Death Locker - The Secret of the Eleventh Floor in Kannada Thriller by Sandeep Joshi books and stories PDF | ಸಾವಿನ ಲಾಕರ್ -ಹನ್ನೊಂದನೇ ಮಹಡಿಯ ರಹಸ್ಯ

Featured Books
Categories
Share

ಸಾವಿನ ಲಾಕರ್ -ಹನ್ನೊಂದನೇ ಮಹಡಿಯ ರಹಸ್ಯ

ವರುಣ್ ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿರುವ ಒಂದು ಐಷಾರಾಮಿ ಹೈ-ರೈಸ್ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಗೊಂಡಿದ್ದ. 'ದಿ ಸ್ಕೈವೇ' ಎಂಬ ಆ ಕಟ್ಟಡದಲ್ಲಿ ಒಟ್ಟು 15 ಮಹಡಿಗಳು. ವರುಣ್ ವಾಸಿಸುತ್ತಿದ್ದ ಫ್ಲಾಟ್ ಸಂಖ್ಯೆ 1103  ಹನ್ನೊಂದನೇ ಮಹಡಿಯಲ್ಲಿ.
ಸಮಯ ರಾತ್ರಿ 10 ಗಂಟೆ. ಹೊರಗೆ ಭಾರಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿತ್ತು. ವಿದ್ಯುತ್ ಇತ್ತು, ಆದರೆ ಅಪಾರ್ಟ್‌ಮೆಂಟ್‌ನ ದೀರ್ಘ ಕಾರಿಡಾರ್‌ಗಳು ವಿಚಿತ್ರವಾದ ನಿಶ್ಯಬ್ದದಲ್ಲಿ ಮುಳುಗಿದ್ದವು. ವರುಣ್ ಕೆಲಸದ ಒತ್ತಡದಿಂದ ಬೇಸತ್ತು ಮನೆಗೆ ಬಂದಿದ್ದ. ಅವನ ರೂಮ್‌ಮೇಟ್ ಒಂದು ವಾರದ ಮಟ್ಟಿಗೆ ಊರಿಗೆ ಹೋಗಿದ್ದರಿಂದ ವರುಣ್ ಒಂಟಿ.
ಅವನು ತನ್ನ ಲ್ಯಾಪ್ಟಾಪ್ ಆನ್ ಮಾಡಿ, ಇಯರ್‌ಫೋನ್ಸ್‌ ಹಾಕಿ ಸಂಗೀತ ಕೇಳುತ್ತಿದ್ದಾಗ, ಸಣ್ಣದೊಂದು ಶಬ್ದ ಕೇಳಿಸಿತು. ಅದು ಅವನ ಫ್ಲಾಟ್‌ ಬಾಗಿಲಿನಿಂದ ಬಂದಿತ್ತು. ಟಕ್... ಟಕ್.
ವರುಣ್ ಇಯರ್‌ಫೋನ್ಸ್‌ ತೆಗೆದು, ಕಿವಿ ನಿಮಿರುವಂತೆ ಮಾಡಿದ. ಯಾವುದೇ ಶಬ್ದ ಕೇಳಲಿಲ್ಲ. ಇದು ಗಾಳಿಯ ಸದ್ದಾಗಿರಬಹುದು' ಎಂದುಕೊಂಡನು. ಮತ್ತೆ, ಕಬ್ಬಿಣದಂತಹ ವಸ್ತು ಏನೋ ನೆಲದ ಮೇಲೆ ಉರುಳಿದಂತಹ ಶಬ್ದ ಕೇಳಿಸಿತು. ಈ ಬಾರಿ ಸ್ಪಷ್ಟವಾಗಿತ್ತು, ಮತ್ತು ಅದು ಅವನ ಫ್ಲಾಟ್‌ನ ಒಳಗೆ, ಮುಖ್ಯ ಬಾಗಿಲಿನಿಂದ ಸ್ವಲ್ಪ ದೂರದಲ್ಲಿರುವ ಲಾಂಡ್ರಿ ಏರಿಯಾದಿಂದ ಬರುತ್ತಿತ್ತು.
ವರುಣ್ ನಿಧಾನವಾಗಿ ಎದ್ದು, ಕೈಯಲ್ಲಿ ಟಾರ್ಚ್ ಹಿಡಿದು ಲಾಂಡ್ರಿ ಏರಿಯಾ ಕಡೆ ನಡೆದನು. ಇದು ಸ್ಟೋರ್‌ರೂಮ್ ಮತ್ತು ಲಾಂಡ್ರಿ ಏರಿಯಾ ಮಿಶ್ರಿತವಾದ ಚಿಕ್ಕ ಕೋಣೆ.
ಒಳಗೆ ಹೋದಾಗ, ಎಲ್ಲವೂ ಸರಿಯಾಗಿ ಇತ್ತು. ಆದರೆ, ಮೂಲೆಯಲ್ಲಿ ಇಟ್ಟಿದ್ದ, ತೀರಾ ಹಳೆಯದಾದ, ಕಬ್ಬಿಣದ, ದೊಡ್ಡ ಲಾಕರ್ ಕೊಂಚ ತೆರೆದಿದ್ದು ಕಂಡಿತು. ಆ ಲಾಕರ್ ಕೀಲಿಯು ಯಾವಾಗಲೂ ಮನೆಯ ಮೇಜಿನ ಡ್ರಾಯರ್‌ನಲ್ಲಿ ಇರುತ್ತಿತ್ತು. ಆದರೆ ಈಗ ಅದು ನೆಲದ ಮೇಲೆ, ಲಾಕರ್ ಪಕ್ಕದಲ್ಲಿ ಬಿದ್ದಿತ್ತು. ವರುಣ್ ತನ್ನ ಹೃದಯ ಬಡಿದುಕೊಳ್ಳುವುದನ್ನು ತಡೆಯಲು ಪ್ರಯತ್ನಿಸುತ್ತಾ, ಬಾಗಿಲು ತೆರೆದು ಲಾಕರ್‌ನ ಒಳಗೆ ನೋಡಿದ. ಲಾಕರ್ ಖಾಲಿಯಾಗಿತ್ತು. ಸಾಮಾನ್ಯವಾಗಿ ಅಲ್ಲಿ ಹಳೆಯ ಬಟ್ಟೆಗಳು, ಮತ್ತು ಹಳೆಯ ದಾಖಲೆಗಳು ಇರುತ್ತಿದ್ದವು. ಆದರೆ, ಈಗ ಅಲ್ಲಿ ಏನೂ ಇರಲಿಲ್ಲ. ಬದಲಿಗೆ, ಅದರ ಹಿಂಭಾಗದಲ್ಲಿ, ಕಬ್ಬಿಣದ ಗೋಡೆಯ ಮೇಲೆ, ಉಗುರುಗಳಿಂದ ಕೆತ್ತಿದಂತಹ ಒಂದು ಹಳೆಯ ಗೀಚು ಇತ್ತು. ಕತ್ತಲೆಯಲ್ಲಿ ಆ ಗೀಚು ಭಯಾನಕವಾಗಿ ಕಂಡಿತು. ಅದು ಕೇವಲ ಒಂದು ಪದವಾಗಿತ್ತು, ಬರೆದ ಶೈಲಿ ವಿಚಿತ್ರವಾಗಿತ್ತು.
"ನೋಡು" ವರುಣ್ ಬೆವರುತ್ತಿದ್ದ. ರೂಮ್‌ಮೇಟ್ ಲಾಕರ್ ತೆಗೆದು ಏನಾದರೂ ತೆಗೆದಿರಬಹುದೇ? ಆದರೆ ಆತ ಊರಿಗೆ ಹೋಗಿದ್ದಾನೆ. ಕೀಲಿಯು ಏಕೆ ನೆಲದ ಮೇಲೆ ಬಿದ್ದಿದೆ? ಮತ್ತು ಆ ಗೀಚು? ವರುಣ್ ತನ್ನ ಮೊಬೈಲ್‌ನ ಕ್ಯಾಮೆರಾ ಆನ್ ಮಾಡಿ ಆ ಗೀಚಿನ ಫೋಟೋ ತೆಗೆಯಲು ಹೋದನು. ಆದರೆ ಕ್ಯಾಮೆರಾ ಆನ್ ಮಾಡಿದ ತಕ್ಷಣ, ಫ್ಲಾಶ್ ಲೈಟ್ ಲಾಕರ್‌ನ ಹಿಂಭಾಗಕ್ಕೆ ಬಿದ್ದಾಗ, ಆ ಗೋಡೆಯ ಮೇಲೆ ಮತ್ತೊಂದು ಕೈ ಬರಹ ಕಂಡಿತು. ಇದು ಹೊಸದಾಗಿತ್ತು. ಸ್ಪಷ್ಟವಾಗಿ, ರಕ್ತದಲ್ಲಿ ಬರೆದಂತೆ ಇತ್ತು.
"ನೀನೊಬ್ಬನೇ"
ವರುಣ್‌ಗೆ ತಲೆ ತಿರುಗಿದಂತಾಯಿತು. ಅವನು ತಕ್ಷಣ ಲಾಕರ್ ಬಾಗಿಲು ಹಾಕಿದ. ಕೋಣೆಯಿಂದ ಹೊರಗೆ ಓಡಿಬಂದು ಬಾಗಿಲನ್ನು ಲಾಕ್ ಮಾಡಿದ. ಆತಂಕದಲ್ಲಿ ಕೈಗಳು ನಡುಗುತ್ತಿದ್ದವು. ಮೊದಲ ಕೆಲಸ, ಪೊಲೀಸರಿಗೆ ಕರೆ ಮಾಡುವುದು. ಅವನು ಫೋನ್ ತೆಗೆದುಕೊಂಡ. ನೆಟ್‌ವರ್ಕ್ ಇತ್ತು, ಆದರೆ 'ಔಟ್ ಆಫ್ ಸರ್ವಿಸ್' ಎಂದು ತೋರಿಸುತ್ತಿತ್ತು. ಮೊಬೈಲ್ ಡೇಟಾ ಸಂಪೂರ್ಣ ಬಂದ್ ಆಗಿತ್ತು. ಅಪಾರ್ಟ್‌ಮೆಂಟ್‌ನ ವೈ-ಫೈ ರೂಟರ್‌ಗೆ ಲೈಟ್ ಇತ್ತು, ಆದರೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಹೊರಗಿನ ಜಗತ್ತಿನೊಂದಿಗೆ ಅವನ ಸಂಪರ್ಕ ಕಡಿತವಾಗಿತ್ತು. ವರುಣ್ ಕಿಟಕಿಯ ಬಳಿ ಹೋದನು. ಮಳೆ ಜೋರಾಗಿತ್ತು. ಗಾಳಿ ಶಬ್ಧ ಭೂಮಿಗೆ ಬೀಳುತ್ತಿರುವ ವಿಮಾನದ ಶಬ್ಧದಂತೆ ಇತ್ತು. ಹನ್ನೊಂದನೇ ಮಹಡಿಯ ಕೆಳಗೆ, ಬೀದಿಯಲ್ಲಿ ಯಾವುದೇ ಚಲನೆಯಿರಲಿಲ್ಲ. ಯಾರೋ ಅವನ ಫ್ಲಾಟ್‌ನೊಳಗೆ ನುಸುಳಿದ್ದಾರೆ. ಅವರು ಇನ್ನೂ ಇಲ್ಲೇ ಎಲ್ಲೋ ಅಡಗಿದ್ದಾರೆ. ಆದರೆ, ಯಾಕೆ? ವರುಣ್ ಇಡೀ ಫ್ಲಾಟ್‌ನ ಎಲ್ಲಾ ರೂಮ್‌ಗಳನ್ನು, ಬಾಲ್ಕನಿಗಳನ್ನು, ಮತ್ತು ಅಡುಗೆಮನೆಯನ್ನು ಪರೀಕ್ಷಿಸಿದನು. ಎಲ್ಲೆಡೆ ಸರಿಯಾಗಿತ್ತು. ಯಾರು  ಇರಲಿಲ್ಲ. ಭೀತಿ ಅವನನ್ನು ಆವರಿಸಿತು. ಅವನು ಲಿವಿಂಗ್ ರೂಮಿನ ಸೋಫಾದ ಮೇಲೆ ಕೂತು, ತನ್ನ ಹಳೆಯ ಕಾಲದ ಕೀಪ್ಯಾಡ್ ಫೋನ್‌ನಿಂದ ನೆಟ್‌ವರ್ಕ್‌ಗಾಗಿ ಪ್ರಯತ್ನಿಸಿದ. ಆ ಕ್ಷಣ, ಬಾಗಿಲಿನ ಕಡೆಯಿಂದ, ಒಂದು ಮೃದುವಾದ, ಆದರೆ ಸ್ಪಷ್ಟವಾದ ಪಾದದ ಸದ್ದು ಕೇಳಿಸಿತು.
ಚಪ್ಪಲಿ ಧರಿಸಿದಂತೆ, ಮೆತ್ತನೆ ನಡೆಯುವ ಸದ್ದು. ವರುಣ್ ನಿಧಾನವಾಗಿ ಎದ್ದು ನಿಂತನು. ಅವನಿಗೆ ಗೊತ್ತು, ಆ ಸದ್ದು ಅವನ ಹಿಂದೆ, ಕೋಣೆಯ ಮತ್ತೊಂದು ಬದಿಯಲ್ಲಿತ್ತು.
ಅವನು ತಿರುಗಿ ನೋಡಲಿಲ್ಲ. ಬದಲಿಗೆ, ಅವನ ಮುಂದೆ ಗೋಡೆಗೆ ಅಳವಡಿಸಿದ್ದ ದೊಡ್ಡ ಕನ್ನಡಿಯಲ್ಲಿ ನೋಡಿದನು.
ಕನ್ನಡಿಯ ಪ್ರತಿಬಿಂಬವು ವರುಣ್ ಮುಖದ ಹಿಂದೆ, ಕಾರಿಡಾರ್‌ನ ಕತ್ತಲಿನಲ್ಲಿ, ಒಬ್ಬ ಮನುಷ್ಯನ ಅಸ್ಪಷ್ಟ ಆಕೃತಿಯನ್ನು ತೋರಿಸಿತು. ಅದು ನಿಧಾನವಾಗಿ ಅವನ ಕಡೆಗೆ ಬರುತ್ತಿತ್ತು. ಅವನ ಕೈಯಲ್ಲಿ ಉದ್ದವಾದ, ಹೊಳೆಯುವ ಚಾಕು ಇತ್ತು. ವರುಣ್ ಹೆಪ್ಪುಗಟ್ಟಿದಂತೆ ನಿಂತನು. 'ಓಡಿ ಹೋಗು' ಎಂದು ಅವನ ಮನಸ್ಸು ಕೂಗುತ್ತಿದ್ದರೂ, ಅವನ ಕಾಲುಗಳು ಕದಲುತ್ತಿರಲಿಲ್ಲ. ಆ ಮನುಷ್ಯ ಕನ್ನಡಿಯೊಳಗೆ ಹತ್ತಿರ ಹತ್ತಿರ ಬರುತ್ತಿದ್ದನು. ವರುಣ್‌ನ ಹೃದಯ ತೀವ್ರವಾಗಿ ಬಡಿಯುತ್ತಿತ್ತು. ಕನ್ನಡಿಯೊಳಗಿನ ಆಕೃತಿ, ವರುಣ್‌ನಿಂದ ಕೇವಲ ಮೂರು ಹೆಜ್ಜೆ ದೂರದಲ್ಲಿದ್ದಾಗ, ವರುಣ್ ತನ್ನ ಸಂಪೂರ್ಣ ಶಕ್ತಿಯನ್ನು ಒಟ್ಟುಗೂಡಿಸಿ, ಒಮ್ಮೆಲೇ ನೆಲದ ಮೇಲೆ ಬಗ್ಗಿ, ಕನ್ನಡಿಯ ಕೆಳಭಾಗದಿಂದ ಕೋಣೆಯೊಳಗೆ ನೋಡಿದನು. ಆ ಕಡೆ ಯಾರೂ ಇರಲಿಲ್ಲ.
ಕಾರಿಡಾರ್ ಖಾಲಿಯಾಗಿತ್ತು. ಪಾದದ ಸದ್ದು ನಿಂತಿತ್ತು. ಚಾಕು ಕೂಡ ಇರಲಿಲ್ಲ. ಆದರೆ, ಕನ್ನಡಿಯಲ್ಲಿದ್ದ ಪ್ರತಿಬಿಂಬವು ಕೇವಲ ವರುಣ್‌ನದ್ದಾಗಿತ್ತು. ಮತ್ತು ಆ ಪ್ರತಿಬಿಂಬವು, ತನ್ನ ಹಿಂದಿನ ಖಾಲಿ ಕಾರಿಡಾರ್‌ಗೆ ಕೈ ಮಾಡಿ, ವಿಚಿತ್ರವಾದ ನಗೆಯೊಂದಿಗೆ, ದೊಡ್ಡ ದನಿಯಲ್ಲಿ ಪಿಸುಗುಟ್ಟಿತು.
'ನಿನ್ನ ಹಿಂದೆ'
ವರುಣ್ ಆತಂಕದಿಂದ ಹಿಂದೆ ತಿರುಗಿದನು. ಆ ಕಡೆಯಿಂದ ಲಾಕರ್‌ನ ರೂಮ್‌ ಕಡೆಯಿಂದ ಜೋರಾಗಿ ಕೀಲಿಯ ಸದ್ದು ಕೇಳಿಸಿತು. ಲಾಕರ್‌ನ ಬಾಗಿಲು ಮತ್ತೆ ತೆರೆಯುವ ಶಬ್ದ.
ವರುಣ್ ಹಿಂದಕ್ಕೆ ಓಡಿದನು. ಆ ಕೋಣೆಯೊಳಗೆ ಇಣುಕಿದಾಗ, ಲಾಕರ್‌ನ ಬಾಗಿಲು ಅರ್ಧ ತೆರೆದಿತ್ತು. ಬಾಗಿಲ ಪಕ್ಕದಲ್ಲಿ, ನೆಲದ ಮೇಲೆ ಅದೇ ಕೀಲಿ ಕೈ ಬಿದ್ದಿತ್ತು.
ಆದರೆ ಈ ಬಾರಿ ಲಾಕರ್‌ನ ಗೋಡೆಯ ಮೇಲೆ ರಕ್ತದಲ್ಲಿ ಬರೆದಿದ್ದ ನೀನೊಬ್ಬನೇ ಎಂಬ ಪದದ ಕೆಳಗೆ ಇನ್ನೊಂದು ಭಯಾನಕ ಸಾಲು ಮೂಡಿತ್ತು.
"ಸಂಪರ್ಕವೇ ಇಲ್ಲ"
ವರುಣ್‌ಗೆ ಅರಿವಾಯಿತು. ಇದು ಕೇವಲ ಕಳ್ಳನ ಕೆಲಸವಲ್ಲ. ಯಾರೋ ಅಥವಾ ಏನೋ ಅವನನ್ನು ಸಂಪೂರ್ಣವಾಗಿ ಮಾನಸಿಕವಾಗಿ ಒಡೆಯಲು ಪ್ರಯತ್ನಿಸುತ್ತಿದೆ. ಸಂಪರ್ಕ ಕಡಿತಗೊಂಡಿರುವುದು, ಮನಸ್ಸಿನಲ್ಲಿ ಭೀತಿಯನ್ನು ಹೆಚ್ಚಿಸಲು. ಅವನು ಗಟ್ಟಿಯಾಗಿ ಉಸಿರು ತೆಗೆದುಕೊಂಡು, ಒಂದು ನಿರ್ಧಾರ ಮಾಡಿದನು. ಅವನು ಪೊಲೀಸರಿಗೆ ಕರೆ ಮಾಡಲು ಸಾಧ್ಯವಾಗದಿದ್ದರೂ, ಅವನಿಗೆ ತಿಳಿದಿತ್ತು. ಈ ಕಟ್ಟಡದ ಹನ್ನೊಂದನೇ ಮಹಡಿಯಲ್ಲಿ ಯಾರೋ ಒಬ್ಬರು ಕೀಲಿ ಕೈಯನ್ನು ಇಟ್ಟು, ರಕ್ತದಲ್ಲಿ ಬರೆದು, ಅವನ ಮನಸ್ಸಿನೊಂದಿಗೆ ಆಟವಾಡುತ್ತಿದ್ದಾರೆ.ಅವನು ಲಾಕರ್‌ನಿಂದ ಆಚೆ ಬಂದು, ಫ್ಲಾಟ್‌ನ ಮುಖ್ಯ ಬಾಗಿಲ ಕಡೆಗೆ ಓಡಿದನು. ಹೇಗಾದರೂ ಮಾಡಿ ಹೊರಗೆ ಹೋಗಲೇಬೇಕು.
ಬಾಗಿಲು ತೆರೆಯಲು ಹೊರಟಾಗ, ಬಾಗಿಲಿನ ಲಾಕ್‌ನ ಹತ್ತಿರ, ನೆಲದ ಮೇಲೆ, ಅದೇ ಪೆಟ್ರೋಲ್ ಕಪ್ಪು ಬಿದ್ದಿತ್ತು.
ಇದು ಹೇಗೆ ಸಾಧ್ಯ? ನೆನಪಿರಲಿ, ಇದು ವರುಣ್ ಹೊಸದಾಗಿ ಬಾಡಿಗೆಗೆ ಪಡೆದಿದ್ದ ಅಪಾರ್ಟ್‌ಮೆಂಟ್, ಬೈಕ್ ಕಥೆಯ ವಿಕ್ರಂಗೆ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಆ ಪೆಟ್ರೋಲ್ ಕಪ್ಪು ಇಲ್ಲಿದೆ. ವರುಣ್ ಕೈ ನಡುಗುತ್ತಾ ಆ ಕಪ್ಪನ್ನು ತೆಗೆದುಕೊಂಡನು. ಅದರ ತಳಭಾಗದಲ್ಲಿ, ಅಳಿಸಲಾಗದ ಮಸಿಯಲ್ಲಿ, ಒಂದು ಅಕ್ಷರವನ್ನು ಬರೆದಿತ್ತು:
'V'
ಕಥೆಯ ಆರಂಭದಲ್ಲಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಕ್ರಂನ ಮೊದಲ ಅಕ್ಷರ. ಈ ಅಪಾರ್ಟ್‌ಮೆಂಟ್‌ಗೂ, ಅವನಿಗೂ ಯಾವುದೋ ಭಯಾನಕ ಸಂಪರ್ಕವಿತ್ತು.
ವರುಣ್ ಆ ಕಪ್ಪನ್ನು ಹಿಡಿದು ಬಾಗಿಲು ತೆರೆದು ಹೊರಗೆ ಹೋಗಲು ಪ್ರಯತ್ನಿಸಿದ. ಆದರೆ ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ಅವನು ಒಳಗೆ ಬಂಧಿಯಾಗಿದ್ದ.
ಅವನು ಹಿಂದಿರುಗಿ ನೋಡಿದ. ಲಿವಿಂಗ್ ರೂಮಿನ ಕನ್ನಡಿಯು ಅವನನ್ನು ದಿಟ್ಟಿಸುತ್ತಿತ್ತು. ಮತ್ತು ಆ ಕನ್ನಡಿಯ ಹಿಂಬದಿಯ ಖಾಲಿ ಗೋಡೆಯ ಮೇಲೆ, ಈಗ ಒಂದು ಪದ ಮೂಡಿತ್ತು.
"ಬಂಧಿ"
ವರುಣ್ ಆ ಕಪ್ಪನ್ನು ಗಟ್ಟಿಯಾಗಿ ಹಿಡಿದು, ಆ ಕನ್ನಡಿ ಕಡೆಗೆ ನೋಡಿದ. ಅವನಿಗೆ ಗೊತ್ತಿತ್ತು, ಆತ ಇನ್ನು ಒಂಟಿಯಲ್ಲ. ಆತ ಯಾವುದೋ ರಹಸ್ಯದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆ ಭಯಾನಕ 'V' ಅಕ್ಷರವೇ ಅವನ ಮುಂದಿನ ಹೆಜ್ಜೆಗೆ ಕಾರಣ.
ಈ ಕಥೆ ನಿಮಗೆ ಇಷ್ಟವಾಯಿತೇ?