The.OTP in Kannada Thriller by Saandeep Joshi books and stories PDF | ದಿ.ಓಟಿಪಿ

Featured Books
Categories
Share

ದಿ.ಓಟಿಪಿ

ಬೆಂಗಳೂರಿನ ಹೊರವಲಯದ ಒಂದು ಪಾಳುಬಿದ್ದ ಗ್ಯಾರೇಜ್. ಅಲ್ಲಿನ ವಾತಾವರಣದಲ್ಲಿ ತುಕ್ಕ ಹಿಡಿದ ಕಬ್ಬಿಣದ ವಾಸನೆ ಮತ್ತು ಹಳೆಯ ಆಯಿಲ್‌ನ ಜಿಡ್ಡಿತ್ತು. ಮಸುಕಾದ ಬೆಳಕಿನಲ್ಲಿ ರುದ್ರ ಕುಳಿತಿದ್ದ. ಅವನ ಎದುರು ಕುರ್ಚಿಗೆ ಕಟ್ಟಿ ಹಾಕಲ್ಪಟ್ಟಿದ್ದ ವ್ಯಕ್ತಿ ಮರಣಭಯದಿಂದ ನಡುಗುತ್ತಿದ್ದ. ರುದ್ರನಿಗೆ ಭೂಗತ ಲೋಕದಲ್ಲಿ ದಿ ಓ.ಟಿ.ಪಿ ಎಂಬ ಹೆಸರಿತ್ತು. ಅವನ ಸಿದ್ಧಾಂತ ಸ್ಪಷ್ಟವಾಗಿತ್ತು ಜಗತ್ತಿನಲ್ಲಿ ಮನುಷ್ಯನ ಅಸ್ತಿತ್ವ ಒಂದು ಆರು ಅಂಕಿಯ OTP ತರಹ ಇರಬೇಕು. ಉದ್ದೇಶ ಈಡೇರಿದ ಮೇಲೆ ಆ ಸಂಖ್ಯೆ ಅಥವಾ ವ್ಯಕ್ತಿ ಅಳಿದು ಹೋಗಬೇಕು. ಕುರುಹೂ ಇರಬಾರದು.
ರುದ್ರ ಒಬ್ಬ ಕ್ಲೀನರ್ ಅಂದರೆ, ಪ್ರಭಾವಿ ವ್ಯಕ್ತಿಗಳು ಮಾಡಿದ ಕೊಲೆಯ ಸಾಕ್ಷ್ಯಗಳನ್ನು ಮತ್ತು ಆ ಕೊಲೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳನ್ನು ಒಂದು ಕುರುಹೂ ಇಲ್ಲದಂತೆ ನಾಶ ಮಾಡುವವನು. ಅಂದು ರಾತ್ರಿ ಅವನಿಗೆ ಬಂದಿದ್ದ ಮೆಸೇಜ್ ಸಂಕೇತ 910482. ಇದು ಅವನ ಇಂದಿನ ಕೆಲಸದ ಕೀಲಿಕೈ. ಅವನ ಎದುರು ಇದ್ದವನು ಒಬ್ಬ ರಾಜಕಾರಣಿಯ ಮಗ ಮಾಡಿದ ಕೊಲೆಯನ್ನು ನೋಡಿದ್ದ ಏಕೈಕ ಸಾಕ್ಷಿ. ರುದ್ರ ಮೌನವಾಗಿ ಅವನ ಕೆಲಸ ಮುಗಿಸಿದ. ಆ ದೇಹವನ್ನು ಆಸಿಡ್ ಟ್ಯಾಂಕ್‌ಗೆ ಹಾಕಿ ಕೇವಲ ಹತ್ತು ನಿಮಿಷದಲ್ಲಿ ದ್ರವವಾಗಿಸಿದ. ರುದ್ರ ಈಗ ಮತ್ತೆ ಶೂನ್ಯವಾಗಿದ್ದ.
ಕೆಲಸ ಮುಗಿಸಿ ಹೊರಬಂದ ರುದ್ರನಿಗೆ ಅವನ ಬಾಸ್, ಭೂಗತ ಲೋಕದ ಸಾಮ್ರಾಟ ಮದನ್ ಗೌಡನ ಕರೆ ಬಂತು.

ರುದ್ರ, ನೀನು ಅದ್ಭುತವಾಗಿ ಕೆಲಸ ಮಾಡಿದ್ದೀಯಾ. ಆದರೆ ನಿನಗೊಂದು ವಿಷಯ ಗೊತ್ತಿರಲಿ, OTP ಬಳಸಿದ ಮೇಲೆ ಅದನ್ನು ಯಾರೂ ನೆನಪಿಟ್ಟುಕೊಳ್ಳುವುದಿಲ್ಲ. ನೀನು ಈಗ ನನಗೆ ಬದುಕಿರುವ ಅಪಾಯಕಾರಿ ಸಾಕ್ಷಿ. ಹಾಗಾಗಿ, ನಿನ್ನ ವ್ಯಾಲಿಡಿಟಿ ಇಂದಿಗೆ ಮುಗಿಯಿತು ಎಂದು ಮದನ್ ಗೌಡ ಫೋನ್ ಕಟ್ ಮಾಡಿದ.
ರುದ್ರನಿಗೆ ತಿಳಿದಿತ್ತು, ಮದನ್ ಗೌಡ ತನ್ನನ್ನು ಕೊಲ್ಲಲು ಈಗಲೇ ಶಾರ್ಪ್ ಶೂಟರ್‌ಗಳನ್ನು ಕಳುಹಿಸಿರುತ್ತಾನೆ ಎಂದು. ಮದನ್ ಗೌಡನಿಗೆ ರುದ್ರನ ಮುಖ ಹೇಗಿದೆ ಎಂದು ತಿಳಿದಿರಲಿಲ್ಲ, ಏಕೆಂದರೆ ರುದ್ರ ಯಾವಾಗಲೂ ಮುಖವಾಡ  ಧರಿಸಿಯೇ ಅವನನ್ನು ಭೇಟಿಯಾಗುತ್ತಿದ್ದ. ಇದು ರುದ್ರನಿಗೆ ಇದ್ದ ಪ್ಲಸ್ ಪಾಯಿಂಟ್.
ರುದ್ರ ಈ ದಿನಕ್ಕಾಗಿ ಮೊದಲೇ ಸಿದ್ಧನಾಗಿದ್ದ. ಅವನು ಮದನ್ ಗೌಡನ ಏಕೈಕ ಮಗ ವಿಕ್ರಮನನ್ನು ಹತ್ತು ದಿನಗಳ ಹಿಂದೆಯೇ ಅಪಹರಿಸಿ ರಹಸ್ಯ ಜಾಗದಲ್ಲಿಟ್ಟಿದ್ದ. ವಿಕ್ರಮ್ ಒಬ್ಬ ವಿಲಾಸಿ ಯುವಕ, ತಂದೆಯ ಹಣದಲ್ಲಿ ಮೆರೆಯುತ್ತಿದ್ದವನು. ರುದ್ರ ತನ್ನ ಯೋಜನೆಯ ಅಂತಿಮ ಹಂತಕ್ಕೆ ಹೋದ.
ರುದ್ರ ಒಬ್ಬ ನೈಪುಣ್ಯವುಳ್ಳ ಪ್ಲಾಸ್ಟಿಕ್ ಸರ್ಜನ್ ಅನ್ನು ಸಂಪರ್ಕಿಸಿ ಒಂದು ವಿಚಿತ್ರ ಬೇಡಿಕೆ ಇಟ್ಟಿದ್ದ.
1. ರುದ್ರ ತನ್ನ ಮುಖವನ್ನು ಮದನ್ ಗೌಡನ ಮಗ ವಿಕ್ರಮ್‌ನ ಮುಖದಂತೆ ಬದಲಿಸಿಕೊಂಡ.
2. ಅಸಲಿ ಮಗ ವಿಕ್ರಮ್‌ನ ಮುಖವನ್ನು, ರುದ್ರ ಸೃಷ್ಟಿಸಿದ್ದ ತನ್ನ ಹಳೆಯ ಕಾಲ್ಪನಿಕ ಮುಖದಂತೆ (ಆ ಫೋಟೋವನ್ನು ಅವನು ಮೊದಲೇ ಮದನ್ ಗೌಡನಿಗೆ ರುದ್ರ ಎಂದು ನಂಬಿಸಿದ್ದ) ಬದಲಿಸಿದ.
ಈಗ ಮದನ್ ಗೌಡನ ಕಣ್ಣಿನಲ್ಲಿ ರುದ್ರ ಅಂದರೆ ಅವನ ಅಸಲಿ ಮಗ ವಿಕ್ರಮ್ ಮತ್ತು ಅವನ ಮಗ ವಿಕ್ರಮ್ ಅಂದರೆ ಅವನ ಮುಂದೆ ನಿಂತಿರುವ ನಕಲಿ ಮಗ (ಅಸಲಿ ರುದ್ರ).
ರುದ್ರ ಈಗ ವಿಕ್ರಮ್‌ನ ಮುಖ ಹೊತ್ತು ಮದನ್ ಗೌಡನ ಬಂಗಲೆಗೆ ಹೋದ. ಸೆಕ್ಯೂರಿಟಿ ಗಾರ್ಡ್‌ಗಳು ತಮ್ಮ ಯಜಮಾನನ ಮಗ ಬಂದಿದ್ದಾನೆಂದು ತಿಳಿದು ದಾರಿ ಬಿಟ್ಟರು. ರುದ್ರ ನೇರವಾಗಿ ಮದನ್ ಗೌಡನ ಕೋಣೆಗೆ ಹೋದ. ಮದನ್ ಗೌಡ ಮಗನನ್ನು ನೋಡಿ ಗಾಬರಿಯಿಂದ, ವಿಕ್ರಮ್ ನೀನು ಇಲ್ಲಿ ಯಾಕೆ ಬಂದೆ? ಹೊರಗೆ ಬಾಂಬ್ ಹಿಡಿದು ರುದ್ರ ಅಡಗಿ ಕುಳಿತಿದ್ದಾನೆ ಎಂದು ಸುದ್ದಿ ಬಂದಿದೆ, ಒಳಗೆ ಹೋಗು ಎಂದ. ರುದ್ರ ಮೌನವಾಗಿ ಸೋಫಾದ ಮೇಲೆ ಕುಳಿತು, ತನ್ನದೇ ಆದ ತಣ್ಣನೆಯ ರುದ್ರನ ಧ್ವನಿಯಲ್ಲಿ ಮಾತನಾಡಿದ
ಗೌಡ್ರೇ ರುದ್ರ ಅಡಗಿ ಕುಳಿತಿಲ್ಲ, ಅವನು ನಿಮ್ಮ ಎದುರಿಗೇ ಕುಳಿತಿದ್ದಾನೆ.   ಮದನ್ ಗೌಡನಿಗೆ ಒಂದು ಕ್ಷಣ ಮತಿಭ್ರಮಣೆಯಾದಂತಾಯಿತು. ವಿಕ್ರಮ್, ಏನು ಪೌಡರ್ ಹೊಡೆದು ಬಂದಿದ್ದೀಯಾ? ಯಾಕೆ ಆ ಕೊಲೆಗಾರ ರುದ್ರನ ತರಹ ಮಾತಾಡ್ತಿದ್ದೀಯಾ? ಎಂದು ಗದರಿಸಿದ.
ರುದ್ರ ಕಿರುನಗುತ್ತಾ, ಗೌಡ್ರೇ, ಮುಖ ವಿಕ್ರಮ್‌ನದ್ದೇ ಇರಬಹುದು, ಆದರೆ ಒಳಗಿರುವ ಆತ್ಮ ಆ ಒಟಿಪಿ ರುದ್ರನದ್ದು. ನಂಬಿಕೆ ಬರುತ್ತಿಲ್ಲವೇ? ಎಂದು ಹೇಳಿ ತನ್ನ ಶರ್ಟ್ ಬಿಚ್ಚಿ ಎದೆಯ ಮೇಲಿದ್ದ ಆ 'ರಹಸ್ಯ ಹಚ್ಚೆ' ತೋರಿಸಿದ. ಅದು ಕೇವಲ ರುದ್ರ ಮತ್ತು ಮದನ್ ಗೌಡನಿಗೆ ಮಾತ್ರ ಗೊತ್ತಿದ್ದ ಸಂಕೇತ.  ಮದನ್ ಗೌಡನಿಗೆ ಬೆವತು ಹೋಯಿತು. ನೀನು ನೀನು ನನ್ನ ಮಗನ ಮುಖ ಹೇಗೆ ಪಡೆದೆ? ನನ್ನ ಮಗ ಎಲ್ಲಿದ್ದಾನೆ? ಎಂದು ಚೀರಿದ.
ಅಷ್ಟರಲ್ಲಿ ಹೊರಗಿನಿಂದ ಸೆಕ್ಯೂರಿಟಿ ಗಾರ್ಡ್‌ಗಳು ಒಬ್ಬ ವ್ಯಕ್ತಿಯನ್ನು ಎಳೆದುಕೊಂಡು ಬಂದರು. ಅವನ ಮುಖ ವಿಕೃತವಾಗಿತ್ತು, ಆದರೆ ನೋಡಲು ಮದನ್ ಗೌಡ ತನ್ನ ಮಗನಿಗೆ ತೋರಿಸಿದ್ದ ಆ 'ರುದ್ರನ ಫೋಟೋ ತರಹವೇ ಇತ್ತು. ಅಸಲಿಗೆ ಅವನು ಮದನ್ ಗೌಡನ ಮಗ ವಿಕ್ರಮ್ ಆದರೆ ಅವನ ಮುಖವನ್ನು ಸರ್ಜರಿ ಮೂಲಕ ರುದ್ರನ ಮುಖದಂತೆ ಬದಲಿಸಲಾಗಿತ್ತು.  ಗಾರ್ಡ್‌ಗಳು ಹೇಳಿದರು, "ಗೌಡ್ರೇ, ಇವನೇ ಆ ರುದ್ರ ಗಾರ್ಡನ್‌ನಲ್ಲಿ ಅಡಗಿದ್ದ, ಈಗಲೇ ಇವನನ್ನು ಶೂಟ್ ಮಾಡಲೇ?
ಮದನ್ ಗೌಡನಿಗೆ ಅಸಲಿ ಸತ್ಯದ ದರ್ಶನವಾಯಿತು. ಎದುರು ಕುಳಿತಿರುವವನು ಮಗನ ಮುಖ ಹೊತ್ತಿದ್ದಾನೆ ಆದರೆ ಧ್ವನಿ ರುದ್ರನದ್ದು. ಹೊರಗೆ ನಿಂತಿರುವವನು ರುದ್ರನ ಮುಖ ಹೊತ್ತಿದ್ದಾನೆ ಆದರೆ ಅಳುತ್ತಾ ಅಪ್ಪಾ, ನಾನು ನಿನ್ನ ಮಗ ವಿಕ್ರಮ್, ನನ್ನನ್ನು ಉಳಿಸು ಎಂದು ಕಿರುಚುತ್ತಿದ್ದಾನೆ.
ರುದ್ರ ಶಾಂತವಾಗಿ ಹೇಳಿದ, "ಗೌಡ್ರೇ, ಈಗ ನಿಮ್ಮ ಮುಂದೆ ಎರಡು ಆಯ್ಕೆಗಳಿವೆ.
ಒಂದು ಮಗನ ಮುಖ ಹೊತ್ತಿರುವ ನನ್ನನ್ನು (ರುದ್ರನನ್ನು) ಕೊಂದರೆ, ನೀವು ನಿಮ್ಮ ಮಗನ ಆಸ್ತಿ ಮತ್ತು ಸಾಮ್ರಾಜ್ಯದ ವಾರಸುದಾರನನ್ನು ಕಳೆದುಕೊಳ್ಳುತ್ತೀರಿ.
ಎರಡು ರುದ್ರನ ಮುಖ ಹೊತ್ತಿರುವ ಆ ವ್ಯಕ್ತಿಯನ್ನು (ನಿಮ್ಮ ಅಸಲಿ ಮಗನನ್ನು) ಕೊಂದರೆ, ನೀವು ನಿಮ್ಮ ಸ್ವಂತ ಮಗನನ್ನೇ ಕೊಂದ ಮಹಾಪಾಪಕ್ಕೆ ಗುರಿಯಾಗುತ್ತೀರಿ.
ಮತ್ತು ನೆನಪಿಡಿ, ನೀವು ಕುಡಿಯುತ್ತಿರುವ ಈ ವೈನ್‌ನಲ್ಲಿ ನಾನು ಒಂದು ಮೈಕ್ರೋ ಚಿಪ್ ಬೆರೆಸಿದ್ದೇನೆ. ನನ್ನ ಹೃದಯ ಬಡಿತ ನಿಂತರೆ ನಿಮ್ಮ ಹೊಟ್ಟೆಯಲ್ಲಿರುವ ಆ ಚಿಪ್ ಬ್ಲಾಸ್ಟ್ ಆಗುತ್ತದೆ.
ಮದನ್ ಗೌಡನಿಗೆ ಅರಿವಾಯಿತು, ತಾನು ಸಾಲ ನೀಡುವ ಬದಲು ಪ್ರಾಣವನ್ನೇ ಅಡವಿಟ್ಟಿದ್ದೇನೆ ಎಂದು. ರುದ್ರ ತನ್ನ ಅಸ್ತಿತ್ವವನ್ನೇ ಅದಲು-ಬದಲು ಮಾಡಿದ್ದ. ಮದನ್ ಗೌಡನಿಗೆ ತನ್ನ ಮಗನನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಆ ರುದ್ರನ ಮುಖ ಹೊತ್ತ ಮಗನನ್ನು (ವಿಕ್ರಮ್‌ನನ್ನು) ದೂರದ ದೇಶಕ್ಕೆ ಕಳುಹಿಸಬೇಕಾಯಿತು. ಜಗತ್ತಿನ ಕಣ್ಣಿಗೆ ರುದ್ರ ಸತ್ತು ಹೋಗಿದ್ದ.
ಈಗ ಆ ಮನೆಯಲ್ಲಿ ವಿಕ್ರಮ್‌ನ ಹೆಸರಿನಲ್ಲಿ ಮೆರೆಯುತ್ತಿದ್ದವನು ಅಸಲಿ ರುದ್ರ  ಮದನ್ ಗೌಡ ತನ್ನ ಉಳಿದ ಜೀವನವನ್ನು ತನ್ನ ಶತ್ರುವನ್ನೇ ಮಗ ಎಂದು ಕರೆಯುತ್ತಾ, ಅವನ ಪಾದದ ಕೆಳಗೆ ಬದುಕುವ ನರಕಕ್ಕೆ ತಳ್ಳಲ್ಪಟ್ಟಿದ್ದ.
ರುದ್ರ ಅಂದು ರಾತ್ರಿ ತನ್ನ ಹಳೆಯ ಫೋನ್‌ನಲ್ಲಿ ಒಂದು ಮೆಸೇಜ್ ಟೈಪ್ ಮಾಡಿದ. 
The OTP has successfully hacked the Bank (Life). Identity swap complete. Validity: Forever.
ನಂತರ ಆ ಫೋನ್ ಅನ್ನು ಬೆಂಕಿಗೆ ಹಾಕಿದ. ರುದ್ರ ಈಗ ಮೌನವಾಗಿ ಕನ್ನಡಿಯಲ್ಲಿ ತನ್ನ ಹೊಸ ಮುಖವನ್ನು ನೋಡಿಕೊಂಡ. ಅವನು ಈಗ ಕೇವಲ ಮನುಷ್ಯನಲ್ಲ, ಅವನು ಒಂದು ಜೀವಂತ ಪಾಸ್‌ವರ್ಡ್ ಅವನ ರಹಸ್ಯ ಅವನೊಂದಿಗೇ ಮಣ್ಣಾಗಲಿದೆ.