ನಾರಾಯಣ ಒಮ್ಮಿಂದೊಮ್ಮೆಲೆ ಬಂದು ರಾಘವೇಂದ್ರನ ಕೈಯಲ್ಲಿದ್ದ ಲೋಟವನ್ನು ಎಸೆದಿಬಿಟ್ಟ, ಎಲ್ಲರೂ ನಾರಾಯಣನ ಕಡೆ ನೋಡಿದರು. ಲಕ್ಷ್ಮಿ ಗಾಜಿನ ಶಬ್ದ ಕೇಳಿ ಮಗು ಮಲಗಿದ್ದಾಳೋ ಇಲ್ಲವೋ ಅಂತ ಖಚಿತಪಡಿಸಿಕೊಂಡು ಹೊರಗಡೆ ಬಂದಳು. ಶಿವರಾಜ್ : ಇದ್ದಕ್ಕಿದ್ದಂತೆ ನಿನಗೆ ಏನಾಯಿತು? (ಅಂತ ಕೋಪದಿಂದ ಕೇಳಿದ). ನಾರಾಯಣ : ನಾನು ನಿಮೆಲ್ಲರಿಗೆ ಮೊದಲು ಎಚ್ಚರಿಕೆ ಕೊಟ್ಟಿದ್ದೆ, ಮರೆತೋದೆರಾ? ಸುಲೋಚನಾ : ಈಗ ಯಾರಿಗೆ ಏನಾಯಿತು ಅಂತ ಇಷ್ಟೊಂದು ಮಾತಾಡ್ತಿದ್ದೀಯಾ? ನಾರಾಯಣ : ರಾಘವೇಂದ್ರ, ನಿನ್ನ ಪಾಲಿನ ಹಾಲು ಖಾಲಿ ಆಗಿದೆಯಾ ಅಥವಾ ಇನ್ನೂ ಇದೆಯಾ? ರಾಘವೇಂದ್ರ : ಇನ್ನೂ ಇದೆ ಅಪ್ಪಾ, ತಗೊಂಡು ಬರಲಾ? ನಾರಾಯಣ : ತಗೊಂಡು ಬಾ. (ಆಗ ರಾಘವೇಂದ್ರ ತನ್ನ ಪಾಲಿನ ಉಳಿದ ಹಾಲು ತರೋಕೆ ಓಡಿದ. ನಂತರ ನಾರಾಯಣ ಮುಂದುವರಿದು) ಪ್ರಸಾದ್, ರಾಜಾ ನೀವಿಬ್ಬರು ನಿಮ್ಮ ಪಾಲಿನ ಹಾಲು ತಗೊಂಡು ಬನ್ನಿ (ನಾರಾಯಣನ ಮಾತಿಗೆ ಅವರೆಿಬ್ಬರೂ ಹಾಲು ತರಲು ಓಡಿದರು). ಅವರ ಹಿಂದೆಯೇ ಪದ್ಮ ಕೂಡ ಹೋಗಲು ಎದ್ದು ನಿಂತಳು.