ರಾಜಶೇಖರ್
ಇವತ್ತು ಭಾನುವಾರ ಬೆಳಿಗ್ಗೆ ಬೆಳಿಗ್ಗೆನೇ ನೆಮ್ಮದಿ ಹಾಳಾಯಿತು. ಮಗನಿಗೆ ಅದೇನಾಗಿದೆಯೋ ಗೊತ್ತಿಲ್ಲ, ತಾನು ನೆಮ್ಮದಿಯಾಗಿ ಇರುವುದಿಲ್ಲ, ಇರೋರಿಗೂ ಬಿಡುವುದಿಲ್ಲ. ಅದೇನೋ ಔಟಿಂಗ್ ಅಂತೆ, ಬೆಳಿಗ್ಗೆನೇ ಹೊರಡೋಣ ಅಂತ ಇದ್ದಾನೆ. ನನಗೋ ನಿವೃತ್ತಿ ಆದಮೇಲೆ ಯಾವುದರಲ್ಲೂ ಅಷ್ಟು ಆಸಕ್ತಿ ಬರುತ್ತಿಲ್ಲ. ವಯಸ್ಸಿಗಾದರೂ ಬೆಲೆ ಬೇಡವೇ? ನಾನೇನು ಸಣ್ಣ ಹುಡುಗನಾ ಇವನ ಜೊತೆ ಔಟಿಂಗ್ ಅಂತ ಬರೋದಕ್ಕೆ? ಇಷ್ಟಕ್ಕೂ ಇದೇನು ನಾನು ಕೇಳಿಕೊಂಡಿದ್ದಾ - ಮನೆಯಲ್ಲಿ ಬೇಜಾರು, ಹೊರಗೆ ಹೋಗಿ ಬರಬೇಕು ಅಂತ? ಹಾಗೆ ನೋಡಿದರೆ, ಹೊರಗೆ ಇವನ ಜೊತೆ ನಾವುಗಳು ಹೋದರೆ ನಮಗೆ ಮುಜುಗುರ ಆಗುವಂತಾದರೆ ಏನು ಮಾಡುವುದು? ಇವನಿಗೆ ತನ್ನ ದೊಡ್ಡಸ್ತಿಕೆ ತೋರಿಸಬೇಕು, ದುಂದುವೆಚ್ಚ ಮಾಡಬೇಕು ಅಷ್ಟೇ. ಇದಕ್ಕಲ್ಲ ನಾವೇಕೆ ಸೊಪ್ಪು ಹಾಕಬೇಕು?
ಇವನ ವಯಸ್ಸಿನಲ್ಲಿ ನಾನು ಸಂಸಾರಸ್ಥ ಅನ್ನಿಸಿಕೊಂಡಿದ್ದೆ. ಇವನನ್ನು ಕರೆದುಕೊಂಡು ಕುಟುಂಬ ಸಮೇತ ಹೊರಗೆ ಹೋಗುತ್ತಿದ್ದುದು ಉಂಟು, ಇಲ್ಲ ಅನ್ನೋಲ್ಲ. ಆದರೆ ಅದೆಲ್ಲ ನನಗೋಸ್ಕರವಲ್ಲ, ಏನೋ ಇವರುಗಳು ವಾರದಲ್ಲಿ ಒಂದು ದಿನ ಖುಷಿಯಾಗಿರಲಿ ಅಂತ ಅಷ್ಟೇ. ಇವನಿಗೆ ಮದುವೆ ಮಾಡೋಕೆ ಆಗಿಲ್ಲ, ಜೊತೆಗೆ ಇವನ ತರಲೆ ಬೇರೆ; ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಅಂತ. ಇವನ ಜೊತೆ ನಾವು ಹೋದರೆ ನಮ್ಮ ಮರ್ಯಾದೆ, ಘನತೆ ಕಡಿಮೆ ಆಗೋಲ್ವಾ? ಇವನು ಹೇಳಿದ ಹಾಗೆ ನಾವು ಕೇಳಬೇಕಾ? ಇದೆಲ್ಲ ಇವನಿಗೆ ಅರ್ಥ ಆಗೋಲ್ಲ. ಆಗೆಲ್ಲ ಎರಡು ಹೊತ್ತು ಊಟ, ಉಡಲು-ತೊಡಲು ಬಟ್ಟೆ ಇದ್ದರೆ ಅದೇ ದೊಡ್ಡ ವಿಷಯ. ಇವನಿಗೆ ಇದೆಲ್ಲ ಎಲ್ಲಿ ಗೊತ್ತಾಗಬೇಕು? ಜೊತೆಗೆ "ನಿಮ್ಮ ಒಳ್ಳೆಯದಕ್ಕೆ" ಅಂತ ಒಗ್ಗರಣೆ ಬೇರೆ; ನನಗೆ ಗೊತ್ತಿಲ್ಲವಾ, ಎಲ್ಲ ಅವನ ಮೆರೆಯುವಿಕೆಗೆ ಅಂತ. ಇವತ್ತು ಮನೆಯಲ್ಲೇ ಇರೋಣ ಅಂದಿದ್ದೇ ದೊಡ್ಡ ತಪ್ಪು ಅಂತ ಬೇಜಾರು ಮಾಡಿಕೊಂಡು ಹೋದನಲ್ಲ. ನಾನು ಪಟ್ಟ ಕಷ್ಟ, ನನ್ನ ಹೋರಾಟ ಇದೆಲ್ಲ ಗೊತ್ತಾ ಇವನಿಗೆ? ನನಗಿಂತ ಚೆನ್ನಾಗಿ ಸಂಪಾದಿಸುತ್ತೇನೆ ಅಂತ ತೋರಿಸಿಕೊಳ್ಳೋಕೆ ಇದೆಲ್ಲ. ದೇವರೇ, ಇವನಿಗೆ ಒಳ್ಳೆಯ ಬುದ್ಧಿ ಕೊಡಪ್ಪ.
ಮೀನಾಕ್ಷಮ್ಮ
ಅಲ್ಲ, ಏನಾಗಿದೆ ನಮ್ಮ ಮನೆಗೆ ಅಂತ? ಇವತ್ತಂತೂ ಮಗ ಸಣ್ಣ ವಿಷಯಕ್ಕೇ ಎಷ್ಟು ಜಗಳ ಮಾಡಿಬಿಟ್ಟ. ಅದೇನೋ ಹೊರಗೆ ಹೋಗೋದಂತೆ, ಮಾಲ್ ಅಂತೆ, ಅಲ್ಲೇ ಊಟ ಅಂತೆ. ಯಾರಿಗೆ ಬೇಕಾಗಿದೆ ಇದೆಲ್ಲ? ನನಗಂತೂ ಮನೆಯಲ್ಲೇ ಸಾಕಪ್ಪಾ ಅನ್ನಿಸುತ್ತೆ. ಇವನು ಹೇಳಿಬಿಟ್ಟ ಅಂತ ಬೆಳಿಗ್ಗೆ ಬೆಳಿಗ್ಗೆ ನಾವು ಹೊರಡಬೇಕಾ? ನನ್ನ ಕಷ್ಟ ನನಗೆ - ಮನೆ ಕೆಲಸ ಮಾಡಬೇಕು, ಜೊತೆಗೆ ಅಡುಗೆ-ತಿಂಡಿ ಅಂತ ಬೇರೆ. ಇವನೇನೋ "ಒಂದು ದಿನ ಕೆಲಸ ಕಡಿಮೆ ಆಗುತ್ತೆ, ನಿಮಗೂ ಸ್ವಲ್ಪ ಬದಲಾವಣೆ ಇರುತ್ತೆ" ಅಂತಾನೆ. ಆದರೆ ನಮಗೆ ಅದೆಲ್ಲ ಬೇಕಿಲ್ಲ. ಇವನು ಎಲ್ಲ ಯೋಜನೆ ಹಾಕಿ ನಮಗೆ ಹೇಳಿದರೆ ನಾವ್ಯಾಕೆ ಕೇಳಬೇಕು? ಜೊತೆಗೆ "ಮೊದಲೆಲ್ಲ ನೀವು ಹೋಗುತ್ತಿರಲಿಲ್ಲವಾ, ಆಗ ನನ್ನನ್ನು ಕರೆದುಕೊಂಡು ಹೋಗ್ತಾ ಇದ್ರಿ ಅಲ್ವಾ?" ಅಂತ ಕೇಳ್ತಾನೆ. ಅದು ಅವನು ಚಿಕ್ಕವನಾಗಿದ್ದಾಗ; ನಾವುಗಳು ಗಂಡ-ಹೆಂಡತಿ ಹೊರಗೆ ಸುತ್ತಾಡೋಕೆ ಹೋಗಬೇಕಾದರೆ ಇವನನ್ನು ಕರೆದುಕೊಂಡು ಹೋಗ್ತಾ ಇದ್ವಿ. ಆಗ ಎಲ್ಲ ನಮ್ಮದೇ ನಿರ್ಧಾರ. ಈಗ ಇವನು ನಿರ್ಧಾರ ಮಾಡುವುದು, ನಾವು ಕೇಳುವುದು ನನಗೆ ಸರಿ ಅನ್ನಿಸೋಲ್ಲ.
ಇಷ್ಟಕ್ಕೂ ಬರೀ "ನಮಗೋಸ್ಕರನೇ" ಅನ್ನೋ ಇವನ ರೀತಿಯೇ ಸರಿ ಇಲ್ಲ. ನಮಗೆ ಬೇಡದೇ ಇರುವುದು ಹೇಗೆ ನಮಗೋಸ್ಕರ ಅನ್ನಿಸುತ್ತೆ? ಇವನಿಗೆ ಏನೋ ಉಪಯೋಗ ಇದೆ, ಅದಕ್ಕೆ ಇಷ್ಟೆಲ್ಲಾ ಮಾಡ್ತಾ ಇದ್ದಾನೆ. ಬರೀ ಒಂದು ದಿನ ಮುಂಚೆ ಹೇಳಿದರೆ ಆಗುತ್ತಾ? ಇವನು ಒಂದು ವಾರ ಮುಂಚೆಯೇ ಎಲ್ಲಿಗೆ, ಏಕೆ ಮತ್ತು ಹೇಗೆ ಎಂಬ ವಿವರಗಳನ್ನು ಚರ್ಚಿಸಬೇಕಿತ್ತು. ಅದು ಬಿಟ್ಟು ಬರೀ ಹಿಂದಿನ ದಿನ ಹೇಳಿದರೆ, ನಾನು ಸುಮ್ಮನೆ ತಲೆ ಆಡಿಸಿದೆ - ಮಾರನೇ ದಿನ ಮರೆತು ಹೋಗಿರುತ್ತಾನೆ ಅಂತ. ಅವನು ನೋಡಿದರೆ ನೆನಪಿಟ್ಟುಕೊಂಡು ಕೇಳ್ತಾನೆ. ನಾವು ಇವನು ಹೇಳಿದ ಹಾಗೆ ಯಾಕೆ ಕೇಳಬೇಕು? ಆಮೇಲೆ ಎಲ್ಲೋ ಕರೆದುಕೊಂಡು ಹೋಗಿ ನಮಗೆ ಮುಜುಗುರ ಆಗುವ ಹಾಗೆ ಆಗಬಾರದು. ನಮಗೆ ಬದಲಾವಣೆ ಬೇಕಾಗಿದ್ದರೆ ನಾವೇ ಮಾಡಿಕೊಳ್ಳುತ್ತೇವೆ, ಇವನು ಆಗ ನಾವು ಹೇಳಿದ ಹಾಗೆ ಮಾಡಿದರೆ ಸಾಕು. ಇಷ್ಟರ ಜೊತೆಗೆ "ಅಲ್ಲಿ ಒಳ್ಳೆಯ ಊಟ ಸಿಗುತ್ತೆ, ಇಲ್ಲಿ ಒಳ್ಳೆಯ ತಿಂಡಿ ಸಿಗುತ್ತೆ" ಅಂತ ಪುರಾಣ ಬೇರೆ ಹೇಳ್ತಾನೆ. ಮನೆಯಲ್ಲಿ ನಾನು ಮಾಡಿದ್ದೇ ನಮಗೆ ಹಿತ, ಇದು ಇವನಿಗೆ ಅರ್ಥ ಆಗೋಲ್ಲ. ಇಷ್ಟು ಸಣ್ಣ ವಿಷಯಕ್ಕೆ ತಿಂಡಿಯನ್ನೂ ತಿನ್ನದೇ ಹೋಗಿದ್ದನಲ್ಲ, ಎಷ್ಟು ನೋವು ಕೊಡುತ್ತಾನೆ ಇವನು. ದೇವರೇ, ಇವನಿಗೆ ಒಳ್ಳೆಯ ಬುದ್ಧಿ ಕೊಡಪ್ಪ.
ಉಲ್ಲಾಸ್
ಇವತ್ತು ಬಹಳ ಬೇಸರ ಆಗಿಹೋಯ್ತು. ನಾನು ಎಲ್ಲರಿಗೂ ಒಂದು ಬದಲಾವಣೆ ಇರಲಿ ಅಂತ ಒಂದು ಸಣ್ಣ ಕಾರ್ಯಕ್ರಮ ಹಾಕಿಕೊಂಡರೆ, ಸ್ವಲ್ಪವೂ ಸಹಕಾರ ಇಲ್ವಾ? ಅದೂ ಒಂದು ದಿನ ಮೊದಲೇ ಹೇಳಿದ್ದೆ. ಇವರಿಗೆ ಸ್ವಲ್ಪ 'ಸರ್ಪ್ರೈಸ್' ಇರಲಿ ಅಂತ ಪೂರ್ತಿ ವಿಷಯ ಹೇಳಲಿಲ್ಲ. ಅಷ್ಟಕ್ಕೇ ಇವತ್ತು ಎಲ್ಲಿಗೂ ಬರೋಕೆ ಆಗೋಲ್ಲ ಅನ್ನುವುದಾ ಇವರು? ನಾನು ಇವರಿಗೋಸ್ಕರ ದೇವಸ್ಥಾನದಲ್ಲಿ ಪೂಜೆಗೆ ಕೊಟ್ಟಿದ್ದೆ, ಆಮೇಲೆ ಫಲಾಹಾರಕ್ಕೆ ಅಂತ ಒಳ್ಳೆಯ ಮನೆ ತಿಂಡಿ ಸಿಗೋ ಕಡೆ ಹೋಗೋ ಯೋಜನೆ ಹಾಕಿಕೊಂಡಿದ್ದೆ. ದಿನ "ಅವರಾಯಿತು ಅವರ ಮನೆಯಾಯಿತು" ಅಂತ ಇರುತ್ತಾರೆ, ಆ ಏಕತಾನತೆ ಹೋಗಲಿ ಅಂತ ಸ್ವಲ್ಪ ಪ್ರಯತ್ನ ಪಟ್ಟರೆ ಹೀಗೆ ಮಾಡುವುದು. ಇದೇನು ಹೊಸದಲ್ಲ, ಹಿಂದೆಯೂ ಬಹಳ ಸಲ ಹೀಗೆ ಮಾಡಿದ್ದಾರೆ.
ನಾನು ಚಿಕ್ಕವನಿದ್ದಾಗ ಇದೇ ಅಪ್ಪ-ಅಮ್ಮ ಹೊರಗೆ ಹೋಗುತ್ತಿದ್ದರು, ಜೊತೆಗೆ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಈಗ ಅದೇ ರೀತಿ ಮತ್ತೆ ಹೋಗೋಣ, ಏಕತಾನತೆ ಮತ್ತು "ವಯಸ್ಸಾಯಿತು" ಅನ್ನೋ ಭಾವನೆ ಇವರಿಂದ ದೂರವಾಗಲಿ ಅಂತ ನೋಡಿದರೆ, ಇವರು ಸಹಕಾರ ಕೊಡೋದೇ ಇಲ್ಲ. ಮೊನ್ನೆ ಅಪ್ಪ ಹೇಳ್ತಾ ಇದ್ರು "ಬರೀ ಟಿವಿ ನೋಡೋಕೆ ಬೇಸರ" ಅಂತ, ಅದಕ್ಕೆ ಅವರ ಇಷ್ಟವಾದ ನೃತ್ಯರೂಪಕ ತಂಡ ನಮ್ಮ ಊರಲ್ಲೇ ಈಗ ಬಂದಿದೆ ಮತ್ತು ಅವರ ಇಷ್ಟವಾದ 'ಗಂಗಾವತರಣ' ರೂಪಕ ಪ್ರಸ್ತುತಪಡಿಸುತ್ತಿದೆ. ಅದಕ್ಕೆ ಅಂತ ಟಿಕೆಟ್ ಕೂಡ ಮಾಡಿಸಿದ್ದೆ. ಎಲ್ಲ ವ್ಯರ್ಥವಾಯಿತು. ಎಲ್ಲ ಹೀಗೆ ಅಂತ ಮೊದಲೇ ಹೇಳಿದರೆ 'ಸರ್ಪ್ರೈಸ್' ಇರೋಲ್ಲ, ಅವಾಗ ಸಂತೋಷ ಸಿಗೋಲ್ಲ ಅಂತ ಯಾರೋ ಹೇಳ್ತಾ ಇದ್ರು. ಅದೇನೋ ಸಿದ್ಧಾಂತವಂತೆ - ನಮಗೆ ಹಠಾತ್ ಆಗುವ ಸಂಭ್ರಮ ಕೊಡುವಷ್ಟು ಸಂತೋಷ, ಮೊದಲೇ ಗೊತ್ತಿದ್ದರೆ ಸಿಗುವುದಿಲ್ಲ ಅಂತ. ಅದಕ್ಕೋಸ್ಕರ ಎಲ್ಲ ಬಿಡಿಸಿ ಹೇಳೋಕೆ ಹೋಗಲಿಲ್ಲ. ಇವರು ನೆನ್ನೆ ತಲೆ ಆಡಿಸಿ "ಆಯ್ತು ನೋಡೋಣ" ಅಂದ್ರು, ಆದರೆ ಇವತ್ತು ಬೆಳಿಗ್ಗೆ "ಆಗೋಲ್ಲ" ಅಂತಾರೆ.
ನನ್ನ ಸ್ನೇಹಿತರ ಮನೆಯಲ್ಲಿ ಅವರೆಲ್ಲ ಹೇಗೆ ಒಟ್ಟಾಗಿ ಹೊರಗೆ ಹೋಗಿ ಸಂಭ್ರಮಿಸುತ್ತಾರೆ; ಒಂದು 'ಮಾರಲ್ ಸಪೋರ್ಟ್' ಇರುತ್ತೆ ಅನ್ನಿಸುತ್ತೆ. ನನ್ನ ವಿಷಯದಲ್ಲಿ ಮಾತ್ರ ಹೀಗೆ. ಏನಾದರೂ ಇದನ್ನು ಹೇಳಿದರೆ, "ನಿನಗೆ ನಾವಿಬ್ಬರು ಯಾವುದೇ ತೊಂದರೆ ಇಲ್ಲದೆ ಇದ್ದೀವಿ ಅದಕ್ಕೆ ಸಂತೋಷಪಡು, ಎಷ್ಟೋ ಜನಕ್ಕೆ ಅಪ್ಪ-ಅಮ್ಮ ಆರೋಗ್ಯವಾಗಿದ್ದರೆ ಸಾಕು ಅನ್ನಿಸಿರುತ್ತೆ" ಅಂತಾರೆ. ಆಗಾಗ ಹೊರಗೆ ಹೋಗಿ ಬಂದರೆ ಇನ್ನು ಉತ್ಸಾಹ, ಆರೋಗ್ಯ ಹೆಚ್ಚಾಗೋಲ್ವಾ? ಇದನ್ನೆಲ್ಲಾ ಹೇಗೆ ಇವರಿಗೆ ಮನದಟ್ಟು ಮಾಡಿಸುವುದೋ ನನಗೆ ಗೊತ್ತಿಲ್ಲ. ದೇವರೇ, ಇವರಿಗೆ ಇದೆಲ್ಲ ತಿಳಿಯುವ ಹಾಗೆ ಮಾಡಪ್ಪ.
ಉಪಸಂಹಾರ: ಒಂದು ನಿರಂತರ ವೃತ್ತ
ಮನೆಯ ಗೋಡೆಗಳ ಮೇಲೆ ಮೌನವೊಂದು ಗಾಢವಾಗಿ ಆವರಿಸಿತು. ರಾಜಶೇಖರ್ ಇನ್ನು ಮುಂದೆ ಬಾರದ ಅತಿಥಿಗಾಗಿ ಕಾಯುವಂತೆ ಕಿಟಕಿಯ ಹೊರಗೆ ಶೂನ್ಯವನ್ನು ದಿಟ್ಟಿಸುತ್ತಿದ್ದರು; ಅಲ್ಲಿ ಹಳೆಯ ಕಾಲದ ನೆನಪುಗಳು ಮತ್ತು ಇಂದಿನ ಅಸಹಾಯಕತೆ ಮುಖಾಮುಖಿಯಾಗುತ್ತಿದ್ದವು. ಅಡುಗೆಮನೆಯಲ್ಲಿ ಮೀನಾಕ್ಷಮ್ಮ ಪಾತ್ರೆಗಳನ್ನು ಜೋಡಿಸುವ ಸದ್ದಿನಲ್ಲಿ ತನ್ನ ಅಸಮಾಧಾನವನ್ನು ಮರೆಮಾಚಲು ಯತ್ನಿಸುತ್ತಿದ್ದರೂ, ಅಲ್ಲಿನ ಪಾತ್ರೆಗಳ ಖಾಲಿತನವೇ ಅವರನ್ನು ಅಣಕಿಸುವಂತಿತ್ತು. ಹೊರಗೆ ನಡೆದ ಉಲ್ಲಾಸ್, ಎಲ್ಲಿಗೆ ಹೋಗಬೇಕೆಂಬ ಗುರಿಯಿಲ್ಲದೆ ಬೀದಿಯ ಕೊನೆಯಲ್ಲಿ ನಿಂತಿದ್ದ. ಒಟ್ಟಾರೆ ಆ ಮನೆ, ಇಂತಹುದೇ ಇನ್ನು ಎಷ್ಟೋ ಘಟನೆಗಳಿಗೆ ಮೌನ ಸಾಕ್ಷಿಯಾಗಲು ತಯಾರಾಗಿತ್ತು.