ಶ್ರಾವ್ಯಳಿಗೆ ಮೈ ಜುಮ್ ಎಂದಿತು ಒಂದು ಕ್ಷಣ. ಎಂತಹ ಕಾಕತಾಳೀಯ! ನಿನ್ನೆ ರಾತ್ರಿಯಷ್ಟೇ ತಾನು ಅನುಭವಿಸಿದ ವಿಷಯವನ್ನೇ ಇಂದು ಪ್ರೊಫೆಸರ್ ಪಾಠ ಮಾಡುತ್ತಿದ್ದಾರೆ.
ಪ್ರೊಫೆಸರ್ ವಿವರಿಸುತ್ತಾ ಹೋದರು: "ಈ ಸ್ಥಿತಿಯಲ್ಲಿ, ರೋಗಿಯ ಮನಸ್ಸು ಎಚ್ಚರವಾಗಿರುತ್ತದೆ, ಆದರೆ ದೇಹವು ಸ್ನಾಯುಗಳ ನಿಯಂತ್ರಣವನ್ನು ಮರಳಿ ಪಡೆದಿರುವುದಿಲ್ಲ (Muscle Atonia). ರೋಗಿಗೆ ಎದೆಯ ಮೇಲೆ ವಿಪರೀತ ಭಾರವಾದ ಅನುಭವವಾಗುತ್ತದೆ. ಅಷ್ಟೇ ಅಲ್ಲ, ಮೆದುಳಿನ ಭಯದ ಕೇಂದ್ರವಾದ 'ಅಮಿಗ್ಡಾಲ' (Amygdala) ಅತಿಯಾಗಿ ಕೆಲಸ ಮಾಡುವುದರಿಂದ, ಕೋಣೆಯಲ್ಲಿ ಯಾರೋ ಅಪರಿಚಿತರು ಅಥವಾ ಕಪ್ಪು ಆಕೃತಿಗಳು ಇದ್ದಂತೆ ಭಾಸವಾಗುತ್ತದೆ."
ಈ ಮಾತುಗಳನ್ನು ಕೇಳಿ ಶ್ರಾವ್ಯ ದೀರ್ಘವಾದ ನಿಟ್ಟುಸಿರು ಬಿಟ್ಟಳು. ಅವಳ ಮನಸ್ಸಿಗೆ ಭಾರೀ ಸಮಾಧಾನವಾಯಿತು.
"ಹೌದು, ನಿನ್ನೆ ಆಗಿದ್ದು ಇದೇ," ಎಂದು ಮನಸ್ಸಲ್ಲೇ ಅಂದುಕೊಂಡಳು. "ಆ ಕಪ್ಪು ಆಕೃತಿ, ಆ ಪಿಸುಮಾತು... ಅದೆಲ್ಲವೂ ನಿಜವಲ್ಲ. ಕೇವಲ ನನ್ನ ಮೆದುಳಿನ ನ್ಯೂರೋಟ್ರಾನ್ಸ್‌ಮೀಟರ್‌ಗಳ (Neurotransmitters) ಗೊಂದಲವಷ್ಟೇ. ನನಗೆ ಯಾವುದೇ ಹುಚ್ಚು ಹಿಡಿದಿಲ್ಲ, ನಾನೇನೂ ಅಸಹಜವಾದದ್ದನ್ನು ನೋಡಿಲ್ಲ."
ತರಗತಿ ಮುಗಿದ ಮೇಲೆ, ಅವಳ ತರ್ಕ ಮತ್ತು ವಿಜ್ಞಾನದ ಮೇಲಿನ ನಂಬಿಕೆ ಇನ್ನೂ ಗಟ್ಟಿಯಾಯಿತು. ತನ್ನ ಅನುಭವಕ್ಕೆ ಒಂದು ಪಕ್ಕಾ ವೈಜ್ಞಾನಿಕ ಹೆಸರಿದೆ ಎಂಬುದು ಅವಳಿಗೆ ಧೈರ್ಯ ತಂದುಕೊಟ್ಟಿತು.
ಮುಂದಿನ ಕೆಲವು ದಿನಗಳು ಅವಳು ತನ್ನನ್ನು ತಾನು ಸಂಪೂರ್ಣವಾಗಿ ಓದಿನಲ್ಲಿ ಮುಳುಗಿಸಿಕೊಂಡಳು. ಲೈಬ್ರರಿಯ ದಪ್ಪ ದಪ್ಪ ಪುಸ್ತಕಗಳೇ ಅವಳ ಪ್ರಪಂಚವಾಯಿತು. ಖಾಲಿ ಕುಳಿತರೆ ಎಲ್ಲಿ ಆ ಆಲೋಚನೆಗಳು ಮತ್ತೆ ಬರುತ್ತವೆಯೋ ಎಂಬ ಭಯದಿಂದ, ಅವಳು ತನ್ನ ಮಿದುಳಿಗೆ ಒಂದು ಕ್ಷಣವೂ ಬಿಡುವು ಕೊಡಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಕೇವಲ ಓದು, ಓದು, ಓದು.
ವಿಜ್ಞಾನವೇ ಸತ್ಯ, ಮಿಕ್ಕಿದ್ದೆಲ್ಲವೂ ಭ್ರಮೆ ಎಂಬ ಕೋಟೆಯನ್ನು ತನ್ನ ಸುತ್ತಲೂ ಕಟ್ಟಿಕೊಂಡು ಅವಳು ಸುರಕ್ಷಿತವಾಗಿದ್ದಳು... ಸದ್ಯಕ್ಕೆ.
---
ಕೆಲವು ದಿನಗಳು ಉರುಳಿದ್ದವು.
ಅಂದು ಸಂಜೆ ಕಾಲೇಜಿನ ಲೈಬ್ರರಿಯಲ್ಲಿ ಎಂದಿನಂತೆ ನೀರವ ಮೌನವಿತ್ತು. ಪರೀಕ್ಷೆ ಹತ್ತಿರ ಬರುತ್ತಿದ್ದರಿಂದ ಲೈಬ್ರರಿ ತುಂಬಿ ತುಳುಕುತ್ತಿತ್ತು. ಹಳೆಯ ಪುಸ್ತಕಗಳ ವಾಸನೆ ಮತ್ತು ಫ್ಯಾನುಗಳ ಸದ್ದು ಬಿಟ್ಟರೆ ಅಲ್ಲಿ ಬೇರೇನೂ ಕೇಳಿಸುತ್ತಿರಲಿಲ್ಲ.
ಶ್ರಾವ್ಯ ಟೇಬಲ್ ಒಂದರ ಮೂಲೆಯಲ್ಲಿ ಕುಳಿತು, ತನ್ನ ದೊಡ್ಡ ಅನ್ಯಾಟಮಿ (Anatomy) ಪುಸ್ತಕದಲ್ಲಿ ಮುಳುಗಿಹೋಗಿದ್ದಳು. ಅವಳ ಏಕಾಗ್ರತೆ ಎಷ್ಟಿತ್ತೆಂದರೆ, ಸುತ್ತಮುತ್ತಲಿನ ಪ್ರಪಂಚವೇ ಅವಳಿಗೆ ಮರೆತುಹೋಗಿತ್ತು.
ಅಚಾನಕ್ಕಾಗಿ... ವಾತಾವರಣ ಬದಲಾದಂತೆ ಅನ್ನಿಸಿತು.
ಅವಳ ಕಿವಿಯ ತೀರಾ ಹತ್ತಿರ, ಕುತ್ತಿಗೆಯ ಹಿಂಭಾಗದಲ್ಲಿ ಒಂದು ಬಿಸಿ ಉಸಿರಿನ ಸ್ಪರ್ಶವಾಯಿತು. ಕೂಡಲೇ, ಒಂದು ಗಂಭೀರವಾದ ಗಂಡಸಿನ ದನಿ ಅವಳ ಕಿವಿಯಲ್ಲಿ ಅನುರಣಿಸಿತು. ಅದು ಅಸ್ಪಷ್ಟವಾಗಿರಲಿಲ್ಲ. ಯಾರೋ ಅವಳ ಪಕ್ಕದಲ್ಲೇ ನಿಂತು, ಏನನ್ನೋ ಬಹಳ ತುರ್ತಾಗಿ, ಆಜ್ಞಾಪಿಸುವ ಧಾಟಿಯಲ್ಲಿ ಹೇಳುತ್ತಿರುವಂತಿತ್ತು.
ಶ್ರಾವ್ಯ ಗಕ್ಕನೆ ತಲೆ ಎತ್ತಿದಳು.
ಎದುರಿಗೆ ಕಂಡ ದೃಶ್ಯ ಅವಳ ಎದೆಬಡಿತವನ್ನೇ ನಿಲ್ಲಿಸುವಂತಿತ್ತು.
ಸ್ವಲ್ಪ ದೂರದಲ್ಲಿ, ಎರಡು ಪುಸ್ತಕದ ಕಪಾಟುಗಳ ನಡುವೆ, ಒಬ್ಬ ವ್ಯಕ್ತಿ ನಿಂತಿದ್ದನು. ಅವನು ಖಂಡಿತವಾಗಿಯೂ ಈ ಕಾಲೇಜಿನ ವಿದ್ಯಾರ್ಥಿಯಾಗಿರಲಿಲ್ಲ. ಆತ ಹಳೆಯ ಕಾಲದ ಸಾಂಪ್ರದಾಯಿಕ ಉಡುಪನ್ನು—ಬಿಳಿಯ ಪಂಚೆ ಮತ್ತು ಶಲ್ಯವನ್ನು ಧರಿಸಿದ್ದನು. ಮುಖದಲ್ಲಿ ಯಾವುದೋ ಗಂಭೀರತೆ ಇತ್ತು.
ಆದರೆ, ಅತ್ಯಂತ ಭಯಾನಕ ವಿಷಯವೆಂದರೆ... ಆತ ರಕ್ತ ಮಾಂಸ ಕೂಡಿದ ಮನುಷ್ಯನಂತೆ ಕಾಣುತ್ತಿರಲಿಲ್ಲ!
ಅವನು ಪಾರದರ್ಶಕವಾಗಿದ್ದನು (Translucent). ನೀರಿನಲ್ಲಿ ಬಿಂಬ ಕಂಡಂತೆ, ಅಥವಾ ತೆಳುವಾದ ಹೊಗೆಯಂತೆ ಇದ್ದನು. ಅವನ ದೇಹದ ಹಿಂದಿದ್ದ ಪುಸ್ತಕಗಳ ಸಾಲು, ಅವನ ಮೂಲಕ ಮಸುಕಾಗಿ ಕಾಣಿಸುತ್ತಿತ್ತು.
ಲೈಬ್ರರಿಯಲ್ಲಿ ನೂರಾರು ಜನರಿದ್ದರೂ, ಆ ಆಕೃತಿ ಮಾತ್ರ ನೇರವಾಗಿ ಶ್ರಾವ್ಯಳನ್ನೇ ಕಣ್ಣು ಮಿಟುಕಿಸದೆ ದಿಟ್ಟಿಸುತ್ತಿತ್ತು.
"ಇದು ಸಾಧ್ಯವಿಲ್ಲ... ನಾನು ಓದಿ ಓದಿ ಸುಸ್ತಾಗಿದ್ದೇನೆ..." ಎಂದುಕೊಳ್ಳುತ್ತಾ ಶ್ರಾವ್ಯ ಜೋರಾಗಿ ತನ್ನ ಕಣ್ಣುಗಳನ್ನು ಉಜ್ಜಿಕೊಂಡಳು. ಮತ್ತೆ ಕಣ್ಣು ತೆರೆದು ನೋಡಿದಳು. ಆ ಆಕೃತಿ ಇನ್ನೂ ಅಲ್ಲೇ ಇತ್ತು! ಅದು ಅವಳ ಕಡೆಗೆ ಒಂದು ಹೆಜ್ಜೆ ಮುಂದಿಟ್ಟಂತೆ ಭಾಸವಾಯಿತು.
"ಹೇಯ್ ಶ್ರಾವ್ಯ!"
ಧಿಡೀರಣೆ ಯಾರೋ ಅವಳ ಹೆಗಲ ಮೇಲೆ ಕೈ ಇಟ್ಟರು.
ಶ್ರಾವ್ಯ ಬೆಚ್ಚಿಬಿದ್ದು, ಕುರ್ಚಿಯಿಂದ ಅರ್ಧ ಎದ್ದುಬಿಟ್ಟಳು. ತಿರುಗಿ ನೋಡಿದರೆ, ಅದು ಅವಳ ಸಹಪಾಠಿ ಸ್ನೇಹ.
"ಏನಾಯ್ತೇ?" ಸ್ನೇಹ ಗಾಬರಿಯಿಂದ ಕೇಳಿದಳು.
ಶ್ರಾವ್ಯ ತಕ್ಷಣ ಮತ್ತೆ ಎದುರಿಗೆ ತಿರುಗಿ ನೋಡಿದಳು. ಆದರೆ... ಆ ಕಪಾಟುಗಳ ನಡುವೆ ಈಗ ಯಾರೂ ಇರಲಿಲ್ಲ. ಆ ಪಾರದರ್ಶಕ ವ್ಯಕ್ತಿ ಗಾಳಿಯಲ್ಲಿ ಕರಗಿ ಹೋಗಿದ್ದನು. ಕೇವಲ ಖಾಲಿ ಜಾಗವಿತ್ತು.
ಸ್ನೇಹ ಅವಳನ್ನೇ ವಿಚಿತ್ರವಾಗಿ ನೋಡುತ್ತಾ ಕೇಳಿದಳು, "ಏನ್ ಅಯ್ತೆ? ಯಾಕೆ ದೆವ್ವ ನೋಡಿದವಳ ತರಹ ಕಣ್ಣು ಬಿಟ್ಟುಕೊಂಡು ಆ ಖಾಲಿ ಜಾಗ ನೋಡ್ತಿದ್ದೀಯಾ? ಅಲ್ಲಿ ಯಾರೂ ಇಲ್ಲ ಕಣೇ."
ಶ್ರಾವ್ಯಳಿಗೆ ಬಾಯಾರಿದಂತಾಯಿತು. "ಏ... ಏನಿಲ್ಲ. ಸುಮ್ಮನೆ ಯೋಚನೆ ಮಾಡ್ತಿದ್ದೆ," ಎಂದು ತೊದಲುತ್ತಾ ಉತ್ತರಿಸಿದಳು. ಆದರೆ ಅವಳ ಕೈಗಳು ಇನ್ನೂ ನಡುಗುತ್ತಿದ್ದವು.
ಭಾಗ 4: ಆಂತರಿಕ ಸಂಘರ್ಷ ಮತ್ತು ಒಂಟಿತನ
ಲೈಬ್ರರಿಯ ಎಸಿ (AC) ವಾತಾವರಣದಿಂದ ಹೊರಬಂದು, ಶ್ರಾವ್ಯ ಹೊರಗಿನ ಕಾಂಕ್ರೀಟ್ ಮೆಟ್ಟಿಲುಗಳ ಮೇಲೆ ಕುಸಿದು ಕುಳಿತಳು. ಸಂಜೆಯ ತಂಪಾದ ಗಾಳಿ ಬೀಸುತ್ತಿದ್ದರೂ, ಅವಳ ಹಣೆ ಬೆವರುತ್ತಲೇ ಇತ್ತು.
ಅವಳ ತರ್ಕಬದ್ಧವಾದ ಮನಸ್ಸು ಈಗ ಗೊಂದಲದ ಗೂಡಾಗಿತ್ತು.
"ಆ ದಿನ ರಾತ್ರಿ ಆಗಿದ್ದು 'ಸ್ಲೀಪ್ ಪ್ಯಾರಾಲಿಸಿಸ್' ಎಂದು ಒಪ್ಪಿಕೊಳ್ಳಬಹುದು. ಅದಕ್ಕೆ ವೈಜ್ಞಾನಿಕ ಕಾರಣವಿತ್ತು. ಆದರೆ ಈಗ?" ಅವಳು ತನಗೆ ತಾನೇ ಪ್ರಶ್ನೆ ಹಾಕಿಕೊಂಡಳು. "ನಾನು ನಿದ್ರಿಸುತ್ತಿರಲಿಲ್ಲ. ನಾನು ಸಂಪೂರ್ಣ ಎಚ್ಚರವಾಗಿದ್ದೆ (Wide awake). ನನ್ನ ಸುತ್ತಲೂ ಜನರಿದ್ದರು, ಬೆಳಕಿತ್ತು. ಆದರೂ ಆ ಆಕೃತಿ ನನಗೆ ಮಾತ್ರ ಹೇಗೆ ಕಾಣಿಸಿತು?"
ವಿಜ್ಞಾನದ ಯಾವ ಪುಸ್ತಕದಲ್ಲೂ ಇದಕ್ಕೆ ಉತ್ತರವಿಲ್ಲ ಎಂಬ ಸತ್ಯ ಅವಳಿಗೆ ಅರಿವಾಗುತ್ತಿದ್ದಂತೆ ಭಯ ಹೆಚ್ಚಾಯಿತು.
ಅಷ್ಟರಲ್ಲಿ ಅವಳ ಬ್ಯಾಗಿನಲ್ಲಿದ್ದ ಫೋನ್ ಕಂಪಿಸಲು (vibrate) ಶುರುವಾಯಿತು. ಅವಳ ಆಲೋಚನೆಗಳಿಗೆ ಬ್ರೇಕ್ ಬಿತ್ತು.
ಫೋನ್ ತೆಗೆದು ನೋಡಿದಳು. ಸ್ಕ್ರೀನ್ ಮೇಲೆ 'ಅಪ್ಪ' ಎಂಬ ಹೆಸರು ಮಿನುಗುತ್ತಿತ್ತು.
ಸಾಮಾನ್ಯವಾಗಿದ್ದರೆ ಒಂದೇ ರಿಂಗ್‌ಗೆ ರಿಸೀವ್ ಮಾಡುತ್ತಿದ್ದಳು. ಆದರೆ ಇಂದು ಆ ಹಸಿರು ಬಟನ್ ಒತ್ತುವ ಧೈರ್ಯ ಅವಳಿಗಿರಲಿಲ್ಲ. ಫೋನ್ ರಿಂಗ್ ಆಗಿ ತಾನಾಗಿಯೇ ಕಟ್ ಆಯಿತು.
ಮರುಕ್ಷಣವೇ ಒಂದು 'ವಾಯ್ಸ್ ಮೆಸೇಜ್' (Voice Message) ಬಂತು. ನಡುಗುವ ಬೆರಳಿನಿಂದ ಅದನ್ನು ಪ್ಲೇ ಮಾಡಿದಳು. ಫೋನಿನ ಸ್ಪೀಕರ್ ನಿಂದ ಅಪ್ಪನ ಗಟ್ಟಿ ಮತ್ತು ವಿಶ್ವಾಸಭರಿತ ಧ್ವನಿ ಕೇಳಿಸಿತು:
"ಶ್ರಾವ್ಯ, ಫೋನ್ ಎತ್ತುತ್ತಿಲ್ಲ? ಓದಿನಲ್ಲಿ ತುಂಬಾ ಬ್ಯುಸಿ ಇರಬೇಕು. ಒಳ್ಳೆಯದು. ಆದರೆ ನೆನಪಿಡು ಮಗಳೇ, 'ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸಿರುತ್ತದೆ'. ಸರಿಯಾಗಿ ಊಟ ಮಾಡು, ಹೊತ್ತಿಗೆ ಸರಿಯಾಗಿ ನಿದ್ರಿಸು. ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಯಾವುದೇ ಅನಾವಶ್ಯಕ ಆಲೋಚನೆಗಳು ಬರುವುದಿಲ್ಲ..."
ಅಪ್ಪನ ಮಾತುಗಳನ್ನು ಕೇಳಿ ಶ್ರಾವ್ಯಳ ಕಣ್ಣಲ್ಲಿ ನೀರು ತುಂಬಿತು.
ಅವಳಿಗೆ ಈಗ ಯಾರದ್ದಾದರೂ ಜೊತೆ, ಮುಖ್ಯವಾಗಿ ಅಪ್ಪನ ಜೊತೆ ಈ ವಿಷಯವನ್ನು ಹಂಚಿಕೊಳ್ಳಬೇಕು ಅನ್ನಿಸುತ್ತಿತ್ತು. "ಅಪ್ಪಾ, ನನಗೆ ಭಯವಾಗುತ್ತಿದೆ, ನನಗೆ ವಿಚಿತ್ರ ಆಕೃತಿಗಳು ಕಾಣಿಸುತ್ತಿವೆ" ಎಂದು ಅತ್ತುಬಿಡಬೇಕು ಅನಿಸಿತು.
ಆದರೆ... ಅವಳು ಹಾಗೆ ಮಾಡಲಿಲ್ಲ. ಫೋನ್ ಸ್ವಿಚ್ ಆಫ್ ಮಾಡಿ ಬ್ಯಾಗಿನೊಳಗೆ ಹಾಕಿದಳು.
ಏಕೆಂದರೆ ಅವಳಿಗೆ ಗೊತ್ತಿತ್ತು—ತನ್ನ ತಂದೆ ಒಬ್ಬ ಪಕ್ಕಾ ವೈಜ್ಞಾನಿಕ ಮನೋಭಾವದ ಮನುಷ್ಯ. ಅವರ ದೃಷ್ಟಿಯಲ್ಲಿ ದೆವ್ವ, ಆತ್ಮ, ಅತೀಂದ್ರಿಯ ಶಕ್ತಿಗಳೆಲ್ಲವೂ "ದುರ್ಬಲ ಮನಸ್ಸಿನವರ ಲಕ್ಷಣಗಳು" ಅಥವಾ "ಮೂಢನಂಬಿಕೆ".
"ಒಂದು ವೇಳೆ ನಾನು ಅವರಿಗೆ ಸತ್ಯ ಹೇಳಿದರೆ, ಅವರು ನನ್ನನ್ನು ಹುಚ್ಚಿ ಎಂದು ಭಾವಿಸಬಹುದು ಅಥವಾ ನಾನು ಮಾನಸಿಕವಾಗಿ ಕುಸಿದುಹೋಗಿದ್ದೇನೆ ಎಂದು ಅಂದುಕೊಳ್ಳಬಹುದು," ಎಂಬ ಭಯ ಅವಳನ್ನು ಆವರಿಸಿತು. ತಾನು ಇಷ್ಟು ವರ್ಷ ನಂಬಿಕೊಂಡು ಬಂದ ವಿಜ್ಞಾನ ಮತ್ತು ಅಪ್ಪನ ನಂಬಿಕೆ—ಎರಡನ್ನೂ ಉಳಿಸಿಕೊಳ್ಳಲು ಅವಳು ಮೌನವಾಗಿರಲು ನಿರ್ಧರಿಸಿದಳು.
ಸುತ್ತಲೂ ನೂರಾರು ಜನರಿದ್ದರೂ, ಆ ದೊಡ್ಡ ಕಾಲೇಜು ಕ್ಯಾಂಪಸ್‌ನಲ್ಲಿ ಶ್ರಾವ್ಯಳಿಗೆ ತಾನು ತೀರಾ ಒಬ್ಬಂಟಿ ಎಂದು ಭಾಸವಾಯಿತು.
.
---
ಮನಸ್ಸನ್ನು ಕಲ್ಲು ಮಾಡಿಕೊಂಡು, ಶ್ರಾವ್ಯ ಮತ್ತೆ ಲೈಬ್ರರಿಯ ಅದೇ ಜಾಗಕ್ಕೆ ಬಂದು ಕುಳಿತಳು. ಓದಲೇಬೇಕು, ಪರೀಕ್ಷೆ ಹತ್ತಿರವಿದೆ ಎಂಬ ಹಠ ಅವಳದು.
ಆದರೆ, ಈಗ ಪರಿಸ್ಥಿತಿ ಇನ್ನೂ ಹದಗೆಟ್ಟಿತ್ತು.
ಆ ಪಿಸುಮಾತುಗಳು... ಅವು ನಿಲ್ಲುತ್ತಲೇ ಇರಲಿಲ್ಲ. ಮೊದಲು ಕೇವಲ ರಾತ್ರಿ ಕೇಳಿಸುತ್ತಿದ್ದ ಸದ್ದು, ಈಗ ಹಗಲಿನಲ್ಲೂ ಅವಳನ್ನು ಬೆಂಬಿಡದೆ ಕಾಡುತ್ತಿತ್ತು. ಜೇನುಗೂಡಿನ ಝೇಂಕಾರದಂತೆ "ಝಯ್..." ಎಂಬ ಸದ್ದು ಕಿವಿಯೊಳಗೆ ಮತ್ತು ಹೊರಗೆ ಏಕಕಾಲದಲ್ಲಿ ಕೇಳಿಸುತ್ತಿತ್ತು.
ಅವಳು ಕಿವಿಗಳನ್ನು ಮುಚ್ಚಿಕೊಂಡಳು. ಆದರೂ ಆ ಶಬ್ದ ನಿಲ್ಲಲಿಲ್ಲ.
"ಇದು ಗಾಳಿಯಲ್ಲಿ ತೇಲಿ ಬರುತ್ತಿದೆಯೋ? ಅಥವಾ ನನ್ನ ಮೆದುಳಿನ ನರಗಳಲ್ಲೇ ಹುಟ್ಟುತ್ತಿದೆಯೋ?" ಎಂಬ ಗೊಂದಲ ಅವಳನ್ನು ಹುಚ್ಚು ಹಿಡಿಸುವ ಹಂತಕ್ಕೆ ತಲುಪಿತ್ತು.
ತನ್ನ ಬುದ್ಧಿಶಕ್ತಿಯ ಮೇಲೆ ನಂಬಿಕೆ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿ, ಅವಳು ನಡುಗುವ ಕೈಗಳಿಂದ ತನ್ನ ದಪ್ಪನೆಯ 'Clinical Medicine' ಪುಸ್ತಕವನ್ನು ಎಳೆದುಕೊಂಡಳು. ವೇಗವಾಗಿ ಪುಟಗಳನ್ನು ತಿರುಗಿಸಿ "Differential Diagnosis of Auditory Hallucinations" (ಕಿವಿಯಲ್ಲಿ ಧ್ವನಿ ಕೇಳಿಸುವ ರೋಗಗಳ ಪಟ್ಟಿ) ಎಂಬ ಅಧ್ಯಾಯವನ್ನು ಹುಡುಕಿದಳು.
ಅವಳ ಬೆರಳುಗಳು ಆ ಪಟ್ಟಿಯ ಮೇಲೆ ಸರಿದವು:
1. ಸ್ಕಿಝೋಫ್ರೇನಿಯಾ (Schizophrenia) - ಮಾನಸಿಕ ಅಸ್ವಸ್ಥತೆ.
2. ಟೆಂಪರಲ್ ಲೋಬ್ ಎಪಿಲೆಪ್ಸಿ (Temporal Lobe Epilepsy) - ಮಿದುಳಿನ ನರಗಳ ಸಮಸ್ಯೆಯಿಂದ ಬರುವ ಫಿಟ್ಸ್.
3. ಬ್ರೈನ್ ಟ್ಯೂಮರ್ (Brain Tumor) - ಮಿದುಳಿನ ಗಡ್ಡೆ.
4. ತೀವ್ರ ಮಾನಸಿಕ ಒತ್ತಡ (Severe Stress/Psychosis).
ಶ್ರಾವ್ಯ ತನ್ನ ಲಕ್ಷಣಗಳನ್ನು ಒಂದೊಂದಾಗಿ ಆ ಭಯಾನಕ ರೋಗಗಳಿಗೆ ಹೋಲಿಸಿ ನೋಡತೊಡಗಿದಳು. ಪ್ರತಿ ಸಾಲು ಓದಿದಾಗಲೂ ಅವಳ ಎದೆಬಡಿತ ಹೆಚ್ಚಾಗುತ್ತಿತ್ತು.
"ನನಗೆ ಹುಚ್ಚು ಹಿಡಿದಿದೆಯಾ? ಅಥವಾ ನನ್ನ ಮಿದುಳಿನಲ್ಲಿ ಗಡ್ಡೆ ಬೆಳೆಯುತ್ತಿದೆಯಾ?"
ಈ ಆಲೋಚನೆ ಬಂದ ತಕ್ಷಣ, ಅವಳ ಕೈಗಳು ಎಷ್ಟು ಜೋರಾಗಿ ನಡುಗಿದವೆಂದರೆ, ಕೈಯಲ್ಲಿದ್ದ ಪೆನ್ನು 'ಟಕ್' ಎಂದು ಟೇಬಲ್ ಮೇಲೆ ಬಿತ್ತು. ಅಕ್ಕಪಕ್ಕದವರು ತಿರುಗಿ ನೋಡಿದರು. ಶ್ರಾವ್ಯ ತಲೆ ತಗ್ಗಿಸಿ, ಪುಸ್ತಕದ ಅಕ್ಷರಗಳನ್ನೇ ದಿಟ್ಟಿಸಿದಳು. ವಿಜ್ಞಾನ ರೋಗವನ್ನು ಪತ್ತೆ ಮಾಡುತ್ತಿತ್ತು, ಆದರೆ ಅದಕ್ಕೆ ಪರಿಹಾರ ನೀಡುವ ಬದಲು ಭಯವನ್ನು ಹೆಚ್ಚಿಸುತ್ತಿತ್ತು.
---
ಗಡಿಯಾರ ರಾತ್ರಿ 2:14 ಎಂದು ತೋರಿಸುತ್ತಿತ್ತು.
ಹೊರಗೆ ಇಡೀ ಜಗತ್ತು ಗಾಢ ನಿದ್ರೆಗೆ ಜಾರಿತ್ತು. ಆದರೆ ಶ್ರಾವ್ಯಳ ಕೋಣೆಯಲ್ಲಿ ಮಾತ್ರ ಇನ್ನು ಟೇಬಲ್ ಲ್ಯಾಂಪ್ ಉರಿಯುತ್ತಿತ್ತು. ಅದರ ಹಳದಿ ಬೆಳಕು, ಟೇಬಲ್ ಮೇಲೆ ಹರಡಿದ್ದ ದಪ್ಪ ದಪ್ಪ ಪುಸ್ತಕಗಳ ರಾಶಿಯ ಮೇಲೆ ಬಿದ್ದಿತ್ತು.
ನಾಳೆ ಬೆಳಗ್ಗೆಯೇ ನ್ಯೂರಾಲಜಿ (ನರವಿಜ್ಞಾನ) ಪರೀಕ್ಷೆ.
ಶ್ರಾವ್ಯಳ ಕಣ್ಣುಗಳು ಉರಿಯುತ್ತಿದ್ದವು. ಕಳೆದ ಹದಿನೆಂಟು ಗಂಟೆಗಳಿಂದ ಸತತವಾಗಿ ಓದಿ ಓದಿ, ಅವಳ ಮಿದುಳು ಜಡವಾಗಿಬಿಟ್ಟಿತ್ತು. ಖಾಲಿಯಾದ ಕಾಫಿ ಮಗ್ ಪಕ್ಕಕ್ಕೆ ತಳ್ಳಿ, ಅವಳು ಸಿಲಬಸ್ ಪ್ರತಿಯನ್ನು (Syllabus copy) ಕಣ್ಣಿಗೆ ಹತ್ತಿರ ಹಿಡಿದುಕೊಂಡು ನೋಡಿದಳು.
ಇನ್ನೂ ಕೊನೆಯ ಕೆಲವು ಅಧ್ಯಾಯಗಳು ಬಾಕಿ ಇದ್ದವು.
ಅವಳು ಪುಸ್ತಕದ ಪುಟಗಳನ್ನು ತಿರುಗಿಸಿದಳು. ಅಲ್ಲಿ ವಿಚಿತ್ರವಾದ ಮತ್ತು ಉಚ್ಛರಿಸಲು ಆಗದಂತಹ ಕಾಯಿಲೆಗಳ ಹೆಸರುಗಳು ಕಂಡವು:
'Marchiafava-Bignami disease'
'Progressive Multifocal Leukoencephalopathy (PML)'...
ಶ್ರಾವ್ಯ ಸುಸ್ತಾದ ಕಣ್ಣುಗಳಿಂದ ಆ ಪುಟಗಳನ್ನು ದಿಟ್ಟಿಸಿದಳು. ತರ್ಕ ಮತ್ತೆ ಮುಂದುವರೆಯಿತು.
"ಛೇ... ಇವೆಲ್ಲಾ ಕೋಟಿಗೊಬ್ಬರಿಗೆ ಬರುವ ತೀರಾ ಅಪರೂಪದ ಕಾಯಿಲೆಗಳು. ಐದು ವರ್ಷದ ಹಳೆಯ ಪ್ರಶ್ನೆ ಪತ್ರಿಕೆಗಳಲ್ಲಿ ಒಮ್ಮೆಯೂ ಇವುಗಳ ಬಗ್ಗೆ ಕೇಳಿಲ್ಲ. ಇವನ್ನೆಲ್ಲಾ ಈಗ ಓದುತ್ತಾ ಕೂತರೆ ಇರುವ ಸಮಯವೂ ಸಾಲದು, ತಲೆಗೆ ಹತ್ತುವುದೂ ಇಲ್ಲ," ಎಂದು ನಿರ್ಧರಿಸಿದಳು.
"ಇವು ಬರುವುದಿಲ್ಲ (Low Yield Topics)," ಎಂದು ಜೋರಾಗಿ ಹೇಳಿಕೊಂಡು, ಆ ಪುಟಗಳನ್ನು ಓದದೆಯೇ ಪುಸ್ತಕವನ್ನು ಮುಚ್ಚಿ ಪಕ್ಕಕ್ಕಿಟ್ಟಳು.
ಅವಳ ತಲೆ ವಿಪರೀತ ಭಾರವಾಗಿತ್ತು. ಕುತ್ತಿಗೆ ನೋವು ತಾಳಲಾರದೆ, ಅವಳು ಕುರ್ಚಿಯಲ್ಲಿ ಹಿಂದಕ್ಕೆ ಒರಗಿದಳು.
"ಸಾಕು... ಇನ್ನು ನನ್ನಿಂದ ಸಾಧ್ಯವಿಲ್ಲ. ಕೇವಲ 5 ನಿಮಿಷ... ಹೌದು, ಐದೇ ನಿಮಿಷ ಕಣ್ಣು ಮುಚ್ಚಿ ಸುಮ್ಮನೆ ಇರುತ್ತೇನೆ. ಆಮೇಲೆ ಎದ್ದು ಪುನರ್ಮನನ( ರಿವಿಷನ್) ಮಾಡಿದರಾಯಿತು," ಎಂದುಕೊಂಡವಳೇ, ಟೇಬಲ್ ಮೇಲೆ ಕೈಗಳನ್ನು ಮಡಚಿ, ಅದರ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದಳು.
---
ಶ್ರಾವ್ಯ ಟೇಬಲ್ ಮೇಲೆ ತಲೆ ಇಟ್ಟಿದ್ದಳಷ್ಟೇ. ಅವಳು ಪೂರ್ತಿಯಾಗಿ ನಿದ್ರೆಗೆ ಜಾರಿರಲಿಲ್ಲ. ಅದು ಎಚ್ಚರವೂ ಅಲ್ಲದ, ನಿದ್ರೆಯೂ ಅಲ್ಲದ ಒಂದು ವಿಚಿತ್ರವಾದ ' ಸಂಧಿ 'ಲಿಮಿನಲ್' (Liminal) ಸ್ಥಿತಿ. ಅವಳ ದೇಹ ಮಾತ್ರ ವಿಶ್ರಮಿಸುತ್ತಿತ್ತು, ಆದರೆ ಪ್ರಜ್ಞೆ ಇನ್ನೂ ತೇಲುತ್ತಿತ್ತು.
ಹಠಾತ್ತನೆ, ಅವಳ ಮನಸ್ಸಿನ ಆಳದಲ್ಲಿ ಒಂದು ಕಂಪನ ಶುರುವಾಯಿತು.
ಕೋಣೆಯಲ್ಲಿದ್ದ ನಿಶಬ್ಧವನ್ನು ಭೇದಿಸಿಕೊಂಡು, ಆ ಹಿಂದಿನ ಅದೇ ಪಿಸುಮಾತುಗಳು ಮತ್ತೆ ಕೇಳಿಸಿದವು. ಆದರೆ ಈ ಬಾರಿ ಅವುಗಳಲ್ಲಿ ಭಯವಿರಲಿಲ್ಲ, ಗೊಂದಲವಿರಲಿಲ್ಲ. ಬದಲಾಗಿ, ಕಾಳಜಿ ಆ ದನಿಯಲ್ಲಿತ್ತು.
ಅವಳ ಮುಚ್ಚಿದ ಕಣ್ಣುಗಳ ಮುಂದೆ ಕತ್ತಲೆ ಸರಿದು, ಒಂದು ಪ್ರಕಾಶಮಾನವಾದ ಬೆಳಕು ಮೂಡಿತು.
ಅವಳು ಆಗಷ್ಟೇ "ಬರುವುದಿಲ್ಲ" ಎಂದು ನಿರ್ಧರಿಸಿ ಪಕ್ಕಕ್ಕೆ ಇಟ್ಟಿದ್ದಳಲ್ಲಾ, ಅದೇ ಪಠ್ಯಪುಸ್ತಕದ ಪುಟಗಳು ಅವಳ ಮನಸ್ಸಿನ ಪರದೆಯ ಮೇಲೆ ದೃಶ್ಯದಂತೆ ತೆರೆದುಕೊಂಡವು. ಆ ಪುಟಗಳಲ್ಲಿನ ಸಾಲುಗಳು ಕಣ್ಣು ಕೋರೈಸುವಂತೆ ಹೊಳೆಯುತ್ತಿದ್ದವು.
ಸಾವಿರಾರು ಅಕ್ಷರಗಳ ನಡುವೆ, ಕೇವಲ ಮೂರು ವಿಷಯಗಳು (Topics) ಮಾತ್ರ ಹೈಲೈಟರ್ ಹಾಕಿದಂತೆ ಎದ್ದು ಕಾಣುತ್ತಿದ್ದವು:
1. ಮಾರ್ಚಿಯಾಫಾವಾ-ಬಿಗ್ನಾಮಿ ಡಿಸೀಸ್ (Marchiafava-Bignami disease)
2. ಪ್ರೋಗ್ರೆಸ್ಸಿವ್ ಮಲ್ಟಿಫೋಕಲ್ ಲ್ಯುಕೋಎನ್ಸೆಫಾಲೋಪತಿ - ಪಿ.ಎಂ.ಎಲ್ (PML)
3. ಅಬ್ಡ್ಯೂಸೆನ್ಸ್ ನರ್ವ್ - ಫಾಲ್ಸ್ ಲೋಕಲೈಸಿಂಗ್ ಸೈನ್ (Abducens nerve - False localizing sign)
ಈ ಮೂರು ಹೆಸರುಗಳು ನಿಯಾನ್ ಲೈಟ್‌ನಂತೆ ಅವಳ ಕಣ್ಣಮುಂದೆ ಮಿನುಗುತ್ತಿದ್ದವು.
ಆ ಅದೃಶ್ಯ ಧ್ವನಿ ಈಗ ಅವಳ ಕಿವಿಯೊಳಗೆ ಸ್ಪಷ್ಟವಾಗಿ ಆಜ್ಞಾಪಿಸಿತು:
"ನಮ್ಮನ್ನು ನಂಬು... ಇವುಗಳನ್ನು ಓದು..."
ಆ ದೃಶ್ಯ ಎಷ್ಟು ತೀಕ್ಷ್ಣವಾಗಿತ್ತೆಂದರೆ, ಶ್ರಾವ್ಯಳಿಗೆ ತಾನು ನಿಜವಾಗಿಯೂ ಕಣ್ಣು ತೆರೆದು ಓದುತ್ತಿದ್ದೇನೆ ಎಂದೇ ಅನ್ನಿಸಿತು. ಆ ಮೂರು ವಿಷಯಗಳು ಅವಳ ಮಿದುಳಿನ ಸ್ಮೃತಿಪಟಲದ ಮೇಲೆ ಅಚ್ಚೊತ್ತಿದಂತೆ ದಾಖಲಾದವು.
ಭಾಗ 8: ತರ್ಕದ ಅಂತಿಮ ಹೋರಾಟ (ಸಮಯ: 2:47 AM)
"ಹಾಹ್...!"
ಶ್ರಾವ್ಯ ಬೆಚ್ಚಿಬಿದ್ದು, ಉಸಿರು ಬಿಗಿಹಿಡಿದು ಎಚ್ಚರಗೊಂಡಳು. ಅವಳ ಎದೆ ಬಡಿತ ಗಂಟೆಗೆ ನೂರು ಕಿಲೋಮೀಟರ್ ವೇಗದಲ್ಲಿ ಓಡುವ ರೈಲಿನಂತಿತ್ತು. ಹಣೆ ಮತ್ತು ಕುತ್ತಿಗೆಯ ಮೇಲೆಲ್ಲಾ ಬೆವರಿನ ಹನಿಗಳು ಮೂಡಿದ್ದವು.
ಗಡಿಯಾರ ನೋಡಿದಳು. 2:47. ಅವಳು ಕಣ್ಣು ಮುಚ್ಚಿ ಕೇವಲ ಅರ್ಧ ಗಂಟೆಯಾಗಿತ್ತಷ್ಟೇ. ಆದರೆ, ಅವಳಿಗೆ ಯುಗಗಳೇ ಕಳೆದಂತೆ ಭಾಸವಾಯಿತು.
ಅವಳ ವೈಜ್ಞಾನಿಕ ಮನಸ್ಸು ತಕ್ಷಣವೇ ಜಾಗೃತವಾಯಿತು.
"ಇದು ಕೇವಲ ಕನಸು... ಅಷ್ಟೆ," ಎಂದು ತನಗೆ ತಾನೇ ಗಟ್ಟಿಯಾಗಿ ಹೇಳಿಕೊಂಡಳು. "ಪರೀಕ್ಷೆಯ ಭಯದಿಂದ (Exam Stress) ನನ್ನ ಮಿದುಳು ಇಂತಹ ಕೆಟ್ಟ ಕನಸುಗಳನ್ನು ಸೃಷ್ಟಿಸುತ್ತಿದೆ. ಅಷ್ಟಕ್ಕೂ ಆ ಮೂರು ಕಾಯಿಲೆಗಳು ಪರೀಕ್ಷೆಗೆ ಮುಖ್ಯವೇ ಅಲ್ಲ. ನಾನು ಈಗ ಎದ್ದು ಅವನ್ನು ಓದಲು ಶುರು ಮಾಡಿದರೆ, ಈಗಾಗಲೇ ಓದಿರುವ ಮುಖ್ಯ ವಿಷಯಗಳನ್ನು (Important Topics) ಮರೆತುಹೋಗುತ್ತೇನೆ. ಸಮಯ ಹಾಳು ಮಾಡಬಾರದು."
ಅವಳು ಆ ಪುಸ್ತಕವನ್ನು ಹಾಗೆಯೇ ಮುಚ್ಚಿಡಲು ಮುಂದಾದಳು.
ಆದರೆ...
ಅವಳ ಕೈಗಳು ಆ ಪುಸ್ತಕವನ್ನು ಮುಟ್ಟಿದ ತಕ್ಷಣ, ಒಂದು ವಿಚಿತ್ರ ವಿದ್ಯುತ್ ಸಂಚಾರವಾದಂತಾಯಿತು. ಅವಳ ಒಳ ಮನಸ್ಸು (Gut feeling) ಮೆಲ್ಲಗೆ ಹೇಳುತ್ತಿತ್ತು: "ಇಲ್ಲ! ಅದನ್ನು ಓದು! ತೆಗಿ ಆ ಪುಸ್ತಕವನ್ನು!"
ಅವಳೊಳಗೆ ತೀವ್ರವಾದ ಹೋರಾಟ ನಡೆಯುತ್ತಿತ್ತು. ಒಂದು ಕಡೆ ವರ್ಷಗಳ ಕಾಲ ನಂಬಿಕೊಂಡು ಬಂದ ತರ್ಕ ಮತ್ತು ವಿಜ್ಞಾನ. ಇನ್ನೊಂದು ಕಡೆ ಇದೇ ಮೊದಲ ಬಾರಿಗೆ ಅನುಭವಕ್ಕೆ ಬಂದಿರುವ ಅತೀಂದ್ರಿಯ ನಂಬಿಕೆ.
ಅವಳು ಪುಸ್ತಕದ ಕಡೆಗೆ ನೋಡಿದಳು. ನಂತರ ಗಡಿಯಾರದ ಕಡೆಗೆ ನೋಡಿದಳು.
"ಛೇ! ಇದೇನಾಗ್ತಿದೆ ನನಗೆ?" ಎಂದು ಸಿಡಿಮಿಡಿಗೊಂಡಳು. ಆದರೂ, ಆ ಕುತೂಹಲ ಅವಳನ್ನು ಸುಮ್ಮನಿರಲು ಬಿಡಲಿಲ್ಲ. "ಸರಿ, ಕೇವಲ ಒಂದು ಬಾರಿ... ಒಂದು ವೇಳೆ ನಾನು ಕಂಡದ್ದು ನಿಜವಾಗಿದ್ದರೆ? ಆಗ ಪಶ್ಚಾತ್ತಾಪ ಪಡುವುದಕ್ಕಿಂತ ಈಗ ಓದುವುದೇ ಲೇಸು."
ಅವಳು ನಡುಗುವ ಕೈಗಳಿಂದ ಮತ್ತೆ ಆ ಪುಟಗಳನ್ನು ತೆರೆದಳು.
ಮುಂಜಾನೆ 4:30ರ ವರೆಗೆ, ಅವಳು ಬೇರೆಲ್ಲವನ್ನೂ ಬದಿಗಿಟ್ಟು, ಆ ಧ್ವನಿಗಳು ಸೂಚಿಸಿದ ಆ ಮೂರೇ ಮೂರು ವಿಷಯಗಳನ್ನು (Marchiafava-Bignami, PML, Abducens nerve) ಸಂಪೂರ್ಣವಾಗಿ, ಒಂದೂ ಅಕ್ಷರ ಬಿಡದಂತೆ ಓದಿದಳು.
ಅವಳ ತರ್ಕ ಸೋತಿತ್ತು, ಭಯ ಗೆದ್ದಿತ್ತು. ಅಥವಾ ಬಹುಶಃ... ನಂಬಿಕೆ ಹುಟ್ಟುತ್ತಿತ್ತು.
---
ಬೆಳಿಗ್ಗೆ 7:00 ಗಂಟೆ.
ಬೆಂಗಳೂರಿನ ಮುಂಜಾನೆಯ ಎಳೆಬಿಸಿಲು ಕಾಲೇಜಿನ ಕ್ಯಾಂಪಸ್ ಮೇಲೆ ಬಿದ್ದಿತ್ತು. ಆದರೆ ಶ್ರಾವ್ಯಳಿಗೆ ಆ ಬೆಳಕು ಕೂಡ ಕಣ್ಣು ಕುಕ್ಕುವಂತಿತ್ತು. ಅವಳ ಕಣ್ಣುಗಳು ಕೆಂಡದಂತಾಗಿದ್ದವು. ಕೇವಲ ಮೂರು ಗಂಟೆಯ ನಿದ್ರೆ ಮತ್ತು ರಾತ್ರಿಯಿಡೀ ನಡೆದ ಆಂತರಿಕ ಯುದ್ಧ ಅವಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಡಿ ಹಿಪ್ಪೆ ಮಾಡಿತ್ತು.
ಹಾಸ್ಟೆಲ್‌ನಿಂದ ಪರೀಕ್ಷಾ ಹಾಲ್ ಕಡೆಗೆ ನಡೆಯುವಾಗ ಅವಳ ಕಾಲುಗಳು ಭಾರವಾಗಿದ್ದವು.
ದಾರಿಯಲ್ಲಿ ಅವಳ ಸಹಪಾಠಿಗಳು ಗುಂಪು ಗುಂಪಾಗಿ ನಡೆಯುತ್ತಾ, ಕೊನೆಯ ಕ್ಷಣದ ಚರ್ಚೆಯಲ್ಲಿ ಮುಳುಗಿದ್ದರು.
"ಹೇಯ್, 'ಸ್ಟ್ರೋಕ್' (Stroke) ಬಗ್ಗೆ ಓದಿದ್ದೀರಾ? ಅದು ಪಕ್ಕಾ ಬರುತ್ತೆ," ಒಬ್ಬರು ಹೇಳಿದರೆ, "ಇಲ್ಲ ಕಣೋ, ಈ ಸಲ 'ಎಪಿಲೆಪ್ಸಿ' (Epilepsy) ಮೇಲೆ ಲಾಂಗ್ ಕ್ವೆಶ್ಚನ್ ಗ್ಯಾರಂಟಿ," ಎಂದು ಇನ್ನೊಬ್ಬರು ವಾದಿಸುತ್ತಿದ್ದರು.
ಶ್ರಾವ್ಯ ಮಾತ್ರ ಮೌನವಾಗಿದ್ದಳು. ಅವಳ ಬಾಯಲ್ಲಿ ಮಾತಿರಲಿಲ್ಲ.
ಅವಳ ಗೆಳತಿ ಸ್ನೇಹ ಪಕ್ಕಕ್ಕೆ ಬಂದು ಕೇಳಿದಳು, "ಏನೇ ಶ್ರಾವ್ಯ, ಡಲ್ ಆಗಿದ್ದೀಯಾ? ರಾತ್ರಿ ಪೂರ್ತಿ ಓದಿದ್ದೀಯಾ ಏನು? ಎಲ್ಲಾ ಕವರ್ ಆಯ್ತಾ?"
ಶ್ರಾವ್ಯ ಕೇವಲ ತಲೆಯಾಡಿಸಿದಳು. "ಹೂಂ..." ಅಷ್ಟೇ ಅವಳ ಉತ್ತರ. ತಾನು ರಾತ್ರಿ ಓದಿದ ಆ ವಿಚಿತ್ರ ವಿಷಯಗಳ ಬಗ್ಗೆ ಯಾರಿಗೂ ಹೇಳುವ ಧೈರ್ಯ ಅವಳಿಗಿರಲಿಲ್ಲ. ಹೇಳಿದರೆ ಅವರು ನಗುತ್ತಾರೆ ಎಂಬ ಭಯ ಒಂದೆಡೆಯಾದರೆ, ಹೇಳಿದ್ದು ಸುಳ್ಳಾದರೆ ಎಂಬ ಸಂಕೋಚ ಇನ್ನೊಂದೆಡೆ.
ಪರೀಕ್ಷಾ ಹಾಲ್‌ನ ಮೆಟ್ಟಿಲುಗಳನ್ನು ಹತ್ತುವಾಗ ಅವಳ ಮನಸ್ಸಿನಲ್ಲಿ ಒಂದೇ ಆಲೋಚನೆ ಸುಳಿಯುತ್ತಿತ್ತು:
"ಒಂದು ವೇಳೆ... ಕೇವಲ ಒಂದು ವೇಳೆ... ಆ ಧ್ವನಿಗಳು ಹೇಳಿದ ವಿಷಯಗಳು ಪ್ರಶ್ನೆ ಪತ್ರಿಕೆಯಲ್ಲಿ ಬಂದರೆ? ಆಗ ಏನಾಗುತ್ತದೆ?"
ಅವಳು ಆಕಾಶದ ಕಡೆಗೆ ನೋಡಿದಳು.
ಅವಳು ಪರೀಕ್ಷಾ ಕೊಠಡಿಯ ಬಾಗಿಲು ದಾಟಿ, ತನ್ನ ನಿಗದಿತ ಡೆಸ್ಕ್ ಮೇಲೆ ಕುಳಿತಳು. ಹೃದಯದ ಬಡಿತ ಮತ್ತೆ ವೇಗವಾಯಿತು.
---
ಪರೀಕ್ಷಾ ಹಾಲ್‌ನಲ್ಲಿ ದೊಡ್ಡ ಗಡಿಯಾರದ ಸದ್ದು ಬಿಟ್ಟರೆ, ಸೂಜಿ ಬಿದ್ದರೂ ಕೇಳುವಷ್ಟು ನೀರವ ಮೌನವಿತ್ತು.
"ಟ್ರಿಂಗ್..."
ಬೆಲ್ ಶಬ್ದವಾದಾಗ ಶ್ರಾವ್ಯ ಬೆಚ್ಚಿಬಿದ್ದಳು. ಮೇಲ್ವಿಚಾರಕರು ಸಾಲಾಗಿ ಬಂದು ಎಲ್ಲರ ಡೆಸ್ಕ್ ಮೇಲೂ ಪ್ರಶ್ನೆ ಪತ್ರಿಕೆಗಳನ್ನು ತಲೆಕೆಳಗಾಗಿ (face down) ಇಟ್ಟು ಹೋದರು. ಬಿಳಿ ಹಾಳೆಗಳ ರಾಶಿ ಅವಳ ಮುಂದಿತ್ತು.
ಶ್ರಾವ್ಯಳ ಕೈಗಳು ತಣ್ಣಗಾಗಿದ್ದವು. ಅವಳು ಕಣ್ಣು ಮುಚ್ಚಿ ಒಂದು ದೀರ್ಘ ಉಸಿರು ತೆಗೆದುಕೊಂಡಳು.
"ಇದು ಕೇವಲ ಪರೀಕ್ಷೆ... ಕೂಲ್ ಆಗಿರು," ಎಂದು ತನಗೆ ತಾನೇ ಹೇಳಿಕೊಂಡಳು. ಆದರೆ ಆ ಮಾತು ಅವಳಿಗೇ ನಂಬಿಕೆ ತರುತ್ತಿರಲಿಲ್ಲ.
"ನೀವೀಗ ಪತ್ರಿಕೆಯನ್ನು ನೋಡಬಹುದು," ಎಂದು ಮೇಲ್ವಿಚಾರಕರು ಸಿಗ್ನಲ್ ನೀಡಿದರು.
ಇಡೀ ಹಾಲಿನಲ್ಲಿ ಕಾಗದ ತಿರುಗಿಸುವ "ಸರ್ರ್..." ಎಂಬ ಸದ್ದು ಕೇಳಿಸಿತು. ಶ್ರಾವ್ಯವೂ ನಡುಗುವ ಬೆರಳುಗಳಿಂದ ಪ್ರಶ್ನೆ ಪತ್ರಿಕೆಯನ್ನು ತಿರುಗಿಸಿದಳು.
ಅವಳ ಕಣ್ಣುಗಳು ಮೊದಲ ಪ್ರಶ್ನೆಯನ್ನು ಓದಿದವು. ಅದು ಒಂದು ಸಾಮಾನ್ಯ ಪ್ರಶ್ನೆ. ಸ್ವಲ್ಪ ನಿರಾಳವಾಯಿತು.
ಆದರೆ, ಅವಳ ದೃಷ್ಟಿ ಕೆಳಗೆ ಸರಿಯುತ್ತಿದ್ದಂತೆ...
ಥಟ್ಟನೆ ಅವಳ ಉಸಿರು ಸ್ತಬ್ಧವಾಯಿತು. ಇಡೀ ಜಗತ್ತೇ ಒಂದು ಕ್ಷಣ ನಿಂತುಹೋದಂತಾಯಿತು!
ಅವಳ ಕಣ್ಣುಗಳು ಆ ಕಾಗದದ ಮೇಲಿದ್ದ ಅಕ್ಷರಗಳನ್ನೇ ಕಂಬ ಕಂಬ ಬಿಟ್ಟು ನೋಡುತ್ತಿದ್ದವು. ಅವಳ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ:
ಪ್ರಶ್ನೆ ಸಂಖ್ಯೆ 2: ಅಬ್ಡ್ಯೂಸೆನ್ಸ್ ನರ್ವ್ ಪಾಲ್ಸಿ - 'ಫಾಲ್ಸ್ ಲೋಕಲೈಸಿಂಗ್ ಸೈನ್' ವಿವರಿಸಿ.
ಪ್ರಶ್ನೆ ಸಂಖ್ಯೆ 3: ಮಾರ್ಚಿಯಾಫಾವಾ-ಬಿಗ್ನಾಮಿ ಕಾಯಿಲೆಯ ರೋಗ ಲಕ್ಷಣಗಳೇನು?
ಪ್ರಶ್ನೆ ಸಂಖ್ಯೆ 6: ಪಿ.ಎಂ.ಎಲ್ (PML) ಬಗ್ಗೆ ಟಿಪ್ಪಣಿ ಬರೆಯಿರಿ.
"ದೇವ್ರೇ...!"
ಶ್ರಾವ್ಯಳ ಬಾಯಿಯಿಂದ ಅಚಾನಕ್ಕಾಗಿ ಉದ್ಗಾರ ಹೊರಬಂತು. ಪಕ್ಕದವರು ತಿರುಗಿ ನೋಡಿದರು, ಆದರೆ ಅವಳಿಗೆ ಅದರ ಪರಿವೆ ಇರಲಿಲ್ಲ.
ರಾತ್ರಿ ಕಂಡ ಆ ದರ್ಶನ, ಆ ಪಿಸುಮಾತುಗಳು, ಆ ಬೆಳಗಿನ ಜಾವದ ಓದು... ಎಲ್ಲವೂ ಅಕ್ಷರಶಃ ನಿಜವಾಗಿತ್ತು! ಆ ಮೂರು ವಿಷಯಗಳು ಅವಳ ಕಣ್ಣ ಮುಂದೆಯೇ, ಪ್ರಶ್ನೆ ಪತ್ರಿಕೆಯ ರೂಪದಲ್ಲಿ ಇದ್ದವು.
ಇದು ಕಾಕತಾಳೀಯ ಆಗಿರಲು ಸಾಧ್ಯವೇ ಇಲ್ಲ. ಗಣಿತದ ಪ್ರಕಾರ ಇದು ಅಸಾಧ್ಯ!
ಅವಳ ಮೈ ರೋಮಾಂಚನವಾಯಿತು. ಅವಳ ಇಷ್ಟು ವರ್ಷದ ವೈಜ್ಞಾನಿಕ ತರ್ಕ, ಅವಳ ಅಪನಂಬಿಕೆ—ಎಲ್ಲವನ್ನು ಈಗ ಪ್ರಶ್ನಿಸುವಂತೆ ಆಯಿತು..!??!
ಶ್ರಾವ್ಯ ನಿಧಾನವಾಗಿ ತಲೆ ಎತ್ತಿ, ಪರೀಕ್ಷಾ ಹಾಲ್‌ನ ಮೇಲ್ಛಾವಣಿಯ ಶೂನ್ಯತೆಯಲ್ಲಿ ದೃಷ್ಟಿ ನೆಟ್ಟಳು...
ಅವಳ ಅಂತರಾಳದ ಆಳದಿಂದ, ಆ ಹಳೆಯ ಪರಿಚಯದ ಧ್ವನಿ ಮತ್ತೆ ಮೊಳಗಿತು. ಆದರೆ ಈ ಬಾರಿ ಅದು ಕಿವಿಯಲ್ಲಿರಲಿಲ್ಲ, ಅವಳ ಆತ್ಮದ ಆಳದಿಂದ ಬಂದಂತಿತ್ತು.
"ಈಗಲಾದರೂ ನಂಬುವೆಯಾ...?"
ಒಂದು ವಿಚಿತ್ರವಾದ ನಗುವಿನೊಂದಿಗೆ, ಅವಳು ನಡುಗುವ ಕೈಯಿಂದ ಲೇಖನಿಯನ್ನು ಎತ್ತಿಕೊಂಡಳು.
ಉತ್ತರ ಬರೆಯಲು ಸಿದ್ಧಳಾದಳು. ಆದರೆ ಅವಳಿಗೆ ಗೊತ್ತಿತ್ತು—ಇದು ಕೇವಲ ಪರೀಕ್ಷೆಯಲ್ಲ, ಇದೊಂದು ಹೊಸ ಮತ್ತು ನಿಗೂಢ ಪ್ರಯಾಣದ ಆರಂಭವಷ್ಟೇ.