They came to the village, brought prosperity in Kannada Motivational Stories by Vaman Acharya books and stories PDF | ಊರಿಗೆ ಬಂದರು, ಸಮೃದ್ಧಿ ತಂದರು

Featured Books
Categories
Share

ಊರಿಗೆ ಬಂದರು, ಸಮೃದ್ಧಿ ತಂದರು

 ಊರಿಗೆ ಬಂದರು, ಸಮೃದ್ಧಿ ತಂದರು 

(ಪ್ರೇರಣಾತ್ಮಕ ಕಥೆ)

ಲೇಖಕ ವಾಮನಾಚಾರ್ಯ

ಮಾಲೂರು‌ಬೆಳಗಲಿ ಗ್ರಾಮದಲ್ಲಿ  

ಸೂರ್ಯೋದಯ ಸಮಯ ಏಳು ಗಂಟೆ. ಅದೇ ಸಮಯದಲ್ಲಿ ಮೂವರು ಯುವತಿ ಯರು ಗ್ರಾಮದ ಹೊರಗೆ ಇರುವ ಹಳೆಯ ಬಾವಿಯ ಮುಂದೆ ನೀರು ಸೇದಲು ಕೊಡಗಳನ್ನು ತಂದರು. ಇದು ಯುವತಿಯರ‌‌ ಮೊದಲ ಭೇಟಿ. ಕಮಲಾ, ರೇಖಾ ಹಾಗೂ ವಂದನಾ ಎಂದು ಪರಿಚಯ‌ ಮಾಡಿ ಕೊಂಡರು. ಉತ್ತರ ಕರ್ನಾಟಕದ ಪವನಪುರದ ಕಮಲಾ ಒಂದು ವಾರದ ಹಿಂದೆ ಸಾಹುಕಾರ ಭಾಲಚಂದ್ರ ಅವರ ಪುತ್ರ ಶಶಾಂಕ್ ಜೊತೆಗೆ ಮದುವೆ ಆದಳು. ಆಂಧ್ರ ಪ್ರದೇಶದ ಕರ್ನೂಲ್ ಪಟ್ಟಣದ ರೇಖಾ, ಗ್ರಾಮದ ಪ್ರಮುಖ ಕುಳ ಶಿವಾನಂದ ಅವರ‌  ಪುತ್ರ ಸದಾನಂದ ನನ್ನು ಮದುವೆ ಆಗಿ ಕೇವಲ ಹದಿನೈದು ದಿವಸ ಆಗಿತ್ತು. ಮಹಾರಾಷ್ಟ್ರದ ಸೋಲಾಪುರ ನಗರದ ವಂದನಾ, ತಾನು ಓದುತ್ತಿದ್ದ ಕಾಲೇಜ್ ನಲ್ಲಿ ಕ್ಲಾರ್ಕ್ ಎಂದು ಕೆಲಸ ಮಾಡುತ್ತಿದ್ದ ಮನೋಹರ್ ಅವರನ್ನು ಪ್ರೇಮಿಸಿ ಮದುವೆ ಆಗಿ ಹತ್ತು ದಿವಸ. ಇದೇ ಗ್ರಾಮದ ನಿವೃತ್ತ ಶಿಕ್ಷಕ ಮುಕುಂದರಾವ್ ಅವರ ಮಗ ಮನೋಹರ್. ಆಶ್ಚರ್ಯವೆಂದರೆ ಎಲ್ಲರೂ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುವರು. ಅವರೆಲ್ಲರೂ ಉನ್ನತ ಶಿಕ್ಷಣ ಹೊಂದದೇ ಇದ್ದರೂ ಪ್ರತಿಭಾವಂತರು ಆಗಿರುವುದು ಅಪರೂಪ. 

 ಬಾವಿ ಒಣಗಿದ್ದು ನೋಡಿ ಅವರಿಗೆ ತುಂಬಾ ಅಸಮಾಧಾನ ವಾಯಿತು.‌‌ 

“ಹಳ್ಳಿಯಲ್ಲಿನ ನೀರಿನ ಕೊರತೆಯ ಸಮಸ್ಯೆ  ಗಂಭೀರವಾಗಿ ತೆಗೆದು ಕೊಳ್ಳಬೇಕು. ಇದಕ್ಕೆ ಪರಿಹಾರ ಹುಡುಕಬೇಕು,”ಎಂದಳು ಕಮಲಾ.  

“ ಹೌದು, ಆದರೆ ಒಂದು ಅನುಮಾನ,” ಎಂದಳು ರೇಖಾ.‌ 

“ಅದೇನು ನಿಮ್ಮ ಅನುಮಾನ ರೇಖಾ ಅವರೇ,?” ಎಂದು ಉಳಿದಿಬ್ಬರು ಒಮ್ಮೇಲೆ ಕೇಳಿದರು.

“ನಾವು ಈ ಗ್ರಾಮಕ್ಕೆ ಹೊಸದಾಗಿ ಬಂದವರು. ನೀರಿನ ಕೊರತೆ ಸಮಸ್ಯೆ ಪರಿಹಾರ‌‌ ನಮ್ಮಿಂದ  ಆಗಬಹುದೇ?,” ಎಂದಳು ರೇಖಾ. 

“ಸಂಶಯ ಬೇಡ, ಯಾವಾಗಲೂ ಆಶಾವಾದಿ ಇರಬೇಕು. ಮನಸ್ಸಿದ್ದರೆ ಮಾರ್ಗ,”ಎಂದಳು ವಂದನಾ. 

ಅದಕ್ಕೆ ಕಮಲಾ,

“ನನ್ನ ಊರು ಪವನಪುರದಿಂದ ಐದು ಕಿಲೋಮೀಟರ್ ದೂರ ಇರುವ ಸೋಮ ನೂರು ನಾನು ಹುಟ್ಟಿ ಬೆಳೆದ ಊರು. ಕಳೆದ ವರ್ಷ ನಮ್ಮ ಊರಿನಲ್ಲಿ ಇಂತಹ ಪರಿಸ್ಥಿತಿ ಉದ್ಭವ ವಾಗಿತ್ತು. ಗ್ರಾಮದ ಹಿರಿಯರು ಸಮಸ್ಯೆ ಬಗ್ಗೆ ಚರ್ಚೆ ಮಾಡುವಾಗ ನಾನು ಭಾಗವಹಿಸಿದ್ದೆ. ಆಗ ನಾನು ಡಿಪ್ಲೊಮಾ ಇನ್ ಸಿವಿಲ್ ಇಂಜಿನಿಯರಿಂಗ್ ಕೊನೆ ವರ್ಷದಲ್ಲಿ ಇದ್ದೆ. ನಾನು ಕೊಟ್ಟ ಸಲಹೆಗಳು ಉಪಯುಕ್ತ ಆದವು. ನನಗೆ ಇರುವ ಅನುಭವದ ಪ್ರಕಾರ ಕಡಿಮೆ ವೆಚ್ಚದಲ್ಲಿ ಅಧಿಕ ಉಪಯೋಗ ವಾಗುವ ನೀರು ಬರುವ ಯೋಜನೆಗಳನ್ನು ರೂಪಿಸಬಹುದು ಎಂದೆ. ಅದಕ್ಕೆ ಅವರು ನನ್ನ ಸಲಹೆಗಳನ್ನು ಆಲಿಸಿದರು,” ಎಂದಳು .

ಅನೇಕ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ಮಾಡುತ್ತಾ ತಮ್ಮ ಮನೆಗಳಿಗೆ ಹೋದರು. ನೀರಿನ ಕೊರತೆ ನೀಗಿಸುವದು ಅವರ ಪ್ರಮುಖ ಆದ್ಯತೆ ಯಾಗಿತ್ತು. ಈ ಬಗ್ಗೆ ಆದಷ್ಟು ಬೇಗನೆ ಗ್ರಾಮದ ಪ್ರಮುಖರ ಜೊತೆಗೆ ಮಾತನಾಡುವ ನಿರ್ಧಾರ ತೆಗೆದುಕೊಂಡರು. ಅದಕ್ಕೂ ಮೊದಲು ಮನೆ ಮನೆಗೆ ಭೇಟಿ ಆಗಿ ಸಾರ್ವಜನಿಕರ ಅಭಿಪ್ರಾಯ ಕೇಳಲು ನಿರ್ಧರಿಸಿ ದರು. 

ಅದರಂತೆ ಒಂದು ವಾರ ಬಿಟ್ಟು ಮನೆ ಮನೆಗೆ ಭೇಟಿ ನೀಡಿ ಜನರ ಸಮಸ್ಯೆಗಳು ಹಾಗೂ ಸಲಹೆಗಳನ್ನು ಆಲಿಸಿದರು. ಅವರಲ್ಲಿ ಓರ್ವವೃದ್ಧೇ ಹೇಳಿದ ಸಲಹೆಗಳು ಉಪಯುಕ್ತ ವಾಗಿದ್ದವು. ಎಲ್ಲರ ಅಭಿಪ್ರಾಯಗಳ ಆಧಾರದ ಮೇಲೆ ಮೂವರು ಮಹಿಳೆಯರು ಒಂದು ಅದ್ಭುತ ಮತ್ತು ಸೃಜನಾತ್ಮಕ ಯೋಜನೆ ಸಿದ್ಧಪಡಿಸಿ ಗ್ರಾಮದ ಹಿರಿಯರು ಜೊತೆಗೆ ಅದರ ಬಗ್ಗೆ ಚರ್ಚಿಸಿದರು. ಈ ಮಹಿಳೆಯರ ಪ್ರಯತ್ನ ನೋಡಿ ಎಲ್ಲರೂ ಅವರನ್ನು ಶ್ಲಾಘಿಸಿದರು.‌ ಪಂಚಾಯತ್ ಚೇರ್ಮನ್ ಸುದರ್ಶನ್ ಪಾಟೀಲ್ ಅವರು ಈ ಮಹಾನ್ ಕಾರ್ಯಕ್ಕೆ ಎಲ್ಲರೀತಿಯಿಂದ ಹಣಕಾಸು  ಸಹಾಯ‌ ಸರ್ಕಾರದಿಂದ ಪಡೆಯುವ ಭರವಸೆ ಕೊಟ್ಟರು.

ಮಹಿಳೆಯರು ಮಾಡಿದ ಯೋಜನೆ ಏನು? 

ಮೊದಲನೆಯದಾಗಿ, ಪ್ರತಿಯೊಂದು ಮನೆ ಮಾಳಿಗೆಯ ಮೇಲೆ ಮಳೆ ನೀರು ಸಂಗ್ರಹಣೆ. ಇದಕ್ಕಾಗಿ ಬೇಕಾಗುವ ಸಾಮಗ್ರಿಗಳ- ಪ್ಲಾಸ್ಟಿಕ್ ಡ್ರಮ್ಗಳು, ಬಿದಿರು ಕೊಳವೆಗಳು, ಪೈಪ್ಗಳು ಕಡಿಮೆ ವೆಚ್ಚದಲ್ಲಿ ತರಬೇಕು. ಆ ನೀರು ಮನೆ ಕೆಳಗೆ ಬರುವ ‌ಹಾಗೆ ಮಾಡಬೇಕು. 

ಎರಡನೇಯದು ಹನುಮಾನ ದೆವಸ್ಥಾನದ ಮುಂಭಾಗದಲ್ಲಿ ಇರುವ ಕೆರೆಯ ಸಮಗ್ರ ಅಭಿವೃದ್ಧಿ. ಮೂರನೆಯದಾಗಿ, ಹಳ್ಳಿಯ ಏಕೈಕ ಬಾವಿಯ ಪುನಶ್ಚೇತನ. ಇವೆರಡೂ ಕಡೆ ವರ್ಷಗಳಿಂದ ಕಸ ತುಂಬಿರುವುದನ್ನು ಸ್ವಚ್ಛ ಗೊಳಿಸಿ, ಕೆರೆ ಅಂಚು ಬಲ ಪಡಿಸುವುದು. ಮಳೆ ನೀರು ಕೆರೆ ಸೇರಿದ ನಂತರ ಕಾಲುವೆ ನಿರ್ಮಾಣ ಆಗಬೇಕು.

ಮನೆ ಮಾಳಿಗೆ ನೀರು ಸಂಗ್ರಹಣೆ ಕಮಲಾ ನೋಡಿ ಕೊಂಡರೆ, ಕೆರೆ, ಬಾವಿ ಪುನಶ್ಚೇತನದ ಜವಾಬ್ದಾರಿ ರೇಖಾ ಅವರು. ಇನ್ನು ಸರ್ಕಾರದ ಅಧಿಕಾರಿಗಳನ್ನು ಭೇಟಿ ಆಗಿ ಯೋಜನೆ ಬಗ್ಗೆ ವಿವರಿಸುವವರು ವಂದನಾ.

ಗ್ರಾಮ ಪಂಚಾಯಿತಿ ಚೇರ್ಮನ್ ಅವರು ಇದೆಲ್ಲವನ್ನು ಕೇಳಿ ಸಂತೋಷವಾಗಿ ಬರುವ ಸಭೆಯಲ್ಲಿ ಈ ಯೋಜನೆ ಮಂಡಿಸುವದಾಗಿ ಭರವಸೆ ಕೊಟ್ಟರು. ಅದರಂತೆ ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುಮೋದನೆ ಮಾಡಿದರು. ಎಲ್ಲ ಕೆಲಸಗಳು ಭರದಿಂದ ಸಾಗಿದವು. ಒಂದು ವಾರದಲ್ಲಿ ಕೆಲಸ ಪ್ರಾರಂಭವಾಯಿತು. 

ಯುವತಿಯರ ಗಂಡಂದಿರು ಮೊದಲು ವಿರೋಧ ಮಾಡಿದರು. ಕಾರಣ ಅವರು ಮಾಡುವ ಕೆಲಸ ಪತ್ನಿಯರು ಮಾಡುತ್ತಿದ್ದು, ಅದು ತಮಗೆ ಅಗೌರವ ಎನ್ನುವದು ಅವರ ವಾದ. ಅದಕ್ಕಾಗಿ ಪತ್ನಿಯರು ತಮ್ಮ ಗಂಡಂದಿರಿಗೆ ಈ ಮಹಾನ್ ಕಾರ್ಯದಲ್ಲಿ ಯೋಜನೆಗಳ ಮೇಲ್ವಿಚಾರಣೆ ವಹಿಸಿದರು. ಇದರಿಂದ ಅವರಿಗೆ ಸಮಾಧಾನವಾಯಿತು. 

ಗ್ರಾಮಸ್ಥರು ಉತ್ಸಾಹದಿಂದ ಕೆಲಸ ಮಾಡಲು ಮುಂದೆ ಬಂದರು. ಅಂದು ಕೊಂಡ ಕೆಲಸಗಳು ಮುಗಿಯಲು ಒಂದು ತಿಂಗಳು ಆಯಿತು. ಇದು ಮುಗಿದು ಮೂರು ದಿನಗಳ ನಂತರ ವರುಣ‌ ದೇವನ ಕೃಪೆಯಿಂದ ಧಾರಾಕಾರ ಮಳೆ ಸತತವಾಗಿ‌ ಮೂರು ದಿವಸ ಆಗಿ ಕೆರೆ, ಬಾವಿ ಹಾಗೂ ಮನೆ‌ ಮಾಳಿಗೆಯ ಡ್ರೀಮ್ ಗಳು ತುಂಬಿದವು. ಎಲ್ಲ ಕಡೆ ಹರ್ಷೋದ್ಗಾರ.‌ 

ಒಂದು ದಿವಸ ಗ್ರಾಮಪಂಚಾಯತ್ ನವರು  ಊರಿನ ಹೂರವಲಯದಲ್ಲಿ ಇರುವ ಆಲದ ಮರದ ಕೆಳಗೆ ಸಾರ್ವಜನಿಕರ ಸಭೆ ಏರ್ಪಾಟು ಮಾಡಿದರು. ಆಗ ಚೇರ್ಮನ್ ಸುದರ್ಶನ್ ಪಾಟೀಲ್ ತಮ್ಮ ಭಾಷಣದಲ್ಲಿ,

 “ಮೂವರು ಮಹಿಳೆಯರು ಕಮಲಾ, ರೇಖಾ ಹಾಗೂ ವಂದನಾ ಇವರ ಬುದ್ದಿವಂತಿಕೆ, ಅಂದು ಕೊಂಡಿರುವದನ್ನು ಸಾಧಿಸುವ ಛಲ,  ಜನರ ಬೆಂಬಲ ತೆಗೆದುಕೊಳ್ಳುವುದರಲ್ಲಿ ಯಶಸ್ಸು ಹಾಗೂ ನಿಗದಿತ ಸಮಯದಲ್ಲಿ ಮುಗಿಸಿ ಅಸಾಧ್ಯವನ್ನು ಸಾಧ್ಯ ಎಂದು ಮಾಡಿ ತೋರಿಸಿದರು. ಮಾಲೂರು ಬೆಳಗಲಿ ಸೊಸೆ ಯಂದಿರು ಈ ಊರಿಗೆ ಬಂದರು, ಸಮೃದ್ಧಿ ತಂದರು,”ಎಂದರು.

ನೆರೆದ ಜನರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ವೇದಿಕೆಯ ಮೇಲಿದ್ದ ಯಶಸ್ಸು ಬರುವದಕ್ಕೆ ಕಾರಣರಾದ ಮಹಿಳೆಯರು ಆಸನದಿಂದ ಎದ್ದು ಎಲ್ಲರಿಗೂ ಕೈ ಮುಗಿದರು.