Antyavillada preeti in Kannada Fiction Stories by Vinutha books and stories PDF | ಅಂತ್ಯವಿಲ್ಲದ ಪ್ರೀತಿ

The Author
Featured Books
Categories
Share

ಅಂತ್ಯವಿಲ್ಲದ ಪ್ರೀತಿ

ಗುಯ್ ಎನ್ನುತ್ತಿದ್ದ ಕತ್ತಲೆಯ ರಾತ್ರಿ, ಬೆಡ್ ಮೇಲೆ ಆರಾಮಾಗಿ ಮಲಗಿ ಆಳವಾದ ನಿದ್ರೆಯಲ್ಲಿದ್ದ ರಂಜಿತ್ ಹುಬ್ಬುಗಳು ಒಮ್ಮೆಲೇ ಗಂಟಿಕ್ಕಿಕೊಂಡವು. ಮುಚ್ಚಿದ್ದ ಕಣ್ಣುಗಳ ಒಳಗಿನ ಕಣ್ಣುಗುಡ್ಡೆಗಳು ಅತ್ತಿತ್ತಾ  ಓಡಾಡಲು ಶುರುವಾಗಿ ಏನನ್ನೋ ಕನವರಿಸುತ್ತ ಬೆಡ್ ಮೇಲೆ ಕಣ್ಣು ಬಿಡದೆ ಒದ್ದಾಡಿದ. ಮುಖದ ಮೇಲೆಲ್ಲಾ ಬೆವರಿನ ಹನಿಗಳು ಮೂಡುತ್ತಿದ್ದವು. ಒಂದಷ್ಟು ಕ್ಷಣದಲ್ಲಿ " ಇಲ್ಲ " ಎಂದು ಚೀರಿ ಎದ್ದು ಕುಳಿತಿದ್ದ. ಕಣ್ಣು ಬಿಟ್ಟವನು ತಲೆ ಮೇಲೆ ಎತ್ತಿ ನೋಡಿದ. ಸುತ್ತಲೂ ಒಮ್ಮೆ ನೋಡಿದವನಿಗೆ ಅದೊಂದು ಕನಸು ಎನ್ನುವುದು ಅರಿವಾಗಿ ಟೇಬಲ್ ಮೇಲೆ ಇರಿಸಿದ್ದ ಗ್ಲಾಸ್ ಅಲ್ಲಿನ ನೀರು ಕುಡಿದ. ಇಂತಹ ಭಯಾನಕ ಕನಸು, ಹೆಚ್ಚು ಕಡಿಮೆ ಪ್ರತಿದಿನ ಬೀಳುವ ಕನಸು ಅದು. ಆದರೂ ಪ್ರತಿಬಾರಿ ಒಂದೇ ತೆರನಾದ ತೀವ್ರತೆ ತರುತ್ತಿತ್ತು.

ಅವನ ಕಿರುಚುವಿಕೆಗೆ ಪಕ್ಕದ ರೂಮಿನಲ್ಲಿದ್ದ ಸೋಹನ್ ಓಡಿ ಬಂದಿದ್ದ. " ಮತ್ತೆ ಕನಸು ಬಿತ್ತಾ ?? " ಕೇಳಿದ. ರಂಜಿತ್ ತಲೆ ಆಡಿಸಿದ.

ಸೋಹನ್ " ನೀನು ಮಾಡೋ ಕೆಲಸದಲ್ಲಿ ಹೆಚ್ಚು ಧೈರ್ಯ ಬೇಕು ರಂಜಿತ್. ನೀನು ಇಷ್ಟು ವೀಕ್ ಮೈಂಡ್ ಆದರೆ ಹೇಗೆ ?? ನೀನು ಫಾರೆನ್ಸಿಕ್ ಡಿಪಾರ್ಟ್ಮೆಂಟ್ ತುಂಬಾ ಇಷ್ಟ ಪಟ್ಟು ಸೇರಿದ್ದಿಯ, ಬಹುಷಃ ಅಲ್ಲಿ ಸೇರಿದಾಗಿನಿಂದ ಹೀಗೆ ಆಗುತ್ತಿದೆ ಎಂದು ಕಾಣುತ್ತದೆ. ನಿನಗೆ Bioarchaeology ಡಿಪಾರ್ಟ್ಮೆಂಟ್ ಗೆ ಕಳಿಸಬಾರದಿತ್ತು. ನೀನು ಹಳೆಯ ಮೃತದೇಹಗಳನ್ನು ನೋಡಿ ಬರುತ್ತೀಯ, ಹಗಲಲ್ಲಿ ದಕ್ಷತೆಯಲ್ಲಿ ಕೆಲಸ ಮಾಡುತ್ತೀಯಾ. ಆದರೆ ರಾತ್ರಿಯಾದರೆ ಹೀಗೆ. ಯಾವುದೊ ಕಾಲದಲ್ಲಿ ಸತ್ತವರು ನಿನ್ನ ನಿದ್ರೆ ಕೆಡಿಸುತ್ತಿದ್ದಾರೆ ಅಷ್ಟೇ.  ಹನುಮಾನ್ ಚಾಲೀಸ್ ಪಟಿಸಿ ಮಲಗಿಕೊ. ಗುಡ್ ನೈಟ್ " ಎಂದು ಹೇಳಿ ಅವನ ಬೆನ್ನು ತಟ್ಟಿ ಎದ್ದು ಹೋದ.

ಅವನು ಹೋದ ದಾರಿಯನ್ನು ನೋಡಿದ ರಂಜಿತ್ ಯೋಚನೆಗೆ ಬಿದ್ದ, ಅವನ ಕನಸಿನ ವಿಶ್ಲೇಷಣೆ ನಡೆಯುತ್ತಿತ್ತು. ಈ ಬಾರಿ ಒಂದಷ್ಟು ಸ್ಪಷ್ಟ ಕನಸು. ಕನಸಿನಲ್ಲಿ ಅವನಿದ್ದ, ಆದರೆ ಆಧುನಿಕ ಜಗತ್ತಿನಲ್ಲಿ ಅಲ್ಲ. ಯಾವುದೊ ಕಾಡಿನಲ್ಲಿ. ತೀರಾ ಹಿಂದಿನ ಶತಮಾನಗಳು. ಒಂದೇ ಕಾಲಘಟ್ಟಕ್ಕೆ ಸಂಬಂಧಿಸಿದ ಘಟನೆಗಳು. ಯಾವುದೋ ಹುಡುಗಿ " ನನ್ನನು ಮರೆತುಬಿಡಬೇಡ, ನಿನಗಾಗಿ ಕಾಯುತ್ತಿರುತ್ತೇನೆ...!!! " ಎನ್ನುತ್ತಾ ಅವನ ಹಿಡಿದ ಕೈ ಬಿಟ್ಟಿದ್ದಳು ಅವಳ ಮುಖ ಸ್ಪಷ್ಟವಿಲ್ಲ. ಮನಸಿಗೆ ವಿಚಿತ್ರ ವೇದನೆಯಾಯಿತು.

ಒಂದೇ ರೀತಿಯ ಕನಸು ಯಾಕೆ ಬೀಳುತ್ತಿದೆ ಅರ್ಥವಾಗಲಿಲ್ಲ. ಸೋಹನ್ ಹೇಳಿದ ಹಾಗೆ ಆಗಾಗ ಡಿಪಾರ್ಟ್ಮೆಂಟ್ ಕಡೆಯಿಂದ ರಾಜ್ಯದ ಎಲ್ಲೇ ಗುರುತು ಇಲ್ಲದ ಮಾನವನ ಮೃತದೇಹದ ಕುರುಹುಗಳು, ಅಸ್ತಿಪಂಜರಗಳು ಸಿಕ್ಕರೂ ಅವನೆ ಹೋಗಬೇಕಿತ್ತು ಫಾರೆನ್ಸಿಕ್ ಗೆ ಸಂಬಂಧಿಸಿದಂತೆ phd ಮಾಡಿದ್ದ. ಮೂವತ್ತು ವರ್ಷದ ರಂಜಿತ್ ಯುವ ವಿಜ್ಞಾನಿ ಅವನ ಕ್ಷೇತ್ರದಲ್ಲಿ.

ರಂಜಿತ್ ಮೂಲತಃ ಉತ್ತರ ಕರ್ನಾಟಕದವನು. ದೆಹಲಿಯಲ್ಲಿ ಓದು ಮುಗಿಸಿ UPSC ಯ Archaeological Survey of India (ASI) ಎಕ್ಸಾಮ್ ಪಾಸ್ ಮಾಡಿ ಕರ್ನಾಟಕಕ್ಕೆ ಪೋಸ್ಟಿಂಗ್ ಆಗಿ ಬಂದಿದ್ದ. ಅವನ ಫೀಲ್ಡ್ ಅಲ್ಲಿ ಸಾಮಾನ್ಯವಾಗಿತ್ತು ಹಳೆಯ ಪಳೆಯುಳಿಕೆ ಪತ್ತೆ ಹಚ್ಚುವುದು, ಕಾರ್ಬನ್ ಡೇಟಿಂಗ್ ಎಲ್ಲವೂ. ಆದರೂ ಅವನಲ್ಲಿ ಬೆಳಗ್ಗೆ ಇದ್ದ ಧೈರ್ಯ ರಾತ್ರಿ ಈ ಕನಸ್ಸಿನಿಂದ ಕುಸಿದುಬಿಡುತ್ತಿತ್ತು. ತನ್ನ ಕನಸಿನ ಹಿಂದಿನ ಮರ್ಮ ಅವನಿಗೆ ತಿಳಿಯದೆ ಹೋಗಿತ್ತು. ಕನಸಿನಲ್ಲಿ ಕಾಣುವ ಹುಡುಗಿಯ ಕನವರಿಕೆ ಮನಸಿಗೆ ಶುರುವಾಗಿತ್ತು. ಆದರೆ ಕನಸಲ್ಲಿ ಬರುವ ಹುಡುಗಿಯೇ ತನ್ನ ಜೀವನದ ಸಂಗಾತಿ ಎಂದು ಅಂದುಕೊಳ್ಳುವಷ್ಟು ಭ್ರಮೆಯಲ್ಲಿ ಬದುಕುವವನಲ್ಲ ರಂಜಿತ್. 

ಹೇಗೋ ನಿದ್ರೆ ಮುಗಿಸಿ ಎದ್ದಿದ್ದ. ಅವನ ಮುಖ ಇನ್ನು ಬಾಡಿರುವುದು ನೋಡಿ ಸೋಹನ್ " ಹೇಯ್ ನೀನು ಇಷ್ಟಕ್ಕೆ ಇಷ್ಟು ಅಪ್ಸೆಟ್ ಆದರೆ ಹೇಗೆ ಹೇಳು ?? ಈಗ ಹೇಳು ನಿನ್ನೆ ಕನಸಿನಲ್ಲಿ ಯಾವ ಹುಡುಗಿ ಬಂದಿದ್ದಳು ?? " ಕೇಳಿದ ತಮಾಷೆಯಾಗಿ.

ರಂಜಿತ್ ಮತ್ತು ಸೋಹನ್ ರಿಲೇಟಿವ್ಸ್.. ರಂಜಿತ್ ಗೆ ಕ್ವಾಟ್ರೇಸ್ ಕೊಟ್ಟಿದ್ದರು. ತಂದೆ ತಾಯಿ ಊರು ಬಿಟ್ಟು ಅವನ ಜೊತೆಗೆ ಬಂದು ಇರಲು ಒಪ್ಪಿರಲಿಲ್ಲ. ಹಾಗಾಗಿ ಒಬ್ಬನೇ ಇದ್ದ. ಅಪರೂಪಕ್ಕೆ ಬೀಳುವ ಕನಸುಗಳು ಯಾವಾಗ ಪ್ರತಿದಿನ ದಾಳಿ ಇಡಲು ಶುರು ಮಾಡಿದವೋ ಅವನಿಗೆ ಒಬ್ಬನೇ ಇರುವುದು ಕಷ್ಟವಾಗಿತ್ತು. ಮನೆಯಲ್ಲಿ ಕನಸಿನ ವಿಷಯ ಹೇಳಿದಾಗ ಅವನ ತಾಯಿ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ತಾಯತ ಕಟ್ಟಿಸಿದ್ದರು. ವೈಜ್ಞಾನಿಕ ಹಾದಿಯಲ್ಲಿ ಇರುವ ರಂಜಿತನಿಗೆ ಅದರ ಬಗ್ಗೆ ನಂಬಿಕೆ ಅಷ್ಟಾಗಿ ಇರಲಿಲ್ಲ. ಬೆಂಗಳೂರಿಗೆ ಬರುತ್ತಲೂ ಕಿತ್ತು ಎಸೆದಿದ್ದ. ಅವನ ತಾಯಿಯ ಅಣ್ಣನ ಮಗ ಸೋಹನ್ ಸಹ ಬೆಂಗಳೂರಲ್ಲಿ ಐಟಿ ಕೆಲಸ ಮಾಡುತ್ತಿದ್ದ. ಅವನನ್ನು ರಂಜಿತ್ ಜೊತೆಗೆ ಇರಲು ವಾಸಕ್ಕೆ ಬಿಟ್ಟಿದ್ದರು. ಒಂದೇ ವಯಸ್ಸಿನ ಅವರು ಯಾವಾಗಲೂ ಬೆಸ್ಟ್ ಫ್ರೆಂಡ್ಸ್.

ಆದರೂ ರಂಜಿತ್ ತನ್ನ ಕನಸಿನ ಮಾಹಿತಿ ಪೂರ್ತಿಯಾಗಿ ಅವನಲ್ಲಿ ಹೇಳುತ್ತಿರಲಿಲ್ಲ. ರಂಜಿತ್ " ಏನೋ ನೆನಪಿಲ್ಲ " ಸುಳ್ಳು ಹೇಳಿದ್ದ. ಒಮ್ಮೆ ಹುಡುಗಿ ಕನಸಲ್ಲಿ ಬರುವುದು ಹೇಳಿದಾಗಿನಿಂದ ಸೋಹನ್ ಅವನನ್ನು ಕಿಚಾಯಿಸುವುದು ಹೆಚ್ಚಾಗಿತ್ತು.

ಸೋಹನ್ " ನಿನಗೆ ನಿನ್ನ ಕನಸ್ಸುಗಳು ನೆನಪಿಸುತ್ತಿವೆ, ನೀನು ವಯಸ್ಸಿಗೆ ಬಂದಿದ್ದಿಯಾ, ಇನ್ನೇನು ವಯಸ್ಸು ಮೀರುತ್ತಿದೆ ಎಂದು. ಕೆಲಸ ಕೆಲಸ ಎಂದು ನಿನ್ನ ಅಗತ್ಯತೆಗಳನ್ನು ನೆಗ್ಲೆಕ್ಟ್ ಮಾಡದೇ ಬೇಗ ಮದುವೆ ಆಗು ಅಂತ ಹೇಳುತ್ತಿದ್ದಾರೆ ನಿನ್ನ ಡ್ರೀಮ್ ಗರ್ಲ್ಸ್" ನಕ್ಕು ಅವನ ಮುಂದೆ ಕಾಫಿ ಇಟ್ಟ.

ರಂಜಿತ್ " ನನಗೆ ಮದುವೆ ಇಂಟೆರೇಸ್ಟ್ ಇಲ್ಲ " ಎಂದವನಿಗೆ ಕನಸಲ್ಲಿನ ಹುಡುಗಿ ಕಣ್ಣು ತುಂಬಿ " ನನ್ನನ್ನು ಮರೆತುಬಿಡಬೇಡ ನಿನಗಾಗಿ ನಾನು ಕಾಯುತ್ತೇನೆ..!! " ಎಂದು ಹೇಳಿದ್ದ ಮಾತು ಕಿವಿಯಲ್ಲಿ ಮಾರ್ದನಿಸಿತು.

ಸೋಹನ್ ಗಂಭೀರವಾಗಿ " ನನ್ನ ಮದುವೆ ಮುಂದಿನ ತಿಂಗಳು. ಮದುವೆ ಆದ ಮೇಲೆ ಇಲ್ಲಿರೋದು ಕಷ್ಟ. ಅವಳ ಕಂಪನಿ ಇಲ್ಲಿಂದ ದೂರವಾಗುತ್ತೆ. ನಾನು ಬೇರೆ ಎಲ್ಲಿಯಾದರೂ ಮನೆ ಮಾಡಲೇಬೇಕು. ಮುಂದೆ ಹೇಗೆ ಇರ್ತೀಯ ಒಬ್ಬನೇ ?? ಅತ್ತೆ ಮಾವ ಸಹ ನಿನ್ನ ಮದುವೆಯ ಒಪ್ಪಿಗೆಗೆ ಕಾಯುತ್ತಿದ್ದಾರೆ, ಹೀಗೆ ಒಬ್ಬನೇ ಇರಬೇಡ, ವಯಸ್ಸು ಮೂವತ್ತು ನೆನಪಿರಲಿ " ಎಂದು ಹೇಳಿ ತನ್ನ ರೂಮಿನ ಕಡೆಗೆ ಹೋದ ಆಫೀಸಿಗೆ ಹೋಗಲು ತಯಾರಾಗಲು ಸಮಯವಾಗಿತ್ತು.

ರಂಜಿತ್ ಸೋಫಾ ಮೇಲೆ ಮೈ ಚೆಲ್ಲಿ ಕುಳಿತ. ಅವನಿಗೆ ಆಫಿಸಿಗೆ ತಡವಾಗಿತ್ತು. ಆದರೆ ಹೆಣ್ಣಿನ ನೋವು ತುಂಬಿದ ಧ್ವನಿ ಅವನ ನೆಮ್ಮದಿ ಕಿತ್ತುಕೊಂಡಿತ್ತು. ಹುಡುಗಿಯ ಮುಖ ನೆನಪಿಲ್ಲದಿದ್ದರೂ ಅವಳು ಧರಿಸಿದ್ದ ಬಟ್ಟೆ, ಆಭರಣಗಳು ಎಲ್ಲವ

ರಂಜಿತ್ " ಯಾರವಳು ?? ನನ್ನನ್ನು ಅದು ಯಾಕೆ ಅಷ್ಟೊಂದು ಕಾಡುತ್ತಿದ್ದಾಳೆ ?? " ಎಂದುಕೊಂಡ.. ಮನಸ್ಸು ಏನನ್ನೋ ಗ್ರಹಿಸಲು ಶುರು ಮಾಡಿತ್ತು. ಅವನ ಕನಸುಗಳ ಅರ್ಥ ಶೀಘ್ರದಲ್ಲಿ ಸಿಗುವುದರಲ್ಲಿತ್ತು.



********

ಮುಂದುವರಿಯುವುದು.