ಮಬ್ಬುಗತ್ತಲಿನ ಬೆಳಗಿನ ಮುಂಜಾವು, ಗಾಢ ನಿದ್ರೆಯಲ್ಲಿ ಇದ್ದ ಸಿದ್ದಾರ್ಥ್ ಫೋನ್ ರಿಂಗಣಿಸಿತ್ತು. ಮೊದಮೊದಲು ಕರೆ ಸ್ವೀಕರಿಸದವರು, ಮತ್ತೆ ಮತ್ತೆ ಬಿಡದೆ ಎರಡು ಮೂರು ಬಾರಿ ಕರೆ ಬಂದಾಗ ಎದ್ದು ಕುಳಿತು ತನ್ನ ಕನ್ನಡಕ ಏರಿಸಿಕೊಂಡು ಮೊಬೈಲ್ ಸ್ಕ್ರೀನ್ ಕಡೆಗೆ ನೋಡಿದ್ದವರಿಗೆ ತಿಳಿಯಿತು ಅದು ಆಸ್ಪತ್ರೆಯಿಂದ ಬಂದ ಕರೆಯಾಗಿತ್ತು ಎಂದು. ಬೆಳಗಿನ ಸಿಹಿ ನಿದ್ರೆ ಭಂಗವಾಗಿದ್ದ ಕಿರಿಕಿರಿಯಲ್ಲೆ ಕರೆ ಎತ್ತಿದವರ ಧ್ವನಿಯಲ್ಲಿ ಯಾವುದೇ ಕಿರಿಕಿರಿಯನ್ನು ಅತ್ತಲಿನ ವ್ಯಕ್ತಿ ಹುಡುಕಲಾರ..!!! ಅದೇ ಮಾತಿನ ವೈಖರಿ, ಎಲ್ಲರನ್ನು ಸೆಳೆಯುವ ಏರಿಳಿತವಿಲ್ಲದ ಧ್ವನಿ.
“ಹಲೋ” ಎಂದು ಹೇಳಿದವರು ಅತ್ತಲಿನ ವ್ಯಕ್ತಿಯ ಮುಂದಿನ ಮಾತಿಗಾಗಿ ಕಾದರು.
“ಹಲೋ ಡಾಕ್ಟರ್ ಸಿದ್ದಾರ್ಥ್, ಡಾಕ್ಟರ್ ಜಯದ್ರತ್ ನಿಮ್ಮನ್ನು ಆದಷ್ಟು ತುರ್ತಾಗಿ ಆಸ್ಪತ್ರೆಗೆ ಬರಲು ಹೇಳಿದ್ದಾರೆ.!!” ಎಂದು ನರ್ಸ್ ಹೇಳಿದಳು.
ಈ ಸಮಯದಲ್ಲಿ ಯಾಕೆ ಬರಬೇಕು?? ಇದು ನನ್ನ ಕೆಲಸದ ಅವಧಿಯಲ್ಲ ಎಂದು ಹೇಳಬೇಕು ಎನಿಸಿತು. ಆದರೆ ವೈದ್ಯರಿಗೆ ಹಾಗೆ ಸೈನಿಕರಿಗೆ ಕರ್ತವ್ಯ ಯಾವುದೇ ಕ್ಷಣದಲ್ಲಿ ಬೇಕಾದರೂ ಕರೆಯಬಹುದು, ಅದಕ್ಕಾಗಿ ಎಲ್ಲವನ್ನು ಬದಿಗಿಟ್ಟು ತಯಾರಿರಬೇಕು ಎಂದು ಚಿಕ್ಕ ವಯಸ್ಸಿನಿಂದ ಬಲ್ಲ ಸಿದ್ದಾರ್ಥ್ ಅದನ್ನೆ ತನ್ನ ಜೀವನದಲ್ಲಿ ಚೆನ್ನಾಗಿ ಅಳವಡಿಸಿಕೊಂಡಿದ್ದರು.
ಪ್ರಖ್ಯಾತ ಮಾನಸಿಕ ತಜ್ಞ ಡಾಕ್ಟರ್ ಸಿದ್ದಾರ್ಥ ಎಂದು ಹೆಸರಾಗಿದ್ದವರಿಗೆ ಬಿಡುವಿಲ್ಲದ ಕೆಲಸ.
“ಇನ್ನೊಂದು ಘಂಟೆಯಲ್ಲಿ ಇರುತ್ತೇನೆ” ಎಂದು ಹೇಳಿದವರು ಕರೆ ಕತ್ತರಿಸಿ ಸಮಯ ನೋಡಿದರೆ ಬೆಳಗ್ಗೆ ನಾಲ್ಕುವರೆ ಗಂಟೆ. ಈ ದಿನ ಅವರ ಕೆಲಸಕ್ಕೆ ರಜೆಯ ದಿನ. ಆರಾಮಾಗಿ ಇರಬಹುದು ಎಂದು ಅವರು ಬೆಳೆದಿದ್ದ ಅವರ ತಂದೆ ಕಟ್ಟಿಸಿದ್ದ ಹಳ್ಳಿ ಮನೆಗೆ ಬಂದಿದ್ದರು. ಆಧುನಿಕತೆಗೆ ಈಗ ಒಗ್ಗಿದ್ದರೂ ತಂದೆ ತಾಯಿಯಿದ್ದ ಮನೆಯ ಬಗ್ಗೆ ಭಾವಾನಾತ್ಮಕ ಸೆಳೆತವಿತ್ತು. ಅವರೀಗ ಪ್ರಪಂಚದಲ್ಲಿ ಇಲ್ಲದಿದ್ದರೂ ಬಾಲ್ಯದ ಭಾವವನ್ನು ಅನುಭವಿಸಲು ಆಗಾಗ ಹಳ್ಳಿ ಮನೆಗೆ ಬಂದು ಎರಡು ದಿನ ಇದ್ದು ಹೋಗುವುದು ಅವರ ವಾಡಿಕೆ. ಹಾಗೆಯೇ ನಾಲ್ಕು ತಿಂಗಳ ಬಿಡುವಿಲ್ಲದ ಕೆಲಸ, ಮಕ್ಕಳ ಕೆಲಸದ ನಡುವೆ ಸಮಯವೇ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರ ವಾರದ ಕೊನೆಯಲ್ಲಿ ಸಿಕ್ಕ ರಜೆಯನ್ನು ಎಲ್ಲಿಗೂ ಹೋಗಲು ಬಳಸದೆ ತಮಗಾಗಿ ತಾವು ಮೀಸಲು ಇಟ್ಟುಕೊಂಡಿದ್ದವರು, ಹಳ್ಳಿ ಮನೆಗೆ ಹಿಂದಿನ ದಿನ ಸಂಜೆ ತಾನೇ ಹೋಗಿದ್ದರು. ಆದರೆ ಮರು ದಿನ ಸೂರ್ಯ ಮೂಡುವ ಮೊದಲೇ ಬೆಂಗಳೂರಿಗೆ ಮರಳಿ ಹೋಗುವಂತೆ ಆಗಿತ್ತು.
ದಾರಿಯುದ್ಧಕ್ಕೂ ಡಾಕ್ಟರ್ ಜಯದ್ರತ್ ಕರೆದಿದ್ದಾರೆ ಎಂದರೆ ಏನೋ ವಿಚಾರ ಗಂಭೀರವಾಗಿದೆ ಎಂದುಕೊಳ್ಳುತ್ತಲೆ ಕಾರನ್ನು ಚಲಾಯಿಸಿ ಒಂದು ಗಂಟೆ ಹಾದಿಯನ್ನು ಸವೆಸಿ ನಿಮ್ಹಾನ್ಸ್ ಆಸ್ಪತ್ರೆಗೆ ಬಂದವರು ನೇರವಾಗಿ ಡಾಕ್ಟರ್ ಜಯದ್ರತ್ ಅವರ ಕಚೇರಿಯ ಕಡೆ ಹೋದರು.
“ಗುಡ್ ಮಾರ್ನಿಂಗ್ ಸರ್” ಎಂದದ್ದು ಕೇಳಿದ ಜಯದ್ರತ್ ತಲೆ ಎತ್ತಿ ನೋಡಿದರು.
ಡಾಕ್ಟರ್ ಜಯದ್ರತ್ “ ಮಾರ್ನಿಂಗ್, ಮಾರ್ನಿಂಗ್.. ಈ ಸಮಯಕ್ಕೆ ನಿಮ್ಮನ್ನು ಕರೆಸಿ ತೊಂದರೆ ಕೊಟ್ಟದ್ದಕ್ಕೆ ಕ್ಷಮೆ ಇರಲಿ. ಹತ್ತೊಂಬತ್ತು ವರ್ಷದ ಹುಡುಗಿಯ ಕೇಸ್ ಬಂದಿದೆ, ಈ ಒಂದುವರೆ ತಿಂಗಳಲ್ಲಿ ಆರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊನೆ ಬಾರಿ ಮನೆಯಲ್ಲಿಯೆ ವಿಷ ಸೇವಿಸಿ ಆಸ್ಪತ್ರೆಗೆ ಸೇರಿ ಬದುಕಿದ್ದಾಳೆ. ಆದರೆ ಎಚ್ಚರ ಆಗುತ್ತಲೂ ಗ್ಲುಕೋಸ್ ಹಾಕಿದ್ದ ವೈರ್ ಎಲ್ಲ ಕಿತ್ತು ಮತ್ತೆ ತನ್ನನ್ನು ತಾನು ಹಾನಿ ಮಾಡಿಕೊಳ್ಳಲು ನೋಡಿದ್ದಾಳೆ..ಅವಳನ್ನು ಹಿಡಿಯಲು ಆಗದೆ ಎರಡು ದಿನಗಳು ನಿದ್ರೆಯ ಮಂಪರಿನ ಇಂಜೆಕ್ಷನ್ ಕೊಟ್ಟಿದ್ದಾರೆ ಡಾಕ್ಟರ್ಸ್. ಪ್ರತಿ ಬಾರಿ ಎಚ್ಚರ ಅದಾಗಲೂ ಅವಳು ತನ್ನನ್ನು ತಾನು ಕೊಂದುಕೊಳ್ಳಲು ನೋಡುತ್ತಾಳೆ. ಎಷ್ಟು ದಿನಗಳು ಅವಳನ್ನು ನಿದ್ರೆಯ ಮಂಪರಿನಲ್ಲಿ ಇಡಲು ಸಾಧ್ಯ??
ಅವಳ ಆತ್ಮಹತ್ಯೆ ಯತ್ನವನ್ನು ತಡೆಯಲು ಕಾರಣ ತಿಳಿಯುವುದು ಮುಖ್ಯ, ಅವಳ ಮಾನಸಿಕ ಸ್ಥಿರತೆ ಸರಿ ಇಲ್ಲ ಎಂದು ನಮ್ಮ ಆಸ್ಪತ್ರೆಗೆ ಕಳುಹಿಸಿದ್ದರು. ಅವಳ ಸಮಸ್ಯೆಯನ್ನು ನಮ್ಮ ಡಾಕ್ಟರ್ಸ್ ಯಾರ ಬಳಿಯೂ ಅವಳು ಹೇಳುತ್ತಿಲ್ಲ. ಆದರೆ ಆತ್ಮಹತ್ಯೆ ಯತ್ನ ಬಿಡುತ್ತಿಲ್ಲ. ಇಲ್ಲಿ ಎಚ್ಚರವಾದ ಮೇಲೆ ಸಿಕ್ಕ ಒಂದು ಕತ್ತರಿಯಲ್ಲಿ ಕೈ ನರವನ್ನು ಸೀಳಿಕೊಂಡಿದ್ದಳು...!!!! ಅದೃಷ್ಟ ಚೆನ್ನಾಗಿತ್ತು ಗಾಯ ಆಳವಾಗಿ ಹೋಗಿ ನರಕ್ಕೆ ತೊಂದರೆಯಾಗದೆ ಜೀವಕ್ಕೆ ಹಾನಿಯಾಗಲಿಲ್ಲ. ಅವಳಿಗೆ ಮತ್ತೆ ಸೆಡೆಟಿವ್ ಕೊಟ್ಟು ನಿದ್ರೆಗೆ ಜಾರಿಸಲಾಗಿದೆ.
ಯಾರಿಂದಲೂ ಅವಳ ಮನಸಿನ ನೋವು ತಿಳಿಯಲು ಆಗುತ್ತಿಲ್ಲ, ಅವಳು ಬಾಯಿ ಬಿಡುತ್ತಲೆ ಇಲ್ಲ. ರಾತ್ರಿಯೆಲ್ಲ ಯೋಚಿಸಿದ ಮೇಲೆ ನೀವೆ ಈ ಕೇಸ್ ಗೆ ಉತ್ತಮ ಎನಿಸಿ ನಿಮ್ಮನ್ನು ಬರಹೇಳಿದೆ. ಇನ್ನೇನು ಏಳುವರೆ ಸಮಯಕ್ಕೆ ಆ ಹುಡುಗಿ ಏಳುತ್ತಾಳೆ” ಎಂದು ಹೇಳಿದರು.
ಕೇಸ್ ನ ಮೇಲಿನ ಸಮಸ್ಯೆ ಸಿದ್ದಾರ್ಥ್ ಗೆ ತಿಳಿಯಿತು.
“ಡಾಕ್ಟರ್ ಆ ಹುಡುಗಿಯ ತಂದೆ ತಾಯಿಯನ್ನು ನಾನು ಮೀಟ್ ಮಾಡಬೇಕು” ಎಂದು ಹೇಳಿದರು.
ಜಯದ್ರತ್ “ ಅವಳನ್ನು ಆಸ್ಪತ್ರೆಗೆ ಸೇರಿಸಿದವರು ಹೆಚ್ಚು ಸಮಯ ನಿಲ್ಲದೆ ಹೊರಟು ಹೋದರಂತೆ.. ಖಿನ್ನತೆಯಲ್ಲಿ ಇರುವಳು ಎಂದು ನಿಮ್ಹಾನ್ಸ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಅವಳನ್ನು ಮೊದಲು ನೋಡಿದ್ದ ವೈದ್ಯರು ಹೇಳಿದಾಗ ಅವಳ ತಂದೆ ಕೆಲಸದ ಮೇಲೆ ಬೇರೆ ಊರಲ್ಲಿ ಇರುವುದಾಗಿ ಹೇಳಿದರೆ, ತಾಯಿ ಬರುವುದಿಲ್ಲ ಬಿಲ್ ಕಳಿಸಿ ಎಂದರಂತೆ…!!!! ಬಹುಷಃ ಮಾನಸಿಕ ಅರೋಗ್ಯ ಸರಿ ಇಲ್ಲ ಎಂದು ಇಲ್ಲಿ ಬಿಟ್ಟರೆ ಆ ಹುಡುಗಿಯನ್ನು ನಿಜವಾಗಿ ಹುಚ್ಚಿಯೆ ಮಾಡಿ ಒಂಟಿಯಾಗಿ ಬಿಟ್ಟಿದ್ದಾರೆ..!!! “ ಎಂದು ಹೇಳಿದರು.
ಈ ರೀತಿಯ ಸನ್ನಿವೇಶಗಳು ಹಾಗೆ ಜನರ ಮನಸ್ಥಿತಿ ಅವರ ಕ್ಷೇತ್ರದಲ್ಲಿ ಇರುವವರಿಗೆ ಸಹಜವಾಗಿ ನೋಡಲು ಸಿಗುತ್ತವೆ. ಮಾನಸಿಕ ಖಿನ್ನತೆಗೆ ಜಾರಿದವರನ್ನು, ಅರೆಬರೆ ಹುಚ್ಚು ಹಿಡಿದವರನ್ನು ಅಥವಾ ಮಾನಸಿಕ ತೊಂದರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ಸ್ವಂತ ಮನೆಯವರೆ ಅವರನ್ನು ಪೂರ್ಣ ಹುಚ್ಚರು ಎಂದು ದೂರ ಇಡುವ ಪರಿಪಾಠ ಯಾವಾಗಲೂ ಇದೆ….!!! ಮಾನಸಿಕ ಅಸ್ಥಿರತೆ, ಖಿನ್ನತೆಯಿಂದ ಹೊರಗೆ ಬರಲು ಪ್ರೀತಿ ತೋರುವ ಬದಲಿಗೆ ಮತ್ತಷ್ಟು ನೋವು ನೀಡುತ್ತದೆ ಈ ಸಮಾಜ ಎಂದು ಸಿದ್ದಾರ್ಥ್ ಬಲ್ಲವರಾಗಿದ್ದರು.
“ನನಗೆ ಅರ್ಥವಾಯಿತು ಡಾಕ್ಟರ್. ಯಾವ ವಾರ್ಡ್ ಅಲ್ಲಿದ್ದಾರೆ ಆ ಹುಡುಗಿ??” ಎಂದು ಕೇಳಿದರು. ಜಯದ್ರತ್ ವಾರ್ಡ್ ನಂಬರ್ ಹೇಳಿ ಪೇಷಂಟ್ ಕೇಸ್ ಫೈಲ್ ಕೊಟ್ಟರು.
ಸಿದ್ದಾರ್ಥ್ ವಾರ್ಡ್ ಹೊಕ್ಕುತ್ತಲೂ ಹಾಸಿಗೆ ಮೇಲೆ ಮಲಗಿದ್ದ ಹುಡುಗಿಯನ್ನು ಗಮನಿಸಿದರು. ಹದಿಹರೆಯದ ಕಳೆಯೆ ಇಲ್ಲದೆ ನಿದ್ರೆಯಲ್ಲೂ ಹುಬ್ಬುಗಳನ್ನು ಗಂಟಿಕ್ಕಿ ಮಲಗಿದ್ದಳು. ಅವಳನ್ನು ನೋಡುತ್ತಲೂ ಅದೆ ವಯಸ್ಸಿನ ತಮ್ಮ ಮಗಳು ಅದ್ವಿಕಾಳ ನೆನಪು ಬಂದಿತು ಸಿದ್ಧಾರ್ಥರಿಗೆ. ಚಟುವಟಿಕೆಯ ಗಣಿಯಾಗಿರುವ ತಮ್ಮ ಮಗಳ ವಯಸ್ಸಿನ ಈ ಹುಡುಗಿ ಅದೇನನ್ನು ಮನಸಿಗೆ ಹಚ್ಚಿಕೊಂಡು ಕೊರಗುತ್ತಿರುವಳೊ?? ಈ ವಯಸ್ಸಿನಲ್ಲಿ ಆತ್ಮಹತ್ಯೆ ಹಾದಿ ಹಿಡಿಯಬೇಕು ಎಂದರೆ ಅದೆಷ್ಟು ಜಿಗುಪ್ಸೆ ಈ ಹುಡುಗಿಗೆ ಬಂದಿರಬೇಕು ಎಂದು ಮರುಕ ಮೂಡಿತ್ತು.
ಹುಡುಗಿ ಹೆಸರು ನೈನಿಕಾ, ಮಾನಸಿಕ ಸಮಸ್ಯೆಯಲ್ಲಿ ಇರುವುದು ಮೇಲಿನ ನೋಟಕ್ಕೆ ಅರಿತರು.
ಸ್ವಲ್ಪ ಹೊತ್ತಿಗೆ ನೈನಿಕಾಳಿಗೆ ಎಚ್ಚರವಾಗಿತ್ತು, ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಸುತ್ತಲೂ ನೋಡಿದವಳಿಗೆ ಸಿದ್ದಾರ್ಥ್ ಇರುವುದು ಕಾಣಿಸಿತು, ಅವರು ಡಾಕ್ಟರ್ ಎಂದು ಊಹಿಸಿದ ನೈನಿಕ ಮುಖ ತಿರುಗಿಸಿ ಛಾವಣಿ ದಿಟ್ಟಿಸುತ್ತಿದ್ದಳು.
ಸಿದ್ದಾರ್ಥ್ “ ಹಲೋ ನೈನಿಕಾ “ ಎಂದರು. ಅವಳು ಒಮ್ಮೆ ಅವರನ್ನು ನೋಡಿ ಏನು ಪ್ರತಿಕ್ರಿಯೆ ನೀಡದೆ ಮತ್ತೆ ಸೂರನ್ನು ಶೂನ್ಯ ಭಾವದಲ್ಲಿ ದಿಟ್ಟಿಸುತ್ತಿದ್ದಳು. ಇದೆಲ್ಲ ಸಿದ್ದಾರ್ಥರಿಗೆ ಮಾಮೂಲಿಯಾಗಿತ್ತು.
ಸಿದ್ಧಾರ್ಥ್ “ನಾನು ಒಬ್ಬ ಡಾಕ್ಟರ್ ಎಂದು ಭಯವಾ?? ಚಿಂತೆ ಬೇಡ ನಾನು ನಿನಗೆ ಏನಾಗಿದೆ, ಯಾಕೆ ಹೀಗೆಲ್ಲ ಮಾಡುತ್ತಿರುವೆ?? ಎಂದೆಲ್ಲ ಕೇಳುತ್ತಾ ಕೆಣಕಲು ಹೋಗುವುದಿಲ್ಲ. ಸುಮ್ಮನೆ ಕೆದಕಿ ಕೆದಕಿ ಮನಸಿಗೆ ನೋವು ನೀಡಿ ಪರಿಹಾರ ಕೊಡುವ ಡಾಕ್ಟರ್ ನಾನಲ್ಲ…!! ಹಾಗಾಗಿ ಆರಾಮಾಗಿ ಇರು ನಿನ್ನಿಷ್ಟದ ಹಾಗೆ. ಆದರೆ ನಿನ್ನ ಚಿಕಿತ್ಸೆ ಎಂದು ನಾನು ಇಂತಿಷ್ಟು ಸಮಯ ಇಲ್ಲೇ ಇರಬೇಕು, ನನಗೆ ಹಸಿವಾಗಿದೆ, ನಿನಗೂ ಹಸಿವಿದ್ದರೆ ಹೇಳು ನನ್ನ ಮಗಳಿಗೆ ತಿಂಡಿ ತರಲು ಹೇಳಿದ್ದೇನೆ ಇನ್ನೇನು ಬರುತ್ತಾಳೆ ಒಟ್ಟಿಗೆ ತಿಂಡಿ ಮಾಡಬಹುದು “ ಎಂದು ಹೇಳುತ್ತಾ ಅವಳ ಫೈಲ್ ಹಿಡಿದು ನೋಡುತ್ತಾ ಸುಮ್ಮನೆ ಕುಳಿತರು.
ಡಾಕ್ಟರ್ ಎಂದರೆ ಗಂಭೀರವಾಗಿ ಮುಖ ಬಿಗಿ ಹಿಡಿದು, ತಮಗೆ ಎಲ್ಲವೂ ಗೊತ್ತಿದೆ ಎನ್ನುವ ದಾಟಿಯಲ್ಲಿ ಮಾತನಾಡುವವರನ್ನು ನೋಡಿದ್ದಳು. ಆದರೆ ಇದೆ ಮೊದಲ ಬಾರಿಗೆ ಅವಳ ವಯಸ್ಸಿನವರ ಹಾಗೆ ಮಾತನಾಡುತ್ತಾ ಅವಳ ಹಿಂದಿನ ಘಟನೆಗಳನ್ನು ಕೆದಕಿ ಕೇಳುವುದಿಲ್ಲ ಎಂದಿದ್ದು ಅಚ್ಚರಿ ತಂದಿತ್ತು. ಆದರೆ ಅವಳೇನು ಪ್ರತಿಕ್ರಿಯೆ ನೀಡಲಿಲ್ಲ.
ಹತ್ತೆ ನಿಮಿಷದಲ್ಲಿ ಸಿದ್ದಾರ್ಥ್ ಮಗಳು ಅದ್ವಿಕಾ ಬಂದು ತಿಂಡಿ ಡಬ್ಬಿ ಕೊಟ್ಟವಳು ನೈನಿಕಾ ಕಡೆ ನೋಡಿ ಆತ್ಮೀಯ ಮುಗುಳುನಗೆ ಬೀರಿದಳು. ತಂದೆ ಮಗಳು ಆತ್ಮೀಯವಾಗಿ ಮಾತನಾಡುವುದು ನೋಡಿ ನೈನಿಕ ಮುಖದಲ್ಲಿ ವಿಷಾದದ ನಗು ಮೂಡಿತು..!!! ಅದನ್ನು ಸಿದ್ದಾರ್ಥ ಗಮನಿಸಿದರು.
ಮಾತಿನಮಲ್ಲಿ ಅದ್ವಿಕಾ ನೈನಿಕಳಿಗೆ ಮನ ಒಲಿಸಲು ಯತ್ನಿಸಿ ಅವಳೇ ಒಂದು ತುತ್ತು ದೋಸೆಯನ್ನು ಅವಳ ಬಾಯಿಗೆ ತುರುಕಿ “ ನೋಡು ಅಮ್ಮ ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂದು. ನನಗೆ ಯಾವ ಹೋಟೆಲ್ ತಿಂಡಿಯೂ ರುಚಿ ಇರುವುದಿಲ್ಲ” ಎಂದು ತಿಂಡಿ ಬಗ್ಗೆ ಹೇಳುತ್ತಾ ಮತ್ತೊಂದು ತುತ್ತು ಇಟ್ಟಳು. ಅದೇಕೊ ಅವಳ ಕೈ ತುತ್ತನ್ನು ನೈನಿಕಾ ಸುಮ್ಮನೆ ತಿಂದಳು.
ಸಿದ್ದಾರ್ಥ್ “ತಲೆ ತಿನ್ನಬೇಡ ಅದ್ವಿಕಾ, ಅವಳು ಆತ್ಮಹತ್ಯೆಯ ಯತ್ನ ಮಾಡಿ ಈಗ ತಾನೇ ಎದ್ದಿದ್ದಾಳೆ, ಅದು ಇದು ಎಂದು ತಿಂಡಿ ಊಟದ ವಿಷಯ ತೆಗೆದು ಅವಳಿಗೆ ಮತ್ತಷ್ಟು ಬೇಸರ ಮಾಡಬೇಡ. ಬೇಗ ತಿಂದು ಎದ್ದು ನಡಿ, ಯಾರಾದರೂ ನೋಡಿದರೆ ನನಗೆ ಅನ್ನುತ್ತಾರೆ ಈ ತಲೆ ಹರಟೆಯನ್ನು ಕರೆಸಿ ಪೇಷಂಟ್ ತಲೆ ತಿನ್ನುತ್ತಿದ್ದಾನೆ ಎಂದು. ನನ್ನ ಕೆಲಸದಿಂದ ತೆಗೆಯಲೂಬಹುದು “ ಎಂದರು..
ಅದ್ವಿಕಾ “ಅಯ್ಯೋ ಹೋಗಪ್ಪ ಮನೆಗೆ ಅದರೂ ಬಾ. ಅಮ್ಮ, ನಾನು, ನನ್ನ ತಮ್ಮ ನಿಮ್ಮನ್ನು ಮಿಸ್ ಮಾಡುತ್ತೇವೆ. ಕೆಲಸದಿಂದ ತೆಗೆದರೆ ಒಳ್ಳೆಯದು “ಎಂದು ಮುಖ ತಿರುಗಿಸಿ ಹೇಳಿದಳು.
ತಂದೆ ಮಗಳ ಮಾತುಕತೆ ನೋಡಿ ನೈನಿಕ ಮುಖದಲ್ಲಿ ನಗು ಮೂಡಿತು. “ಇಲ್ಲ ನಿಜವಾಗಿ ದೋಸೆ ಚೆನ್ನಾಗಿದೆ. ನೀವು ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ಹೆಸರೇನು??” ಎಂದು ತಾನೆ ಮುಂದಾಗಿ ಅದ್ವಿಕಾಳಿಗೆ ಕೇಳಿದಳು.
ಅದ್ವಿಕಾ ತನ್ನ ಹೆಸರು ಹೇಳಿ, ಅವಳು ಮೆಡಿಕಲ್ ಮಾಡುತ್ತಿರುವುದು ಹೇಳಿ, ಕೊರೆಯಲು ಶುರು ಮಾಡಿದಳು ಅವಳ ತಂದೆ ತಾಯಿಯ ಬಗ್ಗೆ, ಮನೆಯಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಸಹ ಗುಣಮಟ್ಟದ ಸಮಯವನ್ನು ತನ್ನ ತಂದೆ ಕುಟುಂಬದ ಜೊತೆಗೆ ಕಳೆಯುವುದನ್ನು ಹೇಳುತ್ತಿದ್ದವಳ ಮಾತನ್ನು ಕೇಳುತ್ತಿದ್ದ ನೈನಿಕಾ ಕಣ್ಣಲ್ಲಿ ನೀರು ತುಂಬಿತು.
ನೈನಿಕಾ “ನೀವೇ ಅದೃಷ್ಟವಂತರು ಅಧ್ವಿಕ. ನಿಮ್ಮ ತಂದೆ ಬಿಡುವಿಲ್ಲದ ಕೆಲಸದಲ್ಲೂ ಮಕ್ಕಳ ಜೊತೆಗೆ ಸಮಯ ಕಳೆಯುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಮಕ್ಕಳು ಬದುಕಿದ್ದಾರಾ ??ಸತ್ತಿದ್ದಾರಾ ?? ಎಂದು ಸಹ ತಲೆ ಕೆಡಿಸಿಕೊಳ್ಳದೆ ಕೆಲಸ ಕೆಲಸ ಎಂದು ಇರುವವರು ಇದ್ದಾರೆ..!!!! ದುಡ್ಡನ್ನು ಕೊಟ್ಟುಬಿಟ್ಟರೆ, ಮಕ್ಕಳ ಅಗತ್ಯತೆಯನ್ನು ಪೂರೈಕೆ ಮಾಡಿಬಿಟ್ಟರೆ ಅಷ್ಟೇ ಸಾಕು ಅವರ ಕರ್ತವ್ಯ ಮುಗಿಯಿತು..!!!” ಎಂದಳು ನೋವಿನಲ್ಲಿ.
“ಹೇಯ್ ಎನಾಯಿತು ಅಳುವಂತದ್ದು??” ಎಂದು ಅದ್ವಿಕಾ ಕೇಳಿದಳು.
ಸಿದ್ಧಾರ್ಥ್ ಗಂಭೀರವಾಗಿ “ ಕೆದಕಿ ನೋವು ಮಾಡಬೇಡ ಆದ್ವಿಕಾ, ನಾನು ಎಲ್ಲ ಡಾಕ್ಟರ್ ಹಾಗೆ ಅವಳನ್ನು ಕೆದಕಿ ಕೇಳುವುದಿಲ್ಲ ಎಂದು ಹೇಳಿದ್ದೇನೆ “ ಎಂದರು.
ನೈನಿಕ “ನನ್ನ ಬದುಕೇ ಸರಿ ಇಲ್ಲ ಬಿಡಿ ಅಂಕಲ್” ಎಂದವಳು ಕಣ್ಣೀರು ಒರೆಸಿಕೊಂಡು ಮುಂದುವರಿದು “ ನಿಮ್ಮನ್ನು ಡಾಕ್ಟರ್ ಎಂದು ಕರೆಯಲು ಮನಸು ಬರಲಿಲ್ಲ ಕ್ಷಮಿಸಿ” ಎಂದಳು.
ಸಿದ್ದಾರ್ಥ “ಪರವಾಗಿಲ್ಲ ನೀನು ನನ್ನ ಮಗಳ ಹಾಗೆಯೇ ಅದೇಕೆ ಕ್ಷಮೆ??” ಎಂದರು.
ಆದ್ವಿಕಾ “ಅಲ್ಲ ಈ ಬದುಕು ಎಂದರೆ ಏನು.!!!?? ನನಗೆ ಇಷ್ಟು ವರ್ಷದಲ್ಲಿ ಉತ್ತರವೆ ಸಿಕ್ಕಿಲ್ಲ” ಎಂದು ತಲೆ ಹರಟೆ ಪ್ರಶ್ನೆ ಕೇಳಿ ನೈನಿಕಾ ಗಮನವನ್ನು ಬೇರೆಡೆ ಸೆಳೆದಳು.
ನೈನಿಕ ಅವಳ ಮಾತಿಗೆ ಉತ್ತರಿಸಲಿಲ್ಲ.
ಸಿದ್ದಾರ್ಥ್ “ಅದ್ವಿಕಾ ಎದ್ದೇಳು, ನಿನ್ನ ತಲೆ ಹರಟೆ ಬಿಟ್ಟು ಈಗ ಇಲ್ಲಿಂದ ಹೊರಡು” ಎಂದರು.
ಅದ್ವಿಕಾ “ಅಯ್ಯೋ ಇರಿ” ಎಂದವಳು ನೈನಿಕ ಕಡೆಗೆ ತಿರುಗಿ “ನೈನಿ ನಾನು ಸಂಜೆ ಬರುತ್ತೇನೆ ಆಗ ಈ ಬದುಕು ಎಂದರೇನು ಎಂದು ಉತ್ತರಿಸು. ಇಬ್ಬರು ಸೇರಿ ರಿಸರ್ಚ್ ನಡೆಸೋಣ. ಈಗ ನಾನು ಹೊರಡುತ್ತೇನೆ” ಎಂದು ಹೇಳಿ ಹೊರಗೆ ಹೋದಳು.
ಸಿದ್ದಾರ್ಥ್ “ಅವಳು ಹೇಳಿದ ಅಸೈನ್ಮೆಂಟ್ ಮಾಡು ನೈನಿಕಾ. ಅವಳು ಬೆನ್ನ ಮೇಲೆ ಕುಳಿತ ಬೇತಾಳದ ಹಾಗೆ. ನೀನು ಉತ್ತರ ಕೊಡುವವರೆಗೆ ಬಿಡುವುದಿಲ್ಲ” ಎಂದು ಹೇಳಿ ಹೊರಗೆ ಬಂದರು.
ಹೊರಗಿದ್ದ ನರ್ಸ್ ಗೆ “ಒಂದು ಕ್ಷಣವೂ ಆ ಹುಡುಗಿಯನ್ನು ಬಿಟ್ಟಿರಬಾರದು. ಅವಳು ಏನಾದರೂ ಅನಾಹುತ ಮಾಡಿಕೊಂಡರೆ ನೀವೇ ಹೊಣೆ ಆಗುತ್ತಿರಿ. ವಾರ್ಡ್ ಬಾಯ್ ಇಲ್ಲಿಗೆ ಬರುತ್ತಾನೆ ಹುಷಾರು ಏನೆ ಇದ್ದರೂ ಕರೆ ಮಾಡಿ” ಎಂದು ಹೇಳಿ ಹೋದರು..
ತಮ್ಮ ಕಚೇರಿಗೆ ಬಂದು ಕುಳಿತವರಿಗೆ ನೈನಿಕ ತನ್ನ ಬದುಕೆ ಸರಿ ಇಲ್ಲ ಎಂದದ್ದು ತಲೆಗೆ ಬಂದಿತು. ಅವಳ ಮಾತುಗಳನ್ನು ಒಂದೆಡೆ ಬರೆದು ಇಟ್ಟವರಿಗೆ ಒಂದು ಸ್ಪಷ್ಟತೆ ಸಿಕ್ಕಿತ್ತು. ಹದಿಹರೆಯದವರು ಅಷ್ಟು ಸುಲಭಕ್ಕೆ ತಮ್ಮ ಸಮಸ್ಯೆ ಬಾಯಿ ಬಿಡುವುದಿಲ್ಲ ಅವರಿಗೆ ಗದರಿಸಿ, ನೇರವಾಗಿ ಕೇಳುವ ಮಾತಿಗಿಂತ ಸ್ನೇಹಿತರ ಆತ್ಮೀಯತೆ ಬೇಗನೆ ಬಾಯಿ ಬಿಡಿಸುತ್ತದೆ ಎಂದು ಇಷ್ಟು ವರ್ಷದ ವೃತ್ತಿ ಜೀವನದಲ್ಲಿ ಅರಿತಿದ್ದರು. ಅದಕ್ಕಾಗಿ ಜಯದ್ರತ್ ಕಚೇರಿಯಿಂದ ಹೊರಗೆ ಬರುವಾಗಲೇ ತಮ್ಮ ಮಗಳು ಅದ್ವಿಕಾಳಿಗೆ ಕರೆ ಮಾಡಿ ನೈನಿಕಾ ವಿಚಾರ ತಿಳಿಸಿ ಇಂದು ಅವಳ ಜೊತೆಗೆ ಆತ್ಮೀಯವಾಗಿ ಮಾತನಾಡುತ್ತ ಅವಳಿಂದ ಕೆಲವು ವಿಚಾರ ಬಾಯಿ ಬಿಡಿಸಬೇಕು ಎಂದು ಹೇಳಿ ಕರೆದಿದ್ದರು. ಮೊದಲೇ ಚುರುಕಿದ್ದ ಅದ್ವಿಕಾ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿ ಬೇಗನೆ ಬಂದಿದ್ದಳು. ಅದರಂತೆ ನೈನಿಕ ಇಂದ ಸಮಸ್ಯೆಯ ಸಣ್ಣ ಎಳೆ ಸಿಕ್ಕಿತ್ತು.
ಹಾಗೆ ನೈನಿಕಳನ್ನು ಪುನಃ ನಿದ್ರೆಗೆ ಜಾರಿಸದೆ ಅವಳನ್ನು ವ್ಯಸ್ತವಾಗಿ ಇಡಲು ಅದ್ವಿಕಾ ಒಂದು ತಲೆ ತಿನ್ನುವ ಪ್ರಶ್ನೆ ಕೇಳಿ ಹೋಗಿದ್ದಳು. ಸಂಜೆಯವರೆಗೆ ಬದುಕು ಎಂದರೇನು ಎನ್ನುವ ಪ್ರಶ್ನೆ ಅವಳಲ್ಲಿ ಕೊರೆದು ಬೇರೆ ಆಲೋಚನೆ ಬರದ ಹಾಗೆ ಮಾಡುತ್ತದೆ ಎನ್ನುವ ಬಲವಾದ ನಂಬಿಕೆ ಸಿದ್ದಾರ್ಥರಿಗೆ.
ಅದರಂತೆ ಖಾಲಿ ತಲೆಗೆ ನೈನಿಕಾ ಬದುಕು ಎಂದರೇನು ಎಂಬ ವಿಚಾರ ಹಾಕಿಕೊಂಡು ಯೋಚಿಸುತ್ತಲೆ ಇದ್ದಳು.
ಸಂಜೆ ಕಳೆದಿತ್ತು ಅದ್ವಿಕಾಳ ನಿರೀಕ್ಷೆ ಮಾಡುತ್ತಿದ್ದ ನೈನಿಕಾಳ ಎದುರಿಗೆ ಸಿದ್ದಾರ್ಥ್ ಬಂದರೂ ಅದ್ವಿಕಾ ಬರಲಿಲ್ಲ. ಅವಳ ನೀರಿಕ್ಷೆಯನ್ನು ಗಮನಿಸಿ “ಅವಳು ಇಂದು ಬರುವುದಿಲ್ಲ, ಯಾವುದೊ ಕೆಲಸವಿದೆ ಎಂದು ಹೋಗಿದ್ದಾಳೆ. ಹೌದು ಬದುಕು ಎಂದರೇನು ಎಂದು ತಿಳಿಯಿತಾ??” ಕೇಳಿದರು.
ನೈನಿಕಾ ಗೊತ್ತಿಲ್ಲ ಎಂದಳು.
ಸಿದ್ದಾರ್ಥ್ “ಹಾಗಿದ್ದರೆ ನನ್ನ ಬದುಕು ಸರಿ ಇಲ್ಲ ಎಂದು ಹೇಗೆ ಹೇಳಿದೆ ಪುಟ್ಟ??? ಬದುಕು ಎಂದರೇನು ತಿಳಿದೆ ಇಲ್ಲ ಎಂದ ಮೇಲೆ?? “ ಎಂದು ಕೇಳಿದರು.
ನೈನಿಕ” ಅಂಕಲ್ ನಾನು ಹುಟ್ಟಿದ್ದು ಒಂದು ಸ್ಥಿತಿವಂತ ಮನೆಯಲ್ಲಿ..ಸ್ಥಿತಿವಂತರು ಎಂದರೆ ಜಿಗುಪ್ಸೆ ಬಂದುಬಿಟ್ಟಿದೆ. ಎಲ್ಲವನ್ನು ದುಡ್ಡಿನಲ್ಲಿ ಅಳೆಯುತ್ತಾರೆ. ತಂದೆ ಗ್ರಾನೈಟ್ ಉದ್ಯಮ ನಡೆಸುವವರು. ಸಮಯವೆ ಇಲ್ಲ ಅವರಿಗೆ, ಎಂದೋ ಬರುತ್ತಾರೆ ಯಾವಾಗಲೊ ಹೋಗುತ್ತಾರೆ. ಅಮ್ಮ ಒಂದು ಕಂಪನಿಯಲ್ಲಿ ಉದ್ಯೋಗಿ. ಮನೆಗೆ ಬರುವುದೆ ರಾತ್ರಿಗೆ. ನನಗೆ ಬುದ್ದಿ ಬಂದಾಗಿನಿಂದ ತಂದೆ ತಾಯಿ ಸಂಪರ್ಕ ಹೆಚ್ಚಿಗೆ ಇರದೆ ನನ್ನ ನೋಡಿಕೊಳ್ಳುವ ಆಯಾ ಜೊತೆಗೆ ಬೆಳೆದಿದ್ದೇನೆ.!!! ದೊಡ್ಡ ಶಾಲೆಗೆ ಹಾಕಿದ್ದರು, ದುಬಾರಿ ಬಟ್ಟೆಗಳು, ಆಟದ ಬೊಂಬೆಗಳು ಎಲ್ಲವೂ ಬಂದು ಬೀಳುತ್ತಿದ್ದವು. ದುಬಾರಿ ಜೀವನ ನನ್ನದು. ಯಾರ ಜೊತೆಗೆ ಆಡಲು ಹೋಗಲಿಲ್ಲ, ಬೆರೆಯಲಿಲ್ಲ. ಹೀಗೆ ಮನೆ, ಶಾಲೆ ಎಂದು ಒಂಟಿತನದ ಜೊತೆಗೆ ಬೆಳೆದೆ..!! ರಾತ್ರಿ ಒಟ್ಟಿಗೆ ಊಟ ಮಾಡುತ್ತಿದ್ದೆವು ಅದು ಮೂವರು ಒಟ್ಟಾಗಿ ಸೇರಿದರೆ. ಅಪ್ಪ ರಾತ್ರಿ ಮನೆಗೆ ಬರುವುದು ತಡವಾಗಿ, ಬೆಳಗ್ಗೆ ಬೇಗನೆ ಎದ್ದು ಹೋಗಿಬಿಡುತ್ತಿದ್ದರು. ಸಿಗುವ ರಜಾದಿನಗಳಲ್ಲಿ ಅವರವರ ಸ್ನೇಹಿತರು ಎಂದು ಹೊರಗೆ ಹೋಗುತ್ತಾರೆ ನನ್ನನ್ನು ಕರೆದುಕೊಂಡು ಹೋದರೂ ಗೊಂಬೆಯ ಹಾಗೆ ಕುಳಿತುಕೊಳ್ಳಬೇಕು. ಅಪ್ಪ ಅಮ್ಮನಿಗೆ ನನ್ನ ನೆನಪಾಗುವುದು ನನ್ನ ಸ್ಕೋರ್ ಕಾರ್ಡ್ ಬಂದಾಗ.. ಕಡಿಮೆ ಅಂಕ ಗಳಿಸಿದ್ದರೆ ಅಷ್ಟೆ ಕತೆ ಹೊಡೆದು ಬಿಡುತ್ತಿದ್ದರು. ಆಮೇಲೆ ಟ್ಯೂಷನ್ ಎನ್ನುವ ಹಿಂಸೆ.
ನಾನು ಹೀಗೆ ಒಂಟಿಯಾಗಿ ಬೆಳೆದು ಇಂಜಿನಿಯರಿಂಗ್ ಸೇರಿದ್ದೆ. ನನ್ನ ಒಂಟಿ ಜೀವನಕ್ಕೆ ಸಿಕ್ಕಿದ್ದು ಸೂರ್ಯ ಎನ್ನುವ ವ್ಯಕ್ತಿ. ನನಗಿಂತ ಏಳು ವರ್ಷ ದೊಡ್ಡವನು. ನನ್ನ ಹಿಂಬಾಲಿಸಿ ಪೀಡಿಸಿ ಪ್ರೀತಿಸುವ ಹಾಗೆ ಮಾಡಿದ್ದ. ಅವನು ನಿರುದ್ಯೋಗಿಯಾಗಿದ್ದರಿಂದ ಅವನ ಜೊತೆಗೆ ಸಮಯ ಹೆಚ್ಚೆ ಸಿಗುತ್ತಿತ್ತು. ತಿಂಗಳಲ್ಲಿ ಅವನಿಗೆ ಕೆಲಸ ಸಿಕ್ಕಿತ್ತು. ನಮ್ಮಿಬ್ಬರ ನಡುವೆ ಸಲುಗೆ ಬೆಳೆದಿತ್ತು.
ತಂದೆ ತಾಯಿಯಿಂದ ಸಿಗದ ಪ್ರೀತಿಯ ಖಾಲಿತನ ಅವನಿಂದ ಆಗ ತುಂಬಿತ್ತು. ನನಗೆ ಹೇಳುವವರು ಕೇಳುವವರು ಮೊದಲೆ ಇರಲಿಲ್ಲ. ಪ್ರಪಂಚ ಸುಂದರ ಏನಿಸಲು ಶುರುವಾಗಿತ್ತು. ನನ್ನ ಕೈಲಿ ಹೆಚ್ಚಿನ ಹಣ ಮತ್ತು ಸಮಯ ಇದ್ದಿದ್ದರಿಂದ ಅವನ ಕೆಲಸದ ಅವಧಿ ಮುಗಿಯುವವರೆಗೆ ಕಾದು ಅವನ ಜೊತೆಗೆ ಸಮಯ ಕಳೆದು ಬರುತ್ತಿದ್ದೆ. ನನ್ನದೆ ದುಡ್ಡಲ್ಲಿ ಅವನ ಅವಶ್ಯಕತೆಗಳನ್ನು ಪೂರೈಸಿದ್ದೆ. ಹೀಗೆ ಮತ್ತೆ ಎರಡು ತಿಂಗಳು ಕಳೆದಿತ್ತು. ದಿನಕಳೆದಂತೆ ಯಾಕೋ ಅವನು ನನ್ನ ನಿರ್ಲಕ್ಷ ಮಾಡುತ್ತಿರುವ ಎನಿಸಿತ್ತು.
ನನ್ನ ತಂದೆಗೆ ಈ ವಿಚಾರ ತಿಳಿದು ನನ್ನ ಹೊಡೆದು ಬಡಿದು ಮಾಡಿದ್ದರು. ನಾನು ಮನೆ ಇಂದ ಹೊರಗೆ ಬಂದು ಅವನು ಕೆಲಸ ಮಾಡುವ ಜಾಗದಲ್ಲಿ ಹುಡುಕಿ ಬಂದಾಗ ತಿಳಿಯಿತು ಅವನ ಹೆಂಡತಿಗೆ ಹುಷಾರಿಲ್ಲ ಎಂದು ಹೇಳಿ ರಜೆಯಲ್ಲಿ ಇರುವನು ಎಂದು..!!! ಆಘಾತವಾಗಿತ್ತು ನನಗೆ, ಅವನ ಸಹೋದ್ಯೋಗಿಯಿಂದ ಅವನ ವಿಳಾಸ ಪಡೆದು ಹೋದಾಗ ನಾನು ಕೇಳಿದ್ದು ನಿಜವೆಂದು ಅರಿತೆ. ನಾನು ಮೋಸ ಹೋಗಿದ್ದು ತಿಳಿಯಿತು, ದುಡ್ಡಿನ ಅವಶ್ಯಕತೆ ತೀರಿಸಿಕೊಳ್ಳಲು ಅವನು ನನ್ನ ಬಲಹೀನತೆ ಬಳಸಿಕೊಂಡಿದ್ದ.
ಈ ಘಟನೆಯ ನಂತರ ನನ್ನನ್ನು ಸಾಂಭಾಳಿಸಿಕೊಳ್ಳಲು ಆಗಲಿಲ್ಲ. ಮನೆಯಲ್ಲಿ ಒಬ್ಬಳೆ ಇದ್ದು ಬಿಟ್ಟೆ ನಿರಾಸಕ್ತಿಯಿಂದ. ಒಂದು ರೀತಿಯ ಖಿನ್ನತೆ ಅವರಿಸಿತ್ತು, ಮನೆಯಲ್ಲಿ ಯಾರು ಇರದೆ ಇದ್ದಿದ್ದು ನನ್ನ ಖಿನ್ನತೆ ಹೆಚ್ಚಾಗಲು ಕಾರಣವಾಗಿತ್ತು. ಬದುಕಲು ಏನು ಇಲ್ಲ ಅನಿಸಿ ಸಾಯಬೇಕು ಎಂದೆ ವಿಷ ಕುಡಿದಿದ್ದೆ. ಆದರೆ ಅಮ್ಮ ಅದೆ ಸಮಯಕ್ಕೆ ಬಂದು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಳು. ನಂತರ ನನ್ನನ್ನು ಕಾಯಲು ಇಬ್ಬರು ಕೆಲಸದ ಹೆಂಗಸರನ್ನು ಇಟ್ಟದ್ದು ಮತ್ತಷ್ಟು ಕಿರಿಕಿರಿ ಆಗಿತ್ತು ನನಗೆ. ಅವಕಾಶ ಸಿಕ್ಕಾಗಲೆಲ್ಲ ಸಾಯಲು ಮತ್ತೆ ಮತ್ತೆ ಯತ್ನಿಸಿದ್ದೆ ಆದರೆ ಗಟ್ಟಿ ಪಿಂಡ ಬದುಕಿಬಿಟ್ಟೆ. ಮಾನಸಿಕ ತಜ್ಞರನ್ನು ಭೇಟಿ ಮಾಡಬೇಕು ಎಂದು ಡಾಕ್ಟರ್ ಹೇಳಿದಾಗ ನನ್ನ ಹೆತ್ತವರೆ ನನ್ನ ಹುಚ್ಚಿ ಎಂದು ದೂರವೆ ತಳ್ಳಿದರು. ಇದು ದುಃಖಮಯ ಬದುಕೆ ಅಲ್ಲವೆ ನನ್ನದು ?? “ ಎಂದಳು ಬಿಕ್ಕುತ್ತ.
ಸಿದ್ಧಾರ್ಥ್ ಗೆ ಅರ್ಥವಾಗಿತ್ತು ಎಲ್ಲಿದೆ ಸಮಸ್ಯೆ ಎಂದು. ಅವಳಿಗೆ ಸಮಾಧಾನ ಸಹ ಮಾಡದೆ ಅವಳ ಮುಂದೆ ಒಂದಷ್ಟು ಸಮಯ ಕುಳಿತು ಅಲ್ಲಿಂದ ಹೊರಟವರು ನೇರ ಬಂದಿದ್ದು ಡಾಕ್ಟರ್ ಜಯದ್ರತ್ ಬಳಿಗೆ. ಚಿಕಿತ್ಸೆಯ ಭಾಗ ಎಂದು ನೈನಿಕಳನ್ನು ಹೊರಗೆ ಕರೆದುಕೊಂಡು ಹೋಗಲು ಅನುಮತಿ ತೆಗೆದುಕೊಂಡು ಅಂದಿನ ಕೆಲಸಕ್ಕೆ ಅಂತ್ಯ ಹಾಡಿದ್ದರು.
ಮರುದಿನ ನೈನಿಕಳನ್ನು ಕರೆದುಕೊಂಡು ಸಿದ್ದಾರ್ಥ್, ಅದ್ವಿಕಾ ಹಾಗೆ ಒಬ್ಬಳು ನರ್ಸ್ ಹೊರಟರು. ನೈನಿಕ ಎಲ್ಲಿಗೆ ಎಂದು ಕೇಳಲಿಲ್ಲ. ಒಂದು ಕಡೆ ಕಾರು ನಿಂತಾಗ ಅದ್ವಿಕಾ “ಬದುಕು ಎಂದರೇನು ಎಂದು ತಿಳಿಯಿತಾ??” ಎಂದಳು.
ನೈನಿಕ ಸುಮ್ಮನೆ ಇದ್ದಳು. ಅವಳನ್ನು ನೋಡಿ ನಸುನಕ್ಕ ಅದ್ವಿಕಾ “ಬಾ ನನಗೆ ಸಹ ಕುತೂಹಲವಿದೆ ಏನು ಈ ಬದುಕು ಎಂದು. ಬೇಗ ಬೇಗ ಇಳಿ” ಎಂದು ಅವಸರಿಸಿ ಅವಳನ್ನು ಕರೆದುಕೊಂಡು ಮುಂದೆ ಇದ್ದ ಕಟ್ಟಡದ ಬಳಿಗೆ ಹೋದಳು. ಆಗಲೆ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಅಲ್ಲಿನ ನಾಮಫಲಕದಲ್ಲಿ “ವಿಶೇಷ ಮಕ್ಕಳ ಶಾಲೆ” ಎಂದು ಇರುವುದು ನೋಡಿ ನೈನಿಕ ಗೊಂದಲದಲ್ಲಿ ಅದ್ವಿಕಾ ಕಡೆ ನೋಡಿದಳು.
ಅದ್ವಿಕಾ “ನಾನು ಗೂಗಲ್ ಅಲ್ಲಿ ಹುಡುಕಿದ್ದು ಬದುಕು ಎಂದರೇನು ತಿಳಿಯಬೇಕು ಎಂದರೆ ನಮಗಿಂತ ಕಡಿಮೆ ಇರುವ ಜನರ ನಡುವೆ ಬೆರೆಯಬೇಕಂತೆ...!!! ಅದಕ್ಕೆ ಇಲ್ಲಿಗೆ ಬಂದಿದ್ದು. ಬಾ ನನಗು ಸಹ ಕುತೂಹಲವಿದೆ” ಎನ್ನುತ್ತಾ ಒಳಗೆ ಕರೆದುಕೊಂಡು ಹೋದಳು.
ಅಂಗ ಸ್ವಾಧೀನ ಇಲ್ಲದ ಮಕ್ಕಳು, ಅಲ್ಲಲ್ಲಿ ಲೋಕದ ಜ್ಞಾನವೆ ಇಲ್ಲದೆ ಕುಳಿತ ಪುಟ್ಟ ಮಕ್ಕಳನ್ನು ನೋಡಿ ನೈನಿಕಾಳಿಗೆ ಸಂಕಟವಾಗಿತ್ತು.
ಸಿದ್ದಾರ್ಥ್ “ ಇದರಿಂದ ಏನು ಅರ್ಥವಾಯಿತು ನೈನಿ ಪುಟ್ಟ?? “ ಎಂದು ಕೇಳಿದರು.
ನೈನಿಕ “ಅಂಕಲ್ ನನಗೆ ತೋಚುತ್ತಿಲ್ಲ. ಆದರೆ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ” ಎಂದಳು ಕಣ್ಣಲ್ಲಿ ಸಣ್ಣ ಕಣ್ಣೀರಿನ ಪದರ ತುಂಬಿತ್ತು.
ಸಿದ್ಧಾರ್ಥ್ “ಇದು ಇವರ ಬದುಕು ನೈನಿ..!!! ನಾವು ಏನು ಮಾಡಿದರೂ ಇವರಿಗೆ ಒಂದು ಸಹಾಯ ಅಷ್ಟೇ ಆಗಿರುತ್ತದೆ. ತಂದೆ ತಾಯಿ ತೊರೆದು ಹೋದ ಮಕ್ಕಳು ಇಲ್ಲಿ ಇದ್ದಾರೆ. ಅನಾಥ ಮಕ್ಕಳು ಸಹ ಇದ್ದಾರೆ. ಅವರ ನ್ಯೂನತೆ ಜೊತೆಗೆ ಅವರು ಬದುಕಲೇ ಬೇಕು..!!
ಈ ಮಕ್ಕಳನ್ನು ಅವರ ಸಮಸ್ಯೆಗಳಿಂದ ಹೊರಗೆ ತರುವುದು ಅದು ಸಂಪೂರ್ಣವಾಗಿ ಸಾಧ್ಯವೆ ಇಲ್ಲ. ಆದರೂ ಇವರೆಲ್ಲರಿಗೂ ಬದುಕುವ ಹಕ್ಕಿದೆ, ಬದುಕಿಗಾಗಿ ಹೋರಾಡುತ್ತಿದ್ದಾರೆ. ಸಾವೊಂದೆ ಪರಿಹಾರವಲ್ಲ.
ಜೀವನ ಒಂದು ಪಾತ್ರೆಯ ಹಾಗೆ. ನಮ್ಮ ನಮ್ಮ ಮನಸ್ಥಿತಿಯ ಮೇಲೆ ಆ ಪಾತ್ರೆ ಆಕಾರ ಪಡೆದುಕೊಳ್ಳುತ್ತದೆ ಎನ್ನುವುದು ನೆನಪಿರಲಿ. ಇವರನ್ನು ನೋಡಿದ ಮೇಲೂ ನಿನಗೆ ನಿನ್ನ ಸಮಸ್ಯೆ ದೊಡ್ಡದು ಎಂದು ನಿನಗೆ ಈಗಲೂ ಅನಿಸಿದರೆ ನೀನು ಸಾಯುವ ನಿರ್ಧಾರ ಮಾಡಿರುವುದು ಯೋಗ್ಯ ನಿರ್ಧಾರ...!!! ನಾನು ನಿನ್ನೆಯೆ ಹೇಳಿದ್ದೆ ನಿನ್ನ ಸಮಸ್ಯೆ ಏನು ಎಂದು ಕೇಳಿ ಕೆದಕಿ ನೋವು ಮಾಡಿ ಎಲ್ಲರ ಹಾಗೆ ನಾನು ಔಷಧಿ ಎಂದು ಹೋಗುವುದಿಲ್ಲ ಎಂದು. ನಿನಗೆ ಬದುಕಿನ ದರ್ಶನ ಮಾಡಿಸಬೇಕಿತ್ತು..!!!
ಈಗ ನಿನ್ನ ಸರದಿ ಪುಟ್ಟಿ ನಿನ್ನ ಬದುಕನ್ನು ನೀನು ಹೋಲಿಸಿಕೊಂಡು ನೋಡು. ಸಾಯುವುದು ನಿನಗೆ ಉಚಿತ ಎಂದು ಈಗಲೂ ಅನಿಸಿದರೆ ಪ್ರಪಂಚದಲ್ಲಿ ಯಾವ ವೈದ್ಯನೂ ನಿನ್ನ ಮನಸಿನ ಖಾಯಿಲೆ ವಾಸಿ ಮಾಡಲಾರ, ನಿನ್ನ ಆತ್ಮಹತ್ಯೆಯ ಯೋಚನೆಯಿಂದ ನಿನ್ನನ್ನು ನಾನು ಬಲವಂತವಾಗಿ ಹೊರಗೆ ತರಲು ಸಾಧ್ಯವಿಲ್ಲ. ನಿನ್ನ ಜೀವನದ ನಿರ್ಧಾರ ನಿನ್ನದು ಪುಟ್ಟ. ನಾನು ವೈದ್ಯನಾಗಿ ಇದೆಲ್ಲ ಹೇಳಲು ಆಗುವುದಿಲ್ಲ ಆದರೆ ನಾನು ಸಹ ಒಬ್ಬಳು ಮಗಳ ತಂದೆ, ನಿನ್ನ ನೋಡಿದರೆ ನನಗೆ ನನ್ನ ಮಗಳು ಅದ್ವಿಕಾಳೆ ನೆನಪಾಗುತ್ತಾಳೆ. ನಿರ್ಧಾರ ನಿನ್ನದು ಪುಟ್ಟ” ಎಂದು ಸುಮ್ಮನೆ ನಿಂತವರಿಗೆ ಕರೆಯೊಂದು ಬಂದು ದೂರಕ್ಕೆ ನಡೆದರು.
ನೈನಿಕಾಳ ಮನಸಿಗೆ ಅವರ ಮಾತುಗಳು ನಾಟಿದ್ದವು. ಅದ್ವಿಕಾ ನೈನಿಕಳನ್ನು ಹೊರಗೆ ಕರೆತಂದು ಅವಳ ಜೊತೆಗೆ ಒಂದು ಬೆಂಚಿನ ಮೇಲೆ ಕುಳಿತಳು.
ಆದ್ವಿಕಾ ಮರದ ಮೇಲೆ ಕುಳಿತ ಹಕ್ಕಿಯನ್ನು ಅದರ ಮರಿಗಳನ್ನು ತೋರಿಸಿ “ ನೋಡು ನೈನಿ ಆ ಪಕ್ಷಿ ಈಗ ಕುಟುಂಬದ ಜೊತೆಗೆ ಕೂತಿದೆ. ಊಟವನ್ನು ಕೊಕ್ಕೆಯಲ್ಲಿ ತಂದು ಮಕ್ಕಳಿಗೆ ತಿನ್ನಿಸುತ್ತ ಮಕ್ಕಳೆ ಜೀವನ ಎಂದು ಜೀವಿಸುತ್ತದೆ...!!! ಆದರೆ ಮರಿಗಳು ಬೆಳೆದ ಹಾಗೆ ರೆಕ್ಕೆಗಳು ಬಲಿತು ಹೆತ್ತವರನ್ನು ಮರೆತು ಹಾರಿಬಿಡುತ್ತವೆ.!!! ಇಲ್ಲಿ ಮಕ್ಕಳ ತಪ್ಪು ಎಂದು ನಮಗೆ ಅನಿಸಬಹುದು ಆದರೆ ಇದು ಪ್ರಕೃತಿ ನಿಯಮ ಮರಿಗಳು ತಮ್ಮ ಜೀವನ ತಾವೆ ಸ್ವತಃ ಕಟ್ಟಿಕೊಳ್ಳಬೇಕು.. ಮರಿಗಳು ತಾಯಿಯನ್ನು, ಗೂಡನ್ನು ಮರೆತರೂ, ತಾಯಿ ಹಕ್ಕಿ ಅದರ ಮರಿಗಳನ್ನು ಮರೆಯುವುದಿಲ್ಲ..!!!
ಸಮಾಜದಲ್ಲಿ ಅದೆಷ್ಟೋ ಜನರು ಇದ್ದಾರೆ ತಂದೆ ತಾಯಿಯ ಪ್ರೀತಿಯಲ್ಲ, ಮುಖವನ್ನೇ ಕಾಣದವರು...!!! ಅದೆಷ್ಟೋ ದಂಪತಿಗಳು ಇದ್ದಾರೆ ಮಕ್ಕಳಿಗಾಗಿ ಹಂಬಲಿಸುತ್ತ ಇರುವವರು...!!! ಅದೆಷ್ಟೋ ಮಕ್ಕಳಿದ್ದಾರೆ ಹೆತ್ತವರನ್ನು ದೇವರಂತೆ ಕಾಣುವವರು...!!! ಅದೆಷ್ಟೋ ಜನರಿದ್ದಾರೆ ಹೆತ್ತವರನ್ನು ಕಡೆಗಣಿಸಿ ವೃದ್ದಾಶ್ರಮ ಸೇರಿಸುವವರು, ಬೀದಿಯಲ್ಲಿ ಬಿಡುವವರು....!!!
ಆದರೆ ಎಲ್ಲಿಯೂ ಹೆತ್ತವರು ಕೆಟ್ಟವರು ಆಗಿರುವುದಿಲ್ಲ ಅವರು ಪ್ರೀತಿ ತೋರುವ ವಿಧಾನ ಅಷ್ಟೇ ಬದಲಾಗಿರುವುದು..!!!
ನೀನೇ ಒಮ್ಮೆ ನೆನಪು ಮಾಡಿಕೊ ನಿನ್ನ ತಂದೆತಾಯಿ ನಿನಗೆ ಇಲ್ಲಿಯವರೆಗೆ ಏನಾದರೂ ಕೊರತೆ ಬಂದಿರುವ ಹಾಗೆ ನೋಡಿಕೊಂಡಿರುವರಾ?? ನಿನಗಾಗಿ ಅಲ್ಲವೇ ಅಷ್ಟೆಲ್ಲ ಅವರು ದುಡಿಯುವುದು?? ಅವರು ಅಂದುಕೊಂಡಿರುತ್ತಾರೆ ಮಗಳಿಗೆ ಎಲ್ಲವನ್ನೂ ಕೊಟ್ಟಿದ್ದೇವೆ ಆರಾಮಾಗಿ ಇರುವಳು ಎಂದು.. ಆದರೆ ನಿನ್ನ ಸಮಸ್ಯೆ ಅವರಿಗೆ ಹೇಗೆ ತಿಳಿಯಬೇಕು ಹೇಳು ನಿನಗೆ ಬೇಕಿರುವುದು ಪ್ರೀತಿ ಎಂದು..!!????
ಎಷ್ಟೊ ದಿನಗಳು ನಿನ್ನ ಜೊತೆಗೆ ಸಮಯ ಕಳೆಯಲು ನಿನ್ನ ತಂದೆ ತಾಯಿ ರಾತ್ರಿ ಊಟವನ್ನು ನಿನ್ನ ಜೊತೆಗೆ ಮಾಡಲು ಕಾದು ಕುಳಿತಾಗ ನೀನು ಒಮ್ಮೆ ಆದರೂ ಅವರ ಜೊತೆಗೆ ಕುಳಿತು ಮನಸು ಬಿಚ್ಚಿ ಮಾತನಾಡಿದ್ದರೆ ನಿನ್ನ ಅಗತ್ಯತೆ ಅವರಿಗೆ ತಿಳಿಯುತ್ತಿತ್ತು. ಇಲ್ಲಿ ನಿನ್ನ ತಂದೆ ತಾಯಿ ತಪ್ಪಿಲ್ಲ ಎಂದಲ್ಲ, ಅವರು ಮಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ, ನೀನು ಅವರನ್ನು ಯಾರೋ ಮೂರನೆಯವರ ಹಾಗೆ ದೂರ ಇಟ್ಟು ಪ್ರೀತಿ ಅಪೇಕ್ಷೆ ಮಾಡುತ್ತಾ ಕುಳಿತ್ತಿದ್ದೀಯ. ಕಂದಕ ಸೃಷ್ಟಿಯಾಗಿದೆ ಅಂದ ಮೇಲೆ ಎರಡು ಕಡೆ ಪ್ರಯತ್ನ ಮುಖ್ಯವಾಗುತ್ತದೆ ಅದನ್ನು ಕಡಿಮೆ ಮಾಡಿಕೊಳ್ಳಲು..!!!
ನನ್ನ ತಂದೆ ತಾಯಿ ಸಹ ಕೆಲಸದಲ್ಲಿ ಇರುವವರು. ಅದರೆ ನಾವೆ ದುಂಬಾಲು ಬಿದ್ದು ಅವರಿಗೆ ನಮ್ಮ ಪ್ರೀತಿ ಅಗತ್ಯತೆ ಅರ್ಥ ಮಾಡಿಸಿ ದಿನದಲ್ಲಿ ಇಷ್ಟು ಸಮಯ ಒಟ್ಟಿಗೆ ಕಳೆಯಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದೇವೆ.. ಇದು ಆಧುನಿಕ ಯುಗ, ಗಂಡ ಹೆಂಡತಿ ದುಡಿಯಲೆ ಬೇಕಿರುವುದು ಅನಿವಾರ್ಯ..!!
ಇನ್ನು ನಿನಗೆ ಇನ್ನೊಂದು ಪ್ರಶ್ನೆ ಕಾಡಬಹುದು ‘ನಿನ್ನ ತಂದೆ ತಾಯಿ ಏಕೆ ನೀನು ಆತ್ಮಹತ್ಯೆಗೆ ಯತ್ನಿಸಿದರೂ ದೂರ ಇದ್ದಾರೆ ??? ಇದೇನಾ ಕಾಳಜಿ ಎಂದು ??’ ನೈನಿ ನೀನೆ ಯೋಚಿಸು ಮುಂದೆ ಇರುವ ಈ ಮಕ್ಕಳನ್ನು ನೋಡಿದರೆ ನಿನಗೆ ಸಂಕಟವಾಗುತ್ತಿದೆ ಆದರೆ ಇವರು ನಿನಗೆ ಸಂಬಂಧವೆ ಇಲ್ಲ.
ಇನ್ನು ನಿನ್ನ ಹೆತ್ತವರಿಗೆ ನಿನ್ನ ಆತ್ಮಹತ್ಯೆ ಯತ್ನ ತಿಳಿದ ಮೇಲೆ ಅವರಿಗೆ ಅದೆಷ್ಟು ಕಷ್ಟವಾಗಿರಬಹುದು?? ಹೃದಯ ಅದೆಷ್ಟು ಹಿಂಡಿರಬಹುದು?? ನೀನೇ ಒಂದು ಹೆಜ್ಜೆ ಮುಂದೆ ಇಡಬೇಕಿತ್ತು ಅವರಿಗೆ ನಿನ್ನ ಪ್ರೀತಿ ತೋರಿಸಬೇಕಿತ್ತು. ನಿನಗೆ ತಿಳಿದಿದೆಯಾ ನಿನ್ನ ತಂದೆ ತಾಯಿ ನಿನ್ನ ನೋಡಲು ಆಸ್ಪತ್ರೆಗೆ ಬಂದು ನಿನ್ನ ಸ್ಥಿತಿ ನೋಡಲು ಆಗದೆ ಕಣ್ಣೀರು ಹಾಕುತ್ತಾ ಹೋಗಿದ್ದರು ಎಂದು??? ನೀನು ಮೊದಲ ಬಾರಿಗೆ ಆತ್ಮಹತ್ಯೆಗೆ ಯತ್ನ ಪಟ್ಟಾಗ ನೀನು ಹಾಸಿಗೆಯಲ್ಲಿ ಮಲಗಿದ್ದಾಗ ಅವರೇಷ್ಟು ಅತ್ತು ಗೋಳಾಡಿಬಿಟ್ಟಿದ್ದಾರೆ ಎಂದು??
ಅವರನ್ನು ಕಂಡರೆ ಸಿಡುಕುವ ನಿನ್ನ ಮುಂದೆ ಅವರು ಬಂದರೆ ಮತ್ತೊಂದು ಅನಾಹುತ ಎಂದೆ ಅವರು ನಿನ್ನಿಂದ ದೂರ ಇದ್ದು ಕದ್ದು ಮುಚ್ಚಿ ನೋಡಿ ಹೋಗುತ್ತಿದ್ದರು.
ಪ್ರತಿ ರಾತ್ರಿ ನಿನ್ನ ತಂದೆ ತಡವಾಗಿ ಮನೆಗೆ ಬಂದಾಗ ನಿನ್ನ ನೋಡದೆ ಮಲಗುತ್ತೀರಲಿಲ್ಲ ಎಂದು ನಿನಗೆ ತಿಳಿದಿತ್ತೆ??? ನಿನ್ನ ಅಮ್ಮ ಬೆಳಗ್ಗೆ ಆಫೀಸಿಗೆ ಹೋಗುವ ಗಡಿಬಿಡಿಯಲ್ಲೂ ಕೆಲಸದವರಿಗೆ ನಿನ್ನ ತಿಂಡಿ ವಿಚಾರ ವಹಿಸದೆ ನಿನಗಾಗಿ ತಿಂಡಿ, ಮಧ್ಯಾಹ್ನದ ಊಟದ ಡಬ್ಬಿ ತಯಾರು ಮಾಡಿಟ್ಟು ಹೋಗುತ್ತಿದ್ದರು..!!! ನಿನ್ನ ಮನೆಯ ಕೆಲಸದವರಿಗೆ ಕೇಳಿದ್ದರೆ ತಿಳಿಯುತ್ತಿತ್ತು ನಿನಗೆ ಇದೆಲ್ಲ...!!!
ಆದರೆ ನೀನು ನಿನ್ನದೆ ಲೋಕದಲ್ಲಿ ಖಿನ್ನತೆಗೆ ಜಾರುತ್ತಾ ಹೋಗಿ ಬದುಕು ಎಂದರೆ ದುಃಖ ಎಂದು ವ್ಯಾಖ್ಯಾನ ನೀಡಿಕೊಂಡು ಬಿಟ್ಟಿರುವೆ. ನಿನ್ನೆ ಸಹ ನಿನ್ನ ತಂದೆ ತಾಯಿ ಬಂದಿದ್ದರು ನಿನ್ನನ್ನು ನೋಡಲು, ನೋಡುವೆಯಾ?? “ ಎಂದು ಹೇಳಿ ಒಂದು ವಿಡಿಯೋ ತೋರಿಸಿದಳು.. ಅದರಲ್ಲಿ ನೈನಿಕಾ ತಂದೆ ತಾಯಿ ನಿದ್ರೆಯ ಮಂಪರಿನಲ್ಲಿ ಬೆಡ್ ಮೇಲೆ ಮಲಗಿದ್ದ ಮಗಳನ್ನು ಕಂಡು ದುಃಖ ಪಟ್ಟಿದ್ದು ಇತ್ತು. ನೈನಿಗೆ ತನ್ನ ತಪ್ಪಿನ ಅರಿವಾಗಿ ಕಣ್ಣೀರು ಬಂದಿತು.
ಆದ್ವಿಕಾ ಮುಂದುವರೆದು “ಇನ್ನು ನೀನು ಪ್ರೀತಿಸಿದ ವ್ಯಕ್ತಿಯ ಬಗ್ಗೆ. ನಿನಗೆ ನಿಜಕ್ಕೂ ಪ್ರೀತಿ ಆಗಿರಲಿಲ್ಲ, ಅದು ನಿನ್ನ ಕೊರತೆ ತುಂಬಿಸಿಕೊಳ್ಳುವ ಒಂದು ಯತ್ನ ಅಷ್ಟೆ. ವಾಸ್ತವವಾಗಿ ಬದುಕಬೇಕು ಭ್ರಮೆ ಜೀವನದಲ್ಲಿ ಅಲ್ಲ ನೈನಿ.
ಜೀವನ ಎಂದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸುತ್ತಾರೆ. ನಿನ್ನ ಪ್ರಕಾರ ಬದುಕು ಎಂದರೆ ದುಃಖ ಎಂದು ಮಾತ್ರ...!!! ಅದೆ ಒಬ್ಬ ವೈರಾಗಿಗೆ ‘ವೈರಾಗ್ಯವೆ’ ಬದುಕು, ಭಕ್ತನಿಗೆ ‘ಭಕ್ತಿಯೆ’ ಬದುಕು, ಬಡವನಿಗೆ ‘ ‘ಒಂದು ಹೊತ್ತಿನ ಊಟ ಹಾಗೆ ನೆಮ್ಮದಿಯೇ ’ ಬದುಕು, ಶ್ರೀಮಂತನಿಗೆ ‘ಹಣ-ಅಂತಸ್ತೆ’ ಬದುಕು.
ಕೊರತೆ ಎಲ್ಲರ ಜೀವನದಲ್ಲೂ ಇದೆ ಆದರೆ ಜೀವನದ ಸಂಘರ್ಷಗಳಿಗೆ ಹೆದರಿ ಎಲ್ಲರೂ ಹೇಡಿಗಳ ಹಾಗೆ ಸಾಯುವುದಿಲ್ಲ..!!!!!! ನಿನ್ನ ಹೇಡಿ ಎಂದು ನಾನು ನೇರವಾಗಿ ಹೇಳುತ್ತೇನೆ ಏಕೆಂದರೆ, ನಿನ್ನ ಸಮಸ್ಯೆ ಸಮಸ್ಯೆಯೆ ಅಲ್ಲ..!!! ನೀನು ಹೀಗೆ ಒಂದು ದಿನ ಕುಂಟು ನೆಪಗಳನ್ನು ಹೇಳಿ ಸಾಯಲೇನು ನಿನ್ನ ಅಮ್ಮ ಅಷ್ಟೊಂದು ತಿಂಗಳು ನಿನ್ನನ್ನು ಹೊಟ್ಟೆಯಲ್ಲಿಟ್ಟುಕೊಂಡು ಜೋಪಾನ ಮಾಡಿದ್ದು..!!! ??? ಅಷ್ಟೆಲ್ಲ ನೋವು ಸಹಿಸಿ ನಿನಗೆ ಜನ್ಮ ಕೊಟ್ಟಿರುವುದು..!!?? ನಿನ್ನ ತಂದೆ ಅಷ್ಟೆಲ್ಲ ಕಷ್ಟ ಪಟ್ಟು ದುಡಿಯುವುದು ನಿನ್ನ ಸಾವನ್ನು ನೋಡಲೇನು..!!???
ಯಾವನೋ ಎರಡು ಮೂರು ತಿಂಗಳ ಹಿಂದೆ ಬಂದ ಮೋಸಗಾರನಿಗಾಗಿ ನೀನು ನಿನ್ನ ಅಮೂಲ್ಯ ಜೀವವನ್ನು ತೊರೆಯಲು ಸಿದ್ದವಾಗಿ ಇರುವೆಯಾ?? ಅದೆ ತನ್ನ ಜೀವವನ್ನು ಒತ್ತೆ ಇಟ್ಟು ನಿನಗೆ ಜೀವ ನೀಡಿದ ತಾಯಿಗೆ ಪ್ರತಿಯಾಗಿ ನೀನು ಕೊಟ್ಟಿದ್ದೇನು ??ದುಃಖ ಮಾತ್ರವೇ..!!!”
ನೈನಿ ನಿನ್ನ ಬದುಕು ದುಃಖಮಯ ಎನ್ನುವ ಭ್ರಮೆಯಿಂದ ಹೊರಗೆ ಬಾ, ಈ ರೀತಿಯ ಮಕ್ಕಳ ಜೊತೆಗೆ ಸಮಯ ಕಳೆ, ಜೀವನದಲ್ಲಿ ಏನಾದರೂ ಸಾಧಿಸಿ ನಿನ್ನ ತಂದೆ ತಾಯಿ ಹೆಮ್ಮೆ ಪಡುವ ಹಾಗೆ ಮಾಡು. ಹಣಕ್ಕೇನು ಕೊರತೆ ಇಲ್ಲವಲ್ಲ ನಿನ್ನ ತಿಂಗಳ ಖರ್ಚಿನಲ್ಲಿ ಸ್ವಲ್ಪ ಹಣ ಉಳಿಸಿ ಬಡವರಿಗೆ, ಅನಾಥರಿಗೆ, ಹಸಿದವರಿಗೆ, ವೃದ್ಧರಿಗೆ ಕೈಲಾದ ಸಹಾಯ ಮಾಡು. ಏನೋ ಹೇಳಿದೆಯಲ್ಲ ನನ್ನ ತಂದೆ ತಾಯಿ ಸರಿ ಇಲ್ಲ ಎಂದು, ಆಗ ನಿನ್ನ ಪ್ರೀತಿ ಕಂಡ ಜನರೆಲ್ಲರೂ ನೀನು ಬಯಸಿದ್ದಕ್ಕಿಂತ ಹೆಚ್ಚಿನ ಪ್ರೀತಿಯನ್ನೆ ನೀಡುತ್ತಾರೆ.
ಬದುಕು ಎಂದರೆ ತೃಪ್ತಿ ಎನ್ನುವುದು ನೆನಪಿಡು. ಜೀವನದ ವ್ಯಾಖ್ಯಾನ, ನಿನ್ನ ಹುಟ್ಟಿನ ಉದ್ದೇಶ ಎಲ್ಲವನ್ನು ಅರ್ಥ ಮಾಡಿಕೊಂಡು ಬದುಕಬೇಕು. ಇಷ್ಟು ಹೇಳಲು ನಾನು ಇಲ್ಲಿಗೆ ಬಂದಿದ್ದು..: ನಿನಗೆ ನೋವು ನೀಡಿದ್ದರೆ ಕ್ಷಮೆ ಇರಲಿ. ಆದರೆ ನಿನ್ನ ಮುಂದೆ ತುಂಬಾ ಖುಷಿಯಾದ ಜೀವನವಿದೆ ಎಂದು ಹೇಳಬೇಕಿತ್ತು. ಸಮಸ್ಯೆ ಎಲ್ಲರಿಗೂ ಇದೆ ಆದರೆ ಸಾವೊಂದೇ ಅದಕ್ಕೆ ಪರಿಹಾರವಲ್ಲ “ ಎಂದು ಧೀರ್ಘವಾಗಿ ಹೇಳಿ ತನ್ನ ಮಾತು ಮುಗಿಸಿದಳು.
ಅವಳ ಮಾತಿನಲ್ಲಿ ತಿಳಿ ಹೇಳುವಿಕೆಯಿತ್ತು, ವಾಸ್ತವ ಅರ್ಥ ಮಾಡಿಸುವ ಯತ್ನವಿತ್ತು, ನೈನಿಕಳದ್ದೆ ದೊಡ್ಡ ತಪ್ಪಿದೆ ಎಂದು ನೇರವಾಗಿ ಹೇಳಿದ್ದಳು. ನೈನಿ ಒಂದಷ್ಟು ದೂರದಲ್ಲಿ ತಮ್ಮದೇ ಲೋಕದಲ್ಲಿ ಖುಷಿಯಾಗಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಕುಳಿತಳು ಅವಳ ಮನದಲ್ಲಿ ಮಂಥನ ಶುರುವಾಗಿತ್ತು…!!!
ಅವರಿಂದ ಸ್ವಲ್ಪ ದೂರದ ಮರೆಯಲ್ಲಿ ನಿಂತು ಎಲ್ಲವನ್ನು ಕೇಳಿಸಿಕೊಂಡ ಸಿದ್ಧಾರ್ಥ್ ಮೊಗದಲ್ಲಿ ಪ್ರಭುದ್ದ ಯೋಚನೆಯ ಮಗಳನ್ನು ಕಂಡು ಹೆಮ್ಮೆ ಆಗಿತ್ತು. ನೈನಿಕಾ ಕೇಸ್ ನೋಡಿದ ಮೇಲೆ ಆದ್ವಿಕಾಳೆ ಅವಳಿಗೆ ಸೂಕ್ತವಾಗಿ ಬಿಡಿಸಿ ಅರ್ಥ ಮಾಡಿಸುತ್ತಾಳೆ ಎಂದು ಅವಳ ಸಹಾಯ ಪಡೆದಿದ್ದರು. ಹರೆಯದ ಮಕ್ಕಳ ಮನಪರಿವರ್ತನೆ ಬಹಳ ಕಷ್ಟ, ದೊಡ್ಡವರು ಅದರಲ್ಲೂ ಮಾನಸಿಕ ತಜ್ಞರು ವಯಸ್ಸಿನ ಮಕ್ಕಳಿಗೆ ತಿಳಿ ಹೇಳಿದರೆ ಬುದ್ದಿವಾದವನ್ನು ಸಹ ವ್ಯತೀರಿಕ್ತವಾಗಿ ತೆಗೆದುಕೊಳ್ಳುತ್ತಾರೆ, ಮೊಂಡು ಹಠ ಮಾಡುತ್ತಾ ಮತ್ತಷ್ಟು ಖಿನ್ನತೆಗೆ ಜಾರುತ್ತಾರೆ ಎಂದು ಬಲ್ಲವರಾಗಿದ್ದರು.
ನೈನಿಕಾ ಜೊತೆಗೆ ತಾವೇನಾದರೂ ಇವೆ ವಿಚಾರಗಳನ್ನು ಮಾತನಾಡಿದರೆ ಅವಳು ತಮ್ಮನ್ನು ಒಬ್ಬ ಡಾಕ್ಟರ್, ಹಾಗೆ ಅವಳನ್ನು ಒಬ್ಬಳು ಮಾನಸಿಕ ರೋಗಿಯ ಹಾಗೆ ಎಂದುಕೊಂಡು ಮಾತ್ರ ವ್ಯವಹರಿಸಿ ಮನಸಿನ ಮೇಲೆ ಇನ್ನಷ್ಟು ಕಲ್ಲು ಹೇರಿಕೊಂಡ ಹಾಗೆ ತಾನು ಒಬ್ಬಳು ಮಾನಸಿಕ ರೋಗಿ/ ಹುಚ್ಚಿ ಎಂದು ಮನದಲ್ಲೇ ಕೊರಗುವಂತಾಗುತ್ತಿತ್ತು. ಮತ್ತೊಮ್ಮೆ ಅನಾಹುತ ಘಟಿಸುತ್ತದೆ ಎಂದೆ ನೈನಿಕಾ ವಯಸ್ಸಿನ ಅವರ ಮಗಳು ಅದ್ವಿಕಾಳನ್ನು ಕರೆಸಿದ್ದರು.
ಈಗ ಅವಳ ಮಾತುಗಳನ್ನು ಕೇಳಿ ನೆಮ್ಮದಿಯ ಭಾವ ಸಿದ್ದಾರ್ಥ್ ಮನದಲ್ಲಿ ಮೂಡಿತು. ಅಲ್ಲಿಗೆ ಅವರು ಹೊರಗೆ ಬಂದ ಉದ್ದೇಶ ಮುಗಿದಿತ್ತು. ಇನ್ನು ನೈನಿಕಾ ಮನಸಿನ ಮಂಥನ, ಅವಳು ತೋರುವ ಪರಿಣಾಮದ ಮೇಲೆ ಅವರ ಈ ಚಿಕಿತ್ಸೆಯ ಫಲ ನಿಂತಿದೆ ಎಂದು ತಿಳಿದವರು ಸ್ನೇಹಿತೆಯರು ಕುಳಿತ ಕಡೆ ಬಂದು ಜೊತೆಗೆ ಬಂದು ಕುಳಿತರು.
ಹತ್ತು ನಿಮಿಷ ಕಳೆದಿತ್ತು ನೈನಿಕಾ ಕಣ್ಣೀರು ತುಂಬಿಕೊಂಡು ಎದ್ದು ಒಂದು ಕಾಲು ಇಲ್ಲದ ಒಂದೆಡೆ ಸುಮ್ಮನೆ ಕುಳಿತಿದ್ದ ನಾಲ್ಕು ಐದು ವರ್ಷದ ಮಗುವಿನ ಬಳಿಗೆ ಬಂದು ಅದರ ತಲೆ ಸವರಿ “ ಕ್ಷಮಿಸು ಕಂದ, ನಿಮ್ಮೆಲ್ಲರಿಗೆ ಬೆನ್ನೆಲುಬಾಗಿ ನಿಲ್ಲಲು ಆದರೂ ನಾನು ಬದುಕಬೇಕು “ ಎಂದು ಹೇಳಿ ಅದರ ಜೊತೆಗೆ ಆಟಕ್ಕೆ ಇಳಿದಳು. ಇದನ್ನು ಕಂಡ ತಂದೆ ಮಗಳು ಮುಖ ಮುಖ ನೋಡಿಕೊಂಡು ನಕ್ಕರು. ಆತ್ಮಹತ್ಯೆ ಯೋಚನೆಯಿಂದ ನೈನಿಕಳನ್ನು ಹೊರಗೆ ತರುವ ಅವರ ಪ್ರಯತ್ನ ಫಲ ನೀಡಿತ್ತು…!!!
ನೈನಿಕಾ ಎರಡು ದಿನ ಆಸ್ಪತ್ರೆಯಲ್ಲಿ ಇದ್ದು ತನ್ನ ಹೆತ್ತವರನ್ನು ಕರೆಸಿ ಅವರಲ್ಲಿ ಕ್ಷಮೆ ಕೇಳಿ ಅವರನ್ನು ತಬ್ಬಿ ಅತ್ತಿದ್ದಳು..!!! ಸಿದ್ದಾರ್ಥ್ ಹಾಗೆ ಅದ್ವಿಕಾಲಿಗೆ ಬಹಳ ಧನ್ಯವಾದಗಳನ್ನು ಪೂರ್ತಿ ಕುಟುಂಬವೆ ಹೇಳಿತ್ತು. ಅದ್ವಿಕಾ ಸಲಹೆಯ ಹಾಗೆ ತಂದೆ ತಾಯಿಯ ಜೊತೆಗೆ ಸಮಯ ಕಳೆಯಲು ಅವರಿಂದ ಸಮಯವನ್ನು ನಿಗದಿಪಡಿಸಿಕೊಂಡಿದ್ದಳು ನೈನಿಕಾ. ಹೆತ್ತವರ ಜೊತೆಗೆ ಬೆರೆತಾಗ ಅವಳಿಗೆ ಅನಿಸಿತು ತಾನೆ ದೂರವಿದ್ದು ತಪ್ಪು ಮಾಡಿಬಿಟ್ಟೆ ಎಂದು. ಓದಿನಲ್ಲೂ ಸಹ ಬಹಳ ಚುರುಕಾಗಿ ಹೋಗಿದ್ದಳು. ಒಂಟಿಯಾಗಿ ಇರದೆ ತನ್ನ ಕೈಲಾದಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡವಳಿಗೆ ಮೊದಲ ಬಾರಿಗೆ ಜೀವನ ಸುಖವಾಗಿದೆ ಎಂದು ಅನಿಸಿ ನೆಮ್ಮದಿ ಮೂಡಿತ್ತು...!!! ಸಿದ್ಧಾರ್ಥ್ ಮನೆಗೆ ಭೇಟಿ ಮಾಮೂಲಿಯಾಗಿತ್ತು, ಅದ್ವಿಕಾ ಪ್ರಾಣ ಸ್ನೇಹಿತೆಯೆ ಆಗಿ ಹೋಗಿದ್ದಳು.
ಆರು ತಿಂಗಳು ಕಳೆದಿತ್ತು, ಒಮ್ಮೆ ಸಿದ್ದಾರ್ಥ್ ಮನೆಗೆ ಕುಟುಂಬ ಸಮೇತ ಊಟಕ್ಕೆ ಹೋದಾಗ ಸಿದ್ದಾರ್ಥ್ “ ಹ್ಮ್ ಈಗ ಹೇಳು ನೈನಿ ಈಗಲಾದರೂ ಬದುಕಿನ ಅರ್ಥ ತಿಳಿಯಿತಾ?? “ ಎಂದು ಹಾಸ್ಯವಾಗಿ ಕೇಳಿದರು..
ನೈನಿಕಾ ನಸುನಕ್ಕು “ ಹಾ ಅಂಕಲ್ ನನಗೆ ತಿಳಿಯಿತು, ಬದುಕು ನಮ್ಮ ಮನಸಿನ ಭಾವದ ಮೇಲೆ ನಿರ್ಧರಿತವಾಗುತ್ತದೆ. ನನ್ನ ಪ್ರಕಾರ ಬದುಕೆಂದರೆ ಸ್ಥಿತಿ ಗತಿ ಹೇಗೆ ಇರಲಿ ಹೃದಯ ತುಂಬಿ ಪೂರ್ಣವಾಗಿ ಜೀವಿಸುವುದು, ಮನಸಿನ ತೃಪ್ತಿಯೆ ಬದುಕಿನ ಜೀವಾಳ “ ಎಂದು ಹೇಳಿದವ ಮೊಗದಲ್ಲಿ ಸಂತೃಪ್ತಿಯ ನಗೆ ಮೂಡಿತ್ತು.
ತಂದೆ ಮಗಳಿಗೆ ನೆಮ್ಮದಿಯ ಭಾವ ಮೂಡಿತು.
********ಮುಕ್ತಾಯ*******
ವಿನುತಾ