Bilateral space in Kannada Thriller by Saandeep Joshi books and stories PDF | ದ್ವೀಮುಖ ಅಂತರಾಳ

Featured Books
Categories
Share

ದ್ವೀಮುಖ ಅಂತರಾಳ

ಮಲೆನಾಡಿನ ದಟ್ಟ ಅಡವಿಯ ನಡುವೆ ಇದ್ದ ಆ ಹಳೆಯ ಬಂಗಲೆಗೆ ಶಾಂತಿ ನಿವಾಸ ಎಂಬ ಹೆಸರಿತ್ತು. ಆದರೆ ಅಲ್ಲಿನ ವಾತಾವರಣದಲ್ಲಿ ಶಾಂತಿಗಿಂತ ಹೆಚ್ಚಾಗಿ ಮೌನವೇ ತುಂಬಿತ್ತು. ಕಿರಣ್ ಒಬ್ಬ ಪ್ರತಿಭಾವಂತ ಬರಹಗಾರ. ಈವರೆಗೆ ಅವನು ಬರೆದ 199 ಕಥೆಗಳು ಓದುಗರ ನಿದ್ದೆಗೆಡಿಸಿದ್ದವು. ಈಗ ಅವನ ಗುರಿ 200ನೇ ಕಥೆ. ಅದು ಅವನ ಜೀವನದ ಶ್ರೇಷ್ಠ ಕೃತಿಯಾಗಬೇಕು  ಎಂಬ ಹಠದೊಂದಿಗೆ ಅವನು ಈ ಏಕಾಂತಕ್ಕೆ ಬಂದಿದ್ದ.
ಆ ಬಂಗಲೆಯಲ್ಲಿ ಅವನಿಗೆ ಜೊತೆಯಾಗಿ ಇದ್ದವನು ಸೋಮಣ್ಣ ಮಾತ್ರ. ಸೋಮಣ್ಣ ಆ ಮನೆಯನ್ನು ಕಾಯುವವನು ಎನ್ನುವುದಕ್ಕಿಂತ ಹೆಚ್ಚಾಗಿ, ಆ ಮನೆಯ ಒಂದು ಭಾಗವೇ ಆಗಿಬಿಟ್ಟಿದ್ದ ಮನುಷ್ಯ.
ಮೊದಲ ಮೂರು ದಿನಗಳು ಕಿರಣ್‌ಗೆ ತುಂಬಾ ಆರಾಮದಾಯಕವಾಗಿದ್ದವು. ಸೋಮಣ್ಣ ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಕಾಫಿ ಮತ್ತು ತಿಂಡಿಯನ್ನು ತಂದು ಮೇಜಿನ ಮೇಲಿಡುತ್ತಿದ್ದ. ಕಿರಣ್ ಬರವಣಿಗೆಯಲ್ಲಿ ಮುಳುಗಿದ್ದಾಗ ಸೋಮಣ್ಣ ಒಂದು ಶಬ್ದವನ್ನೂ ಮಾಡುತ್ತಿರಲಿಲ್ಲ. ಆದರೆ ಕಿರಣ್‌ಗೆ ಒಂದು ವಿಚಿತ್ರ ಅನುಭವವಾಗುತ್ತಿತ್ತು. ಅವನು ಬರೆಯುವಾಗ ಯಾರೋ ತನ್ನ ಬೆನ್ನ ಹಿಂದೆಯೇ ನಿಂತು ಕಾಗದದ ಮೇಲೆ ಓಡುತ್ತಿರುವ ಪೆನ್ನಿನ ತುದಿಯನ್ನು ಗಮನಿಸುತ್ತಿದ್ದಾರೆ ಎಂಬ ಭಾಸವಾಗುತ್ತಿತ್ತು.
ಒಂದು ದಿನ ಕಿರಣ್ ಕುತೂಹಲದಿಂದ ಕೇಳಿದ, ಸೋಮಣ್ಣ, ನೀನು ಎಷ್ಟು ವರ್ಷದಿಂದ ಇಲ್ಲಿದ್ದೀಯಾ?
ಸೋಮಣ್ಣ ಬಾಗಿಲ ಬಳಿ ನಿಂತು ನಿಧಾನವಾಗಿ ಕಿರಣ್‌ನತ್ತ ತಿರುಗಿದ. ಅವನ ಕಣ್ಣುಗಳಲ್ಲಿ ಯಾವುದೇ ಭಾವನೆಗಳಿರಲಿಲ್ಲ. ನೀವು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಈ ಮನೆಯ ಕಥೆಗಳನ್ನು ಬರೆಯುತ್ತಿದ್ದೆ ಸರ್ ಎಂದು ಹೇಳಿ ಮೌನವಾಗಿ ಹೊರನಡೆದ.
ಕಿರಣ್‌ಗೆ ಆ ಮಾತು ಅರ್ಥವಾಗಲಿಲ್ಲ. ಈ ಮನೆಯ ಕಥೆಗಳನ್ನಾ? ಇವನು ಕೇವಲ ಕೆಲಸಗಾರನಲ್ಲವೇ?' ಎಂಬ ಪ್ರಶ್ನೆ ಕಾಡತೊಡಗಿತು.
ಬಂಗಲೆಯ ಹಜಾರದಲ್ಲಿ ಅನಾಥವಾಗಿ ನಿಂತಿದ್ದ ಆ ಬೃಹತ್ ಗ್ರಾಂಡ್ ಫಾದರ್ ಕ್ಲಾಕ್' ರಾತ್ರಿ ಹೊತ್ತು ಭಯಾನಕವಾಗಿ ಶಬ್ದ ಮಾಡುತ್ತಿತ್ತು. ಸೋಮಣ್ಣ ಒಂದು ಕಟ್ಟುನಿಟ್ಟಿನ ನಿಯಮ ಹಾಕಿದ್ದ ಸರ್, ರಾತ್ರಿ 12 ಗಂಟೆಯ ನಂತರ ನೀವು ಆ ಗಡಿಯಾರದ ಹತ್ತಿರ ಹೋಗಬಾರದು. ಅದು ಕಾಲದ ಜೊತೆ ಆಟವಾಡುವ ಗಡಿಯಾರ. ಆದರೆ ಕಿರಣ್ ಒಬ್ಬ ತಾರ್ಕಿಕ ಬರಹಗಾರ. ಇಂತಹ ಮೂಢನಂಬಿಕೆಗಳನ್ನು ಅವನು ನಂಬುತ್ತಿರಲಿಲ್ಲ. ಆದರೆ ದಿನ ಕಳೆದಂತೆ, ಆ ಗಡಿಯಾರದ ಶಬ್ದದಲ್ಲಿ ಯಾರೋ ಸಣ್ಣ ಧ್ವನಿಯಲ್ಲಿ ಪಿಸುಗುಟ್ಟುತ್ತಿರುವಂತೆ ಕೇಳುತ್ತಿತ್ತು. ನಾಲ್ಕನೇ ದಿನದ ರಾತ್ರಿ, ಕಿರಣ್ ತನ್ನ 200ನೇ ಕಥೆಯ ಅರ್ಧ ಭಾಗ ಮುಗಿಸಿ ಸುಸ್ತಾಗಿದ್ದ. ಆ ಕಥೆಯ ನಾಯಕನಿಗೆ ಅವನು ವಿಶ್ವ ಎಂದು ಹೆಸರಿಟ್ಟಿದ್ದ. ವಿಶ್ವ ಕೂಡ ಒಬ್ಬ ಸೈಕೋಪಾತ್ ಹಂತಕನ ಪಾತ್ರವಾಗಿತ್ತು.
ಕುತೂಹಲ ತಾಳಲಾರದೆ ಕಿರಣ್ ಅಂದು ರಾತ್ರಿ 12 ಗಂಟೆಗೆ ಸರಿಯಾಗಿ ಹಜಾರಕ್ಕೆ ಬಂದ. ಗಡಿಯಾರ 12 ಗಂಟೆಯನ್ನು ಸೂಚಿಸಿ ಬೆಲ್ ಬಾರಿಸಿದಾಗ, ಕಿರಣ್‌ಗೆ ಒಂದು ಅದೃಶ್ಯ ಕೈ ತನ್ನ ಕುತ್ತಿಗೆಯನ್ನು ಒತ್ತಿದಂತಾಯಿತು. ಅವನು ಗಾಬರಿಯಿಂದ ಗಡಿಯಾರದ ಕೆಳಗಿದ್ದ ಸಣ್ಣ ರಹಸ್ಯ ಕಪಾಟನ್ನು ತೆರೆದ. ಅಲ್ಲಿ ಕಿರಣ್‌ನದ್ದೇ ಕೈಬರಹದಲ್ಲಿರುವ ಒಂದು ಕಪ್ಪು ಡೈರಿ ಇತ್ತು. ಅದನ್ನು ತೆರೆದಾಗ ಅವನ ಕಾಲುಗಳು ನಡುಗಿದವು. ಅದರಲ್ಲಿ ಕಿರಣ್ ಈವರೆಗೆ ಬರೆದ 199 ಕಥೆಗಳ ಶೀರ್ಷಿಕೆಗಳಿದ್ದವು. ಆದರೆ ಆ ಕಥೆಗಳ ಕೆಳಗೆ, ಆ ಪಾತ್ರಗಳು ಸತ್ತ ದಿನಾಂಕ ಮತ್ತು ಸಮಯವನ್ನು ಕೆಂಪು ಶಾಯಿಯಲ್ಲಿ ಬರೆಯಲಾಗಿತ್ತು. ಅದು ಕೇವಲ ಕಥೆಯ ಅಂತ್ಯವಾಗಿರಲಿಲ್ಲ, ಯಾರೋ ಒಬ್ಬ ಹಂತಕನು ತನ್ನ ಡೈರಿಯಲ್ಲಿ ದಾಖಲಿಸಿದ 'ಕೊಲೆಗಳ ಪಟ್ಟಿಯಂತಿತ್ತು.
ಏನು ಹುಡುಕುತ್ತಿದ್ದೀರಾ ಕಿರಣ್ ಸರ್? ಸೋಮಣ್ಣನ ಧ್ವನಿ ಕೇಳಿ ಕಿರಣ್ ಬೆಚ್ಚಿಬಿದ್ದ.
ಸೋಮಣ್ಣನ ಕೈಯಲ್ಲಿ ಒಂದು ಹಳೆಯ ಲ್ಯಾಂಟರ್ನ್ ಇತ್ತು. ಅದರ ಬೆಳಕಿನಲ್ಲಿ ಸೋಮಣ್ಣನ ಮುಖ ಭಯಾನಕವಾಗಿ ಕಾಣುತ್ತಿತ್ತು. ನೀವು ಇಂದು ಬರೆಯುತ್ತಿರುವ 200ನೇ ಕಥೆಯ ಬಗ್ಗೆ ಒಂದು ರಹಸ್ಯ ಹೇಳಲೆ? ನಿಮ್ಮ ಕಥೆಯ ನಾಯಕ ವಿಶ್ವ ಈಗ ನಿಮ್ಮ ರೂಮಿನ ಕಿಟಕಿಯ ಹೊರಗೆ ನಿಂತಿದ್ದಾನೆ. 
ಕಿರಣ್ ಬೆವರುತ್ತಾ ತನ್ನ ರೂಮಿಗೆ ಓಡಿದ. ಕಿಟಕಿ ತೆರೆದಾಗ ಹೊರಗೆ ಯಾರೂ ಇರಲಿಲ್ಲ. ಆದರೆ ಮೇಜಿನ ಮೇಲೆ ಅವನು ಬರೆಯುತ್ತಿದ್ದ ಕಾಗದದಲ್ಲಿ ಹೊಸ ಸಾಲುಗಳು ಮೂಡಿದ್ದವು ಕಿರಣ್, ನೀನು ಸೃಷ್ಟಿಸಿದ ಪಾತ್ರಗಳು ನಿನ್ನನ್ನು ಹುಡುಕಿಕೊಂಡು ಬಂದಿವೆ. ಕಿರಣ್‌ಗೆ ಈಗ ಹುಚ್ಚು ಹಿಡಿದಂತಾಯಿತು. ಅವನು ಹಜಾರದ ಗೋಡೆಯ ಮೇಲಿದ್ದ ದೊಡ್ಡ ಕನ್ನಡಿಯನ್ನು ನೋಡಿದ. ಆ ಕನ್ನಡಿಯಲ್ಲಿ ತನ್ನ ಪ್ರತಿಬಿಂಬದ ಬದಲು 'ವಿಶ್ವನ ಮುಖ ಕಂಡಿತು. ಅದೇ ಗಡ್ಡ, ಅದೇ ಕ್ರೂರ ನೋಟ. ಕಿರಣ್‌ಗೆ ಅರ್ಥವಾಯಿತು, ಅವನು ಸೃಷ್ಟಿಸಿದ ಹಂತಕ ಬೇರೆ ಯಾರೂ ಅಲ್ಲ, ಅವನದೇ ಇನ್ನೊಂದು ಮುಖ. 
ಸೋಮಣ್ಣ ಬಾಗಿಲು ಒದ್ದುಕೊಂಡು ಒಳಗೆ ಬಂದ. ಸರ್, ಈ ಬಂಗಲೆಗೆ ನೀವು ಬರುತ್ತಿರುವುದು ಇದು ಮೊದಲ ಸಲವಲ್ಲ. ಕಳೆದ ಹತ್ತು ವರ್ಷಗಳಿಂದ ನೀವು ಪ್ರತಿ ವರ್ಷ ಇಲ್ಲಿಗೆ ಬರುತ್ತೀರಿ, ಒಂದು ಕಥೆ ಬರೆಯುತ್ತೀರಿ, ಆ ಕಥೆಯ ನಾಯಕನ ಹೆಸರಿನಲ್ಲಿ ಹೊರಗೆ ಹೋಗಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುತ್ತೀರಿ. ಆಮೇಲೆ ಆ ನೆನಪನ್ನು ಮರೆತು ಮತ್ತೆ ಬರುತ್ತೀರಿ. ಆದರೆ ಕಿರಣ್ ನಂಬಲು ತಯಾರಿರಲಿಲ್ಲ. ನಾನು ಹಂತಕನಲ್ಲ ನಾನು ಒಬ್ಬ ಬರಹಗಾರ ಎಂದು ಕಿರುಚಿದ.
ಸೋಮಣ್ಣ ನಗುತ್ತಾ ಆ ಡೈರಿಯ ಕೊನೆಯ ಪುಟ ತೋರಿಸಿದ. ಅಲ್ಲಿ ಕಿರಣ್ ಮತ್ತು ಸೋಮಣ್ಣ ಇಬ್ಬರೂ ಒಟ್ಟಿಗೆ ನಿಂತಿರುವ ಫೋಟೋ ಇತ್ತು. ಅದರಲ್ಲಿ ಬರೆದಿತ್ತು. ಡಾ. ಸೋಮಣ್ಣ ಮತ್ತು ರೋಗಿ ಕಿರಣ್  ಸೈಕಿಯಾಟ್ರಿಕ್ ವಾರ್ಡ್, 2026.
ಕಿರಣ್‌ಗೆ ಈಗ ಎಲ್ಲವೂ ಮಸುಕಾಗತೊಡಗಿತು. ಇದು ಬಂಗಲೆಯಲ್ಲ, ಇದು ಒಂದು ಮಾನಸಿಕ ಆಸ್ಪತ್ರೆಯ ಐಸೊಲೇಶನ್ ವಾರ್ಡ್. ಅವನು ಬರೆಯುತ್ತಿದ್ದ ಕಥೆಗಳು ಅವನ ಕಲ್ಪನೆಯಲ್ಲ, ಅವನು ಮಾಡುತ್ತಿದ್ದ ಪಾಪದ ಒಪ್ಪಿಗೆ ಪತ್ರಗಳು. ಸೋಮಣ್ಣ ಕೆಲಸಗಾರನಲ್ಲ, ಅವನ ಚಿಕಿತ್ಸೆ ಮಾಡುತ್ತಿದ್ದ ವೈದ್ಯ.
ನಿಮ್ಮ 200ನೇ ಕಥೆಯ ಅಂತ್ಯ ನಿಮ್ಮ ಕೈಯಲ್ಲೇ ಇದೆ ಕಿರಣ್ ಎಂದು ಸೋಮಣ್ಣ ಒಂದು ಪೆನ್ನು ಮತ್ತು ವಿಷದ ಇಂಜೆಕ್ಷನ್ ನೀಡಿದ.
ಕಿರಣ್ ಅಳುತ್ತಾ ಪೆನ್ನು ಹಿಡಿದು ಕಾಗದದ ಮೇಲೆ ಬರೆದ ಸೋಮಣ್ಣ ಈ ಕಥೆಯ ವಿಲನ್. ತಕ್ಷಣ ಕಿರಣ್ ಎದ್ದು ಸೋಮಣ್ಣನ ಕೈಯಲ್ಲಿದ್ದ ಇಂಜೆಕ್ಷನ್ ಕಿತ್ತುಕೊಂಡು ಅವನಿಗೆ ಚುಚ್ಚಿದ. ಸೋಮಣ್ಣ ಕೆಳಗೆ ಬಿದ್ದ. ಕಿರಣ್ ಕ್ರೂರವಾಗಿ ನಕ್ಕು ಅಲ್ಲಿಂದ ಹೊರಬಂದ. ಹೊರಬಂದಾಗ ಅವನಿಗೆ ಎದುರಾದವರು ಪೊಲೀಸರು. ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್‌ನನ್ನು ನೋಡಿ, ಡಾಕ್ಟರ್ ಸೋಮಣ್ಣ, ಒಳಗಡೆ ಇರುವ ರೋಗಿ ಕಿರಣ್ ಪರಿಸ್ಥಿತಿ ಹೇಗಿದೆ? ಎಂದು ಕೇಳಿದರು.
ಕಿರಣ್ ಶಾಂತವಾಗಿ ಹೇಳಿದ, ಸಾರಿ ಇನ್ಸ್‌ಪೆಕ್ಟರ್, ಕಿರಣ್ ಕೊನೆಯುಸಿರೆಳೆದಿದ್ದಾನೆ. ಅವನ 200ನೇ ಕಥೆ ಮುಗಿಯುವ ಮೊದಲೇ ಅವನ ಹೃದಯಾಘಾತವಾಯಿತು.ಆದರೆ ನಿಜವಾಗಿ ಸತ್ತವನು ಕಿರಣ್ ಅಲ್ಲ, ವೈದ್ಯ ಸೋಮಣ್ಣ. ಕಿರಣ್ ತನ್ನ 200ನೇ ಕಥೆಯ ಭಾಗವಾಗಿ ವೈದ್ಯನ ಉಡುಪು ಧರಿಸಿ ತಾನೇ ವೈದ್ಯನೆಂದು ಜಗತ್ತನ್ನು ನಂಬಿಸಿದ್ದಾನೆ. ಡೈರಿಯಲ್ಲಿದ್ದ ಫೋಟೋ ನಿಜವಾಗಿತ್ತು, ಆದರೆ ಅದರಲ್ಲಿ ಸೋಮಣ್ಣ ವೈದ್ಯನಾಗಿದ್ದ. ಕಿರಣ್ ತನ್ನ 'ಡಾರ್ಕ್ ಸೈಕಾಲಜಿ' ಬಳಸಿ ವೈದ್ಯನನ್ನೇ ಬಲಿಪಶು ಮಾಡಿ ಅವನ ಜಾಗವನ್ನು ತಾನು ಪಡೆದಿದ್ದಾನೆ. 
ಆದರೂ 200ನೇ ಕಥೆ ಕಾಗದದ ಮೇಲೆ ಮುಗಿಯಲಿಲ್ಲ, ಅದು ವಾಸ್ತವದಲ್ಲಿ ಒಬ್ಬ ವೈದ್ಯನ ಸಾವಿನೊಂದಿಗೆ ಪೂರ್ಣಗೊಂಡಿತು.