ಶ್ರಾವಣ ಮಾಸದ ವಿಶೇಷತೆ ಮತ್ತು ಆಚರಣೆ
ಈ ವರ್ಷ ಅಂದರೆ ೨೦೨೨ರ ಶ್ರಾವಣ ಮಾಸ ೨೯ನೇ ಜೂಲೈಯಿಂದ ಪ್ರಾರಂಭ. ಶ್ರಾವಣಮಾಸ ಬಂತೆಂದರೆ ಮನೆ ಮನೆಗಳ್ಳಲ್ಲಿ ಎಲ್ಲಿಲದ ಹರ್ಷ ಉತ್ಸಾಹ ನೋಡಲು ಸಿಗುತ್ತದೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಪವಿತ್ರ ಮಾಸವೆಂದು ಪರಿಗಣಿಸಲಾಗಿದ್ದು ಈ ಮಾಸವು ವಿಶೇಷ ಸ್ಥಾನವನ್ನು ಹೊಂದಿದೆ. ಈ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳು ತಮ್ಮದೇಯಾದ ವಿಶೇಷತೆಗಳಿಂದ ಕೂಡಿವೆ.
ಶ್ರಾವಣ ಮಾಸದ ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವವಿದೆ. ಮಹದೇವನಾದ ಶಿವನನ್ನು ಪೂಜಿಸಲು ಮತ್ತು ಅವರ ಆಶೀರ್ವಾದ ಪಡೆಯಲು, ಶ್ರಾವಣ ಮಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಸೋಮವಾರಗಳು ಶಿವನಿಗೆ ಸಮರ್ಪಿತವಾಗಿವೆ. ಶಿವನನ್ನು ಮೆಚ್ಚಿಸಲು ಭಕ್ತರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಈ ದಿನದಂದು ಮನೆಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ ಮತ್ತು ಜನರು ಹಾಲು, ನೀರು ಮತ್ತು ಇತರ ಪವಿತ್ರ ವಸ್ತುಗಳನ್ನು ಅಭಿಷೇಕ ಮಾಡಲು ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಜೀವನದ ಸಂಕಷ್ಟಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಶ್ರಾವಣ ಮಾಸದ ಮಂಗಳವಾರ ಮಂಗಳ ಗೌರಿ ದೇವಿಗೆ ಸಮರ್ಪಿತವಾಗಿದೆ. ಈ ದಿನ ವಿವಾಹಿತ ಮಹಿಳೆಯರು ವಿಶೇಷವಾಗಿ ನವವಿವಾಹಿತೆಯರು ಮಂಗಳ ಗೌರಿಯ ಪೂಜೆಯನ್ನು ಮಾಡುತ್ತಾರೆ. ಮಹಿಳೆಯರು ತಮ್ಮ ಪತಿ ಮತ್ತು ಮಕ್ಕಳ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಈ ದಿನ ಮಂಗಳಗೌರಿಯನ್ನು ಪೂಜಿಸುತ್ತಾರೆ. ಅವರು ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ಸಂಜೆ ಮಹಿಳೆಯರು ಒಟ್ಟುಗೂಡಿ ಕುಂಕುಮ, ಅರಿಶಿನ, ತೆಂಗಿನಕಾಯಿ, ಖಣದಂತಹ ಪವಿತ್ರ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಮರುದಿನ ವಿಶೇಷವಾದ ಆಹಾರ ತಯಾರಿಸಿ ಮಹಾಗೌರಿಗೆ ನೈವೇದ್ಯ ಮಾಡಿ ಪ್ರಸಾದ ಸೇವಿಸಿ ಮಹಿಳೆಯರು ಉಪವಾಸ ಬಿಡುತ್ತಾರೆ.
ಶ್ರಾವಣ ಮಾಸದ ಶುಕ್ರವಾರಗಳು ಲಕ್ಷ್ಮಿ ದೇವಿಯನ್ನು ಪೂಜಿಸಲು ಯೋಗ್ಯವಾಗಿದೆ. ಈ ದಿನದಂದು ಮಹಿಳೆಯರು ಬೇಗನೆ ಎದ್ದು, ಇಡೀ ಮನೆಯನ್ನು ಸ್ವಚ್ಛಗೊಳಿಸುತ್ತಾರೆ, ತಮ್ಮ ಮನೆಯ ಮುಂದೆ ಸುಂದರವಾದ ರಂಗೋಲಿಗಳನ್ನು ಬಿಡಿಸುತ್ತಾರೆ. ಮಹಿಳೆಯರು ಪೂಜಾ ಸ್ಥಳವನ್ನು ತಾಜಾ ಹೂವುಗಳು, ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ ಮತ್ತು ಆಭರಣಗಳು ಹಾಗು ಹೂವುಗಳಿಂದ ಅಲಂಕರಿಸಲ್ಪಟ್ಟ ಲಕ್ಷ್ಮಿ ದೇವಿಯ ವಿಗ್ರಹವನ್ನು ಇಡುತ್ತಾರೆ. ಶ್ರದ್ಧಾ, ಭಕ್ತಿಯಿಂದ ಮನೆಮಂದಿಯೆಲ್ಲ ಮಹಾಲಕ್ಷ್ಮಿಯ ಪೂಜೆ ಮತ್ತು ಆರತಿಯನ್ನು ನೆರವೇರಿಸುತ್ತಾರೆ. ಈ ದಿನದಂದು ದೇವರಿಗೆ ಅರ್ಪಿಸಲು ಭಕ್ಷ್ಯಭೋಜನವನ್ನು ತಯಾರಿಸಲಾಗುತ್ತದೆ ಹಾಗೆಯೆ ಸಂಧ್ಯಾಕಾಲದಲ್ಲಿ ಮನೆಗಳಲ್ಲಿ ಭಜನಾ ಕಾರ್ಯೆಕ್ರಮವನ್ನು ಹಮ್ಮಿಕೊಳ್ಳುತ್ತಾರೆ, ಬಂದ ಹೆಣ್ಣುಮಕ್ಕಳಿಗೆ ಸುಮಂಗಲಕಾರಿಯಾದ ವಸ್ತುಗಳ್ಳನ್ನು ನೀಡುವುದರ ಮೂಲಕ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇಷ್ಟೇ ಅಲ್ಲ, ಶ್ರಾವಣ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ. ನಾಗದೇವತೆಯನ್ನು ಪೂಜೆ ಮಾಡಲು ನಾಗಪಂಚಮಿ ಹಬ್ಬವು, ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನವು, ವರಮಹಾಲಕ್ಷ್ಮಿ ವ್ರತ, ಮುದ್ದು ಕೃಷ್ಣನ ಜನುಮದಿನವಾದ ಕೃಷ್ಣಜನ್ಮಾಷ್ಟಮಿಯು ಇದೆ ಶ್ರಾವಣ ಮಾಸದಲ್ಲಿ ಬರುತ್ತವೆ. ಹಾಗಾಗಿ, ಸಂಪೂರ್ಣ ಶ್ರಾವಣ ಮಾಸವು ಹರ್ಷೋಲ್ಲಾಸದಿಂದ ಕೂಡಿರುತ್ತದೆ. ಅಲ್ಲದೆ ಈ ಎಲ್ಲಾ ಹಬ್ಬಗಳ್ಲಲಿ ಹೊಸ ಸೀರೆ ಉಟ್ಟು, ಆಭರಣಗಳ್ಳನ್ನು ತೊಟ್ಟ ಮಹಿಳೆಯರು ಮತ್ತು ಮಕ್ಕಳು ಸಂಭ್ರಮಿಸುವುದನ್ನು ನೋಡುವುದೇ ಒಂದು ಚೆನ್ನ, ಅಲ್ವಾ ?