ಕಥೆ : ನಳ ದಮಯಂತಿ
===============
ಭಾಗ - 1
ನಿಷಧ ದೇಶದ ರಾಜಧಾನಿ ನಿಷಧ ನಗರ. ಈ ನಗರಿ ಬಹಳ ಸ್ವಚ್ಛ ಮತ್ತು ನಿರ್ಮಲ. ನಗರವು ಅಗಲವಾದ ರಸ್ತೆಗಳನ್ನು, ಹಲವು ಬಣ್ಣದ ವಿಶೇಷ ಮನಮೋಹಕ ಹೂಗಳ, ಹಾಗೂ ತರಹೇವಾರಿ ಹಣ್ಣುಗಳ ಮರಗಳನ್ನು ಹೊಂದಿದ್ದ ಉದ್ಯಾನವನಗಳನ್ನು, ರಸ್ತೆ ದೀಪಗಳನ್ನು ಹೊಂದಿದ್ದು ಸುವ್ಯವಸ್ಥಿತವಾಗಿತ್ತು. ಎತ್ತ ನೋಡಿದರೂ ಊರಿನ ತುಂಬಾ ಎತ್ತರ ಗೋಪುರದ ಸುಂದರ ದೇವಾಲಯಗಳು. ಇದನ್ನು ಆಳ್ವಿಕೆ ಮಾಡುತಿದ್ದವನು ಅನೇಕ ರಾಜರುಗಳ ರಾಜ ನಳ ಚಕ್ರವರ್ತಿ. ಈತನ ತಂದೆ ಚಂದ್ರವಂಶದ ಪ್ರಸಿದ್ದ ಆಡಳಿತಗಾರ ವೀರಸೇನ.
ಈ ದೇಶ ಎಷ್ಟು ಸುಂದರವೋ ಇದನ್ನು ಆಳುತ್ತಿದ್ದ ನಳನದು ಕೂಡ ಸ್ವರ್ಗದ ಅಪ್ಸರೆಯಾರನ್ನೂ ಆಕರ್ಷಿಸುವ ಸೌಂದರ್ಯ. ಕೇವಲ ದೇಹ ಸೌಂದರ್ಯ ಮಾತ್ರವಲ್ಲ ಮನದ ಸೌಂದರ್ಯದಲ್ಲೂ ಸಿರಿವಂತ. ಪರಮ ದಯಾಳು, ಸೌಮ್ಯ, ಸದ್ಗುಣಿ. ಕತ್ತಿ ಝಳಪಿಸುವುದರಲ್ಲಿ ನಿಪುಣ, ವೇದಾಧ್ಯಯನಗಳಲ್ಲಿ ಪರಿಣಿತ. ಧರ್ಮಗ್ರಂಥಗಳಲ್ಲಿ ಪಂಡಿತ. ಕುದುರೆಯನ್ನೇರಿ ಮಿಂಚಿನ ವೇಗದಲ್ಲಿ ರಥಗಳನ್ನು ಸವಾರಿ ಮಾಡುವಲ್ಲಿ ಅದ್ವಿತೀಯ. ಅಶ್ವ ಪರೀಕ್ಷೆಯಲ್ಲಿ ನಿಷ್ಣಾತ, ಅವುಗಳನ್ನು ಪಳಗಿಸುವುದರಲ್ಲಿಯೂ ಕುಶಲ.
ರೂಪ, ಸಂಪತ್ತು, ಯೌವ್ವನ, ಸೌಜನ್ಯ ವಿದ್ಯೆ, ವೀರತ್ವಗಳನ್ನು ಮೈಗೂಡಿಸಿಕೊಂಡಿದ್ದ ಈತನ ಆಸ್ಥಾನವು ಸದಾ ಗೌಳ, ವಂಗ, ಕಳಿಂಗ, ಕುಂತಳ, ಚೋಳ, ಬರ್ಬರ, ಸಿಂಧು, ಕೇರಳ, ಲಾಳ, ಮಗಧ, ವರಾಳಿ, ಸೌರಾಷ್ಟ್ರ ಮೊದಲಾದ ದೇಶಗಳ ರಾಜಾಧಿರಾಜರಿಂದಲೂ, ಮಂತ್ರಿ ಮಹೋದಯರಿಂದಲೂ, ತುಂಬಿ ತುಳುಕುತ್ತಿತ್ತು. ವೀರರು, ನಟರು, ಗಾಯಕರು, ಸಂಗೀತಗಾರರು ಮತ್ತು ಕವಿಗಳ ಉಪಸ್ಥಿತಿಯಿಂದ ರಾಜಸಭೆ ಇಂದ್ರಸಭೆಯಂತೆಯೇ ಶೋಭಿಸುತಿತ್ತು.
ಒಂದು ದಿನ ರಾಜಸಭೆಯಲ್ಲಿ ಸಿಂಹಾಸನದ ಮೇಲೆ ನಳನು ಕುಳಿತಿರಲು ದೇಶವನ್ನೆಲ್ಲ ಸುತ್ತಿ ಬಂದ ಬ್ರಾಹ್ಮಣ ಪಂಡಿತನೊಬ್ಬ ಭೇಟಿ ಕೊಟ್ಟ. ನಳನು ಬ್ರಾಹ್ಮಣೋತ್ತಮನಿಗೆ ನಮಸ್ಕರಿಸಿ ಉಚಿತ ಆಸನ ನೀಡಿ ವಿಶೇಷ ಸಮಾಚಾರವೇನೆಂದು ವಿನಯದಿಂದ ಕೇಳಲು, ಬ್ರಾಹ್ಮಣನು
"ರಾಜನೇ ವಿಶೇಷವೆಲ್ಲವೂ ನೀನೇ ಆಗಿರುವಾಗ, ನಿನ್ನ ರಾಜ್ಯವೇ ವಿಶೇಷವಾಗಿರುವಾಗ ನಿನಗೆ ನಾನ್ಯಾವ ವಿಶೇಷವನ್ನು ತರಲು ಸಾಧ್ಯ..!? ಇಲ್ಲಿನ ವಿಶೇಷವನ್ನು ಬೇರೆಡೆ ಹೇಳಬೇಕಷ್ಟೆ. ಆದರೂ ನಿನಗೊಂದು ವಿಷಯವನ್ನು ಹೇಳುವ ಸಂದರ್ಭ ಒದಗಿ ಬಂದಿರುವುದರಿಂದ ಹೇಳಬೇಕೆಂದೇ ಬಂದಿರುವೆ. ನಿನ್ನಲ್ಲಿ ಸಕಲವೂ ಇದ್ದರೂ ನೀನಿನ್ನೂ ಅವಿವಾಹಿತನಾಗಿರುವುದು ನಿನ್ನ ವಂಶದ ಬಹು ದೊಡ್ಡ ಕೊರತೆ. ನೀನು ವಿವಾಹ ವಯಸ್ಕನಾಗುವ ಮೊದಲೇ ನಿನ್ನ ತಂದೆ ವೀರಸೇನ ಮರಣಿಸಿದುದರಿಂದ ಈ ವಿಷಯವಾಗಿ ಸೂಕ್ತ ಸಲಹೆ ನೀಡಬೇಕಾದುದು ನಮ್ಮ ಕರ್ತವ್ಯ. ರಾಜನೇ, ವಿದರ್ಭ ದೇಶದ ರಾಜ ಭೀಮಕನ ಮಗಳಾದ ದಮಯಂತಿ ಹಾಲಿನ ಬಿಳುಪುಳ್ಳ ರೂಪವತಿ, ಮಾನವರಿರಲಿ, ದೇವತೆಗಳಲ್ಲಿಯೂ, ಯಕ್ಷರಲ್ಲಿಯೂ ಇಂತಹ ರೂಪ ಲಾವಣ್ಯವನ್ನು ನಾ ಕಾಣೆ. ಇದಕ್ಕೂ ಮಿಗಿಲಾಗಿ ಗುಣದಲ್ಲಿ, ಮಾತಿನಲ್ಲಿ, ಗಾಂಭೀರ್ಯದಲ್ಲಿ ಗುರುಹಿರಿಯರಿಗೆ ಗೌರವ ತೋರುವುದರಲ್ಲಿ ಆಕೆಯನ್ನು ಮೀರಿಸಿದವರು ಈ ಲೋಕದಲ್ಲಿ ಮತ್ತೊಬ್ಬರಿಲ್ಲ ಎಂಬುದೇ ನನ್ನ ತಿಳುವಳಿಕೆ. ಆಕೆಯ ಕೈ ಹಿಡಿಯುನವನು ಖಂಡಿತ ಪುಣ್ಯವಂತ ಆ ಪುಣ್ಯ ಪುರುಷ ನೀನಾಗಬೇಕೆಂಬುದು ನಮ್ಮ ಬಯಕೆ"
ಎಂದು ತಿಳಿಸಿ ತನ್ನ ಬಳಿ ಇದ್ದ ದಮಯಂತಿಯ ಚಿತ್ರಪಟವನ್ನು ನೀಡಿ ನಿರ್ಗಮಿಸಿದರು.
ಕಿಚ್ಚೆಬ್ಬಿಸುವ ಉದ್ದವಾದ ಮುಂಗುರುಳು, ಹುಚ್ಚೆಬ್ಬಿಸುವ ಹವಳದಂತಿದ್ದ ತುಟಿ, ಕೋಮಲವಾದ ಕತ್ತು, ಚಂಚಲವಾದ ಕಣ್ಣು, ಸಂಪಿಗೆಯ ಹೂವಿನಂಥ ಮೂಗು, ಚಂದ್ರಮನಂತೆ ಹಣೆ, ವಾವಾ.... ಬ್ರಾಹ್ಮಣ ಪಂಡಿತ ಹೇಳಿದ ಸೌಂದರ್ಯ ಲಾವಣ್ಯದಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲವೆಂದು ನಳ ದಮಯಂತಿಯನ್ನು ಹಂಬಲಿಸಿ ಪ್ರೀತಿಸತೊಡಗಿದ. ವಿವಾಹವಾಗುವುದು ಹೇಗೆ? ಚಿಂತೆಯಲ್ಲಿ ಮುಳುಗಿದ.
ಇದೇ ಸಂದರ್ಭದಲ್ಲಿ ವಿಧರ್ಭದ ರಾಜ ಭೀಮಕನ ಆಸ್ಥಾನದಲ್ಲಿ ಕವಿಜನರು ನಿಷಧದ ರಾಜ ನಳಚಕ್ರವರ್ತಿಯ ರೂಪ, ಗುಣ, ಕೀರ್ತಿಗಳನ್ನು ಹಾಡಿ ಹೊಗಳಿದರು. ಆ ಹೊಗಳಿಕೆ ವಿವಾಹ ವಯಸ್ಸಿಗೆ ಬಂದ ಯಾವುದೇ ಕನ್ಯೆಯನ್ನು ತಾಕದೇ ಇರುವಂತಿರಲಿಲ್ಲ. ಭೀಮಕ ರಾಜನ ಮಗಳಿಗೂ ಹಾಗೆಯೇ ಆಯಿತು. ಕವಿ ಜನರ ಹೊಗಳಿಕೆಯನ್ನು ಕೇಳಿಯೇ ದಮಯಂತಿ ಮನದಲ್ಲಿ
ನಳನ ಸುಂದರ ಚಿತ್ರ ಮೂಡಿತು, ಪ್ರೀತಿಯುಂಟಾಯಿತು.
ಹೀಗೆ ಒಬ್ಬರನ್ನೊಬ್ಬರು ನೋಡದೆಯೇ ನಳದಮಯಂತಿಯರು ಪ್ರೀತಿಸಲಾರಂಭಿಸಿದರು.
ಪ್ರೇಮೊದಯದಿಂದ ದಮಯಂತಿಗೆ ಊಟ ಉಪಹಾರಗಳು ಸೇರದಾದವು... ಪ್ರತಿ ಕಾರ್ಯದಲ್ಲೂ ನಿರಾಸಕ್ತಿ, ಮಲಗಿದರೆ ಕನಸಿನಲ್ಲಿ ಕಣ್ತುಂಬ ನಳನ ಕಲ್ಪನೆಯ ಚಿತ್ರ, ಎದ್ದರೆ ಎದೆಯಲ್ಲಿ ಪ್ರೀತಿಯ ಭಾರ ದಮಯಂತಿ ನಳನ ಚಿಂತೆಯಲ್ಲೇ ಬಾಡ ತೊಡಗಿದಳು.
***
ದಿನಗಳುರುಳಿದಂತೆ ನಳನ ಪ್ರೇಮದ ಅಮಲೂ ಹೆಚುತ್ತಲೇ ಇತ್ತು. ಅವನು ತನ್ನ ಮನಸ್ಸನ್ನು ತಹಬದಿಗೆ ತರಲು ಮೋಜಿನ ಬೇಟೆಗಾಗಿ ಕಾಡಿಗೆ ಹೊರಟನು. ಅಸಂಖ್ಯ ವಾದ್ಯಗಳ ಶಬ್ದದೊಂದಿಗೆ ನೆಲವೇ ಬಿರಿಯುವಂತೆ ಬಂದ ನಳನ ಸೈನಿಕರಿಂದ ತಪ್ಪಿಸಿಕೊಳ್ಳಲು ಸಣ್ಣ ಸಣ್ಣ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿ ಹೋದವು. ಸಿಕ್ಕ ಆನೆಗಳು ಸತ್ತು ಬಿದ್ದವು. ಹುಲಿ, ಜಿಂಕೆ, ಮೊಲ, ಮುಂತಾದ ಪ್ರಾಣಿಗಳು ಕ್ಷಣಾರ್ಧದಲ್ಲಿ ಉರುಳಿದವು. ಸೈನ್ಯದ ಮೇಲೆ ಸಿಂಹವೊಂದು ಕೋಪದಿಂದ ಗರ್ಜಿಸುತ್ತಾ ಎರಗುತ್ತಿರಲು ನಳನು ಆ ಸಿಂಹವನ್ನು ಕೊಂದುಹಾಕಿದನು.
ಸಂಜೆಯ ಸಮಯ ಆಗುತ್ತಿರಲು ಬಳಲಿದ ನಳನು ಬೇಟೆಯನ್ನು ನಿಲ್ಲಿಸಿ ಸಮೀಪದ ಊರಿನ
ಉದ್ಯಾನವನವೊಂದನ್ನು ತನ್ನ ಪಡೆ ಸಮೇತ ಪ್ರವೇಶಿಸಿ ಅಲ್ಲಿನ ಸರೋವರಕ್ಕೆ ಇಳಿದು ಮೊಣಕಾಲನ್ನೂ ಕೆಳತೊಡೆಗಳನ್ನು ತೊಳೆದ.
ಉದ್ಯಾನವನದಲ್ಲಿದ್ದ ಪುಷ್ಪಗಳ ಪರಿಮಳವನ್ನು ಹೊತ್ತು ಪಸರಿಸಿದ ತಂಗಾಳಿ, ಅರಳಿದ ಮಲ್ಲಿಗೆಯ ಘಮಘಮ, ಮನಮೋಹಕ ನೃತ್ಯ ಮಾಡುವ ನವಿಲುಗಳು ಮತ್ತು ಮಧುರ ಧ್ವನಿ ಹೊರಡಿಸುತ್ರಿದ್ದ ಪಕ್ಷಿಗಳು ಅಲ್ಲಿಯವರೆಗೆ ಸುಪ್ತವಾಗಿದ್ದ ನಳನ ಪ್ರೇಮಾಂಕುರವನ್ನು ಮತ್ತೆ ಬಡಿದೆಬ್ಬಿಸಿದವು. ವಿರಹ ಮತ್ತೂ ಅಧಿಕವಾಯಿತು.
ಆ ಕೊಳದ ತೀರದಲ್ಲಿದ್ದ ಬಂಗಾರದ ಬಣ್ಣದ ಗರಿಗಳನ್ನು ಹೊಂದಿದ್ದ ಬಿಳಿ ಬಣ್ಣದ ಹಂಸಗಳು ನಳನನ್ನು ಆಕರ್ಷಿಸಿದವು. ಆ ರೆಕ್ಕೆಗಳು ನೀರಿನಲ್ಲಿ ಹಂಸಗಳು ಆಟವಾಡುತ್ತಿದ್ದಾಗ ಫಳಫಳನೇ ಹೊಳೆಯುತ್ತಿದ್ದವು. ಆಸೆಪಟ್ಟು, ಹಿಡಿದು ತರಲು ಸೈನಿಕರಿಗೆ ನಳ ಆದೇಶಿಸಲು ಅವು ತಮ್ಮ ಬಂಗಾರದ ಬಣ್ಣದ ರೆಕ್ಕೆಗಳನ್ನು ಬೀಸುತ್ತಾ ಮರಗಳ ಮೇಲೆ ಹಾರಿದವು. ಆದರೆ ಒಂದು ಹಂಸಕ್ಕೆ ಮಾತ್ರ ತಪ್ಪಿಸಿಕೊಳ್ಳಲಾಗಲಿಲ್ಲ.
ಪ್ರಾಣ ಭಯದಿಂದ ಆ ಹಕ್ಕಿ ರಾಜನನ್ನು ಹೀಗೆ ಬೇಡಿತು.
“ರಾಜನೇ, ಈ ಕೊಳದಲ್ಲಿ ನಮಗೆ ಯಾವ ಭಯವೂ ಇಲ್ಲವೆಂದು ಹಾಡಿದೆವು, ಆಡಿದೆವು, ನಿನ್ನವರ ಬೊಬ್ಬೆ ಕೇಳಿತು ತಕ್ಷಣ ನನ್ನವರೆಲ್ಲ ಹಾರಿ ಹೋದರು. ನಾನು ಹಾರಿ ಹೋಗಲಾಗದೇ ಸಿಕ್ಕಿಕೊಂಡೆ. ನಿನ್ನವರ ಕೈಯಲ್ಲಿರುವ ಶಸ್ತ್ರಗಳಿಂದ ನನ್ನ ಸ್ಥಿತಿ ಏನಾಗುವುದೋ ಎಂಬ ಆತಂಕವಾಗುತ್ತಿದೆ. ನೀನು ನ್ಯಾಯವಂತ ಮತ್ತು ಸತ್ಯವಂತ ಎಂಬುದನ್ನು ಕೇಳಿ ಬಲ್ಲೆ. ನನ್ನಂಥ ಬಲಹೀನರನ್ನು ಕೊಲ್ಲುವುದು ನಿನಗೆ ನ್ಯಾಯವೇ.....? ನನ್ನ ಸಂಗಾತಿ,
ಮಕ್ಕಳ ಗೋಳನ್ನಾದರೂ ಕಂಡು ದಯೆ ತೋರಿ ನನ್ನನ್ನು ಬಿಟ್ಟುಬಿಡು,"
ಕೊರಿಕೊಂಡಿತು ಹಂಸ ಪಕ್ಷಿ
ಓ... ಇದೇನಿದು ಆಶ್ಚರ್ಯ, ಹಂಸ ಮಾತಾಡ್ತಿದೆ,... ಮಾನವ ಭಾಷೆಯಲ್ಲಿ ಮಾತಾಡ್ತಿದೆ.
ನಳ ಆಶ್ಚರ್ಯ ವ್ಯಕ್ತಪಡಿಸಿದ.
"ಹೌದು, ನಾವು ಬಂಗಾರದ ಬಣ್ಣದ ರೆಕ್ಕೆಯ ಹಂಸಗಳು. ನಮಗೆ ಮಾನವ ಭಾಷೆಗಳನ್ನು ಮಾತಾಡಲು ಬರುತ್ತೆ. ನಾವು ಒಂದು ರಾಜ ಕೊಳದಿಂದ ಇನ್ನೊಂದು ಕೊಳಕ್ಕೆ ಅಲೆದಾಡುತ್ತೇವೆ.
ನಳ ನಕ್ಕ.
"ಅದು, ಸರಿ ನಾನು ನಿನ್ನನ್ನು ಏಕೆ ಬಿಡುಗಡೆ ಮಾಡಬೇಕು? ಬಂಗಾರದ ಬಣ್ಣದ ರೆಕ್ಕೆಗಳ ಸೌಂದರ್ಯದಿಂದ ನೀನು ನನ್ನ ಕಮಲದ ಕೊಳಕ್ಕೆ, ಉದ್ಯಾನವನಕ್ಕೆ ಶೋಭೆ ತರುತ್ತೀಯೆ. ನನ್ನ ಕೀರ್ತಿ ಮತ್ತೂ ಹೆಚ್ಚುತ್ತದೆ.
"ನೀನು ನನ್ನನ್ನು ಬಿಡುಗಡೆ ಮಾಡಿದರೆ ನಾನು ನಿನಗೆ ಸಹಾಯ ಮಾಡಬಲ್ಲೆ"
ಹಂಸ ಆಸೆ ತೋರಿಸಿತು.
ನಳ ಮುಗುಳ್ನಕ್ಕ.
"ನೀನೋ ಪಕ್ಷಿ. ನಿನ್ನಿಂದ ನನಗ್ಯಾವ ಸಹಾಯವಾಗಲಿದೆ ? ಹುಚ್ಚು ಹಂಸ ನೀನು."
ಹಂಸವು "ನನ್ನ ಪ್ರಾಣವನ್ನು ಉಳಿಸಿ ಉಪಕಾರ ಮಾಡುವ ನಿನಗೆ ಉಪಕಾರ ಮಾಡದೇ ಇರುವೇನೇ.... ಅತಿ ಸುಂದರಿಯೂ, ಗುಣವತಿಯೂ ಆದ ದಮಯಂತಿ ನಿನಗೆ ತಕ್ಕ ಹೆಂಡತಿ. ದಮಯಂತಿ ವಿಧರ್ಭ ದೇಶದ ರಾಜ ಭೀಮಕನ ಮಗಳು. ಅವಳು ನಿನಗೇ ಒಲಿಯುವಂತೆ ಮಾಡುನೆನು. ದೊರೆಯೇ, ನನ್ನ ಮಾತನ್ನು ನಂಬು. ನಾವು ಎರಡು ನಾಲಗೆಯವರಲ್ಲ"
ಎಂದು ವಚನ ನೀಡಿತು.
ದಮಯಂತಿ ಹೆಸರು ಕೇಳಿದೊಡನೆ ನಳ ಚಕಿತಗೊಂಡ.
"ಪಕ್ಷಿಯೇ ದಮಯಂತಿಯೊಂದಿಗೆ ನಿನಗೇನು ಸಂಬಂಧ?"
ಹಂಸದ ಕುತ್ತಿಗೆಯನ್ನು ಮೆತ್ತಗೆ ಸವರುತ್ತಾ ಅದರ ಕಪ್ಪು ಕಣ್ಣುಗಳನ್ನು ನೋಡುತ್ತಾ ಕೇಳಿದ.
"ರಾಜನೇ, ನಾವೋ ಪಕ್ಷಿಗಳು. ವಿದರ್ಭ ದೇಶದ ರಾಜ ಕೊಳದಲ್ಲಿ ನಮ್ಮನ್ನು ಆಗಾಗ್ಗೆ ದಮಯಂತಿ ಕಂಡಿದ್ದಾಳೆ. ಕೇವಲ ನೋಡುವುದರಿಂದ ಯಾವ ಸಂಬಂಧ ಆಗುತ್ತದೆ ಹೇಳು? ಮಾತಾಡಬೇಕು. ನಾ ನಿನ್ನ ವಿಷಯವಾಗಿ ಅವಳೊಂದಿಗೆ ಮಾತಾಡುವ ಸುಸಂದರ್ಭ ಬಂದೊದಗಿದೆ ಹೇಗಿದ್ದರೂ ಅವಳಿಗೆ ನನ್ನನ್ನು ನೋಡಿದ ಪರಿಚಯವಿದೆಯಲ್ಲ."
ಹಂಸ ನಳನಲ್ಲಿ ಹೊಸ ಆಸೆ ಚಿಗುರಿಸಿತು.
ತನ್ನ ಆಸ್ಥಾನಿಕರಿಂದ ದಮಯಂತಿಯ ಸೌಂದರ್ಯದ ಕಥೆಗಳನ್ನು ಕೇಳಿದ್ದ ನಳನು ದಮಯಂತಿಯ ಶೀಘ್ರ ಭೇಟಿಯ ಆಸೆಗಾಗಿ ಬಂಗಾರದ ಬಣ್ಣದ ರೆಕ್ಕೆಯ ಹಂಸಕ್ಕೆ
"ದಮಯಂತಿಯಲ್ಲಿ ನನಗೆ ಪ್ರೇಮವುಂಟು. ಅವಳು ನನಗೆ ಒಲಿಯುವಂತೆ ಮಾಡು.ಆದಷ್ಟು ಶೀಘ್ರ ಬಾ, ನಿನ್ನ ನಿರೀಕ್ಷೆಯಲ್ಲಿರುವೆ"
ಎಂದು ಹೇಳಿ ಮುಕ್ತಗೊಳಿಸಿದ.
- ಮುಂದುವರೆಯುವುದು