ಬೆಂಗಳೂರಿನ ಆ ಪುಟ್ಟ ಬಾಡಿಗೆ ಮನೆಯಲ್ಲಿ ಆದರ್ಶ್ಗೆ ಅಂದು ರಾತ್ರಿ ನಿದ್ದೆ ಎಂಬುದು ಮರೀಚಿಕೆಯಾಗಿತ್ತು. ಕಿಟಕಿಯ ಹೊರಗೆ ಬೀಳುತ್ತಿದ್ದ ಮಳೆಯ ಹನಿಗಳು ಗಾಜಿನ ಮೇಲೆ ಬಡಿಯುತ್ತಿದ್ದ ಶಬ್ದವು, ಯಾರೋ ಹೊರಗಡೆ ನಿಂತು ಮೆಲ್ಲನೆ ತನ್ನನ್ನು ಕರೆಯುತ್ತಿರುವಂತೆ ಕೇಳಿಸುತ್ತಿತ್ತು. ರೂಮಿನ ಒಳಗಿದ್ದ ಹಳೆಯ ಫ್ಯಾನ್ ಕಿರಿಕಿರಿ ಸದ್ದು ಮಾಡುತ್ತಾ ತಿರುಗುತ್ತಿದ್ದರೂ, ಆದರ್ಶ್ನ ಕಿವಿಯಲ್ಲಿ ಮಾತ್ರ ಆ ಗಂಭೀರವಾದ, ನೂರಾರು ವರ್ಷಗಳ ಹಳೆಯ ಧ್ವನಿ ಮರುಕಳಿಸುತ್ತಿತ್ತು ನನ್ನ ನೋವಿಗೆ ನಿನ್ನ ಉಸಿರಿನ ಹಂಗಿದೆ ಆ ಧ್ವನಿ ಕೇವಲ ಶಬ್ದವಾಗಿರಲಿಲ್ಲ, ಅದು ಅವನ ಅಸ್ತಿತ್ವವನ್ನೇ ನಡುಗಿಸುವ ಒಂದು ಶಾಪದ ಕಂಪನವಾಗಿತ್ತು.ಅವನು ಮಂಚದ ಮೇಲೆ ಎದ್ದು ಕುಳಿತು ತನ್ನ ಕೈಗಳನ್ನು ಮಂದವಾದ ದೀಪದ ಬೆಳಕಿನಲ್ಲಿ ನೋಡಿಕೊಂಡ. ಬೈಕ್ ಸೀಟಿನ ಮೇಲಿದ್ದ ಆ ಹಸಿ ರಕ್ತದ ಕಲೆ ಈಗ ಅವನ ಅಂಗೈ ಮೇಲೂ ಅಂಟಿಕೊಂಡಿತ್ತು. ಎಷ್ಟು ಬಾರಿ ಸೋಪು ಹಾಕಿ ತೊಳೆದರೂ ಆ ಗಾಢ ಕೆಂಪು ಬಣ್ಣ ಮಾಸುತ್ತಿರಲಿಲ್ಲ ಬದಲಾಗಿ ಅದು ಚರ್ಮದ ರಂಧ್ರಗಳ ಮೂಲಕ ಒಳಗೆ ಇಳಿಯುತ್ತಿರುವಂತೆ