ರಾಜಶೇಖರ್ ಇವತ್ತು ಭಾನುವಾರ ಬೆಳಿಗ್ಗೆ ಬೆಳಿಗ್ಗೆನೇ ನೆಮ್ಮದಿ ಹಾಳಾಯಿತು. ಮಗನಿಗೆ ಅದೇನಾಗಿದೆಯೋ ಗೊತ್ತಿಲ್ಲ, ತಾನು ನೆಮ್ಮದಿಯಾಗಿ ಇರುವುದಿಲ್ಲ, ಇರೋರಿಗೂ ಬಿಡುವುದಿಲ್ಲ. ಅದೇನೋ ಔಟಿಂಗ್ ಅಂತೆ, ಬೆಳಿಗ್ಗೆನೇ ಹೊರಡೋಣ ಅಂತ ಇದ್ದಾನೆ. ನನಗೋ ನಿವೃತ್ತಿ ಆದಮೇಲೆ ಯಾವುದರಲ್ಲೂ ಅಷ್ಟು ಆಸಕ್ತಿ ಬರುತ್ತಿಲ್ಲ. ವಯಸ್ಸಿಗಾದರೂ ಬೆಲೆ ಬೇಡವೇ? ನಾನೇನು ಸಣ್ಣ ಹುಡುಗನಾ ಇವನ ಜೊತೆ ಔಟಿಂಗ್ ಅಂತ ಬರೋದಕ್ಕೆ? ಇಷ್ಟಕ್ಕೂ ಇದೇನು ನಾನು ಕೇಳಿಕೊಂಡಿದ್ದಾ - ಮನೆಯಲ್ಲಿ ಬೇಜಾರು, ಹೊರಗೆ ಹೋಗಿ ಬರಬೇಕು ಅಂತ? ಹಾಗೆ ನೋಡಿದರೆ, ಹೊರಗೆ ಇವನ ಜೊತೆ ನಾವುಗಳು ಹೋದರೆ ನಮಗೆ ಮುಜುಗುರ ಆಗುವಂತಾದರೆ ಏನು ಮಾಡುವುದು? ಇವನಿಗೆ ತನ್ನ ದೊಡ್ಡಸ್ತಿಕೆ ತೋರಿಸಬೇಕು, ದುಂದುವೆಚ್ಚ ಮಾಡಬೇಕು ಅಷ್ಟೇ. ಇದಕ್ಕಲ್ಲ ನಾವೇಕೆ ಸೊಪ್ಪು ಹಾಕಬೇಕು? ಇವನ ವಯಸ್ಸಿನಲ್ಲಿ ನಾನು ಸಂಸಾರಸ್ಥ ಅನ್ನಿಸಿಕೊಂಡಿದ್ದೆ. ಇವನನ್ನು ಕರೆದುಕೊಂಡು ಕುಟುಂಬ ಸಮೇತ ಹೊರಗೆ ಹೋಗುತ್ತಿದ್ದುದು ಉಂಟು, ಇಲ್ಲ ಅನ್ನೋಲ್ಲ. ಆದರೆ ಅದೆಲ್ಲ ನನಗೋಸ್ಕರವಲ್ಲ, ಏನೋ ಇವರುಗಳು ವಾರದಲ್ಲಿ ಒಂದು ದಿನ ಖುಷಿಯಾಗಿರಲಿ ಅಂತ ಅಷ್ಟೇ.