ಗಾಢ ಕಗ್ಗತ್ತಲೆಯ ಅಂಧಕಾರ… ಭಯ ಹುಟ್ಟಿಸುವ ನಿಶ್ಶಬ್ದ ವಾತಾವರಣ ಮೌನದ ಅಧಿಪತ್ಯವನ್ನು ದಾಟಿ, ಕತ್ತಲಿನಲ್ಲಿ ಸಾಗುತ್ತಿರುವಳು ಒಬ್ಬಂಟಿಯಾಗಿ ಅವಳು… ಸುತ್ತಮುತ್ತಲೂ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರದ ಛಾಯೆ ದೈತ್ಯಾಕಾರವಾಗಿ ಬೆಳೆಯುತ್ತಾ ಅವಳನ್ನು ನುಂಗುವಂತೆ ಕಾಣಿಸುತ್ತಿತ್ತು…ಆಕಾಶದಲ್ಲಿ ಪೂರ್ಣಚಂದ್ರನ ಆಗಮನವಾಗಿದ್ದರೂ ಕೂಡ, ಅವಳು ನಡೆಯುತ್ತಿದ್ದ ಹಾದಿಯಲ್ಲಿ ಪೂರ್ಣಚಂದ್ರ ತನ್ನ ಬೆಳದಿಂಗಳನ್ನು ನೀಡುವಲ್ಲಿ ವಿಫಲನಾಗಿದ್ದ…ಸಾಗುತ್ತಿರುವ ಅವಳ ಹಾದಿಯಲ್ಲಿ ಅಡೆತಡೆಗಳು ನೂರಾರು… ಎಲ್ಲವನ್ನೂ ದಾಟಿ ಸುಮ್ಮನೆ ನಡೆಯುತ್ತಿದ್ದಾಳೆ.... ಅಲ್ಲಿನ ಮೌನ — ಅದೆಷ್ಟು ಭಯ ಹುಟ್ಟಿಸುತ್ತದೆ! ನಿಶ್ಶಬ್ದತೆ ಮನಸ್ಸಿನ ಘರ್ಷಣೆಗೆ ಸೂಕ್ತ ಪರಿಹಾರವಾದರೆ, ಅದೇ ಮೌನ ಭಾವನೆಗಳನ್ನು ಸೋಲಿಸುವುದರಲ್ಲಿ ಮೇಲುಗೈ... ಕೆಲವೊಮ್ಮೆ ಅದೇ ಮೌನ ಭಯದ ತೀವ್ರತೆಯನ್ನು ತೋರಿಸಿದರೆ ಮತ್ತೊಮ್ಮೆ ಅದೇ ಮೌನ ಸಾವಿರ ಮಾತಿಗೆ ಒಂದೇ ಅರ್ಥ ನೀಡುತ್ತದೆ.. ಸಾಗುತ್ತಿರುವ ಅವಳ ಮುಖದಲ್ಲಿ ಇದ್ದದ್ದು ಕೇವಲ ನಿರ್ಲಿಪ್ತತೆ… ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತಹ ನಿರ್ಲಿಪ್ತತೆ. “ಯಾರೂ ಇಲ್ಲ” ಅನ್ನುವ ಭಾವನೆ ಅವಳನ್ನು ಅತಿ ಹೆಚ್ಚು ಕಾಡುತ್ತಿತ್ತು. ಹಾಗಂತ ಅವಳ ಮನಸ್ಸು ಒಪ್ಪಿಕೊಳ್ಳಲು ಇಷ್ಟಪಡುತ್ತಿರಲಿಲ್ಲ — ಬುದ್ಧಿ ಹೇಳುತ್ತಿತ್ತು