She came unwillingly... - 23 in Kannada Drama by Kavya Pattar books and stories PDF | ಬಯಸದೆ ಬಂದವಳು... - 23

Featured Books
Categories
Share

ಬಯಸದೆ ಬಂದವಳು... - 23

ಅಧ್ಯಾಯ 34 : ವಿಧಿಯ ಆಟ

ಮೋಹನ್ ರಾವ್ ಅವರ ಕುಟುಂಬವು ಆನಂದದಲ್ಲಿ ತೇಲಾಡುತ್ತಿತ್ತು. ಆ ಕ್ಷಣದಲ್ಲಿ ಮೋಹನ್ ರಾವ್ ಆಶ್ಚರ್ಯದಿಂದ ಶೇಖರ್‌ರನ್ನು ನೋಡಿದರು.

“ಶೇಖರ್, ನೀವು ಹೇಳ್ತಿರೋದು ನಿಜಾನಾ?.. ನನಗಂತೂ ಇದನ್ನ ನಂಬೋದಕ್ಕೆ ಆಗ್ತಿಲ್ಲಾ.”

ಶೇಖರ್ ಮುಗುಳ್ನಗುತ್ತಾ ಹೇಳಿದರು.

“ನಾನು ನಿಜಾನೇ ಹೇಳ್ತಿರೋದು.”

ಅಂತ ಹೇಳಿ ಸುಮತಿಯ ಕಡೆ ನೋಡಿದರು. ಆದರೆ ಸುಮತಿಯ ಮುಖದಲ್ಲಿ ಸ್ವಲ್ಪ ದುಗುಡ ಮತ್ತು ಆತಂಕ ಸ್ಪಷ್ಟವಾಗಿ ಕಾಣುತ್ತಿತ್ತು. ಅವಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡ ಶೇಖರ್ ನಿಧಾನವಾಗಿ ಹೇಳಿದರು,

“ಸುಮತಿ, ನೀನು ಯೋಚನೆ ಮಾಡೋ ಅವಶ್ಯಕತೆನೇ ಇಲ್ಲಾ. ರೋಹನ್‌ನಂತ ಹುಡುಗ ಹುಡುಕಿದರೂ ಮತ್ತೆ ಸಿಗೋಲ್ಲ.”

ಸರಳಾ ಸುಮತಿಯ ಕೈ ಹಿಡಿದು ಮೃದುವಾಗಿ ಮಾತನಾಡಿದರು.

“ಸುಮತಿ, ಕಂಡಿತಾ ನಾವು ನಿಮಗೆ ಬಲವಂತ ಮಾಡೋಲ್ಲ. ನಿಮಗೆ ಇಷ್ಟ ಇದ್ರೆ ಮಾತ್ರ ಈ ಸಂಬಂಧ ಮುಂದುವರೆಸ್ತಿವಿ. ಇಲ್ಲ ಅಂದ್ರೆ...”

“ಛೇ!.. ಛೇ!.. ಹಾಗೇನೂ ಇಲ್ಲಾ. ಸಡನ್ ಆಗಿ ಡಿಸಿಷನ್ ತಗೊಂಡ್ರೆ ಏನು ಹೇಳ್ಬೇಕು ಅಂತಾ ಗೊತ್ತಾಗ್ತಿಲ್ಲ,” ಎಂದು ಸುಮತಿ ಉತ್ತರಿಸಿದರು.

ಲಕ್ಕಿ ಪ್ರೀತಿಯಿಂದ ಹೇಳಿದರು,

“ಮಗಳೇ, ನೀನೇನು ತಲೆ ಕೆಡಸ್ಗೋಬೇಡ. ನನ್ನ ಮೊಮ್ಮಗಳು ಸಹ ಒಳ್ಳೆ ಮನೆಗೆ ಸೇರ್ತಿದ್ದಾಳೆ.”

“ಕಂಡಿತಾ ಅಮ್ಮ. ನೀವೆಲ್ಲಾ ಒಪ್ಗೂಳ್ಬೇಕಾದ್ರೆ ನನ್ನದು ಕೂಡ ಒಪ್ಪಿಗೆ ಇದೆ,” ಎಂದು ಸುಮತಿ ಹೇಳಿದರು.

ಶಶಿಧರ್ ಸಂತೋಷದಿಂದ ಮೋಹನ್ ರಾವ್ ಕಡೆ ತಿರುಗಿದರು.

“ಮೋಹನ್ ಅವರೇ, ಅಂತು ನಾವು ಮತ್ತೆ ಸಂಬಂಧ ಬೆಳೆಸೋ ಹಾಗೆ ಆಯ್ತು. ನನಗಂತೂ ತುಂಬಾ ಖುಷಿಯಾಗ್ತಿದೆ.”

ಅವರು ತಾಯಿಯತ್ತ ನೋಡುತ್ತಾ ಕೇಳಿದರು.

“ಅಮ್ಮ, ನಿಮಗೆ ಒಪ್ಪಿಗೆ ಇದೆ ಅಲ್ವಾ?”

ಲಕ್ಷ್ಮೀ ಮಂದಹಾಸ ಬೀರುತ್ತಾ ಹೇಳಿದರು.

“ಖಂಡಿತಾ ಮಗನೇ.”

ಅದಕ್ಕೆ ಶಶಿಧರ್ ಮತ್ತು ಕೇಶವ್ ಕೂಡ ಒಪ್ಪಿಗೆ ಸೂಚಿಸಿದರು. ಮನೆಯವರು ಸಹ ಸಂತೋಷದಿಂದ ಸಮ್ಮತಿಸಿದರು.

ಆದರೆ ಸೂರ್ಯನ ಮನಸ್ಸು ಮಾತ್ರ ಇದಕ್ಕೆಲ್ಲ ಸಮ್ಮತಿಯನ್ನು ನೀಡುತ್ತಿರಲಿಲ್ಲ. ನಿಧಾನವಾಗಿ ತನ್ನ ತಂದೆಯ ಬಳಿ ಬಂದು,

“ಅಪ್ಪ... ಜಾನೂ...” ಎಂದು ಹೇಳಲು ಮುಂದಾದ.

ಆದರೆ ಶೇಖರ್ ಮಧ್ಯ ಪ್ರವೇಶಿಸಿದರು.

“ನೀನು ಸುಮ್ನಿರೋ. ಜಾನೂ ನನ್ನ ಮಗಳು. ಈಗ ನೀನು ಮಾಡಿರೋ ಅವಾಂತರನೇ ಸಾಕು. ಇನ್ನು ಇದನ್ನು ಹಾಳು ಮಾಡ್ಬೇಡ.”

ಈ ಕಡೆ ಜೆಕೆಯ ಮನಸ್ಸಿನಲ್ಲಿ ವಿಚಿತ್ರ ತಳಮಳ ಶುರುವಾಯಿತು.

‘ಅಯ್ಯೋ ದೇವರೆ... ಯಾಕೆ ನಂಗೆ ಒಂತರಾ ಸಂಕಟ ಆಗ್ತಿದೆ? ಏನು ಅಂತ ಅರ್ಥಾನೇ ಆಗ್ತಿಲ್ಲ. ಅವರು ಹೇಳಿದ್ದು ಜಾಹ್ನವಿ ಬಗ್ಗೆ ಆದ್ರೆ, ನನ್ನ ಮನಸ್ಸೊಳಗೆ ಯಾಕೋ ಒಂತರಾ ಆತಂಕ...’

ಆ ಭಾವನೆಯನ್ನು ತಡೆಯಲಾಗದೆ ಅವನು ಶೇಖರ್‌ರನ್ನು ನೋಡುತ್ತಾ ಕೇಳಿದ.

“ಆದ್ರೆ ಜಾನೂಗೆ ಇಷ್ಟ ಇದೆಯೋ ಅಥವಾ ಇಲ್ಲವೋ ಅಂತ ಅವಳಿಗೆ ಕಾಲ್ ಮಾಡಿ ಕೇಳಬಹುದು ಅಲ್ವಾ ಮಾವ?”

ಸೂರ್ಯ ಕೂಡ ತಕ್ಷಣ ಹೇಳಿದರು.

“ಹೌದು ಅಪ್ಪ. ಒಂದು ಸಲ ಅವಳ ನಿರ್ಧಾರ ಕೇಳಿ. ಅವಳು ಒಪ್ಗೊಂದ್ರೆ ನನ್ನದು ಯಾವ ಪ್ರಾಬ್ಲಮ್ ಕೂಡ ಇಲ್ಲಾ.”

ಶೇಖರ್ ಶಶಿಧರ್ ಮುಖವನ್ನು ನೋಡಿದರು.

“ಸರಿಯಾಗೇ ಹೇಳ್ತಿದ್ದಾರೆ ಶೇಖರ್. ಒಂದು ಸಲ ಕಾಲ್ ಮಾಡಿ ಕೇಳ್ಬಿಡು,” ಎಂದು ಶಶಿಧರ್ ಹೇಳಿದರು.

ಮೋಹನ್ ರಾವ್ ಸಹ ಒಪ್ಪಿಗೆ ಸೂಚಿಸಿದರು.

“ಹೌದು ಶೇಖರ್ ಅವರೇ. ನೀವು ಕೇಳಿದ್ರೆ ಎಲ್ಲರ ಮನಸ್ಸಲ್ಲಿ ಇರೋ ಗೊಂದಲಾನು ನಿವಾರಣೆ ಆಗುತ್ತೇ.”

ಶೇಖರ್ ಜಾಹ್ನವಿಗೆ ಕರೆ ಮಾಡಿದರು. ಕರೆ ಸ್ಪೀಕರ್‌ಗೆ ಹಾಕಲಾಯಿತು.

“ಹಲೋ ಅಪ್ಪ, ಹೇಗಿದ್ದೀರಾ?” ಎಂದು ಜಾಹ್ನವಿ ಕೇಳಿದಳು.

“ಹಲೋ ಮಗಳೇ, ನಾನು ಚೆನ್ನಾಗಿದೀನಿ. ಅದು ನಾನು ನಿನ್ನ ಹತ್ರ ಒಂದು ತುಂಬಾ ಮುಖ್ಯವಾದ ವಿಷಯ ಮಾತಾಡಬೇಕು. ಫ್ರೀ ಇದ್ದಿಯಾ ಮಗಳೇ?”

ಆ ಸಮಯದಲ್ಲಿ ಜರ್ಮನಿಯಲ್ಲಿ ಜಾಹ್ನವಿ ತನ್ನ ಸ್ನೇಹಿತೆಯ ಮನೆಗೆ ಪಾರ್ಟಿಗೆ ಹೋಗಿದ್ದಳು. ಸುತ್ತಮುತ್ತ ಜನರ ಗದ್ದಲ ಹೆಚ್ಚಾಗಿದ್ದರಿಂದ ಅವಳಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ.

“ಹೇಳಿ ಅಪ್ಪ,” ಎಂದಳು.

“ಮಗಳೇ, ನಿನಗೆ ಒಂದು ಒಳ್ಳೆ ಸಂಬಂಧ ನೋಡಿದೀನಿ. ಹುಡುಗ ತುಂಬಾ ಲಕ್ಷಣವಾಗಿದಾನೆ. ಒಳ್ಳೆ ಮನೆತನದವನು. ನೀನು ಮೊದಲೇ ಹೇಳಿದ್ದೆ ಅಲ್ವಾ, ನಾನು ಯಾವ ಹುಡುಗನ್ನ ಆಯ್ಕೆ ಮಾಡ್ತೀನಿ ಅವನನ್ನೇ ಮದುವೆ ಆಗ್ತೀನಿ ಅಂತ. ಬೇಕಿದ್ರೆ ಹುಡುಗನ ಫೋಟೋನು ಕಳಿಸ್ತೀನಿ. ನಿನಗೆ ಒಪ್ಪಿಗೆ ಇದೆಯಾ? ಇದ್ರೆ ಹೂ ಅಂತ ಹೇಳು ಸಾಕು.”

ಆದರೆ ಜಾಹ್ನವಿಗೆ ತಂದೆಯ ಮಾತು ಸಂಪೂರ್ಣವಾಗಿ ಕೇಳಿಸಲಿಲ್ಲ.

“ಅಪ್ಪ... ಅದು ನೀವು ಹೇಳ್ತಿರೋದು...” ಎಂದು ಹೇಳುವಷ್ಟರಲ್ಲಿ ಶೇಖರ್ ಮತ್ತೆ,

“ನಿನಗೆ ಒಪ್ಪಿಗೆ ಇದೆ ಅಲ್ವಾ?” ಎಂದು ಕೇಳಿದರು.

ಹೆಚ್ಚು ಯೋಚಿಸದೆ ಜಾಹ್ನವಿ ಉತ್ತರಿಸಿದಳು.

“ಹಾ ಅಪ್ಪ... ಒಪ್ಪಿಗೆ ಇದೆ. ನಾನು ನಿಮಗೆ ಮತ್ತೆ ಕಾಲ್ ಮಾಡ್ತೀನಿ.”

ಅಂತ ಹೇಳಿ ಕರೆ ಕಡಿತಗೊಳಿಸಿದಳು.

ಆದರೆ ಜಾಹ್ನವಿಗೆ ತನ್ನ ತಂದೆ ಹೇಳಿದ ವಿಷಯ ಸರಿಯಾಗಿ ಕೇಳಿಸಲಿಲ್ಲ. ನಂತರ ಮತ್ತೆ ಕರೆ ಮಾಡಿ ಮಾತನಾಡೋಣ ಎಂದುಕೊಂಡ ಅವಳು, ವಿಷಯವನ್ನು ಸಂಪೂರ್ಣವಾಗಿ ಕೇಳದೆ ಒಪ್ಪಿಗೆಯನ್ನು ಸೂಚಿಸಿದ್ದಳು.

ಕೆಲವೊಮ್ಮೆ ಸಂದರ್ಭಗಳು... ಆಡುವ ಮಾತುಗಳು... ತುಂಬಾ ಮುಖ್ಯವಾಗಿರುತ್ತವೆ.

ಈ ಕಡೆ ಇಡೀ ಮನೆಯವರಿಗೆ ಎಲ್ಲಿಲ್ಲದ ಸಂಭ್ರಮ. ಆದರೆ ಜೆಕೆಯ ಮನಸ್ಸಿಗೆ ಮಾತ್ರ ಸಮಾಧಾನ ಇರಲಿಲ್ಲ.

“ಮಾವ... ಜಾನೂ ನೀವು ಮಾತಾಡಿದ್ದು ಸರಿಯಾಗಿ ಕೇಳಿಸಲಿಲ್ಲ ಅನ್ನಿಸುತ್ತೆ. ಅಲ್ಲಿ ತುಂಬಾ ಕ್ರೌಡ್ ಇತ್ತು.”

ಆದರೆ ಸುಧಾಕರ್ ತಕ್ಷಣ ಮಧ್ಯ ಪ್ರವೇಶಿಸಿದರು.

“ಈಗ ಏನೂ ಅವಳು ಶೇಖರ್ ಹೇಳಿದ ಮಾತನ್ನ ಕೇಳಿಸಿಕೊಳ್ದೆ ಒಪ್ಪಿಗೆ ಇದೆ ಅಂತ ಹೇಳಿದ್ಲು ಅಂತಾ ಹೇಳ್ತೀಯಾ? ಸುಮ್ನೆ ಇದ್ರೆ ಸರಿ. ಇವಾಗ ಎಲ್ಲರ ಖುಷಿನೂ ಹಾಳು ಮಾಡ್ಬೇಡ.”

ಸೂರ್ಯನಿಗೆ ತನ್ನ ತಂಗಿ ಒಪ್ಪಿಕೊಂಡಿರುವುದು ಮತ್ತಷ್ಟು ಗೊಂದಲವನ್ನುಂಟು ಮಾಡಿತು.

ಮೋಹನ್ ರಾವ್ ಸೂರ್ಯನತ್ತ ನೋಡಿ ಕೇಳಿದರು.

“ಅಬ್ಬಾ! ಅಂತೂ ಮತ್ತೆ ನಿಮ್ಮ ಮನೆಗೆ ಸಂಬಂಧ ಬೆಳೆಸುವ ಅದೃಷ್ಟ ಕೂಡಿ ಬಂತಲ್ಲ. ಸೂರ್ಯ, ನಿನಗೂ ಒಪ್ಪಿಗೆ ಇದೆ ಅಲ್ವಾ? ನಿನ್ನ ಮುಖ ನೋಡಿದ್ರೆ ಯಾಕೋ ನಿನಗೆ ಇಷ್ಟವಿಲ್ಲದ ಹಾಗೆ ಅನಿಸ್ತಿದೆ.”

ಶೇಖರ್ ನಗುತ್ತಾ ಹೇಳಿದರು.

“ಛೇ!.. ಛೇ!.. ಹಾಗೇನೂ ಇಲ್ಲ. ಅವನು ಯಾವಾಗ್ಲೂ ಹಾಗೆ. ಮುಖನಾ ಯಾವಾಗ್ಲೂ ಗಂಟು ಹಾಕೊಂಡೇ ಇರ್ತಾನೆ.”

ಸೂರ್ಯ ತನ್ನ ತಾಯಿಯತ್ತ ನೋಡಿದ.

ಸುಮತಿ ಮೃದುವಾಗಿ ನಗುತ್ತಾ ಹೇಳಿದರು.

“ಅವನಿಗೆ ಅವಳ ತಂಗಿ ಅಂದ್ರೆ ಪ್ರಾಣ. ನಾವೆಲ್ಲಾ ಇದ್ದಕ್ಕಿದ್ದ ಹಾಗೆ ಹೀಗೆಲ್ಲ ಹೇಳಿದ್ರೆ ಅವನಿಗೆ ಸ್ವಲ್ಪ ಕಷ್ಟ ಆಗುತ್ತೆ ಅಲ್ವಾ. ನೋಡು ಸೂರಿ, ನನಗೂ ಇದು ಸರಿಯಾದ ನಿರ್ಧಾರಾನೇ ಅನಿಸ್ತಿದೆ. ದೊಡ್ಡವರೆಲ್ಲ ಯೋಚನೆ ಮಾಡ್ದೆ ನಿರ್ಧಾರ ತಗೋಳಲ್ಲ. ನೀನು ಚಿಂತೆ ಮಾಡೋದನ್ನ ಬಿಟ್ಬಿಡು.”

“ಹೌದು ಕಣೋ, ಜಾನೂನೇ ಒಪ್ಪಿಗೆ ಕೊಟ್ಟಿರುವಾಗ ಇನ್ನೂ ನಾವೆಲ್ಲಾ ಯಾವ ಲೆಕ್ಕ,” ಎಂದು ಭುವನ್ ಹೇಳಿದರು.

ಮಾಧವ್ ನಗುತ್ತಾ ಹೇಳಿದರು.

“ಆದರೆ ನನಗೆ ಒಂದು ಡೌಟ್.”

ಲಕ್ಕಿ ಗಾಬರಿಯಿಂದ ಕೇಳಿದರು.

“ಮತ್ತೆ ಯಾವ ಡೌಟ್ ನಿಂಗೆ?”

“ಅಯ್ಯೋ ದೊಡ್ಡಪ್ಪ, ದೊಡ್ಡ ಮ್ಯಾಟರ್ ಏನು ಅಲ್ಲ. ಮೊದಲು ಸೂರ್ಯ ಅಮ್ಮು ಮದುವೆ ಆಗುತ್ತಾ ಅಥವಾ ರೋಹನ್ ಜಾನೂ ಮದುವೆ ಆಗುತ್ತಾ ಅಂತಾ.”

ಅಲ್ಲಿದ್ದ ಎಲ್ಲರ ಮುಖದಲ್ಲಿ ನಗು ಮೂಡಿತು.

ಯಶೋಧ ತುಂಟ ನಗೆಯೊಂದಿಗೆ ಹೇಳಿದರು.

“ಅರೆರೆ... ಮೊದಲು ನಮ್ಮ ಸೂರ್ಯ ಅಂಬ್ರತಾ ಮದುವೆನೇ. ಯಾರಿಗೆ ಗೊತ್ತು, ನಾವು ಮದುವೆ ಮಾಡೋದು ತಡ ಮಾಡಿದ್ರೆ ಎಲ್ಲೀ ಹೋಗಿ ರಿಜಿಸ್ಟರ್ ಮ್ಯಾರೇಜ್ ಆದರೂ ಏನೂ ಆಶ್ಚರ್ಯ ಇಲ್ಲಾ.”

“ಸರಿಯಾಗಿ ಹೇಳ್ದೆ ಯಶೋಧ,” ಎಂದು ಲಕ್ಕಿ ಒಪ್ಪಿಗೆ ಸೂಚಿಸಿದರು.

ಆ ಮಾತು ಮನೆಯೊಳಗಿನ ಗಂಭೀರತೆಯನ್ನು ಕ್ಷಣಮಾತ್ರದಲ್ಲಿ ದೂರ ಮಾಡಿತು.

ಅಷ್ಟರಲ್ಲಿ ಸುಧಾಕರ್ ನಗುತ್ತಾ ಹೇಳಿದರು.

“ಬೀಗರು ಊಟ ಮಾಡದೆ ಹಾಗೆ ಹೊರಟಿದ್ರೀ. ಈಗಲಾದರೂ ಎಲ್ಲರೂ ಊಟ ಮಾಡೋಣವೇ?”

ಮನೆಯೊಳಗೆ ಮತ್ತೆ ನಗು ಮೊಳಗಿತು.

ಎಲ್ಲರೂ ಡೈನಿಂಗ್ ಟೇಬಲ್ ಬಳಿ ಕುಳಿತರು. ನಗು, ನೆಮ್ಮದಿ ಮತ್ತು ಒಂದಾಗಿ ಇರುವ ಸಂತೋಷದಿಂದ ಪ್ರತಿಯೊಬ್ಬರ ಮನಸ್ಸೂ ತುಂಬಿತ್ತು. ಆ ಕ್ಷಣದಲ್ಲಿ ಮನೆ ಅನ್ನುವ ಪದಕ್ಕೆ ನಿಜವಾದ ಅರ್ಥ ದೊರೆತಂತಿತ್ತು.

ಆದರೆ ಸೂರ್ಯ, ಕಾರ್ತಿಕ್ ಮತ್ತು ಜೆಕೆ ಅಲ್ಲಿಂದ ರೂಮ್ ಕಡೆ ಹೊರಡಲು ಮುಂದಾದರು.

“ಜೆಕೆ, ಏನಾಯ್ತು? ಸೂರ್ಯ ಬಾ ಕಂದ. ಇನ್ನುಮುಂದೆ ನೀನು ಈ ಮನೆಗೆ ಆಫೀಸಿಯಲ್ ಆಗಿ ಅಳಿಯ ಆಗೋನು,” ಎಂದು ಶಶಿಧರ್ ಹೇಳಿದರು.

ಸೂರ್ಯ ಕೇವಲ ಹುಸಿ ನಗೆಯನ್ನು ಬೀರಿಸಿದ. ಮೂವರೂ ಏನನ್ನೂ ಮಾತನಾಡದೆ ಡೈನಿಂಗ್ ಟೇಬಲ್ ಕಡೆ ನಡೆದುಹೋದರು.

ಊಟ ಮಾಡುತ್ತಿದ್ದಾಗ ಸರಳಾ ಸಂತೋಷದಿಂದ ಹೇಳಿದರು.

“ಹಾಗಾದ್ರೆ ಮದುವೆಗೆ ಅದಷ್ಟು ಬೇಗ ಮುಹೂರ್ತ ಫಿಕ್ಸ್ ಮಾಡಿ. ನನಗಂತೂ ನಮ್ಮ ಮನೇಲಿ ಯಾವಾಗ ಮದುವೆ ಕಳೆ ಶುರುವಾಗುತ್ತೆ ಅಂತ ಅನಿಸ್ತಿದೆ.”

ಲಕ್ಷ್ಮೀ ಅಜ್ಜಿ ಸಹ ಹೇಳಿದರು.

“ಹೌದು ಸರಳಾ ಅವರೇ. ನಮ್ಮ ಮನೇಲು ಮದುವೆ ಸಂಭ್ರಮ ಆಗಿ ಬಹಳ ದಿನವಾಯ್ತು. ಅದಷ್ಟು ಬೇಗ ಮದುವೆ ಮಾಡಿ ಬಿಡೋಣ.”

ಶಶಿಧರ್ ಯೋಚನೆಯಿಂದ ಕೇಳಿದರು.

“ಆದರೆ ನಿಮ್ಮ ಮಗ ರೋಹನ್ ತುಂಬಾ ಕೋಪದಲ್ಲಿ ಮನೆ ಬಿಟ್ಟು ಹೋದ. ಅವನಿಗೆ ಈ ಮದುವೆ ಇಷ್ಟ ಆಗುತ್ತಾ ಅಥವಾ ಇಲ್ಲವಾ? ನಾವುಗಳೇ ನಿರ್ಧಾರ ತಗೊಳ್ಳೊಕಿಂತ ಅವನ ನಿರ್ಧಾರನು ಮುಖ್ಯ.”

ಮೋಹನ್ ರಾವ್ ವಿಶ್ವಾಸದಿಂದ ಹೇಳಿದರು.

“ಬೀಗರೆ, ನೀವೇನು ಚಿಂತೆ ಮಾಡ್ಬೇಡಿ. ನಮ್ಮ ರೋಹನ್ ಖಂಡಿತಾ ಈ ಮದುವೆಗೆ ಒಪ್ಗೊತಾನೆ. ಮನೆಗೆ ಹೋದ ತಕ್ಷಣ ಖುಷಿ ವಿಚಾರವನ್ನೇ ತಿಳಿಸ್ತೀವಿ.”

ಜೆಕೆ ಊಟ ಮಾಡುತ್ತಿದ್ದರೂ ಅವನ ಮನಸ್ಸಿನ ತಳಮಳ ಮಾತ್ರ ಕಡಿಮೆಯಾಗುತ್ತಿರಲಿಲ್ಲ.

‘ಇದೇನಿದು? ಎಲ್ಲಾ ಒಳ್ಳೆಯದೇ ಆಗ್ತಿದೆ. ನಮ್ಮ ಸೂರ್ಯನ ಮದುವೆಗೆ ದೊಡ್ಡಪ್ಪ ಒಪ್ಗೊಂಡ್ರು. ದೊಡ್ಡಪ್ಪ ಕೊಟ್ಟ ಮಾತು ಸಹ ಉಳಿತು. ಆದ್ರೆ ನನ್ನ ಮನಸ್ಸಿಗೆ ಒಂತರಾ ಹಿಂಸೆ ಯಾಕೆ?’

‘ಸ್ವಾತಿಗೆ ಏನಾದ್ರೂ ತೊಂದರೆ ಆಗಿದೆಯಾ?’

ತಕ್ಷಣ ತನ್ನ ಮೊಬೈಲ್ ತೆಗೆದು ಸ್ವಾತಿಗೆ ಮೆಸೇಜ್ ಮಾಡಿದ.

‘ಸ್ವಾತಿ, ನೀನು ಆರಾಮಾಗಿ ಇದ್ದೀಯಾ?’

ಸ್ವಾತಿ ಕೂಡಲೇ ಉತ್ತರಿಸಿದಳು.

‘ಹಾ! ನಾನು ಆರಾಮಾಗಿ ಇದ್ದೀನಿ. ನಾಳೆ ಊರಿಗೆ ಬಂದು ರೀಚ್ ಆಗ್ತೀವಿ. ನಾನು ನಿನ್ನ ನಾಳೆ ಮೀಟ್ ಮಾಡ್ತೀನಿ.’

ಆದರೂ ಜೆಕೆಯ ಮನಸ್ಸಿಗೆ ಸಮಾಧಾನ ಸಿಗಲಿಲ್ಲ.

‘ಸ್ವಾತಿ ಕೂಡ ಆರಾಮಾಗಿ ಇದ್ದಾಳೆ. ಆದ್ರೆ ನಂಗೆ ಯಾಕೆ ಈ ಹಿಂಸೆ? ಯಾವಾಗ ಜಾನೂ ಮದುವೆ ವಿಷಯ ಬಂತೋ ಆಗಿಂದ ನಂಗೆ ಈ ಕಳವಳ, ಆತಂಕ. ನಾನು ಅವಳನ್ನ ನೋಡೇ ಇಲ್ಲ. ಒಂದು ಸಲವೂ ಮಾತಾಡಿಲ್ಲ. ಆದರೂ ಯಾಕೆ ಈ ಸಂಕಟ?’

ಅವನ ಮನಸ್ಸೊಳಗೆ ಹಲವಾರು ಪ್ರಶ್ನೆಗಳು ಮೂಡುತ್ತಿದ್ದವು. ಅವನ ಭಾವನೆಗಳು ಅವನಿಗೆ ಗೊತ್ತಿಲ್ಲದ ಹಾಗೆ ಯಾವುದೋ ಸುಳಿವನ್ನು ನೀಡುತ್ತಿದ್ದವು.

ಎಲ್ಲರೂ ತಮ್ಮ ತಮ್ಮ ಊಟದಲ್ಲಿ ಮಗ್ನರಾಗಿದ್ದಾಗ, ಮೋಹನ್ ರಾವ್ ಜೆಕೆಯತ್ತ ದೃಷ್ಟಿ ಹರಿಸಿದರು.

ಏನನ್ನೂ ಕೇಳದೆ... ಯಾವ ಶಬ್ದವಿಲ್ಲದೆ... ಕೆಲ ಕ್ಷಣಗಳ ಕಾಲ ಅವರ ದೃಷ್ಟಿ ಅಲ್ಲೇ ನಿಂತಂತಾಯಿತು.

ಆ ಕ್ಷಣದಲ್ಲಿ ಅವರ ಮುಖದಲ್ಲಿ ಮೃದುವಾದ, ಆದರೆ ಅರ್ಥವಾಗದ ನಗು ಮೂಡಿತು.

ಅದು ಉಲ್ಲಾಸದಿಂದ ತುಂಬಿರಲಿಲ್ಲ ಉಪಹಾಸವನ್ನೂ ತೋರಿಸಲಿಲ್ಲ.
ಅದೊಂದು ಬಗೆಯ ಮೌನ ಸಂದೇಶವಿತ್ತು...

ಮುಂದುವರೆಯುವುದು...