Voice in Kannada Short Stories by Saandeep Joshi books and stories PDF | ಧ್ವನಿ

Featured Books
Categories
Share

ಧ್ವನಿ

ಮಲೆನಾಡಿನ ಆ ದಟ್ಟ ಅರಣ್ಯದ ಅಂಚಿನಲ್ಲಿರುವ 'ಗುಡ್ಡೆಮನೆಯಲ್ಲಿ ಪರಮೇಶ ಒಬ್ಬನೇ ವಾಸವಾಗಿದ್ದ. ಹಸಿರು ಹಚ್ಚಡದ ನಡುವೆ ಆ ಹಳೆಯ ಹೆಂಚಿನ ಮನೆ ಸುಂದರವಾಗಿ ಕಂಡರೂ, ರಾತ್ರಿಯಾಗುತ್ತಿದ್ದಂತೆ ಅದರ ಸುತ್ತಲೂ ಒಂದು ಭೀಕರ ಮೌನ ಆವರಿಸುತ್ತಿತ್ತು. ಆ ಊರಿನಲ್ಲಿ ಒಂದು ಹಳೆಯ ನಂಬಿಕೆಯಿತ್ತು ಸೂರ್ಯ ಮುಳುಗಿದ ಮೇಲೆ ಕಾಡಿನ ಕಡೆಯಿಂದ ಬರುವ ಯಾವುದೇ 'ಧ್ವನಿಗೆ ಮರುದನಿ ನೀಡಬಾರದು. ಅದು ನಿಮ್ಮ ಹೆಸರನ್ನೇ ಹಿಡಿದು ಕೂಗಿದರೂ, ಅತ್ಯಂತ ಆಪ್ತರ ಧ್ವನಿಯಂತೆ ಕೇಳಿಸಿದರೂ ಮೌನವಾಗಿರಬೇಕು. ಇದನ್ನು ಊರಿನವರು ಬಹಿರೂಪಿ ಕರೆ ಎನ್ನುತ್ತಿದ್ದರು.  ಪರಮೇಶನಿಗೆ ಇವೆಲ್ಲಾ ಹಳ್ಳಿಯ ಮೂಢನಂಬಿಕೆಗಳಂತೆ ಕಾಣುತ್ತಿದ್ದವು. ಅವನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವನು, ತಂದೆಯ ನಿಧನದ ನಂತರ ಈ ಹಳೆಯ ಮನೆಯನ್ನು ಮಾರಾಟ ಮಾಡಲು ಬಂದಿದ್ದ. ಅಮಾವಾಸ್ಯೆಯ ಆ ರಾತ್ರಿ, ಹೊರಗೆ ಜಡಿಮಳೆ ಸುರಿಯುತ್ತಿತ್ತು. ಗಾಳಿ ಬಡಿದು ಅಡಿಕೆ ಮರಗಳು ಒಂದಕ್ಕೊಂದು ಘರ್ಷಿಸುತ್ತಿದ್ದವು. ಸರಿಯಾಗಿ ರಾತ್ರಿ ಹನ್ನೆರಡು ಗಂಟೆಗೆ ಅವನ ಮನೆಯ ಹಿತ್ತಲಿನಲ್ಲಿ ಒಂದು ಧ್ವನಿ ಕೇಳಿಸಿತು.
ಪರಮೇಶಾ ಬಾಗಿಲು ತೆರೆಯಪ್ಪ. ನನಗೂ ಚಳಿಯಾಗುತ್ತಿದೆ. ಪರಮೇಶನ ಮೈ ನಡುಗಿತು. ಅದು ಅಪ್ಪಟ ಅವನ ತಂದೆಯ ಧ್ವನಿ ಆದರೆ ಅವನ ತಂದೆ ತೀರಿಹೋಗಿ ಹತ್ತು ವರ್ಷಗಳಾಗಿತ್ತು. ಇದು ಭ್ರಮೆಯಿರಬಹುದು ಎಂದು ಅವನು ತಾನೇ ಸಮಾಧಾನ ಮಾಡಿಕೊಂಡ. ಆದರೆ ಆ ಧ್ವನಿ ನಿಲ್ಲಲಿಲ್ಲ. ಅದು ಮನೆಯ ಮಾಡಿನ ಮೇಲೆ, ಕಿಟಕಿಗಳ ಮೇಲೆ ಮತ್ತು ಅಂತಿಮವಾಗಿ ಅವನ ಕಿವಿಯ ಬುಡದಲ್ಲೇ ಕೇಳಿಸತೊಡಗಿತು.
ಪರಮೇಶ ಕಿವಿ ಮುಚ್ಚಿಕೊಂಡರೂ ಆ ಧ್ವನಿ ಮಾತ್ರ ಅವನನ್ನು ಬಿಡಲಿಲ್ಲ. ಮೆಲ್ಲನೆ ಆ ಧ್ವನಿ ಬದಲಾಗತೊಡಗಿತು. ಈಗ ಅದು ಅವನ ಬಾಲ್ಯದ ಗೆಳೆಯನ ಧ್ವನಿಯಾಯಿತು, ಮರುಕ್ಷಣವೇ ಅವನು ಪ್ರೀತಿಸಿ ಕಳೆದುಕೊಂಡಿದ್ದ ಹುಡುಗಿಯ ಧ್ವನಿಯಾಯಿತು. ವಿಚಿತ್ರವೆಂದರೆ, ಆ ಧ್ವನಿ ಕೇವಲ ಶಬ್ದವಾಗಿರಲಿಲ್ಲ ಅದು ಒಂದು ರೀತಿಯ ಆಜ್ಞೆಯಂತೆ ಕೇಳಿಸುತ್ತಿತ್ತು. ಬಾ ಹೊರಗೆ ಬಾ ನಿನ್ನ ಧ್ವನಿ ನಮಗೆ ಬೇಕು.
ಅವನಿಗೆ ಅರಿವಾಯಿತು, ಆ ಕಾಡಿನ ಆಳದಲ್ಲಿ ಅಡಗಿರುವ ಶಕ್ತಿ ಯಾವುದೋ ಭೂತವಲ್ಲ ಅದು ಮನುಷ್ಯರ ಧ್ವನಿಯನ್ನು ಕದ್ದು ಬದುಕುವ ಒಂದು 'ಅಶರೀರ ಶಕ್ತಿ ಯಾರು ಆ ಧ್ವನಿಗೆ ಮರುದನಿ ನೀಡುತ್ತಾರೋ, ಅವರ ಧ್ವನಿಯ ಕಂಪನಗಳನ್ನು  ಆ ಶಕ್ತಿ ಹೀರಿಕೊಳ್ಳುತ್ತದೆ. ಒಮ್ಮೆ ಧ್ವನಿ ಹೋದರೆ, ಮನುಷ್ಯ ಕೇವಲ ಮಾಂಸದ ಮುದ್ದೆಯಾಗಿ ಉಳಿಯುತ್ತಾನೆ.
ಪರಮೇಶ ಭಯದಿಂದ ಮನೆಯಿಂದ ಹೊರಗೆ ಓಡಲು ನಿರ್ಧರಿಸಿದ. ಅವನು ಊರಿನ ಹಳೆಯ ಪೂಜಾರಿಯ ಮನೆಗೆ ಹೋಗಿ ರಕ್ಷಣೆ ಪಡೆಯಬೇಕೆಂದುಕೊಂಡ. ಅವನು ಕತ್ತಲೆಯಲ್ಲಿ ಕಾಡಿನ ಹಾದಿಯಲ್ಲಿ ಓಡುತ್ತಿದ್ದಾಗ, ಅವನ ಹಿಂದೆ ಯಾರೋ ಓಡಿ ಬರುವ ಶಬ್ದ ಕೇಳಿಸಿತು.
ಪರಮೇಶಾ, ನಿಲ್ಲು ನಾನು ಪೂಜಾರಿ ಹೆದರಬೇಡ ಮಗನೇ ಎಂದು ಧ್ವನಿ ಕೇಳಿಸಿತು.
ಪರಮೇಶ ತಿರುಗಿ ನೋಡಿದಾಗ ಪೂಜಾರಿ ಟಾರ್ಚ್ ಹಿಡಿದು ಬರುತ್ತಿದ್ದರು. ಅವನು ನಿಟ್ಟುಸಿರು ಬಿಟ್ಟು ಅವರ ಹತ್ತಿರ ಹೋದ. ಆದರೆ ಪೂಜಾರಿ ಮಾತನಾಡಲು ಶುರು ಮಾಡಿದಾಗ ಪರಮೇಶನ ರಕ್ತ ಹೆಪ್ಪುಗಟ್ಟಿತು. ಪೂಜಾರಿಯ ಬಾಯಿ ಅಲುಗಾಡುತ್ತಿರಲಿಲ್ಲ, ಅವರ ತುಟಿಗಳು ಹೊಲಿದಂತಿದ್ದವು. ಆದರೆ ಧ್ವನಿ ಮಾತ್ರ ಅವರ ಎದೆಯ ಒಳಗಿನಿಂದ ಕಿರುಚಾಟದಂತೆ ಹೊರಬರುತ್ತಿತ್ತು. 
ಅಸಲಿ ಸತ್ಯವೇನೆಂದರೆ‌ಆ ಕಾಡಿನ ಶಕ್ತಿ ಕೇವಲ ಧ್ವನಿಯನ್ನು ಕಳ್ಳತನ ಮಾಡುವುದಿಲ್ಲ. ಅದು ಮನುಷ್ಯನ ಅಸ್ತಿತ್ವವನ್ನೇ ನಕಲು ಮಾಡುತ್ತದೆ. ನೀವು ಯಾರ ಧ್ವನಿಯನ್ನು ಕೇಳುತ್ತಿರೋ, ಆ ಶಕ್ತಿ ಅವರ ರೂಪ ಧರಿಸಿ ನಿಮ್ಮ ಮುಂದೆ ನಿಲ್ಲುತ್ತದೆ. ಈಗ ಆ ಕಾಡಿನ ಶಕ್ತಿಯು ಪೂಜಾರಿಯ ಧ್ವನಿಯನ್ನು ತಿಂದು, ಅವರ ರೂಪ ಧರಿಸಿತ್ತು.
ಪರಮೇಶ ತನ್ನ ಮನೆಗೆ ವಾಪಸ್ ಓಡಿ ಬಂದ. ಬಾಗಿಲು ಭದ್ರವಾಗಿ ಹಾಕಿಕೊಂಡ. ಅವನು ಬೆವರುತ್ತಾ ಕನ್ನಡಿ ಮುಂದೆ ನಿಂತು ನೋಡಿಕೊಂಡಾಗ ಅವನಿಗೆ ಬದುಕಿನ ಅತಿದೊಡ್ಡ ಆಘಾತ ಕಾಯುತ್ತಿತ್ತು. ಅವನ ಮುಖದಲ್ಲಿ ಬಾಯಿ ಇರಲಿಲ್ಲ. ಅವನ ಮುಖದ ಕೆಳಭಾಗ ಕೇವಲ ಸಪಾಟಾದ ಚರ್ಮದಿಂದ ಮುಚ್ಚಿ ಹೋಗಿತ್ತು. ಅವನ ಧ್ವನಿ ಪೂರ್ತಿಯಾಗಿ ಕಳುವಾಗಿತ್ತು. ಅದೇ ಕ್ಷಣದಲ್ಲಿ ಅವನ ಮನೆಯ ಹೊರಗೆ ಯಾರೋ ಜೋರಾಗಿ ಕೂಗಿದರು.
ಬಾಗಿಲು ತೆರೆಯಿರಿ ನಾನು ಪರಮೇಶ ಯಾರೋ ನನ್ನ ಮುಖವನ್ನು ಕಸಿದುಕೊಂಡಿದ್ದಾರೆ ರಕ್ಷಿಸಿ. ಹೊರಗೆ ಕೇಳಿಸುತ್ತಿದ್ದ ಧ್ವನಿ ಅಪ್ಪಟ ಪರಮೇಶನದೇ ಆಗಿತ್ತು. ಒಳಗಿರುವ ಪರಮೇಶನಿಗೆ ಈಗ ಧ್ವನಿಯೂ ಇಲ್ಲ, ಮುಖವೂ ಇಲ್ಲ. ಹೊರಗಿರುವ ಆ ಧ್ವನಿ ಈಗ ಪರಮೇಶನ ರೂಪ ಧರಿಸಿ ಮನೆಯೊಳಗೆ ಬರಲು ಹಂಬಲಿಸುತ್ತಿತ್ತು. ಜಗತ್ತಿನ ದೃಷ್ಟಿಯಲ್ಲಿ ಧ್ವನಿ ಇರುವವನೇ ಅಸಲಿ, ಮೌನವಾಗಿರುವವನು ಕೇವಲ ನೆರಳು.
ಪರಮೇಶ ತನ್ನ ಮನೆಯೊಳಗಿನಿಂದ ಹೊರಗಿನ ದೃಶ್ಯವನ್ನು ನೋಡಿದ. ಹೊರಗಿರುವ ನಕಲಿ ಪರಮೇಶ ಊರಿನವರನ್ನು ಕರೆಯುತ್ತಿದ್ದ. ಊರಿನವರು ಅಲ್ಲಿಗೆ ಬಂದರು. ಅವರು ಹೊರಗಿದ್ದವನ ಮಾತುಗಳನ್ನು ನಂಬಿದರು. ಯಾಕೆಂದರೆ ಅವನ ಹತ್ತಿರ ಪರಮೇಶನ ಧ್ವನಿಯಿತ್ತು. ಅವರು ಬಾಗಿಲು ಒಡೆದು ಒಳಗೆ ಬಂದರು. ಒಳಗಿದ್ದ ಬಾಯಿ ಇಲ್ಲದ ಪರಮೇಶನನ್ನು ನೋಡಿ ಊರಿನವರು ದೆವ್ವ ಎಂದು ಚೀರಿದರು. ಇದು ನಮ್ಮ ಪರಮೇಶನ ಧ್ವನಿ ಕದ್ದಿದೆ ಎಂದು ಕೂಗಿದರು. ಅವರು ಆ ಅಸಹಾಯಕ ಪರಮೇಶನನ್ನು ಬಡಿದು ಕಾಡಿನೊಳಗೆ ಅಟ್ಟಿದರು. ಅಸಲಿ ಪರಮೇಶ ಈಗ ಕಾಡಿನ ಮೌನದಲ್ಲಿ ಕರಗಿ ಹೋದ.
ಮನೆಯ ಒಳಗಿದ್ದ ಧ್ವನಿ ರೂಪದ ನಕಲಿ ಪರಮೇಶ ಈಗ ಅಸಲಿಯಾಗಿ ಬದುಕಲು ಶುರು ಮಾಡಿದ. ಅವನು ಪರಮೇಶನ ಆಸ್ತಿಯನ್ನು ಮಾರಿದ, ಅವನ ಗೆಳೆಯರ ಜೊತೆ ಮಾತನಾಡಿದ. ಯಾರಿಗೂ ಸಂಶಯ ಬರಲಿಲ್ಲ. ಆದರೆ ಅವನು ಮಾತನಾಡುವಾಗಲೆಲ್ಲಾ ಅವನ ಎದೆಯ ಆಳದಲ್ಲಿ ಸಾವಿರಾರು ಜನರ ಧ್ವನಿಗಳು ಒಟ್ಟಾಗಿ ಕೇಳಿಸುತ್ತಿದ್ದವು.
ಹಲವು ದಿನಗಳ ನಂತರ, ಆ ನಕಲಿ ಪರಮೇಶ ತನ್ನ ಟೇಬಲ್ ಮೇಲೆ ಕುಳಿತು ಏನೋ ಬರೆಯುತ್ತಿದ್ದ. ಅವನಿಗೆ ಪೆನ್ ಹಿಡಿದು ಅಭ್ಯಾಸವಿರಲಿಲ್ಲ, ಆದರೆ ಅವನ ಒಳಗಿದ್ದ ಅಸಲಿ ಪರಮೇಶನ ನೆನಪುಗಳು ಅವನನ್ನು ಬರೆಯಲು ಪ್ರೇರೇಪಿಸುತ್ತಿದ್ದವು. ಅವನು ಬರೆದ ಮೊದಲ ವಾಕ್ಯ ಸಂಜಯ್ ಈಗ ನಾನು ನಿನ್ನ ಅಸ್ತಿತ್ವವನ್ನು ಕಸಿದುಕೊಳ್ಳಲು ಬರುತ್ತಿದ್ದೇನೆ.
ಅದೇ ಕ್ಷಣದಲ್ಲಿ ಅವನ ಕಿಟಕಿಯ ಹೊರಗೆ ಒಂದು ಧ್ವನಿ ಕೇಳಿಸಿತು. ಅದು ಸಂಜಯ್ ‌ನ ಧ್ವನಿಯಾಗಿತ್ತು.  ಪರಮೇಶಾ, ನನ್ನ ಕಥೆಯನ್ನು ನೀನು ಯಾಕೆ ಕದ್ದೆ?
ಧ್ವನಿಗಳು ಈಗ ಚಕ್ರದಂತೆ ಸುತ್ತುತ್ತಿವೆ. ಒಬ್ಬರ ಧ್ವನಿ ಇನ್ನೊಬ್ಬರ ಅಸ್ತಿತ್ವವಾಗುತ್ತಿದೆ. ಕಥೆ ಮುಗಿದಿಲ್ಲ, ಇದು ಕೇವಲ ಹೊಸ ಧ್ವನಿಯ ಆರಂಭ.