My shadow is missing. in Kannada Anything by Saandeep Joshi books and stories PDF | ನನ್ನ ನೆರಳು ಕಾಣಿಯಾಗಿದೆ

Featured Books
Categories
Share

ನನ್ನ ನೆರಳು ಕಾಣಿಯಾಗಿದೆ

​ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಆ ಗದ್ದಲದ ನಡುವೆ ವಿಶ್ವ ಮೌನವಾಗಿ ನಿಂತಿದ್ದ. ಸುತ್ತಲೂ ಸಾವಿರಾರು ಜನ ಓಡುತ್ತಿದ್ದರು, ರೈಲುಗಳ ಕೂಗು, ಜನರ ಚೀರಾಟ, ಲಗೇಜ್‌ಗಳ ಸದ್ದು ಎಲ್ಲವೂ ಎಂದಿನಂತೆ ಇತ್ತು. ಎಲ್ಲರ ಕಾಲ ಬುಡದಲ್ಲೂ ಕಪ್ಪನೆಯ ಆಕೃತಿಗಳು ಅವರನ್ನೇ ಹಿಂಬಾಲಿಸುತ್ತಿದ್ದವು. ವಿಶ್ವ ಆಕಸ್ಮಿಕವಾಗಿ ನೆಲದ ಕಡೆ ನೋಡಿದ. ಅಲ್ಲಿ ಬರಿ ಸಿಮೆಂಟ್ ನೆಲವಿತ್ತು. ಸೂರ್ಯ ನೆತ್ತಿಯ ಮೇಲಿದ್ದರೂ ಅವನ ನೆರಳು ಇರಲಿಲ್ಲ.​ವಿಶ್ವ ಒಬ್ಬ ಸಾಧಾರಣ ಅಕೌಂಟೆಂಟ್. ಅವನ ಜೀವನ ಲೆಕ್ಕಾಚಾರದ ಪುಸ್ತಕಗಳ ನಡುವೆ ಕಳೆದುಹೋಗಿತ್ತು. ನೆರಳು ಕಾಣೆಯಾದ ದಿನ ಅವನಿಗೆ ಮೊದಲು ಅನಿಸಿದ್ದು ಭಯವಲ್ಲ, ಬದಲಾಗಿ ಒಂದು ವಿಚಿತ್ರವಾದ ನಿರಾಳತೆ. ಅವನು ತನ್ನ ಹೆಂಡತಿ ಶ್ರಾವಣಿ ಬಳಿ ಹೋಗಿ ಕೇಳಿದ, ಶ್ರಾವಣಿ ನಿನಗೆ ನನ್ನ ನೆರಳು ಕಾಣಿಸುತ್ತಿದೆಯೇ? ಶ್ರಾವಣಿ ಅವನನ್ನು ವಿಚಿತ್ರವಾಗಿ ನೋಡಿ, ವಿಶ್ವ, ಬಿಸಿಲಿನಲ್ಲಿ ಜಾಸ್ತಿ ಅಲೆದಾಡಬೇಡಿ, ತಲೆ ಕೆಟ್ಟಿದೆ ನಿಮಗೆ ಎಂದು ನಕ್ಕಳು.​ಅವನಿಗೆ ಅರಿವಾಯಿತು ಈ ಜಗತ್ತಿನಲ್ಲಿ ನೆರಳು ಕಾಣೆಯಾಗಿರುವುದು ಕೇವಲ ಅವನಿಗೆ ಮಾತ್ರ ಗೊತ್ತು. ಬೇರೆಯವರಿಗೆ ಅವನು ಎಂದಿನಂತೆಯೇ ಕಾಣುತ್ತಿದ್ದ. ಆದರೆ ವಿಶ್ವನಿಗೆ ಮಾತ್ರ ತನ್ನ ಶರೀರ ಮತ್ತು ನೆಲದ ನಡುವಿನ ಆ ಕಪ್ಪು ಕೊಂಡಿ ಕಳಚಿದೆ ಎಂಬುದು ಸ್ಪಷ್ಟವಾಗಿತ್ತು.​ವಿಶ್ವ ತನ್ನ ನೆರಳನ್ನು ಹುಡುಕಲು ನಿರ್ಧರಿಸಿದ. ಅವನು ಹಳೆಯ ಲೈಬ್ರರಿಗಳಿಗೆ ಹೋದ, ವಿಜ್ಞಾನದ ಪುಸ್ತಕಗಳನ್ನು ಜಾಲಾಡಿದ. ಆದರೆ ಎಲ್ಲಿಯೂ ಇದಕ್ಕೆ ಉತ್ತರವಿರಲಿಲ್ಲ. ಅಂತಿಮವಾಗಿ ಅವನು ನಗರದ ಹೊರವಲಯದ ಒಬ್ಬ ಹಳೆಯ ಚಿತ್ರಕಲಾವಿದನನ್ನು ಭೇಟಿಯಾದ. ಆ ವೃದ್ಧ ಕಲಾವಿದ ಸೂರ್ಯಕಾಂತ್ ತಾನು ಬಿಡಿಸುತ್ತಿದ್ದ ಚಿತ್ರವನ್ನು ನಿಲ್ಲಿಸಿ ವಿಶ್ವನ ಕಡೆ ನೋಡಿದ. ಅವನ ಕಣ್ಣುಗಳಲ್ಲಿ ಯಾವುದೋ ನಿಗೂಢ ಸತ್ಯ ಅಡಗಿರುವಂತೆ ತೋರುತ್ತಿತ್ತು.​ಸೂರ್ಯಕಾಂತ್ ಹೇಳಿದ ಮಾತು ವಿಶ್ವನ ಮಿದುಳಿಗೆ ನಾಟಿತು. ವಿಶ್ವ, ನೆರಳು ಅಂದರೆ ಕೇವಲ ಬೆಳಕಿನ ಅಡೆತಡೆಯಲ್ಲ. ಅದು ಮನುಷ್ಯನ ಪ್ರಾಮಾಣಿಕ ವ್ಯಕ್ತಿತ್ವ. ನಾವು ಸಮಾಜಕ್ಕಾಗಿ ಮುಖವಾಡ ಧರಿಸಿ ಬದುಕುವಾಗ, ನಮ್ಮೊಳಗಿನ ಅಸಲಿ ಮನುಷ್ಯ ಸಾಯುತ್ತಾ ಹೋಗುತ್ತಾನೆ. ಯಾವಾಗ ನಮ್ಮ ಅಂತರಾತ್ಮ ಪೂರ್ತಿಯಾಗಿ ಬರಿದಾಗುತ್ತದೋ, ಆಗ ನೆರಳು ಮನುಷ್ಯನನ್ನು ಬಿಟ್ಟು ಹೋಗುತ್ತದೆ. ನೆರಳು ಇಲ್ಲದ ಮನುಷ್ಯ ಅಂದರೆ ಅವನು ಕೇವಲ ಒಂದು ಚಲಿಸುವ ಉಸಿರು ಅಷ್ಟೇ. ನಿನಗೆ ಬರೆಯುವ ಹಸಿವಿತ್ತು, ಆದರೆ ನೀನು ಅಕ್ಷರಗಳನ್ನು ಕೊಂದು ಅಂಕಿಗಳ ಹಿಂದೆ ಓಡಿದೆ. ಹಾಗಾಗಿ ನಿನ್ನ ಅಸಲಿ ರೂಪ ನಿನ್ನನ್ನು ತ್ಯಜಿಸಿದೆ. ​ವಿಶ್ವನಿಗೆ ತನ್ನ ಕಳೆದ ಹತ್ತು ವರ್ಷಗಳ ಜೀವನ ನೆನಪಾಯಿತು. ಅವನು ಬರಹಗಾರನಾಗಬೇಕೆಂದು ಕನಸು ಕಂಡಿದ್ದವನು. ಅಮ್ಮನಂತೆ ಸಾಹಿತ್ಯ ಲೋಕದಲ್ಲಿ ಏನಾದರೂ ಸಾಧಿಸಬೇಕೆಂದು ಹಂಬಲಿಸಿದವನು. ಆದರೆ ಹಣದ ಹಪಾಹಪಿ, ಸಮಾಜದ ಹೊಗಳಿಕೆಗಾಗಿ ಅವನು ತನ್ನ ಕನಸುಗಳನ್ನು ಕೊಂದು, ಯಾಂತ್ರಿಕ ಬದುಕಿಗೆ ಶರಣಾಗಿದ್ದ. ಅವನ ನೆರಳು ಅವನನ್ನು ಹತ್ತು ವರ್ಷಗಳ ಹಿಂದೆಯೇ ಬಿಟ್ಟು ಹೋಗಿತ್ತು, ಆದರೆ ಅವನು ಅದನ್ನು ಗಮನಿಸಿದ್ದು ಈಗ ಮಾತ್ರ.​ವಿಶ್ವ ಅಂದು ರಾತ್ರಿ ತನ್ನ ಮನೆಯ ಹಳೆಯ ಅಟ್ಟದ ಮೇಲಿದ್ದ ಟೈಪ್‌ರೈಟರ್ ತೆಗೆದ. ಅವನ ಬೆರಳುಗಳು ಆ ಕೀಗಳ ಮೇಲೆ ಕುಳಿತು ನಡುಗುತ್ತಿದ್ದವು. ಹತ್ತು ವರ್ಷಗಳಿಂದ ಮೌನವಾಗಿದ್ದ ಅವನೊಳಗಿನ ಬರಹಗಾರ ಈಗ ಚೀರುತ್ತಿದ್ದ. ಅವನು ಬರೆಯಲು ಶುರು ಮಾಡಿದ. ಅವನು ತನ್ನ ನೆರಳಿನ ಬಗ್ಗೆಯೇ ಒಂದು ಕಥೆ ಬರೆಯಲು ನಿರ್ಧರಿಸಿದ. ಅವನು ಬರೆಯುತ್ತಿದ್ದಂತೆ ಅವನ ಮಿದುಳಿನಲ್ಲಿದ್ದ ಭಾರ ಕಡಿಮೆಯಾಗುತ್ತಿತ್ತು. ​ಸತತ ಹತ್ತು ದಿನಗಳ ಕಾಲ ಅವನು ಬರೆಯುತ್ತಲೇ ಇದ್ದ. ಮನೆಯಲ್ಲಿ ಯಾರೂ ಇಲ್ಲದಿದ್ದರೂ ಅವನಿಗೆ ಯಾರೋ ಜೊತೆಗಿದ್ದಾರೆ ಎಂಬ ಭಾಸವಾಗುತ್ತಿತ್ತು. ಅವನು ತನ್ನ ಹಳೆಯ ನೋವುಗಳು, ಸೋಲುಗಳು ಮತ್ತು ತಾನು ಕಳೆದುಕೊಂಡ ಪ್ರತಿಯೊಂದು ಕ್ಷಣವನ್ನೂ ಕಾಗದದ ಮೇಲೆ ಸುರಿಯತೊಡಗಿದ. ಹನ್ನೊಂದನೇ ದಿನ ಬೆಳಿಗ್ಗೆ ಸೂರ್ಯ ಉದಯಿಸಿದಾಗ, ವಿಶ್ವ ಭಯದಿಂದ ನೆಲದ ಕಡೆ ನೋಡಿದ. ಅಲ್ಲಿ ಒಂದು ಮಸುಕಾದ ನೆರಳು ಮೂಡಿತ್ತು.​ವಿಶ್ವನಿಗೆ ಅತೀವ ಸಂತೋಷವಾಯಿತು. ಅವನು ಅಂದುಕೊಂಡ ನಾನು ಮತ್ತೆ ಬರೆಯಲು ಶುರು ಮಾಡಿದ್ದಕ್ಕೆ ನನ್ನ ನೆರಳು ಮರಳಿ ಬರುತ್ತಿದೆ. ನನ್ನ ಅಸ್ತಿತ್ವ ಮತ್ತೆ ಗಟ್ಟಿಯಾಗುತ್ತಿದೆ. ಅವನು ಸಂಭ್ರಮದಿಂದ ತನ್ನ ಕೊನೆಯ ಅಧ್ಯಾಯವನ್ನು ಟೈಪ್ ಮಾಡಿದ. ಆ ಕಥೆಗೆ ಅವನು ಇಟ್ಟ ಹೆಸರು ಮರಳಿದ ನೆರಳು.​ಆದರೆ ಅಸಲಿ ಸಸ್ಪೆನ್ಸ್ ಇರುವುದು ಇಲ್ಲಿಯೇ. ​ವಿಶ್ವ ತನ್ನ ಕಥೆಯನ್ನು ಪೂರ್ಣಗೊಳಿಸಿದ. ಅವನು ತನ್ನ ನೆರಳು ಈಗ ಪೂರ್ತಿಯಾಗಿ ದಟ್ಟವಾಗಿ, ಸ್ಪಷ್ಟವಾಗಿ ಮೂಡಿರುವುದನ್ನು ಕಂಡು ನಿಟ್ಟುಸಿರು ಬಿಟ್ಟ. ಅವನು ಶ್ರಾವಣಿ ಬಳಿ ಓಡಿ ಹೋಗಿ ಹೇಳಿದ, ಶ್ರಾವಣಿ ನೋಡು, ನನ್ನ ನೆರಳು ಮರಳಿ ಬಂದಿದೆ ನಾನೀಗ ಪೂರ್ತಿ ಮನುಷ್ಯ. ಶ್ರಾವಣಿ ಮೌನವಾಗಿ ವಿಶ್ವನ ಕಡೆ ನೋಡಿದಳು. ಅವಳ ಕಣ್ಣುಗಳಲ್ಲಿ ಎಂದೂ ಕಾಣದ ಅತೀವ ಕಣ್ಣೀರಿತ್ತು. ಅವಳು ಅಳುತ್ತಾ ಪಕ್ಕದಲ್ಲಿದ್ದ ಒಂದು ಫೋಟೋಗೆ ಹೂವಿನ ಹಾರ ಹಾಕುತ್ತಿದ್ದಳು. ವಿಶ್ವ ಗಾಬರಿಯಿಂದ ಆ ಫೋಟೋ ನೋಡಿದ. ಅದು ಅವನದೇ ಫೋಟೋ ಆಗಿತ್ತು ಅದರ ಮೇಲೆ ಶೃದ್ದಾಂಜಲಿ ಎಂದು ಬರೆಯಲಾಗಿತ್ತು. ದಿನಾಂಕ: ಹತ್ತು ವರ್ಷಗಳ ಹಿಂದೆ. ​ವಿಶ್ವ ದಿಗಿಲುಗೊಂಡು ಕನ್ನಡಿಯಲ್ಲಿ ನೋಡಿಕೊಂಡ. ಕನ್ನಡಿಯಲ್ಲಿ ಯಾವುದೇ ಬಿಂಬವಿರಲಿಲ್ಲ ಅವನು ನೆಲದ ಕಡೆ ನೋಡಿದ. ಅಲ್ಲಿ ನೆರಳು ಮಾತ್ರ ಇತ್ತು, ಆದರೆ ಆ ನೆರಳನ್ನು ಬೀರುತ್ತಿರುವ ದೇಹ ಅಲ್ಲಿರಲಿಲ್ಲ ಅವನಿಗೆ ಅರಿವಾಯಿತು. ಹತ್ತು ವರ್ಷಗಳ ಹಿಂದೆ ಅವನು ಅಪಘಾತವೊಂದರಲ್ಲಿ ಸತ್ತು ಹೋಗಿದ್ದ. ಆದರೆ ತನ್ನ ಕಥೆ ಪೂರ್ಣಗೊಳಿಸಬೇಕು ಎಂಬ ಹಂಬಲದಿಂದ ಅವನ ನೆರಳು ಮಾತ್ರ ಈ ಮನೆಯಲ್ಲಿ ಓಡಾಡುತ್ತಿತ್ತು.ಶ್ರಾವಣಿಗೆ ಈ ಹತ್ತು ವರ್ಷಗಳಿಂದ ವಿಶ್ವನ ನೆರಳು ಮಾತ್ರ ಕಾಣಿಸುತ್ತಿತ್ತೆ ಹೊರತು, ಶರೀರವಲ್ಲ ವಿಶ್ವ ಇಷ್ಟು ದಿನ ತಾನು ಬದುಕಿದ್ದೇನೆ ಎಂದು ಭ್ರಮಿಸಿದ್ದ. ಆದರೆ ಸತ್ಯವೇನೆಂದರೆ, ಅವನು ಕೇವಲ ಒಂದು ಸಂಚಾರಿ ನೆರಳಾಗಿದ್ದ. ಈಗ ಅವನು ತನ್ನ 194 ನೇ ಕಥೆಯನ್ನು ಪೂರ್ಣಗೊಳಿಸಿದ ಕ್ಷಣವೇ, ಅವನ ಆತ್ಮಕ್ಕೆ ಮುಕ್ತಿ ಸಿಗುವ ಸಮಯ ಬಂದಿತ್ತು.​ಈಗ ಸತ್ಯ ಬಯಲಾಗಿತ್ತು. ವಿಶ್ವ ಎಂಬ ಮನುಷ್ಯ ಹತ್ತು ವರ್ಷಗಳ ಹಿಂದೆಯೇ ಸತ್ತಿದ್ದ. ಉಳಿದುಕೊಂಡಿದ್ದು ಕೇವಲ ಅವನ ಅತೃಪ್ತ ನೆರಳು ಮಾತ್ರ. ಆ ನೆರಳು ತನ್ನ ಬರಹದ ಮೂಲಕ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿತ್ತು. ವಿಶ್ವ ಈಗ ಕೇವಲ ನೆಲದ ಮೇಲಿರುವ ಒಂದು ಕಪ್ಪು ಆಕೃತಿ ಮಾತ್ರ. ಅವನು ನಡೆಯುತ್ತಿದ್ದಾನೆ, ಆದರೆ ಅವನ ಹೆಜ್ಜೆಗೆ ಸದ್ದಿಲ್ಲ. ಅವನು ಮಾತನಾಡುತ್ತಿದ್ದಾನೆ, ಆದರೆ ಯಾರಿಗೂ ಕೇಳಿಸುತ್ತಿಲ್ಲ.​ಆದರೆ ಅವನು ಬರೆದ ಆ 195 ನೇ ಕಥೆ ಇದೆಯಲ್ಲ, ಇದು ಈಗ ಜಗತ್ತಿನ ಅತ್ಯಂತ ದೊಡ್ಡ ಹಿಟ್ ಕಥೆಯಾಗಿದೆ. ಜನರು ಆ ಕಥೆಯನ್ನು ಓದಿ ಬೆಚ್ಚಿಬೀಳುತ್ತಿದ್ದಾರೆ. ಆ ಕಥೆಯ ಲೇಖಕ ಯಾರು ಎಂದು ಯಾರಿಗೂ ತಿಳಿದಿಲ್ಲ. ಪುಸ್ತಕದ ಕವರ್ ಮೇಲೆ ಲೇಖಕನ ಹೆಸರಿನ ಜಾಗದಲ್ಲಿ ಕೇವಲ ಒಂದು ನೆರಳಿನ ಚಿತ್ರ  ಮಾತ್ರ ಇದೆ. ಆ ಪುಸ್ತಕವನ್ನು ಓದಿದವರೆಲ್ಲರಿಗೂ ತಮ್ಮ ತಮ್ಮ ನೆರಳುಗಳು ಕಳೆದುಹೋದಂತೆ ಭಾಸವಾಗುತ್ತಿದೆ.​, ಆ ಹಳೆಯ ಮನೆಯಲ್ಲಿ ಈಗಲೂ ಟೈಪ್‌ರೈಟರ್ ತನ್ನಷ್ಟಕ್ಕೆ ತಾನೇ ಶಬ್ದ ಮಾಡುತ್ತಿದೆ. ನೆಲದ ಮೇಲೆ ಬೀಳುವ ಬೆಳಕಿನಲ್ಲಿ ಆ ನೆರಳು ಮಾತ್ರ ಕುಳಿತು ಬರೆಯುತ್ತಿದೆ. ವಿಶ್ವ ಈಗ ಮುಕ್ತನಾಗಿದ್ದಾನೆ. ಮನುಷ್ಯನಾಗಿ ಸತ್ತರೂ, ಬರಹಗಾರನಾಗಿ ಅವನು ಆ ನೆರಳಿನ ರೂಪದಲ್ಲಿ ಅಮರನಾಗಿದ್ದಾನೆ.​ ಜಗತ್ತಿನಲ್ಲಿ ನಾವು ನಮ್ಮ ಕನಸುಗಳನ್ನು ಕೊಂದಾಗ ನಮ್ಮ ದೇಹ ನೆರಳಾಗುತ್ತದೆ, ಆದರೆ ನಮ್ಮ ಕನಸುಗಳನ್ನು ಬದುಕಿಸಿದಾಗ ನಮ್ಮ ನೆರಳು ದೇಹವಾಗುತ್ತದೆ. ವಿಶ್ವ ಈಗ ನೆರಳಾಗಿ ಬದುಕುತ್ತಿದ್ದಾನೆ, ಯಾಕೆಂದರೆ ಆ ನೆರಳಿಗಷ್ಟೇ ಅವನ ಸತ್ಯ ತಿಳಿದಿದೆ. ಅವನು ಈಗ 196 ನೇ ಕಥೆಗೆ ಸಿದ್ಧನಾಗುತ್ತಿದ್ದಾನೆ. ಆ ಕಥೆಯ ಶೀರ್ಷಿಕೆ ನನ್ನ ದೇಹ ಕಾಣೆಯಾಗಿದೆ.